ಬೆಂಗಳೂರು: ಗ್ಯಾರಂಟಿಗಳ ಜಾರಿ ಬಳಿಕ ಆದಾಯ ಹೆಚ್ಚಳಕ್ಕೆ ಅಬಕಾರಿ ಸುಂಕ (Excise Duty) ಹೆಚ್ಚಿಸಿದ್ದ ಸರ್ಕಾರಕ್ಕೆ (State Government of Karnataka) ದೊಡ್ಡ ಆಘಾತ ಎದುರಾಗಿದೆ. ಬಜೆಟ್‌ನಲ್ಲಿ ಶೇಕಡಾ 10ರಷ್ಟು ಮದ್ಯದ ದರದಲ್ಲಿ (Alcohol Price) ಹೆಚ್ಚಳ ಮಾಡಿದ್ದ ಸರ್ಕಾರಕ್ಕೆ ಮದ್ಯಪ್ರಿಯರು ಶಾಕ್ ನೀಡಿದ್ದಾರೆ. ಆದಾಯ ಹೆಚ್ಚಿಸಿಕೊಳ್ಳಲು ಪ್ಲ್ಯಾನ್ ಮಾಡಿದ್ದ ಸರ್ಕಾರಕ್ಕೆ ಇದೀಗ ಮತ್ತೊಂದು ರೀತಿಯ ಸಂಕಷ್ಟ ಎದುರಾಗಿದೆ. ಶೇಕಡ 15ರಷ್ಟು ಮದ್ಯ ಮಾರಾಟದಲ್ಲಿಯೇ (Alcohol sales) ಕುಸಿತ ಕಂಡಿದೆ.
ಗ್ಯಾರಂಟಿ ಮೇಲೆ ಗ್ಯಾರಂಟಿಗಳನ್ನು (Congress Guarantee Scheme) ಜಾರಿ ಮಾಡಿದ ರಾಜ್ಯ ಸರ್ಕಾರವು ತನ್ನ ಬೊಕ್ಕಸದ ಆದಾಯ ಹೆಚ್ಚಳಕ್ಕೆ ಬೇರೆ ಆದಾಯದ ಮೂಲಗಳ ಬಗ್ಗೆ ಗಮನಹರಿಸಿತ್ತು. 2023ರ ಬಜೆಟ್‌ನಲ್ಲಿ ಸರ್ಕಾರದ ಬಹುದೊಡ್ಡ ಆದಾಯದ ಮೂಲವಾದ ಅಬಕಾರಿ ಸುಂಕವನ್ನು ಶೇಕಡ 10ರಿಂದ 20 ರಷ್ಟು ಹೆಚ್ಚಳ ಮಾಡಿತ್ತು. ಆದರೆ, ಸುಂಕ ಹೆಚ್ಚಳ ಬಳಿಕ ಆದಾಯದ ನಿರೀಕ್ಷೆಯಲ್ಲಿದ್ದ ಸರ್ಕಾರಕ್ಕೆ ಈಗ ಶಾಕ್ ಎದುರಾಗಿದೆ.
ಶೇ.10ರಿಂದ 15ರಷ್ಟು ಕಡಿಮೆ ಮಾರಾಟ!
ಅಬಕಾರಿ ಸುಂಕ ಏರಿಕೆ ಬಳಿಕ ಮದ್ಯ ಮಾರಾಟ ಕುಸಿತವಾಗಿದೆ ಎಂದು ರಾಜ್ಯ ಮದ್ಯ ಮಾರಾಟಗಾರರ ಒಕ್ಕೂಟ ಮಾಹಿತಿಯನ್ನು ಹಂಚಿಕೊಂಡಿದೆ. ಮದ್ಯದ ದರ ಏರಿಕೆಯಿಂದಾಗಿ ರಾಜ್ಯದಲ್ಲಿ ಮದ್ಯ ಮಾರಾಟದಲ್ಲಿ ಕುಂಠಿತವಾಗಿದ್ದು, ಕಳೆದ ವರ್ಷದ ಈ ಅವಧಿಗೆ ಹೋಲಿಸಿದರೆ, ಈ ವರ್ಷದ ಆಗಸ್ಟ್‌ನಲ್ಲಿ ಶೇ.10ರಿಂದ 15ರಷ್ಟು ಕಡಿಮೆ ಪ್ರಮಾಣದ ಮದ್ಯ ಮಾರಾಟವಾಗಿದೆ ಎಂದು ಹೇಳಿದ್ದಾರೆ.
ಬಿಯರ್ ಮಾರಾಟದಲ್ಲಾಗಿಲ್ಲ ವ್ಯತ್ಯಾಸ
ಇನ್ನು ಲಿಕ್ಕರ್ ಮಾರಾಟ ಕುಸಿತ ಕಂಡಿದ್ರೆ ,ಬಿಯರ್ ಮಾರಾಟದಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ. ಒಕ್ಕೂಟ ನೀಡಿರುವ ಮಾಹಿತಿಯಂತೆ ಜುಲೈ ತಿಂಗಳಲ್ಲಿ 3,556.25 ಕೋಟಿ ರೂ. ಮೊತ್ತದ ಬಿಯರ್ ಸೇರಿದಂತೆ ಎಲ್ಲ ಬಗೆಯ ಮದ್ಯಗಳು ಮಾರಾಟವಾಗಿದ್ದವು. ಆಗಸ್ಟ್ ತಿಂಗಳ 15 ದಿನಗಳಲ್ಲಿ 1,302.90 ಕೋಟಿ ರೂ. ಮದ್ಯ ಮಾರಾಟವಾಗಿದೆ. ಅದರಲ್ಲಿ ಬಿಯರ್ 234.19 ಕೋಟಿ ರೂ. ಹಾಗೂ ಇತರ ಮದ್ಯ 1,068.71 ಕೋಟಿ ರೂಪಾಯಿಗೆ ಮಾರಾಟವಾಗಿದೆ.
2022-23ರಲ್ಲಿ ಆಗಸ್ಟ್‌ನ ಮೊದಲ 15 ದಿನಗಳ ಕಾಲ 25.80 ಲಕ್ಷ ಬಾಕ್ಸ್‌ಗಳಷ್ಟು ಮದ್ಯ ಹಾಗೂ 10.34 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿತ್ತು. ಅದೇ ಈ ವರ್ಷದ ಆಗಸ್ಟ್ 1ರಿಂದ 15ರವರೆಗೆ 21.87 ಲಕ್ಷ ಬಾಕ್ಸ್ ಮದ್ಯ ಹಾಗೂ 12.52 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿದೆ.
ಇದನ್ನೂ ಓದಿ: BJP Politics : ಎಸ್.ಟಿ. ಸೋಮಶೇಖರ್ ಮುನಿಸಿಗೆ ವಿಕೆಟ್ ಪತನ; ಮಾರೇಗೌಡ ಆ್ಯಂಡ್ ಟೀಂ ಉಚ್ಚಾಟನೆ!
ಸ್ಕಾಚ್ ಕುಡಿಯೋರು ಕಡಿಮೆ ಆದ್ರು!
ಇನ್ನು ಸ್ಕಾಚ್ ಮದ್ಯ ಕುಡಿಯುತ್ತಿದ್ದವರು, ಪ್ರೀಮಿಯಂ ಬ್ರ್ಯಾಂಡ್ ಸೇವಿಸುತ್ತಿರುವವರು ಅದಕ್ಕಿಂತ ಕೆಳಗಿನ ಬ್ರ್ಯಾಂಡ್ ಸೇವಿಸುತ್ತಿದ್ದಾರೆ. ಇದರಿಂದಲೂ ಸಹ ಸರ್ಕಾರದ ಆದಾಯ ಇಳಿಕೆ ಕಂಡಿದೆ. ಇದರ ಮಧ್ಯೆ ನಕಲಿ ಮದ್ಯದ ಹಾವಳಿ ಕೂಡ ಹೆಚ್ಚಾಗಿದೆ ಎಂದು ಹೇಳಲಾಗಿದೆ. ಸರ್ಕಾರಕ್ಕೆ ಈ ವರ್ಷ ಗ್ಯಾರಂಟಿ ಯೋಜನೆಗಳಿಂದ ಸರಿಸುಮಾರು 38 ಸಾವಿರ ಕೋಟಿ ರೂಪಾಯಿ ಖರ್ಚಾಗುತ್ತದೆ. ಇದಕ್ಕೆ ಅಬಕಾರಿ ಸುಂಕವು ಪ್ರಮುಖ ಪರ್ಯಾಯ ಆದಾಯ ಮೂಲವಾಗಿದೆ. ಈಗ ಇದಕ್ಕೇ ಹೊಡೆತ ಬಿದ್ದಿರುವುದು ಅಲ್ಪ ಮಟ್ಟಿನ ಆತಂಕವನ್ನು ಸರ್ಕಾರಕ್ಕೆ ತಂದೊಡ್ಡಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಯಾವ ಕ್ರಮ ಕೈಗೊಂಡು ಆದಾಯದಲ್ಲಿ ಹೆಚ್ಚಳ ಮಾಡಿಕೊಳ್ಳುತ್ತದೆ ಎಂಬ ಕುತೂಹಲ ಎದುರಾಗಿದೆ.