ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೈಬಿಡುವ ವಿಚಾರಕ್ಕೆ ಸಂಬಂಧಪಟ್ಟಂತೆ ಲಂಚ ಪಡೆಯುವ ವೇಳೆ ಕಾನ್ಸ್‌ಟೆಬಲ್, ಲೋಕಾಯುಕ್ತ ಅಧಿಕಾರಿಗಳಿಗೆ(Lokayukta Raid) ಸಿಕ್ಕಿಬಿದ್ದಿದ್ದಾರೆ.
ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ದೂರಿನ ವಿಚಾರಕ್ಕೆ ಸಂಬಂಧಿಸಿದಂತೆ ಚಿಕ್ಕತತ್ತಮಂಗಲ ಗ್ರಾಮದ ಮಂಜುನಾಥ್ ಎಂಬುವವರಿಂದ ಬುಧವಾರ ಸಂಜೆ 30 ಸಾವಿರ ರೂಪಾಯಿ ಲಂಚ ಸ್ವೀಕರಿಸುವಾಗ ಕಾನ್‌ಸ್ಪೆಬಲ್ ಚಂದ್ರಶೇಖರ್ ಅವರನ್ನು ಲೋಕಾಯುಕ್ತ ಪೊಲೀಸರು ಹಣದ ಸಮೇತ ವಶಕ್ಕೆ ಪಡೆದುಕೊಂಡು ದೂರು ದಾಖಲಿಸಿಕೊಂಡಿದ್ದಾರೆ. ಮಂಡಿಬೆಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕತತ್ತಮಂಗಲ ಗ್ರಾಮದ ಮಂಜುನಾಥ್ ಮತ್ತು ಅವರ ಸಹೋದರಿಯ ನಡುವೆ ಹಣಕಾಸಿನ ವಿಚಾರವಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಪ್ರಕರಣ ಕೈಬಿಡಲು ಲಂಚಕ್ಕೆ ಬೇಡಿಕೆ ಇಡಲಾಗಿದೆ.
ಮಂಜುನಾಥ್ ಅವರನ್ನು ವಿಚಾರಣೆಗಾಗಿ ಠಾಣೆಗೆ ಕರೆದುಕೊಂಡು ಬರಲಾಗಿತ್ತು. ಈ ವೇಳೆ ಠಾಣೆಯಿಂದ ಬಿಡುಗಡೆ ಮಾಡಿ ಹೊರಗೆ ಕಳುಹಿಸಲು ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಪಟ್ಟಣದ ಶಿವಗಣೇಶ ಸರ್ಕಲ್‌ನಲ್ಲಿರುವ ಹಾಪ್ ಕಾಮ್ಸ್ ಬಳಿ, ಮಂಜುನಾಥ್ ಅವರಿಂದ 30 ಸಾವಿರ ರೂ. ಪಡೆದುಕೊಳ್ಳುವಾಗ ಕಾನ್‌ಸ್ಟೆಬಲ್ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ. ಸಬ್ ಇನ್ಸ್‌ಪೆಕ್ಟರ್ ಈರಮ್ಮ ಸೂಚನೆ ಮೇರೆಗೆ ಕಾನ್‌ಸ್ಟೆಬಲ್ ಚಂದ್ರಶೇಖರ್ ಲಂಚ ಪಡೆಯುತ್ತಿದ್ದರು ಎನ್ನಲಾಗಿದೆ. ಹೀಗಾಗಿ ಇಬ್ಬರ ವಿರುದ್ಧವೂ ದೂರು ದಾಖಲಾಗಿದೆ. ಲೋಕಾಯುಕ್ತ ಡಿವೈಎಸ್ಪಿ ರೇಣುಕ ಪ್ರಸಾದ್ ಹಾಗೂ ಇನ್ಸ್‌ಪೆಕ್ಟರ್ ಅಂಬರೀಶ್ ನೇತೃತ್ವದಲ್ಲಿ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಲಾಯಿತು.
ಇದನ್ನೂ ಓದಿ | Illicit relationship | ಪತಿಯ ಅನೈತಿಕ ಸಂಬಂಧಕ್ಕೆ ಬೇಸತ್ತು ಐಬಿಎಂ ಉದ್ಯೋಗಿ ಆತ್ಮಹತ್ಯೆ