Site icon Vistara News

ಚಾಮರಾಜಪೇಟೆ ಮೈದಾನದ ಬಳಿ ಗಣೇಶೋತ್ಸವ ಫೈಟ್; ಹಿಂದು ಸಂಘಟನೆ ಜತೆಗೆ ಜಮೀರ್‌ ಅಹ್ಮದ್‌ ಗಣೇಶ ಪೂಜೆ

ಗಣೇಶೋತ್ಸವ

ಬೆಂಗಳೂರು: ಚಾಮರಾಜಪೇಟೆ ಮೈದಾನದ ಪಕ್ಕದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮತ್ತು ಮೆರವಣಿಗೆ ವಿಚಾರವಾಗಿ ಪೊಲೀಸ್ ಮತ್ತು ಹಿಂದು ಸಂಘಟನೆಗಳ ನಡುವೆ ಹಗ್ಗಜಗ್ಗಾಟದ ಬೆನ್ನಲ್ಲೇ ಮೈದಾನದ ಪಕ್ಕದಲ್ಲಿ ಬೃಹತ್ ಗಣೇಶ ಕೂರಿಸಲಾಗಿದೆ. ಇದೇ ವೇಳೆ ಶಾಸಕ ಜಮೀರ್‌ ನೇತೃತ್ವದಲ್ಲೂ ಗಣೇಶ ಪ್ರತಿಷ್ಠಾಪನೆ ನಡೆಯುತ್ತಿದ್ದು, ಮತ್ತೆ ಗಣೇಶೋತ್ಸವ ಗದ್ದಲ ತಾರಕಕ್ಕೇರಿದೆ.

ಚಾಮರಾಜಪೇಟೆ ಮೈದಾನದ ಪಕ್ಕದಲ್ಲಿನ ಮಹದೇಶ್ವರ ದೇವಸ್ಥಾನದ ಮುಂಭಾಗ ಗಣೇಶ ಪ್ರತಿಷ್ಠಾಪನೆಗೆ ಅ‌ನುಮತಿ ನಿರಾಕರಣೆ ಹಿನ್ನೆಲೆಯಲ್ಲಿ ಶನಿವಾರ ಪೊಲೀಸರು ಮತ್ತು ಗಣೇಶ ಸಮಿತಿ ನಡುವೆ ಗಲಾಟೆ ನಡೆದು ಸಮಿತಿಯವರನ್ನು ವಶಕ್ಕೆ ಪಡೆಯಲಾಗಿತ್ತು. ಆದಾದ ಬೆನ್ನಲ್ಲೇ ಮೈದಾನದ ಪಕ್ಕದ ಮತ್ತೊಂದು ಭಾಗದ ಅಯ್ಯಪ್ಪಸ್ವಾಮಿ ದೇವಸ್ಥಾನದ ಮುಂಭಾಗ ಅದ್ಧೂರಿ ಗಣೇಶೋತ್ಸವಕ್ಕೆ ಗಣೇಶ ಸಮಿತಿ ಸಿದ್ಧತೆ ನಡೆಸಿದೆ.

ಚಾಮರಾಜಪೇಟೆ ಮೈದಾನದ ಎದುರಿನ 2ನೇ ಕ್ರಾಸ್ ಮುಖ್ಯರಸ್ತೆಯಲ್ಲಿ ಬೃಹತ್ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಕಳೆದ ಎರಡು ಮೂರು ವರ್ಷಗಳಿಂದಲೂ ಇದೇ ಜಾಗದಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಮೈದಾನದೊಳಗೆ ಅವಕಾಶ ಸಿಗದ ಹಿನ್ನೆಲೆಯಲ್ಲಿ ಮೈದಾನ ಪಕ್ಕದ ಮಹದೇಶ್ವರ ದೇವಸ್ಥಾನದ ಬಳಿ ಗಣೇಶ ಸಮಿತಿ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ಕೇಳಿದ್ದರು, ಜತೆಗೆ ಅದ್ದೂರಿ ಮೆರವಣಿಗೆ ವಿಚಾರವಾಗಿ ಜೆಜೆನಗರ, ಪಾದರಾಯನಪುರ, ಸೇರಿ ಚಾಮರಾಜಪೇಟೆ ಮುಖ್ಯರಸ್ತೆಯಲ್ಲಿ ಮೆರವಣಿಗೆ ಅವಕಾಶ ಕೇಳಲಾಗಿತ್ತು. ಆದರೆ ಕಾನೂನು ಸುವ್ಯವಸ್ಥೆಗಾಗಿ ಮೆರವಣಿಗೆ ರೂಟ್‌ ಮ್ಯಾಪ್ ಹಾಗೂ ಗಣೇಶ ಪ್ರತಿಷ್ಠಾಪನೆ ಜಾಗ ಬದಲಿಸುವಂತೆ ಪೊಲೀಸರು ಹೇಳಿದ್ದರು. ಇದಕ್ಕೊಪ್ಪದ ಸಮಿತಿ ಪ್ರತಿಭಟನೆಗೆ ಮುಂದಾಗಿತ್ತು.

ಇದಾದ ಬಳಿಕ ಸದ್ಯ ಅಯ್ಯಪ್ಪಸ್ವಾಮಿ ದೇವಾಲಯದ ಮುಂದೆ 18 ಅಡಿ ಎತ್ತರದ ಬೃಹತ್ ಗಣಪನ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಅಲ್ಲದೆ 7 ದಿನಗಳ ಕಾಲ ಈ ಜಾಗದಲ್ಲಿ ಗಣಪನ ಪೂಜೆ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ನೆರವೇರಲಿದೆ. ನಗರದ ಹಲವು ಸಮಿತಿಗಳು ಸೆ.10ರಂದು ಮೆರವಣಿಗೆಯಲ್ಲಿ ಭಾಗಿಯಾಗಲಿದ್ದು, 60ಕ್ಕೂ ಹೆಚ್ಚು ಗಣೇಶ ಮೂರ್ತಿಗಳು ಮೆರವಣಿಗೆಯಲ್ಲಿ ಭಾಗಿಯಾಗಲಿವೆ. ಮೆರವಣಿಗೆ ಮಾರ್ಗ ವಿಚಾರವಾಗಿ ಇನ್ನೂ ಪೊಲೀಸ್ ಇಲಾಖೆ ಅನುಮತಿ ನೀಡಿಲ್ಲ. ಈ ವಿಚಾರವಾಗಿ ಗಣೇಶ ಸಮಿತಿ, ಸೋಮವಾರ ಕಮಿಷನರ್ ಅವರ ಭೇಟಿಯಾಗಲಿದ್ದು, ತಾವು ಮನವಿ ಮಾಡಿದ ರೂಟ್‌ ಮ್ಯಾಪ್‌ಗೆ ಅನುಮತಿ ನೀಡುವಂತೆ ಮನವಿ ಮಾಡಲಿದ್ದಾರೆ.

ಹಬ್ಬ ಮುಗಿದರೂ ಚಾಮರಾಜಪೇಟೆಯಲ್ಲಿ ಗಣೇಶ ಗಲಾಟೆ ಮಾತ್ರ ಮುಗಿತಿಲ್ಲ. ಇತ್ತ ಸಮಿತಿ ಒತ್ತಡಕ್ಕೆ ಮಣಿದು ಸಮಿತಿಯ ಪ್ಲ್ಯಾನ್ ನಂತೆಯೇ ಗಣೇಶ ಮೆರವಣಿಗೆಗೆ ಪೊಲೀಸರು ಅವಕಾಶ ಕೊಡುತ್ತಾರೆಯೇ ಎಂಬುವುದನ್ನು ಕಾದು ನೋಡಬೇಕಿದೆ.

ನಾಳೆ ಜಮೀರ್ ನೇತೃತ್ವದಲ್ಲಿ ಗಣೇಶೋತ್ಸವ
ಚಾಮರಾಜಪೇಟೆ ಮೈದಾನದ ಪಕ್ಕ ಒಂದೆಡೆ ಹಿಂದು ಸಂಘಟನೆಗಳಿಂದ ಗಣೇಶೋತ್ಸವ ಮಾಡುತ್ತಿದ್ದರೆ, ಮತ್ತೊಂದೆಡೆ ಶಾಸಕ ಜಮೀರ್ ಅಹ್ಮದ್ ನೇತೃತ್ವದಲ್ಲಿ ಗಣೇಶೋತ್ಸವಕ್ಕೆ ಸಿದ್ಧತೆ ನಡೆಸಲಾಗಿದೆ. ಚಾಮರಾಜಪೇಟೆ ಶಾಸಕರ ಕಚೇರಿಯಲ್ಲಿ ಸೋಮವಾರ ಇದೆ ಮೊದಲ ಬಾರಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಹಿಂದು ಸಂಘಟನೆಗಳ ಟೀಕೆ ಬಳಿಕ ಚಾಮರಾಜಪೇಟೆಯ ಶಾಸಕರ ಕಚೇರಿಯಲ್ಲಿ ಗಣೇಶೋತ್ಸವ ಆಚರಿಸಲಾಗುತ್ತಿದೆ ಎನ್ನಲಾಗಿದೆ.

ಸೆ.5ರಂದು ಬೆಳಗ್ಗೆ 9.15 ರಿಂದ 10 ಗಂಟೆಯೊಳಗೆ ವಿದ್ಯಾಗಣಪತಿ ಪ್ರತಿಷ್ಠಾಪನೆಯಾಗಲಿದ್ದು, ಸಂಜೆ 4 ಗಂಟೆಗೆ ಬಾಣಬಿರುಸುಗಳೊಂದಿಗೆ ಅದ್ಧೂರಿ ಮೆರವಣಿಗೆ ಮಾಡಿ ಮೂರ್ತಿ ವಿಸರ್ಜನೆ ಮಾಡಲಾಗುತ್ತದೆ ಎಂದು ಅಖಿಲ ಕರ್ನಾಟಕ ಬಿ.ಜಡ್. ಜಮೀರ್ ಅಹ್ಮದ್ ಖಾನ್ ಒಕ್ಕೂಟ ತಿಳಿಸಿದೆ. ಆದರೆ ಈ ಬಗ್ಗೆ ಚಾಮರಾಜಪೇಟೆ ನಾಗರಿಕರ ಒಕ್ಕೂಟ ವೇದಿಕೆ ಪ್ರತಿಕ್ರಿಯಿಸಿ, ಚುನಾವಣೆಯಲ್ಲಿ ಮತ ಗಿಟ್ಟಿಸಿಕೊಳ್ಳಲು ಶಾಸಕ ಜಮೀರ್‌ ಗಿಮಿಕ್‌ ಮಾಡುತ್ತಿದ್ದಾರೆ ಎಂದು ಚಾಮರಾಜಪೇಟೆ ನಾಗರಿಕರ ಒಕ್ಕೂಟ ವೇದಿಕೆ ಟೀಕೆ ಮಾಡಿದೆ.

ಇದನ್ನೂ ಓದಿ | ಚಾಮರಾಜಪೇಟೆ ಮೈದಾನದ ಬಳಿ ಗಣೇಶೋತ್ಸವ ಅನುಮತಿಗೆ ಪಟ್ಟು; 20 ಹಿಂದು ಕಾರ್ಯಕರ್ತರು ವಶಕ್ಕೆ!

Exit mobile version