Site icon Vistara News

Medical Seat : ಮೆಡಿಕಲ್‌ ಸೀಟ್‌ ದೋಖಾ; ವಿದ್ಯಾರ್ಥಿಗಳಿಗೆ ವಂಚಿಸುತ್ತಿದ್ದ ವಂಚಕ ಅರೆಸ್ಟ್‌

Sharath Gowda

ಬೆಂಗಳೂರು: ಮಕ್ಕಳನ್ನು ಮೆಡಿಕಲ್ ಓದಿಸಿ ಡಾಕ್ಟರ್ ಮಾಡಿಸಬೇಕು ಎಂಬ ಆಸೆ ಸಾಮಾನ್ಯವಾಗಿ ಎಲ್ಲ ಪೋಷಕರಿಗೆ ಇದ್ದೇ ಇರುತ್ತದೆ. ಆದರೆ ನೀಟ್ ಪರೀಕ್ಷೆಯಲ್ಲಿ ರ‍್ಯಾಕಿಂಗ್‌ ಪಡೆಯದೆ ಇದ್ದರೆ ಈ ಆಸೆ ಈಡೇರುವುದಿಲ್ಲ. ಇಂತಹವರನ್ನೇ ಟಾರ್ಗೆಟ್ ಮಾಡುತ್ತಿದ್ದ ಆಸಾಮಿಯೊಬ್ಬ ಪ್ರತಿಷ್ಠಿತ ಕಾಲೇಜುಗಳಲ್ಲಿ ಮೆಡಿಕಲ್ ಸೀಟ್ (Medical Seat) ಕೊಡಿವುದಾಗಿ ಲಕ್ಷ ಲಕ್ಷ ವಂಚಿಸಿದವನು (Fraud Case) ಈಗ ಪೊಲೀಸರ ಅತಿಥಿಯಾಗಿದ್ದಾನೆ.

ಸಂಜಯ್ ನಗರ ಪೊಲೀಸರು ಕಾರ್ಯಾಚರಣೆ ನಡೆಸಿ ತೆಲಂಗಣ ಮೂಲದ ಶರತ್ ಗೌಡ ಎಂಬಾತನನ್ನು ಬಂಧಿಸಿದ್ದಾರೆ. ಆರೋಪಿ ಶರತ್‌ ಗೌಡ ಸಂಜಯ್ ನಗರದ ಬೆಲ್‌ ರಸ್ತೆಯಲ್ಲಿ ಕಚೇರಿಯೊಂದನ್ನು ತೆರೆದಿದ್ದ. ನೀಟ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದು ಮೆಡಿಕಲ್ ಸೀಟ್ ಮಿಸ್ಸಾಯ್ತಲ್ಲ‌ ಎಂದು ಕೊರಗುವವರನ್ನೇ ಟಾರ್ಗೇಟ್‌ ಮಾಡುತ್ತಿದ್ದ. ಫೋನ್ ಮೂಲಕ ನೀಟ್ ಪರೀಕ್ಷೆ ಬರೆದ ವಿದ್ಯಾರ್ಥಿಗಳನ್ನು ಸಂಪರ್ಕ ಮಾಡುತ್ತಿದ್ದ.

ಬಳಿಕ ನಾನು ನಿಮಗೆ ಮೆಡಿಕಲ್ ಸೀಟ್ ಕೊಡಿಸುತ್ತೇನೆ ಎಂದು ಬಣ್ಣ ಬಣ್ಣದ ಮಾತುಗಳಿಂದ ನಂಬಿಸುತ್ತಿದ್ದ. ಸೀಟು ಸಿಗುವ ಆಸೆಗೆ ವಂಚಕನ ನಂಬುತ್ತಿದ್ದರು. ಮೆಡಿಕಲ್‌ ಸೀಟು ಬೇಕಾದರೆ ಮೊದಲು ಅಡ್ವಾನ್ಸ್ ಮಾಡಬೇಕೆಂದು ಪೋಷಕರಿಂದ ಲಕ್ಷ ಲಕ್ಷ ಹಣ ಪಡೆದುಕೊಳ್ಳುತ್ತಿದ್ದ. ಮಾತ್ರವಲ್ಲ ಇದಕ್ಕೆ ಗ್ಯಾರಂಟಿ ಎಂಬಂತೆ ರಸೀದಿ ಕೂಡ ನೀಡಿದ್ದಾನೆ.

ಇದನ್ನೂ ಓದಿ: Leopard Spotted : ದಿನ ಕಳೆದರೂ ಸಿಗದ ಚಿರತೆ; ರಾತ್ರಿ ಕಾರ್ಯಾಚರಣೆಗೆ ಥರ್ಮಲ್ ಡ್ರೋನ್ ಬಳಕೆ

ಇತ್ತ ಹಣ ಕೊಟ್ಟು ಮೆಡಿಕಲ್‌ ಸೀಟ್‌ ಸಿಗದೆ ಇದ್ದಾಗ, ಪೋಷಕರೆಲ್ಲರೂ ಒಟ್ಟಾಗಿ ಶರತ್‌ ಆಫೀಸ್‌ಗೆ ಬಂದು ಹಣ ವಾಪಸ್‌ ಕೇಳಿದ್ದಾರೆ. ಈ ವೇಳೆ ಏನೋ ಸಬೂಬು ಹೇಳಿ ಕಳಿದ್ದ. ಕೊನೆಗೆ ಸಿಕ್ಕಿ ಬಿದ್ದೆ ಎಂದು ತಿಳಿಯುತ್ತಿದ್ದಂತೆ ಶರತ್ ಗೌಡ ರಾತ್ರೋ ರಾತ್ರಿ ಕಚೇರಿಗೆ ಬೀಗ ಹಾಕಿ ಪರಾರಿ ಆಗಿದ್ದ. ಇದರಿಂದ ಕಂಗಾಲಾದ ಪೋಷಕರು ಶರತ್ ಗೌಡ ವಿರುದ್ಧ ಸಂಜಯ್ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದರು.

ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡ ಸಂಜಯ್ ನಗರ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ. ಆತನಿಂದ ಸುಮಾರು 47.50 ಲಕ್ಷ ಹಣ ಸೀಜ್ ಮಾಡಿದ್ದಾರೆ. ಇನ್ನು ವಿಚಾರಣೆ ವೇಳೆ‌ ಶರತ್ ಬರೋಬ್ಬರಿ 20 ವಿದ್ಯಾರ್ಥಿಗಳಿಗೆ ವಂಚಿಸಿರುವುದು ಬೆಳಕಿಗೆ ಬಂದಿದೆ. ಶರತ್‌ಗೌಡಗೆ ವಿದ್ಯಾರ್ಥಿಗಳ‌ ಫೋನ್‌ ನಂಬರ್‌ ಶೇರ್‌ ಮಾಡುತ್ತಿದ್ದ ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಆತನಿಗಾಗಿ ಹುಡುಕಾಟ ಮುಂದುವರಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version