Site icon Vistara News

Liger Movie | ಅಪ್ಪು ಪುಣ್ಯಭೂಮಿಗೆ ನಮಿಸಿದ ಲೈಗರ್‌ ತಂಡ: ಕನ್ನಡದಲ್ಲಿಯೇ ಮಾತನಾಡಿದ ವಿಜಯ್‌ ದೇವರಕೊಂಡ

Liger Movie

ಬೆಂಗಳೂರು : ಟಾಲಿವುಡ್ ನಟ ವಿಜಯ್ ದೇವರಕೊಂಡ ಅಭಿನಯದ ಲೈಗರ್ ಸಿನಿಮಾದ (Liger Movie) ಪ್ರೀ ರಿಲೀಸ್ ಇವೆಂಟ್‌ ನಿಮಿತ್ತ ತಂಡ ಬೆಂಗಳೂರಿಗೆ (ಆ.19) ಆಗಮಿಸಿತ್ತು. ಏರ್ ಪೋರ್ಟ್‌ನಿಂದ ನೇರವಾಗಿ ಬಂದು ವಿಜಯ್ ದೇವರಕೊಂಡ ಹಾಗೂ ನಟಿ ಅನನ್ಯ ಪಾಂಡೆ ಕಂಠೀರವ ಸ್ಟುಡಿಯೋಗೆ ಆಗಮಿಸಿ ಪುನೀತ್‌ ರಾಜಕುಮಾರ್‌ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು. ಅಪ್ಪು ಸಮಾಧಿ ಜತೆ ಪಾರ್ವತಮ್ಮ ರಾಜ್‌ಕುಮಾರ್ ಮತ್ತು ರಾಜ್‌ಕುಮಾರ್ ಸಮಾಧಿಗೂ ನಮನ ಸಲ್ಲಿಸಿದರು.

ಬೆಂಗಳೂರಿನ ಮಂತ್ರಿ ಮಾಲ್‌ನಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದ್ದು ನಟ ವಿಜಯ್ ದೇವರಕೊಂಡ ಹಾಗೂ ಚಿತ್ರತಂಡ ಭಾಗಿಯಾಗಿತ್ತು. ವಿಜಯ್‌ ದೇವರಕೊಂಡ ಕನ್ನಡದಲ್ಲಿಯೇ ಮಾತನಾಡಿ ಕನ್ನಡಿಗರ ಮನ ಗೆದ್ದರು. ಕನ್ನಡದಲ್ಲಿಯೇ ಮಾತು ಆರಂಭಿಸಿದ ವಿಜಯ್ ʻʻನಿಮ್ಮನೆಲ್ಲ ನೋಡಿ ತುಂಬಾ ಸಂತೋಷ ಆಗುತ್ತಿದೆ. ಲೈಗರ್‌ ಸಿನಿಮಾ ನನ್ನ ಕರಿಯರ್‌ನಲ್ಲಿ ದೊಡ್ಡ ಸಿನಿಮಾ. ಇದೊಂದು ಮಾಸ್‌ ಎಂಟರ್ಟೈನ್ಮೆಂಟ್ ಸಿನಿಮಾ. ಬೆಂಗಳೂರು ಯಾವಾಗಲೂ ನನಗೆ ಪ್ರೀತಿ ನೀಡಿದೆ. ನನ್ನ ಪಾತ್ರದಲ್ಲಿ ಮ್ಯಾಡ್‌ನೆಸ್‌ ನೋಡುತ್ತೀರಿ. ಇನ್ನೂ ನನ್ನ ಒಂದು ಸಂದೇಶ ಅಂದರೆ ಬೆಂಗಳೂರಿನ ಯುವಕ ಯುವತಿಯರನ್ನು ನಾನು ಇಷ್ಟ ಪಡುತ್ತೇನೆ. ನಾನು ಈ ಚಿತ್ರಕ್ಕೆ ಕನ್ನಡದಲ್ಲಿ ಡಬ್ ಮಾಡಲು ಪ್ರಯತ್ನಿಸಿದೆ. ಆದರೆ ಅದು ಸಾಧ್ಯವಾಗಲಿಲ್ಲ. ಮುಂದಿನ ದಿನಗಳಲ್ಲಿ ನನ್ನ ಪಾತ್ರಕ್ಕೆ ನಾನು ಡಬ್ ಮಾಡುತ್ತೇನೆʼʼ ಎಂದರು.

ಅಪ್ಪು ಜತೆಗಿನ ಒಡನಾಟದ ಬಗ್ಗೆ ಮೆಲುಕು ಹಾಕಿದ ವಿಜಯ್, ʻʻನಾನು ಬೆಂಗಳೂರಿಗೆ ಬಂದಾಗಲೆಲ್ಲ ಪುನೀತ್ ಅಣ್ಣನನ್ನು ಮೀಟ್ ಮಾಡಿ ಹೋಗುತ್ತಿದ್ದೆ. ಅವರು ನನ್ನ ಸಿನಿಮಾಗಳನ್ನು ನೋಡಿ ಫೋನ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ಹಾಗೇ ಶಿವಣ್ಣ ಕೂಡ ನನ್ನ ಸಿನಿಮಾ ನೋಡಿ ಫೋನ್ ಮಾಡಿ ಮಾತನಾಡಿದ್ದು ಇದೆʼʼ ಎಂದು ರಾಜ್ ಕುಟುಂಬದೊಂದಿಗಿನ ಬಾಂಧವ್ಯವನ್ನು ನೆನಪಿಸಿಕೊಂಡರು.

ವಿಜಯ್ ಎದುರು ವಿಲನ್ ಆಗಿ ತೊಡೆ ತಟ್ಟಿರುವ ನಟ ವಿಶ್ ಮಾತನಾಡಿ, ʻʻನಿಮ್ಮನ್ನು ನೋಡಿ ತುಂಬಾ ಸಂತೋಷವಾಗಿದೆ. ವಿಜಯ್ ಹಾಗೂ ಪುರಿ ಸರ್ ಜತೆ ಕೆಲಸ‌ ಮಾಡಿದ್ದು ಖುಷಿಕೊಟ್ಟಿದೆ. ವಿಜಯ್ ಅದ್ಭುತ ನಟ. ಅನನ್ಯ ತುಂಬಾ ಚೆಂದ ಕಾಣಿಸ್ತಾರೆ. ಅಪ್ಪು ಅಣ್ಣ ಮಿಸ್ ಯೂ. ಪುರಿ ಸರ್ ಮೊದಲು ನಿರ್ದೇಶನ ಮಾಡಿದ್ದು ಅಪ್ಪು ಅಣ್ಣನಿಗೆ. ಪ್ರತಿಯೊಬ್ಬರು 25ಕ್ಕೆ ಥಿಯೇಟರ್ ಗೆ ಬಂದು ಸಿನಿಮಾ ನೋಡಿ‌ʼʼ ಎಂದು ಮನವಿ ಮಾಡಿಕೊಂಡರು.

ಇದನ್ನೂ ಓದಿ | Liger Movie | ಲೈಗರ್ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಎದರು ಅಬ್ಬರಿಸಲಿರುವ ಖಳನಾಯಕ ಇವರೇ!

ನಟಿ ಅನನ್ಯ ಪಾಂಡೆ ಮಾತನಾಡಿ ʻʻಬೆಂಗಳೂರಿಗೆ ನಾನು ಐದನೇ ಬಾರಿ ಬರುತ್ತಿದ್ದೇನೆ. ನಟನೆ ವಿಚಾರಕ್ಕೆ ಬಂದರೆ ವಿಜಯ್‌ ದೇವರಕೊಂಡ ಅವರ ಜತೆ ರೋಮ್ಯಾನ್ಸ್‌ ಮಾಡಲು ತುಂಬಾ ಸುಲಭ ಅಯಿತು. ಆದರೆ ಕಷ್ಟ ಆಗಿದ್ದು ಬೈಕ್‌ ಸೀನ್‌ ಮಾಡುವಾಗʼʼ ಎಂದು ಹೇಳಿದರು.

ಮಂತ್ರಿ ಮಾಲ್‌ನಲ್ಲಿ ವಿಜಯ್ ಫ್ಯಾನ್ಸ್ ಅಬ್ಬರ

ಸುದ್ದಿಗೋಷ್ಠಿ ಬಳಿಕ ಲೈಗರ್ ಟೀಂ, ನಗರದ ಮಂತ್ರಿ ಮಾಲ್‌ನಲ್ಲಿ ಪ್ರೀ ರಿಲೀಸ್ ಇವೆಂಟ್ ಹಮ್ಮಿಕೊಂಡಿತ್ತು. ವಿಜಯ್ ಆಗಮಿಸುತ್ತಿದ್ದಾರೆ ಎಂದು ಗೊತ್ತಾಗಿ ದೊಡ್ಡ ಸಂಖ್ಯೆಯಲ್ಲಿ ಫ್ಯಾನ್ಸ್ ನೆರೆದಿದ್ದರು. ವಿಜಯ್ ಕಂಡು ಫ್ಯಾನ್ಸ್ ಅಬ್ಬರ ಮುಗಿಲುಮುಟ್ಟಿತ್ತು. ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಅಭಿಮಾನಿಗಳನ್ನು ಕಂಡು ರೌಡಿಬಾಯ್ ಕ್ಲೀನ್ ಬೋಲ್ಡ್ ಆದರು.

ಪುರಿ ಜಗನ್ನಾಥ್ ನಿರ್ದೇಶನದ ಲೈಗರ್ ಸಿನಿಮಾ ಮೂಲಕ ಮೈಕ್ ಟೈಸನ್ ಭಾರತೀಯ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಲೈಗರ್‌ಗೆ ಜೋಡಿಯಾಗಿ ಅನನ್ಯ ಪಾಂಡೆ ನಟಿಸಿದ್ದು, ರಮ್ಯಾಕೃಷ್ಣ ವಿಜಯ್ ತಾಯಿಯಾಗಿ ಅಬ್ಬರಿಸಿದ್ದಾರೆ. ಈ ಮೊದಲು ರಿಲೀಸ್ ಆಗಿದ್ದ ʻಅಕ್ಡಿ ಪಕ್ಡಿʼ ಹಾಡಿಗೆ ವಿಜಯ್‌ ದೇವರಕೊಂಡ ಅಭಿಮಾನಿಗಳಿಂದ ಒಳ್ಳೆಯ ಪ್ರತಿಕ್ರಿಯೆ ಬಂದಿತ್ತು.

ಧರ್ಮ ಪ್ರೊಡಕ್ಷನ್‌ನಡಿ ಚಾರ್ಮಿ ಕೌರ್, ಕರನ್ ಜೋಹರ್, ಪುರಿ ಜಗನ್ನಾಥ್, ಅಪೂರ್ವ ಮೆಹ್ತಾ ಲೈಗರ್ ಸಿನಿಮಾವನ್ನು ಅದ್ಧೂರಿಯಾಗಿ ನಿರ್ಮಿಸಿದ್ದಾರೆ. ಪೋಸ್ಟರ್‌ಗಳಿಂದಲೇ ನಿರೀಕ್ಷೆ ಹೆಚ್ಚಿಸಿದೆ. ಹಿಂದಿ, ಕನ್ನಡ, ತಮಿಳು, ತೆಲುಗು, ಹಾಗೂ ಮಲಯಾಳಂ ಭಾಷೆಯಲ್ಲಿ ತಯಾರಾಗಿರುವ ಪ್ಯಾನ್ ಇಂಡಿಯಾ ಚಿತ್ರ ಲೈಗರ್ ಆಗಸ್ಟ್‌ 25ಕ್ಕೆ ಬಿಗ್ ಸ್ಕ್ರೀನ್‌ಗೆ ಲಗ್ಗೆ ಇಡಲಿದೆ. ವಿಶ್ವ ಬಾಕ್ಸಿಂಗ್ ಲೆಜೆಂಡ್ ಮೈಕ್ ಟೈಸನ್ ಈ ಚಿತ್ರದಲ್ಲಿ ಗೆಸ್ಟ್ ರೋಲ್‌ನಲ್ಲಿ ನಟಿಸಿದ್ದು, ಕನ್ನಡದಲ್ಲಿಯೂ ರಿಲೀಸ್ ಆಗುತ್ತಿದೆ.

ಇದನ್ನೂ ಓದಿ | Liger Movie | ಗುಲಾಬಿ ಸಾಕು ಮಾನ ಮುಚ್ಚೋಕೆ! ಲೈಗರ್‌ ಪೋಸ್ಟರ್‌ನಲ್ಲಿ ವಿಜಯ್‌ ದೇವರಕೊಂಡ ನಗ್ನಾವತಾರ

ಇದನ್ನೂ ಓದಿ | ಲೈಗರ್‌ ಪ್ರಮೋಶನ್‌ಗೆ ಮಾಲ್‌ಗೆ ಹೋಗಿ, ಅಲ್ಲಿರೋಕೆ ಆಗದೆ ವಾಪಸ್‌ ಬಂದ ವಿಜಯ್‌ ದೇವರಕೊಂಡ

Exit mobile version