ಬೆಂಗಳೂರು : ಕಾಂಗ್ರೆಸ್ ಸರಕಾರವು ಕಳೆದ 7 ದಶಕಗಳಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರರ ಹೆಸರನ್ನು ಹೇಳಿಕೊಂಡು ಇಲ್ಲಿ ಆಡಳಿತ ನಡೆಸಿತ್ತು. ಆದರೆ, ಬಾಬಾ ಸಾಹೇಬರ ಅಂತ್ಯಸಂಸ್ಕಾರಕ್ಕೂ ದೆಹಲಿಯಲ್ಲಿ ಒಂದು ತುಂಡು ಭೂಮಿಯನ್ನೂ ಕೊಡದೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಎಸ್.ಟಿ ಮೋರ್ಚಾ ರಾಜ್ಯ ಅಧ್ಯಕ್ಷ ಹಾಗೂ ಮಾಜಿ ಶಾಸಕ ತಿಪ್ಪರಾಜ ಹವಾಲ್ದಾರ್ ಕಿಡಿಕಾರಿದರು.
ಮಲ್ಲೇಶ್ವರದಲ್ಲಿರುವ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್‍ಸಿ ಸಮುದಾಯಕ್ಕೆ ₹20,112 ಕೋಟಿ ಹಾಗೂ ಎಸ್‍ಟಿ ಸಮುದಾಯಕ್ಕೆ ₹8,121 ಕೋಟಿ ಅನುದಾನ ನೀಡಿದ್ದಾರೆ. ಈ ರಾಜ್ಯದ ಬಹುಸಂಖ್ಯಾತ ದಲಿತ ಸಮುದಾಯಕ್ಕೆ ಬಜೆಟ್‍ನಲ್ಲಿ ಹೆಚ್ಚು ಹಣ ಘೋಷಿಸಿದ್ದಲ್ಲದೆ, ಅತಿ ಹೆಚ್ಚು ಹಣ ನೀಡಿದ ಸರಕಾರಕ್ಕೆ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ. ಅಲ್ಲದೆ, ಈ ಸಮುದಾಯದವರಿಗೆ 75 ಯೂನಿಟ್ ಉಚಿತ ವಿದ್ಯುತ್ತನ್ನು ನೀಡಲಾಗುತ್ತಿದೆ.
ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರಕಾರವು ಡಾ. ಬಾಬಾ ಸಾಹೇಬ್ ಅಂಬೇಡ್ಕರರ 5 ಸ್ಥಳಗಳನ್ನು ಗುರುತಿಸಿ ಪಂಚತೀರ್ಥ ಕ್ಷೇತ್ರಗಳನ್ನಾಗಿ ಅಭಿವೃದ್ಧಿ ಪಡಿಸಿದೆ. ಇದಕ್ಕಾಗಿ ಕೇಂದ್ರ ಸರ್ಕಾರಕ್ಕೆ ಧನ್ಯವಾದಗಳು. 2022-23ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಮತ್ತು ವಿವಿಧ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ₹28,234 ಕೋಟಿ ಕ್ರಿಯಾ ಯೋಜನೆಗೆ ಬಿಜೆಪಿ ಸರ್ಕಾರ ನೀಡಿರುವುದಕ್ಕೆ ರಾಜ್ಯ ಸರ್ಕಾರಕ್ಕೆ ಧನ್ಯವಾದ ಎಂದರು.
ಮಹರ್ಷಿ ವಾಲ್ಮೀಕಿ ಜಯಂತಿಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸರಕಾರಿ ರಜೆ ಪ್ರಕಟಿಸಿದ್ದರು. ಎಸ್‍ಟಿ ಸಮುದಾಯವನ್ನು ಬಿಜೆಪಿ ಸರ್ಕಾರಗಳು ಗುರುತಿಸಿವೆ. ಆದಿವಾಸಿ ಗೌರವ ದಿನ ಆಚರಣೆಗೆ ಕೇಂದ್ರ ಸರ್ಕಾರ ಮುಂದಾಗಿದೆ. ನಮ್ಮ ಸಮುದಾಯಗಳಿಗೆ ಅತಿ ಹೆಚ್ಚಿನ ಕೊಡುಗೆ ಕೊಡಲಾಗಿದೆ ಎಂದು ಮೆಚ್ಚುಗೆ ಸೂಚಿಸಿದರು.
ವಿರೋಧ ಪಕ್ಷಗಳು ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ವಿಚಾರದಲ್ಲಿ ಊಹಾಪೋಹ ಹಾಗೂ ಅಂತೆಕಂತೆಗಳನ್ನು ಹರಿಯಬಿಟ್ಟು ಸೌಹಾರ್ದವನ್ನು ಹಾಳು ಮಾಡುತ್ತಿದ್ದಾರೆ ಎಂದು ಅವರು ಆಕ್ಷೇಪಿಸಿದರು. ಕಾಂಗ್ರೆಸ್ ಅವಧಿಯಲ್ಲಿ ಗರಿಷ್ಠ ಕೋಮು ಗಲಭೆಗಳಾಗಿದ್ದವು. ಆದರೆ, ನರೇಂದ್ರ ಮೋದಿಯವರ ಆಡಳಿತದಲ್ಲಿ ಕೋಮು ಸೌಹಾರ್ದದ ಅಭಿವೃದ್ಧಿಪರ ಆಡಳಿತವನ್ನು ನೀಡಲಾಗಿದೆ ಎಂದು ತಿಳಿಸಿದರು.
ಎಸ್.ಟಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ನರಸಿಂಹ ನಾಯ್ಕ್, ರಾಜ್ಯ ಕಾರ್ಯದರ್ಶಿ ಮಹಾಂತೇಶ್ ನಾಯ್ಕ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.