Site icon Vistara News

Liquor Rate : ಮದ್ಯ ಪ್ರಿಯರಿಗೆ ಹೊಸ ವರ್ಷದ ಮೊದಲ ದಿನವೇ ಏಟು; ಏರಲಿದೆ ಎಣ್ಣೆ ರೇಟು!

Liqour Rate hike

ಬೆಂಗಳೂರು: ಯಾವುದೇ ಮುನ್ಸೂಚನೆ ಇಲ್ಲದೆ, ಪ್ರತಿಭಟನೆಯ ಸಣ್ಣ ಸಂಚಲನವೂ ಇಲ್ಲದೆ ರೇಟು ಜಾಸ್ತಿ ಆಗೋದು ಅಂದ್ರೆ ಮದ್ಯದ್ದು (Liquor Rate) ಇರಬೇಕು ಅನಿಸುತ್ತದೆ. ಕೆಲವು ದಿನಗಳ ಹಿಂದೆ ಮದ್ಯದ ದರ ಏರಿಕೆ ಸದ್ಯಕ್ಕಿಲ್ಲ ಎಂಬ ಸುದ್ದಿ ಬಂದಿತ್ತು. ಈಗ ನೋಡಿದರೆ 2024ರ ಜನವರಿ 1ರಿಂದ (Rate hike from January 1, 2024) ಅನ್ವಯವಾಗುವಂತೆ ಮದ್ಯದ ದರ ಏರಿಕೆಯಾಗಲಿದೆ ಎಂಬ ಮಾಹಿತಿ ಬರುತ್ತಿದೆ.

ನೀವು ಹೊಸ ವರ್ಷದಲ್ಲಿ (New year 2024) ಮದ್ಯ ಮುಟ್ಟೋದಿಲ್ಲ ಅಂತ ನಿರ್ಣಯ ಮಾಡಿರುವವರ ಸಾಲಿನಲ್ಲಿದ್ದರೆ ಈ ಸುದ್ದಿ ಖುಷಿಕೊಡಬಹುದು, ಇಲ್ಲ ಬದುಕನ್ನು ಎಣ್ಣೆಯೊಂದಿಗೇ ಎಂಜಾಯ್‌ ಮಾಡಬೇಕು ಅನ್ನುವ ನಿರ್ಧಾರ ನಿಮ್ಮದಾದ್ರೆ ನಿಮಗಿದು ಸ್ವಲ್ಪ ಬೇಸರ ತರಬಹುದು!

ಹಾಗಂತ ಈ ದರ ಏರಿಕೆಯನ್ನು ಸರ್ಕಾರ ಪ್ರಕಟಿಸಿದ್ದಲ್ಲ. ಕಳೆದ ಬಜೆಟ್‌ನಲ್ಲಿ ಸರ್ಕಾರ ಮದ್ಯದ ಮೇಲಿನ ತೆರಿಗೆಯನ್ನು ಕೆಲವಕ್ಕೆ ಶೇಕಡಾ 10 ಇನ್ನು ಕೆಲವಕ್ಕೆ ಶೇ. 20ರಷ್ಟು ಏರಿಕೆ ಮಾಡಿತ್ತು. ಹಾಗಾಗಿ ಜುಲೈ ಒಂದರಿಂದ ಮದ್ಯದ ದರ ಏರಿಕೆ ಜಾರಿಗೆ ಬಂದಿತ್ತು. ಈ ಬಾರಿ ಮದ್ಯದ ದರ ಏರಿಕೆಗೆ ಮುಂದಾಗಿರುವುದು ಕೆಲವು ಮದ್ಯದ ಕಂಪನಿಗಳು. ಜನವರಿ 1ರಿಂದ ದರ ಏರಿಕೆ ಮಾಡುತ್ತಿದ್ದೇವೆ ಎಂದು ಅವರು ಅಬಕಾರಿ ಇಲಾಖೆಗೆ ಪತ್ರ ಬರೆದಿವೆ.

ಈಗ ಇಷ್ಟು ಮುನ್ಸೂಚನೆ ಸಿಕ್ಕಿರುವುದರಿಂದ ಮದ್ಯ ಪ್ರಿಯರು ಈ ವರ್ಷದ ಮುಕ್ತಾಯ ಆಗುವುದರ ಒಳಗೆ ಒಂದಿಷ್ಟು ಕುಡಿದುಬಿಡಬಹುದು. ಯಾಕೆಂದರೆ ಹೊಸ ವರ್ಷದ ಮೊದಲ ದಿನದಿಂದಲೇ ಈ ಏರಿಕೆ ಜಾರಿಗೆ ಬರುವುದು ಬಹುತೇಕ ಖಚಿತವಾಗಿದೆ.

ಇದನ್ನೂ ಓದಿ ; Liquor Price: ಹೊಸ ವರ್ಷಕ್ಕೆ ಆಗಲ್ಲ ಟೈಟು; ಹೆಚ್ಚಾಗಿ ಹೋಯ್ತಪ್ಪೋ ಎಣ್ಣೆ ರೇಟು!

ಏನೆಂದು ಹೇಳಿವೆ ಮದ್ಯ ಕಂಪನಿಗಳು?

ಅಬಕಾರಿ ಇಲಾಖೆಗೆ ಪತ್ರ ಬರೆದಿರುವ ಕಂಪನಿಗಳು ದರ ಏರಿಕೆ ಮಾಡುತ್ತಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಓಟಿ, ಬಿಪಿ, 8 ಪಿಎಂ ದರ ಹೆಚ್ಚಳ ಮಾಡುತ್ತೇವೆ ಎಂದು ಅಬಕಾರಿ ಇಲಾಖೆಗೆ ಪತ್ರದಲ್ಲಿ ಹೇಳಲಾಗಿದೆ. ಮದ್ಯ ತಯಾರಿಕ ಕಂಪನಿಗಳು ಈಗಾಗಲೇ ಬಾರ್ ಮಾಲೀಕರಿಗೂ ಸಂದೇಶ ಕಳುಹಿಸಿದ್ದು, ದರ ಹೆಚ್ಚಳ ಮಾಡುವ ಬಗ್ಗೆ ಹೇಳಿದೆ. ಇನ್ನು ಪ್ರತಿ ಕ್ವಾಟರ್ ಮೇಲೆ 20-30 ರೂಪಾಯಿ ಹೆಚ್ಚಳ ಮಾಡುವುದಾಗಿ ಪತ್ರದಲ್ಲಿ ತಿಳಿಸಿದೆ.

ಓಟಿ 180 ಎಂಎಲ್ ನ ಸದ್ಯದ ದರ 100 ರೂ.ಜನವರಿ 1ರಿಂದ 123 ರೂ. ಆಗಲಿದೆ.
ಬಿಪಿ 180 ಎಂಎಲ್ ನ ಸದ್ಯದ ದರ 123 ರೂ. ಜನವರಿಯಿಂದ 159 ರೂ.ಆಗಲಿದೆ.
8PM (180 ಎಂಎಲ್) ನ ಸದ್ಯದ ದರ 100 ರೂ. ಜನವರಿಯಿಂದ 123 ರೂ. ಆಗಲಿದೆ.

ಅಂದರೆ ಪ್ರತಿ ಕ್ವಾರ್ಟರ್‌ ಮೇಲೆ ಸುಮಾರು 20 ರೂ. ಹೆಚ್ಚಾಗಿದೆ. ರಾಜ್ಯದ ಕೆಳ ವರ್ಗದ ಜನ ಅತೀ ಹೆಚ್ಚು ಸೇವಿಸುವ ಎಣ್ಣೆಗಳ ದರ ಏರಿಕೆ ಆಗಿರುವುದು ಇಲ್ಲಿ ಕಂಡುಬರುತ್ತದೆ.

Exit mobile version