ಬೆಂಗಳೂರು: ರಾಜಧಾನಿ ಬೆಂಗಳೂರಿನ ಮೆಟ್ರೋ ಪ್ರಯಾಣಿಕರು ಗಮನಿಸಬೇಕಾದ ಮಾಹಿತಿ ಇಲ್ಲಿದೆ. ಶನಿವಾರ (ಮೇ 28) ರಾತ್ರಿ 9:30ಕ್ಕೆ ನೇರಳೆ (ಪರ್ಪಲ್) ಮಾರ್ಗದ ಕೆಲವು ಭಾಗದಲ್ಲಿ ಮೆಟ್ರೋ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗುತ್ತದೆ. ಹಸಿರು (ಗ್ರೀನ್) ಮಾರ್ಗದಲ್ಲಿ ಎಂದಿನಂತೆ ರೈಲು ಸಂಚಾರ ಇರಲಿದೆ.
ನೇರಳೆ ಮಾರ್ಗದಲ್ಲಿ ಎಂ.ಜಿ. ರಸ್ತೆ ಹಾಗೂ ಟ್ರಿನಿಟಿ ನಿಲ್ದಾಣಗಳ ನಡುವೆ ನಿರ್ವಹಣೆ ಕಾಮಗಾರಿ ಕೈಗೊಳ್ಳುತ್ತಿರುವ ಕಾರಣದಿಂದ ಎಂ.ಜಿ. ರಸ್ತೆಯಿಂದ ಬೈಯಪ್ಪನಹಳ್ಳಿಯವರೆಗೆ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗುತ್ತಿದೆ ಎಂದು ʼನಮ್ಮ ಮೆಟ್ರೋʼ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಅವಧಿಯಲ್ಲಿ ಮೆಟ್ರೋ ಸೇವೆಯು ಎಂ.ಜಿ. ರಸ್ತೆ ಹಾಗೂ ಕೆಂಗೇರಿ ಮೆಟ್ರೋ ನಿಲ್ದಾಣಗಳ ನಡುವೆ ಮಾತ್ರ ಲಭ್ಯವಿರುತ್ತದೆ. ಕೆಂಗೇರಿ ಮೆಟ್ರೋ ನಿಲ್ದಾಣದಿಂದ ಬೈಯಪ್ಪನಹಳ್ಳಿ ಕಡೆಗೆ ಕೊನೆಯ ರೈಲು ರಾತ್ರಿ 8:40ಕ್ಕೆ ಹೊರಡುತ್ತದೆ. ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಿಂದ ಕೆಂಗೇರಿ ಕಡೆಗೆ ರಾತ್ರಿ 9.10ಕ್ಕೆ ಹೊರಡುತ್ತದೆ. ಕಂಪೇಗೌಡ ಮಟ್ರೋ ನಿಲ್ದಾಣದಿಂದ ಬೈಯಪ್ಪನಹಳ್ಳಿಗೆ ಕೊನೆಯ ರೈಲು ರಾತ್ರಿ 9:10ಕ್ಕೆ ಹೊರಡಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮವು ತಿಳಿಸಿದೆ.
ಪ್ರಯಾಣಿಕರಿಗೆ ಇದರಿಂದಾಗುವ ಅನನುಕೂಲತೆಗೆ ಬೆಂಗಳೂರು ಮೆಟ್ರೋ ರೈಲು ನಿಗಮವು ವಿಷಾದಿಸಿದೆ. ಹಸಿರು ಮಾರ್ಗದ ಮೆಟ್ರೋ ರೈಲುಗಳ ಸೇವೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಹಾಗೂ ಪ್ರಸ್ತುತ ವೇಳಾಪಟ್ಟಿಯ ಪ್ರಕಾರ ರೈಲು ಎಂದಿನಂತೆ ಸೇವೆಯಲ್ಲಿರುತ್ತದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
ಭಾನುವಾರದಂದು ಮೆಟ್ರೋ ಸೇವೆಯು ನೇರಳೆ ಮಾರ್ಗದಲ್ಲಿ ಪೂರ್ಣವಾಗಿ ಬೆಳಿಗ್ಗೆ 7:00 ಗಂಟೆಯಿಂದ ಪ್ರಸ್ತುತ ವೇಳಾಪಟ್ಟಿಯ ಪ್ರಕಾರ ಪುನರಾರಂಭಿಸಲಾಗುತ್ತದೆ ಎಂದು ಮೆಟ್ರೋ ನಿಗಮ ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ಮನೆ ಬಾಗಿಲಿಗೆ ಮೆಟ್ರೋ : ಶೀಘ್ರವೇ ಓಡಾಡಲಿದೆ ನಿಯೋ ರೈಲು