ಬೆಂಗಳೂರು: ಅಂದುಕೊಂಡಂತೆ ನಡೆದರೆ ಶೀಘ್ರವೇ ಕೆ.ಎಸ್.ಆರ್.ಟಿ.ಸಿ ಬಸ್‌ಗಳಲ್ಲಿ (KSRTC Bus) ಪ್ರಯಾಣಿಸಲು ಇನ್ನು ಮುಂದೆ ನಗದು ಬೇಕಾಗಿಯೇ ಇಲ್ಲ. ನಗದುರಹಿತ ಟಿಕೆಟ್ ವ್ಯವಸ್ಥೆಯನ್ನು (Cashless Ticket System) ಜಾರಿ ಮಾಡಲು ಈಗಾಗಲೇ ಪ್ರಕ್ರಿಯೆಗಳು ಆರಂಭಗೊಂಡಿವೆ. ಪ್ರಯಾಣಿಕರು ಕ್ಯಾಶ್‌ಲೆಸ್ ವಿಧಾನಗಳ ಮೂಲಕ ಟಿಕೆಟ್ (KSRTC Ticket) ಪಡೆಯಲು ಅವಕಾಶ ಕಲ್ಪಿಸುವ ವಿಧಾನ ಸದ್ಯವೇ ಜಾರಿಗೆ ಬರಲಿದೆ.
ಬಸ್‌ಗಳಲ್ಲಿ ನಗದು ರಹಿತ ಟಿಕೆಟ್ ವ್ಯವಸ್ಥೆ ಜಾರಿಗಾಗಿ ಬಾಡಿಗೆ ಆಧಾರದಲ್ಲಿ 10,500 ಸ್ಮಾರ್ಟ್ ಎಲೆಕ್ಟ್ರಾನಿಕ್ ಟಿಕೆಟ್ ಯಂತ್ರ (Electronic ticket Machine)ಗಳನ್ನು ಪಡೆಯಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಮುಂದಾಗಿದ್ದು, ಶೀಘ್ರವೇ ಟೆಂಡರ್ ಕರೆಯಲಿದೆ.
ಯಾಕೆ ಇ-ಟಿಕೆಟಿಂಗ್? ಯಾವಾಗದಿಂದ ಜಾರಿ?
- 1.ಬಸ್‌ಗಳು ತುಂಬಿ ತುಳುಕಿದಾಗ ಎಲ್ಲರಿಗೂ ಟಿಕೆಟ್ ಕೊಡುವುದು ಮತ್ತು ಅದಕ್ಕಿಂತಲೂ ಮುಖ್ಯವಾಗಿ ಚಿಲ್ಲರೆ ಕೊಡುವುದು ಕಂಡಕ್ಟರ್‌ಗೆ ತುಂಬ ಕಷ್ಟವಾಗುತ್ತಿದೆ.
- 2. ಕೆಲವರು ಟಿಕೆಟ್ ಕೊಡದೆ ತಪ್ಪಿಸಿಕೊಳ್ಳುವುದು, ಕೆಲವರಿಗೆ ಟಿಕೆಟ್ ಕೊಡಲು ನಿರ್ವಾಹಕರಿಗೆ ಕಷ್ಟವಾಗುವುದು ಮೊದಲಾದ ಘಟನೆಗಳು ನಡೆಯುತ್ತವೆ.
- 3. ಚಿಲ್ಲರೆ ವಿಷಯಕ್ಕಾಗಿ ಪ್ರಯಾಣಿಕರು ನಿರ್ವಾಹಕರೊಂದಿಗೆ ಆಗಾಗ ಜಗಳಗಳು ಕೂಡಾ ನಡೆಯುತ್ತಿರುತ್ತವೆ.
- 4. ಈ ಸಮಸ್ಯೆಯನ್ನು ತಪ್ಪಿಸಲು ಆನ್‌ಲೈನ್ ಮೂಲಕ ಟಿಕೆಟ್ ಪಡೆಯುವ ವ್ಯವಸ್ಥೆ ಜಾರಿಗೊಳಿಸಲು ಸಂಸ್ಥೆ ಮುಂದಾಗಿದೆ.
- 5. ಎಲ್ಲವೂ ಅಂದುಕೊಂಡಂತೆ ನಡೆದರೆ ಏಪ್ರಿಲ್ ಅಥವಾ ಮೇನಲ್ಲಿ ಯೋಜನೆ ಆರಂಭಗೊಳ್ಳಲಿದೆ.
ಇ-ಟಿಕೆಟಿಂಗ್ ವ್ಯವಸ್ಥೆ ಬಿಎಂಟಿಸಿಯ ಕೆಲವು ಬಸ್‌ಗಳಲ್ಲಿ ಈಗಾಗಲೇ ಜಾರಿಯಲ್ಲಿದೆ. ಆ್ಯಂಡ್ರಾಯ್ಡ್ ಸೌಲಭ್ಯದ ವಿದ್ಯುನ್ಮಾನ ಟಿಕೆಟ್ ಯಂತ್ರಗಳಲ್ಲಿ ಯಾವುದೇ ಯುಪಿಐ ವ್ಯವಸ್ಥೆ, ಕಾರ್ಡ್‌ಗಳ ಮೂಲಕ ಹಣ ಪಾವತಿ ಮಾಡಲು ಇದರಲ್ಲಿ ಅವಕಾಶವಿದೆ. ಮುಂದೆ ಈ ವ್ಯವಸ್ಥೆ ಕೆಎಸ್‌ಆರ್‌ಟಿಸಿ ಬಸ್‌ಗೂ ಬರುವ ಸಾಧ್ಯತೆ ದಟ್ಟವಾಗಿದೆ.
10,500 ಇಟಿಎಂ ಮೆಷಿನ್ ಖರೀದಿಗೆ ಟೆಂಡರ್
ಟಚ್ ಸ್ಕ್ರೀನ್ ತಂತ್ರಜ್ಞಾನವನ್ನು ಹೊಂದಿರುವ ಸ್ಮಾರ್ಟ್ ಎಲೆಕ್ಟ್ರಾನಿಕ್ ಟಿಕೆಟ್ ಯಂತ್ರದಲ್ಲಿ ಟಿಕೆಟ್ ಕೊಡುವ ವ್ಯವಸ್ಥೆ ಮಾತ್ರವಲ್ಲದೆ, ವೈಫೈ ಸಂಪರ್ಕ, ಯುಪಿಐ, ಕ್ಯುಆರ್ ಕೋಡ್ ಪ್ರದರ್ಶನ ಸೌಲಭ್ಯ ಒಳಗೊಂಡಿದೆ. ಯಾವುದೇ ಯುಪಿಐ ಮತ್ತು ಇತರ ಕಾರ್ಡ್‌ಗಳನ್ನು ಬಳಸಿ ಹಣ ಪಾವತಿ ಮಾಡುವ ವ್ಯವಸ್ಥೆ ಇದೆ.
ಸ್ಮಾರ್ಟ್ ಎಲೆಕ್ಟ್ರಾನಿಕ್ ಟಿಕೆಟಿಂಗ್ ಯಂತ್ರಗಳನ್ನು ಬಾಡಿಗೆ ಮೂಲಕ ಪಡೆಯುವ ನಿಟ್ಟಿನಲ್ಲಿ ಸಾರಿಗೆ ಸಚಿವರು, ಸಂಸ್ಥೆಯ ಅಧಿಕಾರಿಗಳ ನಡುವೆ ಮಾತುಕತೆಗಳು ನಡೆದಿವೆ. ನಾಲ್ಕು ವರ್ಷಗಳ ಅವಧಿಗೆ ಬಾಡಿಗೆ ಆಧಾರದಲ್ಲಿ 10,500 ಇಟಿಎಂ ಯಂತ್ರಗಳನ್ನು ಖರೀದಿಸುವ ಸಿದ್ಧತೆ ನಡೆದಿದೆ.
ಮತ್ತೇನು ಹೊಸ ಸೌಲಭ್ಯ ಸಿಗಲಿದೆ?
ಒಂದು ವೇಳೆ ಇ ಟಿಕೆಟಿಂಗ್ ವ್ಯವಸ್ಥೆಗಾಗಿ ಸ್ಮಾರ್ಟ್ ಎಲೆಕ್ಟ್ರಾನಿಕ್ ಟಿಕೆಟ್ ಯಂತ್ರ ಬಂದರೆ ಕೆಎಸ್‌ಆರ್ಟಿಸಿಯಲ್ಲಿ ಇನ್ನು ಕೆಲವು ಹೊಸ ಸೌಲಭ್ಯಗಳು ಸಿಗಲಿವೆ.
- 1. ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಟ್ರ್ಯಾಕಿಂಗ್ ಮತ್ತು ಮಾನಿಟರಿಂಗ್ ವ್ಯವಸ್ಥೆ ಇಲ್ಲ. ಇಟಿಎಂ ಮೆಷಿನ್ ಬಂದರೆ ಬಸ್‌ಗಳು ಎಲ್ಲಿವೆ, ಯಾವ ರಸ್ತೆಗಳಲ್ಲಿ ಸಂಚರಿಸುತ್ತಿವೆ, ಎಷ್ಟು ಸಮಯದಲ್ಲಿ ನಿಗದಿತ ಸ್ಥಳ ತಲುಪುತ್ತವೆ ಎಂಬ ಮಾಹಿತಿಯೂ ಸಿಗುವ ಸಾಧ್ಯತೆ ಇದೆ.
- 2. ಇಟಿಎಂ ಯಂತ್ರಗಳಲ್ಲಿ ಜಿಪಿಆರ್‌ಎಸ್ ಅಳವಡಿಕೆ ಆದ ಬಳಿಕ ಟ್ರ್ಯಾಕಿಂಗ್ ಸಿಸ್ಟಮ್ ಕೂಡಾ ಲಭ್ಯವಾಗಲಿದೆ.