ಬೆಂಗಳೂರು: ಬೆಳ್ಳಂಬೆಳಿಗ್ಗೆ ಭೀಕರ ಗ್ಯಾಸ್ ಸಿಲಿಂಡರ್ ಸ್ಫೋಟ (LPG Cylinder Blast) ಸಂಭವಿಸಿದ್ದು, 6 ಜನರಿಗೆ ಗಂಭೀರ ಗಾಯಗಳಾಗಿವೆ. ಯಲಹಂಕದ ಲಾಲ್‌ಬಹದ್ದೂರ್ ಶಾಸ್ತ್ರಿ ಬಡಾವಣೆಯಲ್ಲಿ ಈ ಭೀಕರ ಸ್ಫೋಟ ಸಂಭವಿಸಿದೆ.
ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಸಿಡಿದ ತೀವ್ರತೆಗೆ ಐದು ಮನೆಗಳು ಡ್ಯಾಮೇಜ್ ಆಗಿವೆ. ಸಿಲಿಂಡರ್ ಸ್ಫೋಟಗೊಂಡ ಮನೆಯ ಇಟ್ಟಿಗೆ ಗೋಡೆಗಳೇ ಕುಸಿದುಬಿದ್ದಿವೆ. ಸ್ಫೋಟದ ತೀವ್ರತೆಗೆ ಲಾಲ್‌ಬಹದ್ದೂರ್ ಶಾಸ್ತ್ರಿ ನಗರದ ಜನತೆ ಬೆಚ್ಚಿಬಿದ್ದರು. ಅಕ್ಕ ಪಕ್ಕದ ಮೂರು ಮನೆಗಳಿಗೆ ಡ್ಯಾಮೇಜ್ ಆಗಿದೆ. ಪಸೀಯಾ ಬಾನು (50), ಸಲ್ಮಾ (22), ಶಾಹಿದ್ (16), ಅಸ್ಮಾ (50) ಅಫ್ರೋಜ್ (23) ಘಟನೆಯಲ್ಲಿ ಗಾಯಗೊಂಡವರು.
ಸ್ಫೋಟದ ಪರಿಣಾಮ ಒಂದೇ ಕುಟುಂಬದ ಆರು ಮಂದಿಗೆ ತೀವ್ರ ಗಾಯಗಳಾಗಿವೆ. ಗಾಯಾಳುಗಳಿಗೆ ಯಲಹಂಕ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಗಂಭೀರವಾಗಿ ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗೆ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ, ಡೆಲಿವರಿ ಬಾಯ್ ಸಾವು
ಬೆಂಗಳೂರು: ರಾಜಧಾನಿಯಲ್ಲಿ ಕೆಎಸ್ಆರ್‌ಟಿಸಿ ಬಸ್ಸಿಗೆ ಡೆಲಿವರಿ ಬಾಯ್ ಬಲಿಯಾಗಿದ್ದಾರೆ. ಮೈಸೂರು ರೋಡ್ ಸ್ಯಾಟ್‌ಲೈಟ್ ಬಸ್ ನಿಲ್ದಾಣದ ಬಳಿ ದುರ್ಘಟನೆ (road accident) ನಡೆದಿದೆ.
ಮೃತ ಡಂಜೋ ಡೆಲಿವರ್ ಬಾಯ್‌ನನ್ನು ಬಸವರಾಜು ಎಂದು ಗುರುತಿಸಲಾಗಿದೆ. ಮೈಸೂರು ರಸ್ತೆಯ ಸ್ಯಾಟ್‌ಲೈಟ್ ಬಸ್ ನಿಲ್ದಾಣದ ಬಳಿ ಇವರ ಬೈಕ್‌ಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾಗಿದೆ. ರಾತ್ರಿ ಒಂದು ಗಂಟೆಗೆ ಮೈಸೂರು ರೋಡ್ ಕಡೆಗೆ ಡೆಲಿವರಿ ಕೊಡಲೆಂದು ಬೈಕ್‌ನಲ್ಲಿ ಹೋಗುತ್ತಿದ್ದಾಗ ಹಿಂದಿನಿಂದ ವೇಗವಾಗಿ ಬಂದ ಬಸ್ ಅಪ್ಪಳಿಸಿದೆ.
ಡಿಕ್ಕಿ ಹೊಡೆದ ಬಳಿಕ ಬಸ್ ಮುಂಭಾಗದ ಎಡಗಡೆಯ ಚಕ್ರಕ್ಕೆ ಬಸವರಾಜು ಸಿಲುಕಿದ್ದರು. ಈ ವೇಳೆ ಬಸ್ ತಲೆಯ ಮೇಲೆ ಹರಿದ ಪರಿಣಾಮ ಬಸವರಾಜ್ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಮೃತ ಡಂಜೊ ಡೆಲಿವರಿ ಬಾಯ್ ಹೆಲ್ಮೆಟ್ ದರಿಸಿದ್ದರೂ ಸಾವಿಗೀಡಾಗಿದ್ದಾರೆ.
ಬಸ್ ಚಾಲಕನ ನಿರ್ಲಕ್ಷ್ಯದ ಚಾಲನೆಯ ಪರಿಣಾಮ ಅಪಘಾತ ಸಂಭವಿಸಿದೆ ಎನ್ನಲಾಗಿದ್ದು, ಸ್ಥಳದಿಂದ ಬಸ್ ಚಾಲಕ ನಾಪತ್ತೆಯಾಗಿದ್ದಾನೆ. ಸ್ಥಳಕ್ಕೆ ಬ್ಯಾಟರಾಯನಪುರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮೃತದೇಹ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.
ಶೆವರ್ಲೆ ಕಾರು ಅಪಘಾತ, ಯುವಕ ಸಾವು
ಬೆಂಗಳೂರು: ಭಾನುವಾರ ರಾತ್ರಿ ಬೆಂಗಳೂರಿನಲ್ಲಿ ನಡೆದ ಭೀಕರ ರಸ್ತೆ ಅಪಘಾತವೊಂದರಲ್ಲಿ ಯುವಕನೊಬ್ಬ ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ. ಮೆಲ್ವಿನ್ ಜೋಸ್ವಾ (25) ಮೃತಪಟ್ಟ ಯುವಕ. ಬಾಣಸವಾಡಿ ಸಮೀಪದ ಸಿಎಂಆರ್ ರೋಡ್‌ನಲ್ಲಿ ಘಟನೆ ನಡೆದಿದೆ. ಜೊತೆಗಿದ್ದ ಯುವತಿಗೆ ಗಾಯಗಳಾಗಿವೆ.
ಸಂಬಂಧಿಕರ ಕಾರ್ಯಕ್ರಮವೊಂದನ್ನು ಮುಗಿಸಿ ಶೆವರ್ಲೆ ಕಾರಿನಲ್ಲಿ ತಡರಾತ್ರಿ 2:10ರ ಸುಮಾರಿಗೆ ಇವರು ಹೊರಟಿದ್ದರು. ಸಿಎಂಆರ್ ರಸ್ತೆಯಲ್ಲಿ ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿದ ಕಾರು ಎದುರು ನಿಲ್ಲಿಸಿದ್ದ ಸ್ವಿಫ್ಟ್ ಕಾರಿಗೆ ಬಡಿದಿದೆ. ನಂತರ ಎದುರಿದ್ದ ಮರಕ್ಕೆ ಬಡಿದು ಪಕ್ಕದಲ್ಲಿದ್ದ ಕಬ್ಬಿಣದ ಗ್ರಿಲ್‌ಗೆ ಗುದ್ದಿದೆ.
ಕಾರಿನಲ್ಲಿದ್ದ ಏರ್ ಬ್ಯಾಗ್ ಓಪನ್ ಆಗಿದ್ದರೂ ಯುವಕ ಸ್ಥಳದಲ್ಲೆ ಮೃತಪಟ್ಟಿದ್ದಾನೆ. ಯುವತಿಗೆ ಅಂತಹ ಯಾವುದೇ ದೊಡ್ಡ ಮಟ್ಟದ ತೊಂದರೆಯಾಗದೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಮೃತ ದೇಹ ಆಸ್ಪತ್ರೆಗೆ ರವಾನಿಸಲಾಗಿದ್ದು, ಬಾಣಸವಾಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Students Death: ಇಬ್ಬರು ಭಾರತೀಯ ವಿದ್ಯಾರ್ಥಿಗಳು ಅಮೆರಿಕದಲ್ಲಿ ನಿಗೂಢ ಸಾವು