Site icon Vistara News

Lakshmi Hebbalkar : ವಿಕಲಚೇತನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ನೀಡಿದ ಸಚಿವೆ ಹೆಬ್ಬಾಳ್ಕರ್

Lakshmi Hebbalkar Handicapped

ಬೆಂಗಳೂರು : ವಿಕಲಚೇತನರ ಬಹುದಿನಗಳ ಪ್ರಮುಖ ಬೇಡಿಕೆಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಸ್ಥಳದಲ್ಲೇ ಆದೇಶ ಹೊರಡಿಸುವ ಮೂಲಕ ಸಮಸ್ಯೆಗಳಿಗೆ ಪರಿಹಾರ ನೀಡಿದ್ದಾರೆ. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ (Freedom Park) ವಿಕಲ ಚೇತನರು (Protest by Handicapped) ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಡೆಸಿದ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿದ ಸಚಿವರು, ಪ್ರಮುಖ ಎರಡು ಬೇಡಿಕೆಗಳಿಗೆ ಸ್ಥಳದಲ್ಲೇ ಪರಿಹಾರ ಆದೇಶ ಹೊರಡಿಸಿದ್ದಾರೆ.

ಸ್ಥಳದಲ್ಲೇ ಆದೇಶ ನೀಡಿದ ಸಚಿವರು

ಆದೇಶ: 1: ಮಹಿಳಾ ಪುನರ್ವಸತಿ ಕಾರ್ಯಕರ್ತೆಯರಿಗೆ ವೇತನ ಸಹಿತ ಹೆರಿಗೆ ರಜೆ, ಆರು ತಿಂಗಳು, ಗರ್ಭಪಾತ ರಜೆ 45 ದಿನ.
ಆದೇಶ: 2: ಹೊಸದಾಗಿ ರಚನೆಗೊಂಡಿರುವ 51 ತಾಲೂಕುಗಳಿಗೆ ವಿವಿದೊದ್ದೇಶ ಪುನರ್ವಸತಿ ಕಾರ್ಯಕರ್ತರು (ಎಂಆರ್ ಡಬ್ಲ್ಯೂ) ನೇಮಕಾತಿ ಮಾಡಿಕೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡುವಂತೆ ಆರ್ಥಿಕ ಇಲಾಖೆಗೆ ಶಿಫಾರಸು.

ಮುಂದಿನ ವಾರ ಸಿಎಂ ಜೊತೆ ಚರ್ಚೆ ಎಂದ ಹೆಬ್ಬಾಳ್ಕರ್‌

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ವಿಕಲಾಂಗ ಚೇತನರ ಸಮಸ್ಯೆಗಳಿಗೆ ಸರ್ಕಾರ ಶೀಘ್ರವೇ ಪರಿಹಾರ ನೀಡಲಿದೆ. ಈ ಸಂಬಂಧ ಮಾರ್ಚ್ 13 ಅಥವಾ 14ರಂದು ಸಿಎಂ ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು. ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ವಿಕಲ ಚೇತನರ ಉಳಿದ ಬೇಡಿಕೆಗಳನ್ನೂ ಈಡೇರಿಸಲಾಗುವುದು ಎಂದು ಸಚಿವರು ಹೇಳಿದರು. ಧರಣಿ ವಾಪಸ್ ಪಡೆದ ಪ್ರತಿಭಟನಾಕಾರರು
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ ನೀಡಿದ ಹಿನ್ನೆಲೆಯಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆಸಲು ಮುಂದಾಗಿದ್ದ ಪ್ರತಿಭಟನಾಕಾರರು ತಮ್ಮ ಪ್ರತಿಭಟನೆಯನ್ನು ಹಿಂತೆಗೆದುಕೊಂಡರು.

ಇದನ್ನೂ ಓದಿ : Lakshmi Hebbalkar : ನಿಮ್ಮ ಕ್ಷೇತ್ರದಲ್ಲೂ ಗೃಹಲಕ್ಷ್ಮಿ ಸಕ್ಸಸ್‌; ಸಿದ್ದು ಸವದಿಗೆ ಸಚಿವೆ ಹೆಬ್ಬಾಳ್ಕರ್‌ ತಿರುಗೇಟು

ಜಾತಿ ಗಣತಿಯಲ್ಲಿ ಕೆಲವು ದೋಷಗಳಿವೆ ಎಂದ ಲಕ್ಷ್ಮೀ ಹೆಬ್ಬಾಳ್ಕರ್‌

ಈ ನಡುವೆ ರಾಮನಗರದಲ್ಲಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ (Lakshmi Hebbalkar) ಅವರು, ಈ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ. ಎಲ್ಲಾ ಸಮುದಾಯಕ್ಕೂ ಸಮಾನ ಅವಕಾಶ ಸಿಗಬೇಕು. ಆದರೆ ಈ ಜನಗಣತಿಯಲ್ಲಿ ಕೆಲ ದೋಷಗಳಿವೆ ಎಂದು ಹೇಳಿದರು.

ʻʻನಾಲ್ಕು ಜನರ ಮನೆಗೆ ಹೋಗಿದ್ದರೆ, ಇನ್ನು ಕೆಲವರ ಮನೆಗೆ ಹೋಗಲೇ ಇಲ್ಲ. ನಮ್ಮ ಸಂಬಂಧಿಕರ ಹಲವು ಮನೆಗಳಿಗೆ ಬಂದೇ ಇಲ್ಲ. ಹೀಗಾಗಿ ಈ ರೀತಿಯ ಕೆಲ ಗೊಂದಲಗಳಿವೆ. ವೀರಶೈವ ಲಿಂಗಾಯತ ಜಾತಿಯಲ್ಲಿ ಅನೇಕ ಉಪಪಂಗಡಗಳಿವೆ‌. 103 ಉಪ ಪಂಗಡಳಿರುವುದರಿಂದ ಅಧ್ಯಯನ ಮಾಡಬೇಕು. ಇದರ ವೈಜ್ಞಾನಿಕ ವರದಿ ಮಾಡಿ ಬಳಿಕ ಸ್ವೀಕರಿಸಬೇಕು. ಇದರಲ್ಲಿ ನಾವು ರಾಜಕೀಯ ಮಾಡಲ್ಲ.ʼʼ ಎಂದು ಮಾಗಡಿಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

Exit mobile version