ಬೆಂಗಳೂರು: ಯುವ ಕಲಿಕೆದಾರರಲ್ಲಿ 21ನೇ ಶತಮಾನದ ಕೌಶಲಗಳನ್ನು ಬೆಳೆಸಿ ಅವರನ್ನು ಸಶಕ್ತಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿರುವ ಕ್ವೆಸ್ಟ್ ಅಲಯನ್ಸ್ ಲಾಭರಹಿತ ಸಂಸ್ಥೆಗೆ ಖ್ಯಾತ ದಾನಿ ಮೆಕೆಂಜಿ ಸ್ಕಾಟ್ ಅವರು ಮಹತ್ತರವಾದ ದೇಣಿಗೆ ನೀಡಿದ್ದಾರೆ. ಈ ದೇಣಿಗೆಯು ಸಂಸ್ಥೆಯ ಕಾರ್ಯ ಚಟುವಟಿಕೆಗಳ ಪರಿಣಾಮವನ್ನು ಹೆಚ್ಚಿಸುವತ್ತ ಗಮನ ಕೇಂದ್ರೀಕರಿಸಲು ಉತ್ತೇಜನ ನೀಡಲಿದೆ ಎಂದು ಕ್ವೆಸ್ಟ್ ಅಲಯನ್ಸ್ ಸಂಸ್ಥೆ (Quest Alliance) ತಿಳಿಸಿದೆ.
ಹವಾಮಾನ ಬದಲಾವಣೆ, ತಂತ್ರಜ್ಞಾನ, ಹೆಚ್ಚುತ್ತಿರುವ ಅಸಮಾನತೆ ಮತ್ತು ಕ್ಷಿಪ್ರವಾಗಿ ಬದಲಾಗುತ್ತಿರುವ ಭವಿಷ್ಯದ ಉದ್ಯೋಗದ ಸ್ವರೂಪ ಮುಂತಾದ ಪಲ್ಲಟಗಳ ನಡುವೆ ತನ್ನ ಕಾರ್ಯ ಚಟುವಟಿಕೆಗಳನ್ನು ಮರುಕಲ್ಪನೆ ಮಾಡಿಕೊಳ್ಳಲು ಹೊರಟಿರುವ ನಿರ್ಣಾಯಕ ಕಾಲಘಟ್ಟದಲ್ಲಿ ಕ್ವೆಸ್ಟ್ ಅಲಯನ್ಸ್ ಸಂಸ್ಥೆಗೆ ಈ ದೇಣಿಗೆ ದೊರೆತಿದೆ. ಈ ದೇಣಿಗೆಯು ಸಂಸ್ಥೆಗೆ ಆಂತರಿಕ ಸಾಮರ್ಥ್ಯ, ತಾಂತ್ರಿಕ ಪರಿಹಾರಗಳನ್ನು ನಿರ್ಮಿಸಿಕೊಳ್ಳಲು ಮತ್ತು ಶಾಲೆಯಿಂದ ಔದ್ಯೋಗಿಕ ಪರಿಸರ ವ್ಯವಸ್ಥೆಯಲ್ಲಿ ಇನ್ನಷ್ಟು ಆಳವಾದ ವ್ಯವಸ್ಥಿತ ಬದಲಾವಣೆ ತರುವ ನಿಟ್ಟಿನಲ್ಲಿ ಹೊಸ ಆವಿಷ್ಕಾರಗಳಿಗೆ ಹೂಡಿಕೆ ಮಾಡಲು ಅವಕಾಶ ನೀಡಲಿದೆ ಎಂದು ಹೇಳಿದೆ.
ಸಂಕೀರ್ಣ ಅಭಿವೃದ್ಧಿ ಸಮಸ್ಯೆಗಳಿಗೆ ದೂರಗಾಮಿ ದೃಷ್ಟಿಯೊಂದಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮೆಕೆಂಜಿ ಸ್ಕಾಟ್ ಅವರ ಈ ಕೊಡುಗೆ ವಿಶ್ವಾಸಾಧಾರಿತ ಮತ್ತು ಸಡಿಲ ದೇಣಿಗೆಗಳತ್ತ ಸಂವಾದವನ್ನು ಕೊಂಡೊಯ್ಯಲು ಮಹತ್ತರ ಹೆಜ್ಜೆ ಇಟ್ಟಿದೆ. ಈ ದೇಣಿಗೆಯೊಂದಿಗೆ ಕ್ವೆಸ್ಟ್ ಅಲಯನ್ಸ್ ಸಂಸ್ಥೆಯು ಯುವ ಜನಾಂಗದ ಕಲಿಕಾ ಅನುಭವವನ್ನು ಪರಿವರ್ತನೆ ಮಾಡಿ, 21ನೇ ಶತಮಾನದ ಕಾರ್ಯಪ್ರವೃತ್ತಿಗಳಲ್ಲಿ ಯಶಸ್ಸು ಕಾಣಲು ಅಗತ್ಯವಿರುವ ಕೌಶಲಗಳನ್ನು ರೂಢಿಸುವ ತನ್ನ ಕಾರ್ಯವನ್ನು ಮುಂದುವರಿಸಲಿದೆ ಎಂದು ಕ್ವೆಸ್ಟ್ ಅಲಯನ್ಸ್ ತಿಳಿಸಿದೆ.
ಇದನ್ನೂ ಓದಿ | PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ
ಕ್ವೆಸ್ಟ್ ಅಲಯನ್ಸ್ ಸಂಸ್ಥೆ ಸಿಇಒ ಆಕಾಶ್ ಸೇಥಿ ಅವರು ಪ್ರತಿಕ್ರಿಯಿಸಿ, ಈ ದೇಣಿಗೆ ನಮಗೆ ಸ್ಥಿರತೆಯ ಭಾವನೆ ನೀಡಿದ್ದು, ದೀರ್ಘಾವಧಿ ಮತ್ತು ಸುಸ್ಥಿರ ಪರಿಣಾಮಗಳತ್ತ ಗಮನ ಹರಿಸಲು ಅವಕಾಶ ಒದಗಿಸಿದೆ. ಇದು ನಮಗೆ ದಿಟ್ಟ ಹೆಜ್ಜೆಗಳನ್ನಿಡಲು, ನವೀನ ಮಾರ್ಗಗಳನ್ನು ಪ್ರಯೋಗ ಮಾಡಲು ಮತ್ತು ಹೆಚ್ಚು ಸೃಜನಶೀಲತೆಯಿಂದ ಕೆಲಸ ಮಾಡಲು ಸುರಕ್ಷಾ ಜಾಲವನ್ನು ಒದಗಿಸಿದೆ. ಈ ರೀತಿಯ ಬೆಂಬಲ ನಮ್ಮಂತಹ ಸಂಸ್ಥೆಗಳಿಗೆ ಪರಿವರ್ತನಾ ಬದಲಾವಣೆಗಳನ್ನು ಮತ್ತು ಭವಿಷ್ಯವನ್ನು ರೂಪಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಲು ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
2008ರಲ್ಲಿ ಸ್ಥಾಪನೆಯಾದಾಗಿನಿಂದ ಕ್ವೆಸ್ಟ್ ಅಲಯನ್ಸ್ ಸಂಸ್ಥೆ ಕಳೆದ 15 ವರ್ಷಗಳಿಂದ ನಿರಂತರವಾಗಿ ಶಿಕ್ಷಣ ತಂತ್ರಜ್ಞಾನದಲ್ಲಿ ನಾವೀನ್ಯತೆ, ಸಾಮರ್ಥ್ಯ ನಿರ್ಮಾಣ ಮತ್ತು ಸಹಯೋಗದೊಂದಿಗೆ ಕಲಿಕೆದಾರರನ್ನು ಮತ್ತು ಯುವ ಜನಾಂಗವನ್ನು ಸಶಕ್ತಗೊಳಿಸಲು ಮತ್ತು ಕಲಿಕಾ ಪರಿಸರ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರುವ ಕಾರ್ಯದಲ್ಲಿ ತನ್ನನ್ನು ಸಮರ್ಪಿಸಿಕೊಂಡಿದೆ ಎಂದು ತಿಳಿಸಿದ್ದಾರೆ.
ಜಾಗತಿಕ ತಂತ್ರಜ್ಞಾನ ಮತ್ತು ಹಣಕಾಸು ಸೇವಾ ಸಂಸ್ಥೆಗಳ ಸಿಎಸ್ಆರ್ ಯೋಜನೆ ಸೇರಿದಂತೆ ಅನೇಕ ಪಾಲುದಾರರ ಸಹಕಾರದೊಂದಿಗೆ ಕ್ವೆಸ್ಟ್ ಅಲಯನ್ಸ್ ಸಂಸ್ಥೆ, ಈ ಅನುದಾನದ ಮೂಲಕ ನಾಯಕತ್ವ ವಿಕಾಸ ಮತ್ತು ಸಂಶೋಧನೆಗಾಗಿ ಮಹತ್ವದ ಹೂಡಿಕೆಗಳನ್ನು ಮಾಡಲಿದೆ. ಇದರ ಜತೆಗೆ ತಂತ್ರಜ್ಞಾನ ಆಧಾರಿತ ಆವಿಷ್ಕಾರಗಳು ಹಾಗೂ ವೈಯಕ್ತೀಕರಿಸಲಾದ ಕಲಿಕಾ ಸಾಧನಗಳ ನಿರ್ಮಾಣಕ್ಕಾಗಿ ಈ ಅನುದಾನವನ್ನು ಬಳಸಿಕೊಳ್ಳಲಿದೆ. ಇದು ಯುವ ಜನರಿಗೆ ಹೆಚ್ಚು ಉದ್ಯೋಗಾವಕಾಶಗಳನ್ನು ಒದಗಿಸಲು ಮತ್ತು ಶಿಕ್ಷಣ ಬದುಕಿನಿಂದ ವೃತ್ತಿ ಬದುಕಿಗೆ ಯಶಸ್ವಿಯಾಗಿ ಮುಂದೆ ಸಾಗಲು ನೆರವಾಗಲಿದೆ ಎಂದು ಕ್ವೆಸ್ಟ್ ಅಲಯನ್ಸ್ ತಿಳಿಸಿದೆ.
ಇದನ್ನೂ ಓದಿ | ರಾಜ ಮಾರ್ಗ ಅಂಕಣ : ಮಕ್ಕಳಿಗಾಗಿ ಅಮರ ಚಿತ್ರಕಥಾ ಲೋಕ ಸೃಷ್ಟಿಸಿದ ಅಂಕಲ್ ಪೈಗೆ ಮಕ್ಕಳೇ ಇರಲಿಲ್ಲ!
ಕ್ವೆಸ್ಟ್ ಅಲಯನ್ಸ್ ಬಗ್ಗೆ
ಕ್ವೆಸ್ಟ್ ಅಲಯನ್ಸ್ ಒಂದು ಲಾಭರಹಿತ ಸಂಸ್ಥೆಯಾಗಿದ್ದು, 21ನೇ ಶತಮಾನದ ಯುವಕ, ಯುವತಿಯರು ಸ್ವಯಂ-ಅಧ್ಯಯನದ ಮೂಲಕ ಕೌಶಲಗಳನ್ನು ಬೆಳೆಸಿಕೊಳ್ಳಲು ನೆರವಾಗುತ್ತಿದೆ. ಗುಣಮಟ್ಟದ ಶಿಕ್ಷಣ ಹಾಗೂ ಕೌಶಲಾಭಿವೃದ್ಧಿಯಲ್ಲಿರುವ ಕೊರತೆಗಳನ್ನು ನಿವಾರಿಸಲು ಸೂಕ್ತ ಪರಿಹಾರ ವಿನ್ಯಾಸಗೊಳಿಸುತ್ತಿದೆ. ಕಲಿಕಾ ಜಾಲಗಳು ಹಾಗೂ ಸಹಯೋಗಗಳನ್ನು ನಿರ್ಮಿಸುವ ಮೂಲಕ ಸಂಶೋಧನೆ ಮತ್ತು ಆವಿಷ್ಕಾರ ಪ್ರಣೀತ ಬದಲಾವಣೆಗಳನ್ನು ತರುವತ್ತ ಕಾರ್ಯನಿರ್ವಹಿಸುತ್ತಿದೆ.