Site icon Vistara News

ಕನ್ನಡ ಸಾಹಿತ್ಯ ಪರಿಷತ್‌ ಪ್ರಶಸ್ತಿ ಪಡೆಯಲು ಅರ್ಜಿಯೂ ಬೇಡ, ಮರ್ಜಿಯೂ ಬೇಡ: ನಾಡೋಜ ಡಾ. ಮಹೇಶ ಜೋಶಿ

ಪ್ರಶಸ್ತಿ

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್‌ ಮೇಲೆ ಜನರ ಸಂಪೂರ್ಣ ವಿಶ್ವಾಸ, ನಂಬಿಕೆ ಇದೆ ಎನ್ನುವುದಕ್ಕೆ ಪರಿಷತ್‌ನಲ್ಲಿ ೨೦೬೧ ದತ್ತಿ ಪ್ರಶಸ್ತಿಗಳನ್ನು ಇಟ್ಟಿರುವುದೇ ಸಾಕ್ಷಿ. ಇಷ್ಟೊಂದು ದತ್ತಿ ಪ್ರಶಸ್ತಿಗಳು ರಾಜ್ಯದ ಬೇರೆ ಯಾವ ಸಂಸ್ಥೆಯಲ್ಲೂ ಇಲ್ಲ. ಇಲ್ಲಿ ಪ್ರಶಸ್ತಿಗಳನ್ನು ಪಡೆಯುವುದಕ್ಕೆ ಯಾರೂ ಅರ್ಜಿ ಹಾಕುವುದಿಲ್ಲ, ಯಾರ ಮರ್ಜಿಯನ್ನೂ ಕಾಯುವುದಿಲ್ಲ. ಪರಿಷತ್ ಸಾಧಕರನ್ನು ಗುರುತಿಸುತ್ತದೆಯೇ ಹೊರತು ಸಮಯ ಸಾಧಕರನ್ನಲ್ಲ ಎಂದು‌ ಕಸಾಪ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ತಿಳಿಸಿದರು.

ನಗರದ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್‌ನ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ʻಚಾವುಂಡರಾಯ ದತ್ತಿʼ, ʻನಾಗಡಿಕೆರೆ ಕಿಟ್ಟಪ್ಪಗೌಡ ರುಕ್ಮಿಣಿ ತಿರ್ಥಹಳ್ಳಿ ದತ್ತಿʼ ಹಾಗೂ ʻಕನ್ನಡ ಕಾಯಕ ದತ್ತಿʼ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಇದನ್ನೂ ಓದಿ | ಸಂಗಂ ವಿಶ್ವ ಕವಿ ಸಮ್ಮೇಳನ | 15 ದೇಶಗಳ ಭಾಷೆ, ಸಂಸ್ಕೃತಿ, ಸಾಹಿತ್ಯಗಳ ಅಪರೂಪದ ಸಮಾಗಮ

ಕನ್ನಡದ ಕಣ್ವ ಎಂದು ಕರೆಸಿಕೊಂಡ ಬಿ.ಎಂ.ಶ್ರೀ ಅವರು ೧೯೩೫ರಲ್ಲಿ ಗಮಕ ಕಲೆಯ ಪ್ರೊತ್ಸಾಹಕ್ಕಾಗಿ ಒಂದು ಸಾವಿರ ರೂ.ಗಳೊಂದಿಗೆ ಮೊದಲನೆಯ ದತ್ತಿಗೆ ಭದ್ರವಾದ ಅಡಿಪಾಯ ಹಾಕಿದರು. ಬಿ.ಎಮ್.ಟಿ.ಸಿ ಸಂಸ್ಥೆ ನೃಪತುಂಗ ಸಾಹಿತ್ಯ ಪ್ರಶಸ್ತಿ ಹಾಗೂ ಮಯೂರ ವರ್ಮ ಪ್ರಶಸ್ತಿಗಾಗಿ ಅತಿ ಹೆಚ್ಚು ೧. ೫೦ ಕೋಟಿ ರೂಪಾಯಿ ದತ್ತಿ ಹಣವನ್ನು ಇಟ್ಟಿದೆ. ವರನಟ ಡಾ. ರಾಜಕುಮಾರ್ ಅವರು ತಮಗೆ ಬಂದ ಫಾಲ್ಕೆ ಪ್ರಶಸ್ತಿಯ ಹಣವನ್ನು ಪರಿಷತ್‌ನಲ್ಲಿ ದತ್ತಿ ಇಟ್ಟಿರುವುದನ್ನು ಜೋಶಿ ನೆನಪಿಸಿಕೊಂಡರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿರಿಯ ವಿದ್ವಾಂಸ ನಾಡೋಜ ಡಾ. ಹಂಪ ನಾಗರಾಜಯ್ಯ, ಕನ್ನಡ ಸಾಹಿತ್ಯ ಪರಿಷತ್‌ ಅನ್ನು ಅತ್ಯಂತ ಹತ್ತಿರದಿಂದ ನೋಡುತ್ತಾ ಬಂದಿರುವ ನನಗೆ ಪರಿಷತ್‌ನಲ್ಲಿ ಆಗುತ್ತಿರುವ ಇತ್ತೀಚಿನ ಬದಲಾವಣೆಯ ಬಗ್ಗೆ ಅತೀವ ಸಂತೋಷವಾಗುತ್ತಿದೆ. ದತ್ತಿ ಮತ್ತು ಸಾಹಿತ್ಯ ಪರಿಷತ್‌ ನಡುವೆ ಸುದೀರ್ಘ ಇತಿಹಾಸವಿದೆ. ಸಾಹಿತ್ಯ ಪರಿಷತ್‌ ಅಧ್ಯಕ್ಷರನ್ನು ಇಡೀ ನಾಡಿನ ಸಾಹಿತ್ಯ ಸಂಸ್ಕೃತಿಯ ವರಿಷ್ಠರು ಎಂದು ತಿಳಿದುಕೊಳ್ಳಬೇಕಾಗುತ್ತದೆ. ಇವತ್ತಿನ ದತ್ತಿ ಚಾವುಂಡರಾಯನ ಹೆಸರಿನಲ್ಲಿ ಇರುವುದು ಮಹತ್ವದ್ದು, ಜತೆಗೆ ಈ ಕಾರ್ಯಕ್ರಮವೂ ಅರ್ಥಪೂರ್ಣ ಹಾಗೂ ಮೌಲ್ಯಿಕವಾಗಿರುವುದು ಎಂದರು.

ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಹಾಗೂ ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ ಹೆಗ್ಡೆ, ಒಳ್ಳೆಯ ಕೆಲಸ ಮಾಡಿದವರಿಗೆ ಸನ್ಮಾನಿಸಿದಾಗ ಹುಮ್ಮಸ್ಸು ಬರುತ್ತದೆ. ಹಾಗೆಯೇ ಮುಂದೆ ಸಾಧನೆ ಮಾಡಿದರೆ ಸಮಾಜ ನಮ್ಮನ್ನು ಗುರುತಿಸುವುದು ಎನ್ನುವ ವಿಶ್ವಾಸ ಉಂಟಾಗುತ್ತದೆ. ಸಮಾಜದಲ್ಲಿ ಅನ್ಯಾಯಗಳು ಆಗುತ್ತಿರುವುದಕ್ಕೆ ವ್ಯಕ್ತಿಗಳು ಕಾರಣವಲ್ಲ, ಬದಲಾಗಿ ಈ ಸಮಾಜವೇ ಕಾರಣ ಎಂದರು.

ಕನ್ನಡ ಕಾಯಕ ದತ್ತಿ ಪುರಸ್ಕೃತರಾದ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟೆ ತಾಲೂಕಿನ ಪೀಠಾಧ್ಯಕ್ಷ ನಿರಂಜನ ಪ್ರಣವಸ್ವರೂಪಿ ಬಸವಲಿಂಗ ಮಹಾಸ್ವಾಮಿಗಳು ಮಾತನಾಡಿ, ರಾಜ್ಯದಲ್ಲಿ ಇರುವ ಎಲ್ಲಾ ಪ್ರಶಸ್ತಿಗಳಿಗಿಂತ ಗೌರವಯುಕ್ತವಾಗಿರುವುದು ಈ ದತ್ತಿ ಪ್ರಶಸ್ತಿಗಳು. ಮಿಕ್ಕ ಎಲ್ಲಾ ಪ್ರಶಸ್ತಿಗೆ ೬ ತಿಂಗಳ ತಯಾರಿ ನಡೆಸಿ ಅರ್ಜಿಗಳನ್ನು ತರಿಸಿಕೊಂಡು, ಮರ್ಜಿಯ ಆಧಾರದ ಮೇಲೆ ನಂತರ ಪ್ರಶಸ್ತಿಗಳನ್ನು ಪ್ರದಾನ ಮಾಡ್ತಾರೆ. ಆದರೆ ಪರಿಷತ್ ನೀಡುವ ಈ ಪ್ರಶಸ್ತಿಗಳು ಯಾವುದೇ ಮುಲಾಜು ಕಾಯುವುದಿಲ್ಲ. ನನಗೆ ಬಂದ ಪ್ರಶಸ್ತಿ ಸಮಸ್ತ ಗಡಿನಾಡ ಕನ್ನಡಿಗರಿಗೆ ಸಂದ ಗೌರವವಾಗಿದೆ. ಗಡಿಯಲ್ಲಿ ಕನ್ನಡವನ್ನು ಉಳಿಸಿ ಬೆಳೆಸುವ ಪ್ರತಿಜ್ಞೆಮಾಡಿ ಈ ಪ್ರಶಸ್ತಿ ಪಡೆದುಕೊಂಡಿದ್ದೇನೆ ಎಂದರು.

ಚಾವುಂಡರಾಯ ದತ್ತಿ ಪ್ರಶಸ್ತಿಯನ್ನು ಹಿರಿಯ ವಿದ್ವಾಂಸರಾದ ಶಾಂತಿನಾಥ ದಿಬ್ಬದ ಅವರಿಗೆ, ʻನಾಗಡಿಕೆರೆ ಕಿಟ್ಟಪ್ಪಗೌಡ ರುಕ್ಮಿಣಿ ತಿರ್ಥಹಳ್ಳಿ ದತ್ತಿʼ ಪ್ರಶಸ್ತಿಯನ್ನು ವಿಜಯವಾಣಿ ದಿನಪತ್ರಿಕೆ ಸಂಪಾದಕರಾದ ಕೆ.ಎನ್.ಚನ್ನೇಗೌಡ ಅವರಿಗೆ, ʻಕನ್ನಡ ಕಾಯಕ ದತ್ತಿʼ ಪ್ರಶಸ್ತಿಯನ್ನು ಕೋಲಾರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಶಂಕರಪ್ಪ ಅವರಿಗೆ ಮತ್ತು ಕೊಪ್ಪಳದ ರಂಗನಿರ್ದೇಶಕರು, ರಂಗಭೂಮಿ ಕಲಾವಿದರಾದ ಕೆ. ಇಮಾಮಸಾಬ ಅವರಿಗೆ ದತ್ತಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಚಾವುಂಡರಾಯ ದತ್ತಿ ಪ್ರಶಸ್ತಿಯ ದಾನಿಗಳಾದ ಶ್ರವಣಬೆಳಗೊಳದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಕಳುಹಿಸಿದ ಸಂದೇಶವನ್ನು ಮುರುಳಿಧರ ವಾಚಿಸಿದರು. ಕನ್ನಡ ಸಾಹಿತ್ಯ ಪರಿಷತ್‌ ಪ್ರಧಾನ ಕಾರ್ಯದರ್ಶಿ ನೇ.ಭ ರಾಮಲಿಂಗ ಶೆಟ್ಟಿ ಸ್ವಾಗತಿಸಿದರು. ಗೌರವ ಕೋಶಾಧ್ಯಕ್ಷ ಬಿ.ಎಂ.ಪಟೇಲ್‌ ಪಾಂಡು ಕಾರ್ಯಕ್ರಮ ನಿರೂಪಣೆ ಮಾಡಿದರು. ಗೌರವ ಕಾರ್ಯದರ್ಶಿ ಶ್ರೀ. ಕೆ. ಮಹಾಲಿಂಗಯ್ಯ ವಂದಿಸಿದರು.

ಇದನ್ನೂ ಓದಿ | Loud speaker | ರಾಜ್ಯದಲ್ಲಿ 10,899 ಲೌಡ್‌ ಸ್ಪೀಕರ್‌ಗೆ ಅನುಮತಿ, ಬೆಂಗಳೂರಿನಲ್ಲೇ 1841 ಮಸೀದಿಗಳಿಗೆ ಪರ್ಮಿಷನ್‌

Exit mobile version