ಬೆಂಗಳೂರು: “ಹಳ್ಳಿಯಲ್ಲಿ ಜಮೀನು ಇರಬೇಕು, ಸಿಟಿಯಲ್ಲಿ ಸ್ವಂತ ಮನೆ ಇರಬೇಕು” ಎಂಬ ಮಾತಿದೆ. ಆದರೆ, ಬದಲಾದ ಕಾಲಘಟ್ಟದಲ್ಲಿ ಹಳ್ಳಿಯಲ್ಲಿ ಬೇಕಾದರೂ ಜಮೀನು ಖರೀದಿಸಬಹುದು. ಆದರೆ, ಬೆಂಗಳೂರಿನಂತಹ ಮಹಾ ನಗರದಲ್ಲಿ ಸ್ವಂತ ಮನೆಯ ಕನಸು ಬಿಡಿ, ಸುಲಭವಾಗಿ ನಿಮಗೊಂದು ಬಾಡಿಗೆ ಮನೆ ಸಿಗುವುದೂ ಕಷ್ಟ ಎಂಬಂತಾಗಿದೆ. ಈಸ್ಟ್ ಫೇಸಿಂಗ್, ಮನೆ ಅಡ್ವಾನ್ಸ್, ನೀರು, ವಾಸ್ತು, ಮೆಟ್ರೋ, ಬಸ್ ನಿಲ್ದಾಣಕ್ಕೆ ಸಮೀಪ ಇರುವ ಮನೆ ಹುಡುಕುವಷ್ಟರಲ್ಲಿ ಸಾಕು ಸಾಕಾಗುತ್ತದೆ. ಹೀಗೆ, ಬೆಂಗಳೂರಿನಲ್ಲಿ ಟೆಕಿಯೊಬ್ಬ ಮನೆ ಹುಡುಕಿ, ಹುಡುಕಿ ಸಾಕಾಗಿ, ಕೊನೆಗೊಂದು ಪುಟ್ಟ ರೂಮು ಸಿಕ್ಕು, ಅದರ ಫೋಟೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡು ನಿಟ್ಟುಸಿರು ಬಿಟ್ಟಿದ್ದಾನೆ. ಆದರೆ, ನೆಟ್ಟಿಗರು ಮಾತ್ರ ಅದನ್ನು ಜೈಲು (Jail Like Room) ಎಂದು ಕರೆದಿದ್ದಾರೆ. ಇನ್ನೂ ಕೆಲವರು “ನೀನೇ ಲಕ್ಕಿ ಗುರು” ಎಂದಿದ್ದಾರೆ.
ಮಂಥನ್ ಗುಪ್ತಾ ಅವರು ತಮಗೆ ಕೊನೆಗೂ ಸಿಕ್ಕ ಚಿಕ್ಕ ರೂಮಿನ ಫೋಟೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. “ನನಗೆ ಕೊನೆಗೂ ಸಂಪೂರ್ಣವಾಗಿ ಫರ್ನಿಶ್ ಆಗಿರುವ ಮನೆಯೊಂದು ಸಿಕ್ಕಿದೆ. ಈ ಮನೆಗೆ ಗೇಟ್ ಇದೆ ಹಾಗೂ 24/7 ಸೆಕ್ಯುರಿಟಿ ಇದೆ” ಎಂದು ಒಕ್ಕಣೆ ಬರೆದಿದ್ದಾನೆ. ಮಂಥನ್ ಗುಪ್ತಾ ಪೋಸ್ಟ್‌ಗೆ ಹಲವಾರು ಜನ ಹಲವು ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಒಂದಷ್ಟು ಜನ ನೀನೇ ಲಕ್ಕಿ ಎಂದರೆ, ಇನ್ನೊಂದಿಷ್ಟು ಜನ ಕಿಟಕಿಯ ಕಂಬಿ ನೋಡಿ, ಇದೊಂದು ರೀತಿ ಜೈಲಿನಂತೆ ಇದೆ ಎಂದಿದ್ದಾರೆ.
ಮಂಥನ್ ಗುಪ್ತಾ ಪೋಸ್ಟ್
ಪುಟ್ಟದಾದ ಕೋಣೆಯಲ್ಲಿಯೇ ಮನೆ ಇದೆ. ಸಣ್ಣದೊಂದು ಕಬೋರ್ಡ್, ಟೇಬಲ್ ಹಾಗೂ ಸಿಂಕ್ ಇದೆ. “ಈ ರೂಮಿನಲ್ಲಿ ವಾಸಿಸುವವರು ನಿಜವಾಗಿಯೂ ಅದೃಷ್ಟವಂತರು. ಅಷ್ಟೊಂದು ಸೂರ್ಯನ ಬೆಳಕಿದೆ” ಎಂದು ವ್ಯಕ್ತಿಯೊಬ್ಬ ಪ್ರತಿಕ್ರಿಯಿಸಿದ್ದಾರೆ. ಇನ್ನೊಬ್ಬರು ಪ್ರತಿಕ್ರಿಯಿಸಿ, “ಇದು ನನ್ನ ಕೋಣೆಗಿಂತ ಕೇವಲ ಶೇ.20ರಷ್ಟು ಚಿಕ್ಕದಿದೆ. ಆದರೆ, ನನಗೆ ಯಾವುದೇ ಸೆಕ್ಯುರಿಟಿ ಇಲ್ಲ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನೊಬ್ಬ ವ್ಯಕ್ತಿಯು “ಈ ಕೋಣೆಯು ಜೈಲಿನಂತಿದೆ, ವಾಸಿಸುವುದು ತುಂಬ ಕಷ್ಟ” ಎಂದು ಹೇಳಿದ್ದಾರೆ. “ಈ ಕೋಣೆಯಲ್ಲಿ ವಾಸಿಸುವ ವ್ಯಕ್ತಿಯು ಬೇರೊಂದು ಅನುಭವವನ್ನೇ ಪಡೆಯುತ್ತಾರೆ. ಜನ ಸ್ವಯಂ ಪ್ರೇರಿತರಾಗಿ ಜೈಲನ್ನೇ ಬಾಡಿಗೆ ಪಡೆಯುವ ದಿಸೆಯಲ್ಲಿ ಯಾರಾದರೂ ನೆರವು ನೀಡಬೇಕು” ಎಂದು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ. ಹೀಗೆ, ಒಬ್ಬೊಬ್ಬರು ಒಂದೊಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ, ಕೊನೆಗೂ ರೂಮ್ ಸಿಕ್ಕ ಖುಷಿಯಲ್ಲಿ ಮಂಥನ್ ಗುಪ್ತಾ ತೇಲಾಡುತ್ತಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: Matrimonial Ad | ವರ ಬೇಕಾಗಿದ್ದಾನೆ, ಆದರೆ ಎಂಜಿನಿಯರ್ ಬೇಡ, ಸಾಫ್ಟ್‌ವೇರ್‌ಗಳಿಗೆ ಇದು ಹಾರ್ಡ್ ನ್ಯೂಸ್!