ಯಲಹಂಕ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಶುಕ್ರವಾರ ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಕೈಗೊಂಡು ಮತಯಾಚನೆ (Lok Sabha Election 2024) ನಡೆಸಿದರು.
ಗಣೇಶ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಕ್ಷೇತ್ರದ ವಿವಿಧ ರಸ್ತೆಗಳಲ್ಲಿ ಅಭ್ಯರ್ಥಿ ರಕ್ಷಾ ರಾಮಯ್ಯ ಅವರು ಚುನಾವಣಾ ಪ್ರಚಾರ ನಡೆಸಿದರು. ನಂತರ ಕೆಂಪೇಗೌಡರ ಪ್ರತಿಮೆ ಮತ್ತು ಡಾ.ಪುನೀತ್ ರಾಜ್‌ಕುಮಾರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.
ವಾರ್ಡ್ ನಂಬರ್ 2 ರಲ್ಲಿ ಪಾದಯಾತ್ರೆ ಮೂಲಕ ಪ್ರಚಾರ ಆರಂಭಿಸಿದ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ, ನಂತರ ರೋಡ್ ಶೋ ಮೂಲಕ ಸಾಮಾಕ್ಷಮ್ಮ ರಸ್ತೆ, ಬಡಾವಣೆ ರಸ್ತೆ, ಮಸೀದಿ ರಸ್ತೆ, ಡೌನ್ ಬಜಾರ್ ರಸ್ತೆ, ಓಎಂಎಸ್ ರಸ್ತೆ, ಹೊಸಬೀದಿ, ಡೌನ್ ಬಜಾರ್ ರಸ್ತೆ, ಓಎಂಎಸ್ ರಸ್ತೆ, ಹೊಸಬೀದಿ ಬಸ್ ನಿಲ್ದಾಣ ನಂತರ ವಾರ್ಡ್ ನಂಬರ್ 4ರಲ್ಲಿ ಚಿಕ್ಕಬೊಮ್ಮಸಂದ್ರ ಕ್ರಾಸ್‌ನಿಂದ ಅಟ್ಟೂರು ಮುಖ್ಯರಸ್ತೆವರೆಗೆ ಹಾಗೂ ವಾರ್ಡ್ ನಂಬರ್ 3 ರಲ್ಲಿ ಶನಿ ಮಹಾತ್ಮಾ ದೇವಸ್ಥಾನದಿಂದ ಅಟ್ಟೂರು ಗ್ರಾಮದವರೆಗೆ ಚುನಾವಣಾ ಪ್ರಚಾರ ನಡೆಸಿದರು.
ಇದನ್ನೂ ಓದಿ: CET 2024 Exam: ಸಿಇಟಿ ಪರೀಕ್ಷೆಯ 2ನೇ ದಿನವೂ 26 ಔಟ್ ಆಫ್ ಸಿಲಬಸ್ ಪ್ರಶ್ನೆ! ಏ.27ರೊಳಗೆ ಆಕ್ಷೇಪಣೆ ಸಲ್ಲಿಸಲು KEA ಸೂಚನೆ
ಈ ಸಂದರ್ಭದಲ್ಲಿ ಅಭ್ಯರ್ಥಿ ರಕ್ಷಾ ರಾಮಯ್ಯ ಮಾತನಾಡಿ, ಡಾ. ಪುನೀತ್ ರಾಜ್‌ಕುಮಾರ್ ಅವರನ್ನು ಸ್ಮರಿಸಿಕೊಂಡರು. ಶಾಲಾ ದಿನಗಳಲ್ಲಿ ಪುನೀತ್ ಅವರೊಂದಿಗಿನ ಒಡನಾಟವನ್ನು ನೆನಪು ಮಾಡಿಕೊಂಡರು. ಯುವ ಜನಾಂಗಕ್ಕೆ ಪುನೀತ್ ರಾಜ್‌ಕುಮಾರ್ ಸ್ಫೂರ್ತಿಯಾಗಿದ್ದರು ಎಂದು ತಿಳಿಸಿದರು.
ಹಸಿವು ಮುಕ್ತ ಕರ್ನಾಟಕ ಕಾಂಗ್ರೆಸ್ ಗುರಿಯಾಗಿದ್ದು, ಬಡತನ ನಿರ್ಮೂಲನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರ ಆದ್ಯತೆ ನೀಡುತ್ತಿದೆ. ನಮ್ಮ ಗುರಿ ಸಾಧನೆಗೆ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬುವ ಕೆಲಸ ಮಾಡಬೇಕು.
ಬಿಜೆಪಿ ಸರ್ಕಾರ ಸುಳ್ಳು ಭರವಸೆಗಳ ಮೂಲಕ ಜನರನ್ನು ವಂಚಿಸಿದೆ. ಹತ್ತು ವರ್ಷಗಳಲ್ಲಿ ಇಪ್ಪತ್ತು ಕೋಟಿ ಉದ್ಯೋಗ ಸೃಷ್ಟಿಯಾಗಬೇಕಾಗಿತ್ತು. ಉದ್ಯೋಗ ಸೃಜನೆಯಲ್ಲಿ ಶೇ 5 ರಷ್ಟು ಸಾಧನೆ ಮಾಡಿಲ್ಲ ಎಂದು ಆರೋಪಿಸಿದರು.
ಕಾಂಗ್ರೆಸ್ ಪಕ್ಷ ಬಡವರ ಪರವಾಗಿದ್ದು, ಜನ ಸಾಮಾನ್ಯರ ಹಿತ ರಕ್ಷಣೆಗೆ ಬದ್ಧವಾಗಿದೆ. ಕಾಂಗ್ರೆಸ್ ಪ್ರಣಾಳಿಕೆ ಇದಕ್ಕೆ ಸ್ವಷ್ಟ ಉದಾಹರಣೆಯಾಗಿದೆ. ರಾಜ್ಯ ಸರ್ಕಾರದ ಗ್ಯಾರೆಂಟಿ ಯೋಜನೆಗಳು ಜನ ಸಾಮಾನ್ಯರ ಸಂಕಷ್ಟಗಳನ್ನು ನಿವಾರಣೆ ಮಾಡುತ್ತಿದೆ. ಕನ್ನಡ ನಾಡಿನ ಮಾತೆಯರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು. ತಮ್ಮನ್ನು ಆಶೀರ್ವದಿಸಿ ಬೆಂಬಲಿಸಬೇಕು ಎಂದು ರಕ್ಷಾ ರಾಮಯ್ಯ ಮನವಿ ಮಾಡಿದರು.
ಇದನ್ನೂ ಓದಿ: Money Guide: ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡಲು ಯೋಚಿಸುತ್ತಿದ್ದೀರಾ? ಇದರಲ್ಲಿನ ವಿಧಗಳ ಬಗ್ಗೆ ಇಲ್ಲಿದೆ ಮಾಹಿತಿ
ಈ ಸಂದರ್ಭದಲ್ಲಿ ಮಾಜಿ ಶಾಸಕ ಪ್ರಸನ್ನ ಕುಮಾರ್, ಪಕ್ಷದ ಹಿರಿಯ ಮುಖಂಡರಾದ ಕೇಶವ ರಾಜಣ್ಣ, ಗೋಪಾಲ್ ಕೃಷ್ಣ ಹಾಗೂ ಪಕ್ಷದ ಕಾರ್ಯಕರ್ತರು, ಇತರರು ಉಪಸ್ಥಿತರಿದ್ದರು.