Site icon Vistara News

Leopard Spotted : ಚಿರತೆ ಸೆರೆಯಾಗಲಿದೆ; ಯಾರಿಗೂ ಆತಂಕ ಬೇಡ, ಜಾಗ್ರತೆ ಇರಲಿ: ಈಶ್ವರ ಖಂಡ್ರೆ

Leopard capture operation

ಬೆಂಗಳೂರು: ಬೆಂಗಳೂರಿನ ಬೀದಿಗಳಲ್ಲಿ ಮೂರು ದಿನಗಳಿಂದ ಚಿರತೆಯೊಂದು ಸಂಚಾರ ಮಾಡಿ (Leopard Spotted) ನಗರವಾಸಿಗಳ ನಿದ್ದೆಗೆಡಿಸಿದ್ದು, ಚಿರತೆ ಸೆರೆಗೆ ತೀವ್ರ ಕಾರ್ಯಾಚರಣೆಯನ್ನು (Leopard capture operation) ಅರಣ್ಯ ಇಲಾಖೆ ಕೈಗೊಂಡಿದೆ. ಅರಣ್ಯ ಸಚಿವ ಈಶ್ವರ ಖಂಡ್ರೆ (Forest Minister Ishwar Khandre) ಸಹ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಚಿರತೆ ಸೆರೆ ಹಿಡಿಯಲು ಎಲ್ಲ ರೀತಿ ಪ್ರಯತ್ನ ನಡೆಯುತ್ತಿದೆ. ಶೀಘ್ರವೇ ಚಿರತೆಯನ್ನು ಸೆರೆ ಹಿಡಿಯಲಾಗುವುದು. ಆತಂಕ ಯಾರಿಗೂ ಬೇಡ. ಆದರೆ, ಜಾಗೃತವಾಗಿರಿ ಎಂದು ಹೇಳಿದ್ದಾರೆ.

ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಈಶ್ವರ ಖಂಡ್ರೆ, ಚಿರತೆ ಕಾಣಿಸಿಕೊಂಡ ಸ್ಥಳದಲ್ಲಿ ಈಗಾಗಲೇ ಹಿರಿಯ ಅಧಿಕಾರಿಗಳು ಬೀಡು ಬಿಟ್ಟಿದ್ದಾರೆ. ಥರ್ಮಲ್ ಕ್ಯಾಮೆರಾ (Thermal camera) ಬಳಸಿ ರಾತ್ರಿ ವೇಳೆಯೂ ಕಾರ್ಯಾಚರಣೆಯನ್ನು ಮಾಡಲಾಗುತ್ತಿದೆ. ಚಿರತೆಯನ್ನು ಸೆರೆ ಹಿಡಿಯಲು ಬೋನ್ (Bone for leopard capture) ಅನ್ನು ಕೂಡ ಹಾಕಿದ್ದೇವೆ. ಶೀಘ್ರವೇ ಚಿರತೆ ಸೆರೆ ಹಿಡಿಯುವ ಕೆಲಸ ಮಾಡಲಾಗುತ್ತದೆ ಎಂದು ತಿಳಿಸಿದರು.

ಜನರು ಯಾವುದೇ ಕಾರಣಕ್ಕೂ ಆತಂಕಪಡುವುದು ಬೇಡ. ಆದರೆ, ಜಾಗೃತವಾಗಿರಬೇಕು. ಹೊರಗೆ ಸಂಚಾರ ಮಾಡುವಾಗ ಹುಷಾರಾಗಿ ಇರಬೇಕು. ಸಣ್ಣ ಮಕ್ಕಳನ್ನು ಯಾರೂ ಏಕಾಂಗಿಯಾಗಿ ಬಿಡುವುದು ಬೇಡ. ಅವರನ್ನು ಹೊರಗಡೆ ಆಟಕ್ಕೆ ಕಳುಹಿಸುವುದೂ ಬೇಡ ಎಂದು ಮನವಿ ಮಾಡಿದ್ದಾರೆ.

ಏನಿದು ಘಟನೆ?

ಆನೇಕಲ್‌ನ ಕೂಡ್ಲು ಗೇಟ್ ಬಳಿ ಅ.29ರ ರಾತ್ರಿಯಿಂದ ಕಾಣಿಸಿಕೊಂಡಿರುವ ಚಿರತೆ, ಅ. 30ರಂದು ಒಂದು ಅಪಾರ್ಟ್ಮೆಂಟ್‌ನೊಳಕ್ಕೆ ನುಗ್ಗಿತ್ತು. ಫಸ್ಟ್ ಫ್ಲೋರ್‌ವರೆಗೂ ಹೋಗಿ ತಿರುಗಾಟ ನಡೆಸಿದೆ. ಕೂಡ್ಲು ಗೇಟ್ ಬಳಿಯ ಸಲಾರ್ ಪುರಿಯ ಸತ್ವ ಕ್ಯಾಡೆನ್ಜಾ ಅಪಾರ್ಟ್‌ಮೆಂಟ್‌ನೊಳಗೆ ಕಾಣಿಸಿಕೊಂಡ ಚಿರತೆ ಪಾರ್ಕಿಂಗ್ ಲಾಟ್‌ನಿಂದ ಪ್ರವೇಶಿಸಿ ಮೊದಲ ಮಹಡಿಯವರೆಗೆ ಸಂಚಾರ ನಡೆಸಿದೆ. ಸೋಮವಾರ ರಾತ್ರಿ ಕೂಡಾ ಕೂಡ್ಲು ಬಳಿಯ ಐಟಿ ಟೆಕ್ ಪಾರ್ಕ್ ಬಳಿ ಚಿರತೆ ಕಾಣಿಸಿಕೊಂಡಿತ್ತು.

ಸದ್ಯ ವೈಟ್‌ಫೀಲ್ಡ್- ಕೂಡ್ಲುಗೇಟ್ ಪ್ರಾಂತ್ಯದಲ್ಲಿ ಓಡಾಡಿಕೊಂಡಿದ್ದು, ರಾತ್ರಿ ಓಡಾಟ ನಡೆಸಿರುವುದು ಕೆಲವು ಸಿಸಿ ಟಿವಿಗಳ ಮೂಲಕ ಗೊತ್ತಾಗಿದೆ. ಚಿರತೆ ಹಿಡಿಯಲು ಮುಂದಾಗಿರುವ ಅರಣ್ಯಾಧಿಕಾರಿಗಳು ರಾತ್ರಿಯೆಲ್ಲ ಅನೌನ್ಸ್‌ಮೆಂಟ್ ಮಾಡುತ್ತಿದ್ದು, ನಾಗರಿಕರು ಯಾರೂ ಹೊರಗೆ ಬಾರದಂತೆ ಎಚ್ಚರಿಕೆ ವಹಿಸಬೇಕೆಂದು ಪ್ರಕಟಿಸಿದ್ದಾರೆ.

⭕LIVE⭕ : ಎಲ್ಲೆಲ್ಲಿ ಚಿರತೆ ಓಡಾಟ... ಹೇಗಿದೆ ಆಪರೇಶನ್‌?| Leopard Spotted In Bengaluru | Vistara News Live

ಚಿರತೆ ಕಂಡರೆ ಕೂಡಲೇ ಮಾಹಿತಿ ನೀಡಲು ಸೂಚನೆ

ಚಿರತೆ ಕಾಣಿಸಿಕೊಂಡ ಅಪಾರ್ಟ್ಮೆಂಟ್‌ಗಳಿಗೆ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದು, ಚಿರತೆ ಬಲೆಗೆ ಎರಡು ಪಂಜರ ಅಳವಡಿಸಲಾಗಿದೆ. ಅಧಿಕಾರಿಗಳು ಅಪಾರ್ಟ್ಮೆಂಟ್‌ಗಳಿಗೆ ತೆರಳಿ ಸೆಕ್ಯೂರಿಟಿಗಳಿಗೆ ಹಾಗೂ ನಿವಾಸಿಗಳಿಗೆ ಜಾಗೃತಿ ಮೂಡಿಸುತ್ತಿದ್ದಾರೆ. ಚಿರತೆ ಓಡಾಟ ಹಿನ್ನೆಲೆಯಲ್ಲಿ ಎಚ್ಚರಿಕೆಯಿಂದಿರಲು, ಒಬ್ಬೊಬ್ಬರೇ ಓಡಾಡದಂತೆ ನಿವಾಸಿಗಳಿಗೆ ಸೂಚನೆ ನೀಡಿದ್ದಾರೆ. ರಾತ್ರಿ ಚಿರತೆ ಕಾಣಿಸಿಕೊಂಡರೆ ಕೂಡಲೇ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ.

ಆಪರೇಷನ್‌ ಚಿರತೆ ಕಾರ್ಯಾಚರಣೆ

ಕೃಷ್ಣಾರೆಡ್ಡಿ ಇಂಡಸ್ಟ್ರಿಯಲ್ ಏರಿಯಾದಲ್ಲಿ ಸೋಮವಾರ ತಡರಾತ್ರಿ ಚಿರತೆ ಕಾಣಿಸಿಕೊಂಡಿತ್ತು. ಪರಪ್ಪನ ಅಗ್ರಹಾರ ಲಾ ಆ್ಯಂಡ್ ಆರ್ಡರ್ ಪೊಲೀಸ್ ನೈಟ್ ಬೀಟ್ ಮಾಡುವಾಗ ಚಿರತೆ ಓಡಾಡಿತ್ತು. ಖಾಲಿ ಬಿಲ್ಡಿಂಗ್ ಮುಂಭಾಗದಲ್ಲಿ ಚಿರತೆ ಓಡಾಟ ಕಂಡು ಪೊಲೀಸರು ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಬಿಲ್ಡಿಂಗ್ ಒಳಗಡೆಯೇ ಚಿರತೆ ಇರುವ ಶಂಕೆ ಇದೆ.

ಹೀಗಾಗಿ ಕಗ್ಗಲೀಪುರ, ಆನೇಕಲ್ ಅರಣ್ಯಾಧಿಕಾರಿಗಳಿಂದ 2 ಬೋನ್‌ಗಳನ್ನು ಸಿಬ್ಬಂದಿ ತರಿಸಿಕೊಂಡಿದ್ದಾರೆ. ಕೃಷ್ಣಾರೆಡ್ಡಿ ಇಂಡಸ್ಟ್ರಿಯಲ್ ಏರಿಯಾದಲ್ಲಿ ಚಿರತೆ ಹಿಡಿಯಲು ಸಕಲ ರೀತಿಯಲ್ಲಿ ಸಜ್ಜಾಗಿದ್ದಾರೆ. ಚಿರತೆ ಟಾಸ್ಕ್ ಪೋರ್ಸ್ ಟೀಂ ಸೇಫ್ಟಿ ಜಾಕೇಟ್ ಬಳಸಿ ಅಖಾಡಕ್ಕೆ ಇಳಿದಿದ್ದಾರೆ.

ವನ್ಯಪ್ರಾಣಿಗಳಿಂದ ಸಾಕಷ್ಟು ಹುಷಾರಾಗಿ ಇರಬೇಕೆಂದು ಚಿರತೆ ಸೆರೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವ ಮುಖ್ಯ ವನ್ಯ ಜೀವಿ ಪರಿಪಾಲಕ ಅಧಿಕಾರಿ ಸುಭಾಸ್ ಮಾಲ್ಕಾಡೆ ತಿಳಿಸಿದ್ದಾರೆ. ಕಾರ್ಯಾಚರಣೆ ವೇಳೆ ಜನರು ಎಲ್ಲರೂ ಹೊರಗಡೆ ಓಡಾಡಬಾರದು. ಮೈಸೂರಿನಿಂದ ಟಾಸ್ಕ್ ಪೋರ್ಸ್ ಬಂದಿದೆ. ವೈದ್ಯ ಕಿರಣ್ ನೇತೃತ್ವದ ತಂಡ ಕಾರ್ಯಾಚರಣೆಯಲ್ಲಿ ಭಾಗಿಯಾಗಲಿದ್ದಾರೆ ಎಂದರು.

ಎರಡು ಕಡೆ ರಸ್ತೆ ಬಂದ್‌

ಕಾರ್ಯಾಚರಣೆ ವೇಳೆ ಜನರು ಓಡಾಡದಂತೆ ಪಾಲು ಬಿದ್ದ ಬಿಲ್ಡಿಂಗ್ ಬಳಿ ಎರಡು ಕಡೆ ರಸ್ತೆ ಬಂದ್ ಮಾಡಲಾಗಿದೆ. ಚಿರತೆ ಸೆರೆ ಕಾರ್ಯಾಚರಣೆ ಸಂದರ್ಭದಲ್ಲಿ ಯಾವುದೇ ಅನಾಹುತ ಸಂಭವಿಸಬಾರದೆಂದು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಅಕ್ಕಪಕ್ಕದಲ್ಲಿ ಪ್ರತಿಷ್ಠಿತ ಐಟಿ ಕಂಪನಿಗಳಿರುವ ಹಿನ್ನೆಲೆಯಲ್ಲಿ ಯಾರೂ ಹೊರಗೆ ಬಾರದಂತೆ ಸೂಚನೆ ನೀಡಲಾಗಿದೆ. ಪಾಳು ಬಿದ್ದ ಬಿಲ್ಡಿಂಗ್‌ನಲ್ಲಿ ಚಿರತೆ ಓಡಾಟ ನಡೆಸಿರುವ ಹೆಜ್ಜೆ ಗುರುತು ಪತ್ತೆಯಾಗಿದೆ.

ಚಿರತೆ ಭಯಕ್ಕೆ ಜನರ ಕೈಗೆ ಬಂತು ದೊಣ್ಣೆ

ಬೊಮ್ಮನಹಳ್ಳಿಯ ಕೂಡ್ಲು ಭಾಗದ ಜನವಸತಿ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜನರಲ್ಲಿ ಆತಂಕವನ್ನು ಹೆಚ್ಚಿಸಿದೆ. ಸದ್ಯ ಪರಿಸ್ಥಿತಿ ಹೇಗಾಗಿದೆ ಎಂದರೆ ಮನೆಯಿಂದ ಹೊರಗೆ ಹೋಗಬೇಕಾದರೆ ಕೈಯಲ್ಲಿ ದೊಣ್ಣೆ ಹಿಡಿದುಕೊಂಡು ಭಯದಿಂದಲೇ ಓಡಾಡುವಂತಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version