Site icon Vistara News

Bengaluru Traffic: ಟ್ರಾಫಿಕ್‌ ಚಕ್ರವ್ಯೂಹಕ್ಕೆ ಸಿಲುಕಿ 12 ಕಿ.ಮೀ ನಡೆದು ಮನೆ ತಲುಪಿದ ವ್ಯಕ್ತಿ!

traffic jam

traffic jam

ಬೆಂಗಳೂರು: ಟ್ರಾಫಿಕ್‌ ಸಮಸ್ಯೆ ಬೆಂಗಳೂರಿಗರನ್ನು ಹೆಚ್ಚಿನ ಸಂದರ್ಭಗಳಲ್ಲಿ ಹೈರಾಣಾಗಿಸುತ್ತದೆ. ಬೆಂಗಳೂರಿನ ಈ ಟ್ರಾಫಿಕ್‌ (Bengaluru Traffic) ಸಮಸ್ಯೆಗೆ ಪರಿಹಾರವೇ ಇಲ್ಲ ಎನ್ನುವಂತಾಗಿದೆ. ಇದಕ್ಕೆ ತೀರಾ ಇತ್ತೀಚೆಗಿನ ಉದಾಹರಣೆ ಎಂದರೆ ಸೆಪ್ಟಂಬರ್‌ 27ರಂದು ಸಂಭವಿಸಿದ ಘಟನೆ. ಅಂದು ಔಟರ್‌ ರಿಂಗ್‌ ರೋಡ್‌ (ORR)ನಲ್ಲಿ ವಾಹನಗಳು ಸಿಲುಕಿಕೊಂಡಿದ್ದು, ಸವಾರರು ಗಂಟೆಗಟ್ಟಲೆ ರಸ್ತೆ ಮಧ್ಯೆಯೇ ಸಿಲುಕಿಕೊಂಡಿದ್ದರು. ಇದೀಗ ವ್ಯಕ್ತಿಯೊಬ್ಬರು ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕಿಕೊಂಡ ಗೆಳೆಯನೊಬ್ಬ ಸುಮಾರು 12 ಕಿ.ಮೀ. ನಡೆದುಕೊಂಡೇ ಮನೆಗೆ ತಲುಪಿದ ಘಟನೆಯನ್ನು ತಿಳಿಸಿದ್ದಾರೆ. ಸದ್ಯ ಈ ಪೋಸ್ಟ್‌ ವೈರಲ್‌ ಆಗಿದೆ.

ತುಷಾರ್‌ ಎನ್ನುವವರು ಎಕ್ಸ್‌ನಲ್ಲಿ ಈ ಪೋಸ್ಟ್‌ ಹಂಚಿಕೊಂಡಿದ್ದಾರೆ. ʼʼಬೆಂಗಳೂರು ಟ್ರಾಫಿಕ್‌ಗೆ ಸಿಕ್ಕಿಹಾಕಿಕೊಂಡ ನನ್ನ ಸ್ನೇಹಿತ ಸುಮಾರು 12 ಕಿ.ಮೀ. ನಡೆದು ಮನೆ ಸೇರಿದ. ಅವನಿಗೆ ಯಾವುದೇ ಕ್ಯಾಬ್‌, ಆಟೋ, ರ‍್ಯಾಪಿಡೋ ಅಥವಾ ಇನ್ನಾವುದೇ ವಾಹನ ಲಭಿಸಲಿಲ್ಲʼʼ ಬೇಸರ ವ್ಯಕ್ತಪಡಿಸಿದ್ದಾರೆ. ಜತೆಗೆ ಅವರು ಹೆಲ್ತ್‌ ಮೋನಿಟರಿಂಗ್‌ ಅಪ್ಲಿಕೇಶನ್‌ನ ಫೋಟೊವನ್ನು ಶೇರ್‌ ಮಾಡಿದ್ದಾರೆ. ಅದರಲ್ಲಿ ಅವರ ಸ್ನೇಹಿತ 3.25 ಗಂಟೆಗಳಲ್ಲಿ ಸುಮಾರು 11.85 ಕಿ.ಮೀ. ದೂರವನ್ನು ನಡೆದ ವಿವರ ದಾಖಲಾಗಿದೆ.

ಸೆಪ್ಟಂಬರ್‌ 27ರಂದು ಮಾಡಲಾದ ಈ ಪೋಸ್ಟ್‌ ಅನ್ನು ಈಗಾಗಲೇ 2 ಲಕ್ಷಕ್ಕಿತಂತ ಅದಿಕ ಮಂದಿ ವೀಕ್ಷಿಸಿದ್ದಾರೆ. ಅನೇಕರು ಕಮೆಂಟ್‌ ಮಾಡಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Traffic Jam: ಟ್ರಾಫಿಕ್‌ ಜಾಮ್‌ನಲ್ಲೇ ಫುಡ್‌ ಡೆಲಿವರಿ ಮಾಡಿದ ಡೊಮಿನೋಸ್‌ ಸಿಬ್ಬಂದಿಗೆ ಸಿಕ್ತು ಶಬ್ಬಾಶ್‌ಗಿರಿ

ನೆಟ್ಟಿಗರ ಪ್ರತಿಕ್ರಿಯೆ ಏನು?

ʼʼಈ ನಗರವನ್ನು ಪ್ರೀತಿಸುವವರು ಇದನ್ನು ಸಮರ್ಥಿಸಬಹುದು. ಪ್ರತಿಯೊಬ್ಬರು ತಮ್ಮ ನಗರ/ದೇಶವನ್ನು ಪ್ರೀತಿಸಿ. ಅದರ ಜತೆಗೆ ಸಮಸ್ಯೆ, ಕೊರತೆ ಬಗ್ಗೆಯೂ ತಿಳಿದಿರಬೇಕು. ಇಲ್ಲದಿದ್ದರೆ ಸಮಸ್ಯೆ ಪರಿಹಾರ ಸಾಧ್ಯವಿಲ್ಲʼʼ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ʼʼಬಹುತೇಕ ಹೆಚ್ಚಿನ ಕಂಪನಿಗಳು ನಗರದಿಂದ ಹೊರಭಾಗಕ್ಕೆ ತಮ್ಮ ಕಚೇರಿಗಳನ್ನು ವರ್ಗಾಯಿಸಿದರೆ ಇಂತಹ ಸಮಸ್ಯೆ ಉದ್ಬವಿಸುವುದಿಲ್ಲ. ಉದ್ಯೋಗಿಗಳು ತಿಂಗಳಿಗೊಮ್ಮೆ ಅಥವಾ ಮೂರು ತಿಂಗಳಿಗೊಮ್ಮೆ ಕಚೇರಿ ಭೇಟಿ ನೀಡುವಂತಾಗಬೇಕುʼʼ ಎಂದು ಇನ್ನೊಬ್ಬರು ಸಲಹೆ ನೀಡಿದ್ದಾರೆ. ಇನ್ನೊಬ್ಬರು ಕಮೆಂಟ್‌ ಮಾಡಿ ʼʼಬೆಂಗಳೂರು ವಾತಾವರಣ ಉತ್ತಮವಾಗಿದೆʼʼ ಎಂದಿದ್ದಾರೆ. ʼʼನಿಮ್ಮ ಸ್ನೇಹಿತ ನಡೆದುಕೊಂಡು ಹೋಗುವಾಗಲೂ ಟ್ರಾಫಿಕ್ ಸಮಸ್ಯೆ ಎದುರಿಸಿದಂತೆ ಕಾಣುತ್ತಿದೆ. ಸಾಮಾನ್ಯವಾಗಿ 12 ಕಿ.ಮೀ. ದೂರವನ್ನು 2 ಗಂಟೆಗಳಲ್ಲಿ ಕ್ರಮಿಸಬಹುದುʼʼ ಎಂದಿದ್ದಾರೆ ಮತ್ತೊಬ್ಬರು. ʼʼಜನರು ಸ್ಥಳದ ಆದ್ಯತೆಗಳ ಬಗ್ಗೆ ಯೋಚಿಸಬೇಕಾದ ಸಮಯ ಬಂದಿದೆ. ಬೆಂಗಳೂರನ್ನು ಇಷ್ಟು ದೊಡ್ಡ ಜನಸಂಖ್ಯೆಗಾಗಿ ವಿನ್ಯಾಸಗೊಳಿಸಲಾಗಿಲ್ಲ” ಎಂದು ಇನ್ನೊಬ್ಬರು ಹೇಳಿದ್ದಾರೆ.

ಟ್ರಾಫಿಕ್‌ನಲ್ಲೇ ಫುಡ್‌ ಡೆಲಿವರಿ

ಇದೇ ಟ್ರಾಫಿಕ್‌ ಜಾಮ್‌ನಲ್ಲೇ ಫುಡ್‌ ಡೆಲಿವರಿ ಮಾಡಿದ ಘಟನೆಯೂ ನಡೆದಿತ್ತು. ಕಾರಿನಲ್ಲಿದ್ದ ವ್ಯಕ್ತಿಯೊಬ್ಬರು ಫುಡ್‌ ಆರ್ಡರ್‌ ಮಾಡಿದ್ದರು. ಅಲ್ಲೇ ಸಮೀಪದಲ್ಲಿದ್ದ ಡೆಲಿವರಿ ಏಜೆಂಟ್‌ಗಳು ಲೈವ್‌ ಲೊಕೇಶನ್‌ ಟ್ರ್ಯಾಕ್‌ ಮಾಡಿ ಟ್ರಾಫಿಕ್‌ ಜಾಮ್‌ನಲ್ಲೇ ಫುಡ್‌ ಡೆಲಿವರಿ ಮಾಡಿದ್ದರು. ಈ ದೃಶ್ಯವನ್ನು ಚಿತ್ರೀಕರಿಸಿ ಪೋಸ್ಟ್‌ ಮಾಡಲಾಗಿದ್ದು, ಅದು ಕೂಡ ವೈರಲ್‌ ಆಗಿದೆ. ಕನ್ನಡ ಪರ ಸಂಘಟನೆಗಳು ಮತ್ತು ರೈತ ಸಂಘಗಳು ಬೆಂಗಳೂರು ಬಂದ್ ಗೆ ಕರೆ ನೀಡಿದ ಮರುದಿನವೇ ಸಂಚಾರ ದಟ್ಟಣೆ ಉಂಟಾಗಿತ್ತು.

ಇನ್ನಷ್ಟು ವೈರಲ್‌ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

Exit mobile version