ಬೆಂಗಳೂರು: ಅಪ್ಪ ಹೇಳಿದರು, ಅಮ್ಮ ಹೇಳಿದರು, ಅಜ್ಜ, ಅಜ್ಜಿ ಹೇಳಿದರು ಅಂತಾನೋ ಅಥವಾ ಇನ್ಯಾರೋ ಹೇಳಿದರು ಎಂದೋ ಇಲ್ಲವೇ ಮಾಡುತ್ತಿದ್ದರು ಎಂದೋ ನೀವು ಕಣ್ಣು ಮುಚ್ಚಿಕೊಂಡು ಅದನ್ನು ಮಾಡಬೇಡಿ. ಏನು ಮಾಡಿದರೆ ಸರಿ? ನಾವು ಏಕೆ ಇದನ್ನು ಮಾಡುತ್ತಿದ್ದೇವೆ? ಇದರಿಂದ ಏನಾಗುತ್ತದೆ? ನನಗೆ ಮಾಡುತ್ತಿರುವುದು ಸರಿ ಅನ್ನಿಸುತ್ತಿದೆಯಾ ಎಂದು ಪರಾಮರ್ಶೆ ಮಾಡಿಕೊಂಡು ಮಾಡಿ ಎಂದು ಯುವ ಜನತೆಗೆ ಜನಪ್ರಿಯ ನಟ ರಮೇಶ್ ಅರವಿಂದ್ (Actor Ramesh Aravind) ಅವರು “ವಿಸ್ತಾರ ಕನ್ನಡ ಸಂಭ್ರಮ” (Vistara Kannada Sambhrama) ಕಾರ್ಯಕ್ರಮದಲ್ಲಿ ಕಿವಿ ಮಾತು ಹೇಳಿದರು.
ವಿಸ್ತಾರ ನ್ಯೂಸ್ (Vistara News) ಆಯೋಜಿಸಿರುವ “ವಿಸ್ತಾರ ಕನ್ನಡ ಸಂಭ್ರಮ” ಕಾರ್ಯಕ್ರಮದಲ್ಲಿ ಮಾತನಾಡಿದ ರಮೇಶ್ ಅರವಿಂದ್ ಅವರು, ನೋಡಿದ್ದು ಸುಳ್ಳಾಗಬಹುದು, ಕೇಳಿದ್ದೂ ಸುಳ್ಳಾಗಬಹುದು. ನಿಧಾನಿಸಿ ಯೋಚಿಸಿದಾಗ ನಿಜವು ತಿಳಿವುದು. ಹೀಗಾಗಿ ಎಲ್ಲರೂ ನಿಧಾನವಾಗಿ ಯೋಚಿಸಿ ಕೆಲಸ ಮಾಡಿ ಎಂದು ಹೇಳಿದರು.
ವಿಸ್ತಾರ ನ್ಯೂಸ್ ಪ್ರಕಾಶನದಿಂದ ನಾಲ್ಕು ಅತ್ಯುತ್ತಮ ಪುಸ್ತಕಗಳನ್ನು ಇಂದು ಹೊರತರಲಾಗಿದೆ. ಇದೊಂದು ಉತ್ತಮ ಕಲ್ಪನೆಯಾಗಿದೆ. ಎಲ್ಲರೂ ಪುಸ್ತಕ ಪ್ರೀತಿಯನ್ನು ಹೊಂದಿರಬೇಕು. ಇನ್ನು ಪುಸ್ತಕಗಳನ್ನು ನಾವು ಹೊತ್ತೊಯ್ಯುವುದಕ್ಕಿಂತ ಪುಸ್ತಕಗಳು ನಮ್ಮನ್ನು ಕರೆದೊಯ್ಯಬೇಕು. ಅವು ನಮಗೆ ದಾರಿದೀಪವಾಗಬೇಕು, ಮಾರ್ಗದರ್ಶನ ನೀಡಬೇಕು. ರಾಜಮಾರ್ಗವನ್ನು ತೋರಬೇಕು ಎಂದು ರಮೇಶ ಅರವಿಂದ್ ಅವರು ಇದೇ ವೇಳೆ ಹೇಳಿದರು.
ವಿಸ್ತಾರ ನ್ಯೂಸ್ನವರು ಅರ್ಥಪೂರ್ಣ ಕಾರ್ಯಕ್ರಮಗಳನ್ನು ಸದಾ ಮಾಡಿಕೊಂಡು ಬರುತ್ತಿದ್ದಾರೆ. ಇದೇ ನಮಗೆ ಆಪ್ಯಾಯತೆಯನ್ನು ತಂದು ಕೊಡುತ್ತದೆ. ನಮ್ಮ ಸಂಸ್ಕೃತಿಯನ್ನು ಈ ವಾಹಿನಿಯು ಉತ್ತಮವಾಗಿ ಬಿತ್ತರಿಸುತ್ತಿದೆ. ಇಡೀ ತಂಡಕ್ಕೆ ನನ್ನ ಧನ್ಯವಾದಗಳು ಎಂದು ರಮೇಶ್ ಅರವಿಂದ್ ಈ ಸಂದರ್ಭದಲ್ಲಿ ಹೇಳಿದರು.
ವಿಸ್ತಾರ ನ್ಯೂಸ್ಗೆ ಹ್ಯಾಪಿ ಬರ್ತ್ಡೇ: ಲಕ್ಷ್ಮಣ ರಾವ್
ವರ್ಷದ ಸಂಭ್ರಮದಲ್ಲಿರುವ ವಿಸ್ತಾರ ನ್ಯೂಸ್ಗೆ ಹ್ಯಾಪಿ ಬರ್ತ್ ಡೇ. ಈ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿರುವುದು ನನಗೆ ಸಂತಸ ತಂದಿದೆ. ವಿಸ್ತಾರ ಬೇರೆಲ್ಲ ಸುದ್ದಿ ವಾಹಿನಿಗಿಂತ ಭಿನ್ನ ಅನ್ನೋದನ್ನು ತೋರಿಸುತ್ತಾ ಬಂದಿದೆ. ಇದು ಬರೀ ಸುದ್ದಿ ವಾಹಿನಿಯಲ್ಲ, ನಾಡಿನ ಸಂಸ್ಕೃತಿಯ ವಾಹಿನಿಯಾಗಿದೆ. ಹರಿಪ್ರಕಾಶ್ ಕೋಣೆಮನೆಯವರ ಟಾರ್ಗೆಟ್ ಈಗಿನ ಜನರೇಶನ್ ಆಗಿದೆ. ಅವರು ಕಿರಿಯರ ಮೂಲಕ ಕನ್ನಡವನ್ನು ಬೆಳೆಸಲು ಹೊರಟಿದ್ದಾರೆ. ವಿಸ್ತಾರ ನ್ಯೂಸ್ 50 ವರ್ಷ, ನೂರು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಲಿ ಎಂದು ಕವಿ ಲಕ್ಷ್ಮಣ ರಾವ್ ಹೇಳಿದರು.
ಇಂದು ನಮ್ಮ ಪ್ರಕಾಶನದಿಂದ 50% ರಿಯಾಯಿತಿ: ಬಸವರಾಜ್ ಕೊನೇಕಾ
ಸಿದ್ದಲಿಂಗೇಶ್ವರ ಬುಕ್ ಡಿಪೊ ಮತ್ತು ಪ್ರಕಾಶನದ ಮಾಲೀಕ ಬಸವರಾಜ್ ಕೊನೇಕಾ ಮಾತನಾಡಿ, ಯುಗಾದಿ ಕಥಾ ಸ್ಪರ್ಧೆಗೆ ತುಂಬಾ ಸಂತಸದಿಂದ ಒಪ್ಪಿಗೆ ಕೊಟ್ಟಿದ್ದೆ. ಆ ಕಥೆಗಳನ್ನು ಪುಸ್ತಕ ರೂಪದಲ್ಲಿ ತರಲು ಒಪ್ಪಿಕೊಂಡರು. ಇಡೀ ಕರ್ನಾಟಕ ಕನ್ನಡ ಸಂಭ್ರಮ ಮಾಡುವ ಹೊತ್ತಲ್ಲೇ ವಿಸ್ತಾರ ಸಂಭ್ರಮ ಆಚರಿಸುತ್ತಿದೆ. ಇವತ್ತು ನಮ್ಮ ಪ್ರಕಾಶನದಿಂದ 50% ರಿಯಾಯಿತಿ ಕೊಟ್ಟಿದ್ದೇವೆ. ಈ ಸಮಾರಂಭಕ್ಕೆ ನನ್ನನ್ನು ಕರೆದು ಗೌರವಿಸಿದ್ದಕ್ಕೆ ನನ್ನ ಧನ್ಯವಾದಗಳು ಎಂದು ಹೇಳಿದರು.
ಇದನ್ನೂ ಓದಿ: Vistara Kannada Sambhrama : ವಿಸ್ತಾರ ಪ್ರಕಾಶನದ ನಾಲ್ಕು ಪುಸ್ತಕಗಳ ಲೋಕಾರ್ಪಣೆ; ಏನಿದರ ವಿಶೇಷತೆ?
ವಿಸ್ತಾರ ನೂರು ವರ್ಷ ಪೂರೈಸಲಿ
ನಟಿ ಬೃಂದಾ ಆಚಾರ್ಯ ಮಾತನಾಡಿ, ವಿಶಾಲ ಇತಿಹಾಸವಿರುವ ಕನ್ನಡವನ್ನು ಈ ರೀತಿ ಸಂಭ್ರಮಿಸುತ್ತಿದ್ದೇವೆ. ಮುಂಬೈನಿಂದ ಬಂದ ನನ್ನನ್ನು ಕನ್ನಡಿಗರು ಒಪ್ಪಿಕೊಂಡಿದ್ದಾರೆ. ಕನ್ನಡ ನಾಡು, ನುಡಿ ನಮ್ಮ ಜತೆ ಇರಲಿ. ವಿಸ್ತಾರ ನೂರಾರು ವರ್ಷಗಳನ್ನು ಪೂರೈಸಲಿ ಎಂದು ಹೇಳಿದರು.