ಬೆಂಗಳೂರು: ಬೆಂಗಳೂರಿನ ಬಹುನಿರೀಕ್ಷಿತ ಕೆ.ಆರ್.ಪುರಂ -ವೈಟ್‌ಫೀಲ್ಡ್ ಮೆಟ್ರೊ ಮಾರ್ಗದಲ್ಲಿ ಮೆಟ್ರೊ ರೈಲು ಸಂಚಾರ ಭಾನುವಾರ ಆರಂಭವಾಗಿದೆ. ಬೆಳಿಗ್ಗೆ 7 ಗಂಟೆಯಿಂದ ಮೊದಲ ರೈಲು ಚಲಿಸಿತು. (Namma Metro) ರಾತ್ರಿ 11 ಗಂಟೆಯವರೆಗೆ ರೈಲು ಸಂಚರಿಸಲಿದೆ.
ಈ ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಚಾಲನೆ ನೀಡಿದ್ದರು. ಸೋಮವಾರ ಮುಂಜಾನೆ 5 ಗಂಟೆಯಿಂದ ರಾತ್ರಿ 11 ರವೆರೆಗೂ ಮೆಟ್ರೊ ರೈಲು ಸೇವೆ ದೊರೆಯಲಿದೆ. ಪ್ರಯಾಣಿಕರು ಟೋಕನ್, ಮೊಬೈಲ್ ಕ್ಯೂಆರ್ ಟಿಕೆಟ್ , ಸ್ಮಾರ್ಟ್ ಕಾರ್ಡ್ ಬಳಸಿ ಪ್ರಯಾಣಿಸಲು ಅವಕಾಶ ಇದೆ.
ಮೆಟ್ರೊ ರೈಲಿನ ಪರಿಣಾಮ, ಕೆ.ಆರ್.ಪುರಂ-ವೈಟ್‌ಫೀಲ್ಡ್ ಮಾರ್ಗದಲ್ಲಿ ಸಂಚಾರ ದಟ್ಟಣೆ ಕಮ್ಮಿ ಆಗುವ ಸಾಧ್ಯತೆ ಇದೆ. ಮಾರ್ಚ್ 30 ರಿಂದ ಮೆಟ್ರೋ ನಿಲ್ದಾಣದಲ್ಲಿ ಆರ್ ಬಿಎಲ್ ಬ್ಯಾಂಕ್ ರುಪೇ NCMC ಕಾರ್ಡ್ ದೊರೆಯಲಿದೆ. ಮೆಟ್ರೊದಲ್ಲಿ ಮೊದಲ ಕಾಮನ್ ಮೊಬಿಲಿಟಿ ಕಾರ್ಡ್ ಕೂಡ ಇಲ್ಲಿ ದೊರೆಯಲಿದೆ. ಒಂದೇ ಕಾರ್ಡ್ ಅನ್ನು ಬಿಎಂಟಿಸಿಯಲ್ಲೂ ಬಳಕೆಗೆ ಮಾಡುವ ಅವಕಾಶ ಸಿಗಲಿದೆ. 4500 ಕೋಟಿ ರೂ. ವೆಚ್ಚದಲ್ಲಿ ಮಾರ್ಗ ನಿರ್ಮಾಣವಾಗಿದೆ. 13.71 ಕಿಲೋಮೀಟರ್ ಇರುವ ನೂತನ ನೇರಳೆ ಮಾರ್ಗ ಇದಾಗಿದೆ. ಐಟಿ ಕಾರಿಡಾರ್‌ಗೆ ಈ ಮಾರ್ಗದಿಂದ ಅನುಕೂಲ ನಿರೀಕ್ಷಿಸಲಾಗಿದೆ.
ಮಾರತ್‌ಹಳ್ಳಿ, ಕೆಆರ್‌ಪುರಂ, ಐಟಿಪಿಎಲ್ ಸುತ್ತಮುತ್ತಲೂ ಐಟಿ ಕಂಪನಿಗಳು ಇದ್ದು, ಮೆಟ್ರೊ ರೈಲಿನ ಪರಿಣಾಮ, ಸಂಚಾರ ದಟ್ಟಣೆ ತಗ್ಗಬಹುದು. ಹೊರವಲಯದಿಂದ ನಗರಕ್ಕೆ ಬರುವವರಿಗೂ ಉತ್ತಮ ಕನೆಕ್ಟಿವಿಟಿ ಸಿಗಲಿದೆ. ಮೆಟ್ರೋದಲ್ಲಿ ವೈಟ್‌ಫೀಲ್ಡ್ – ಕೆಆರ್ ಪುರಂ ನಡುವೆ 25 ನಿಮಿಷಗಳಲ್ಲಿ ಪ್ರಯಾಣಿಸಬಹುದು. ನೂತನ ಮಾರ್ಗದಲ್ಲಿ ಪ್ರತಿನಿತ್ಯ ಕನಿಷ್ಟ 2 ಲಕ್ಷ ಜನ ಪ್ರಯಾಣಿಸುವ ನಿರೀಕ್ಷೆ ಇದೆ. ಪ್ರತಿ 12 ನಿಮಿಷಗಳಿಗೆ ಒಂದು ಟ್ರೈನ್ ಸೇವೆ ನೀಡಲು ಬಿಎಂಆರ್‌ಸಿಎಲ್ ಸಜ್ಜಾಗಿದೆ. ಪ್ರಾಥಮಿಕವಾಗಿ 7 ರೈಲುಗಳನ್ನು ಬಿಎಂಆರ್‌ಸಿಎಲ್ ಬಳಸಲಿದೆ. ಬೈಯಪ್ಪನಹಳ್ಳಿಯಿಂದ ಕೆ.ಆರ್.ಪುರಂ ನಡುವೆ 3 ಕಿಲೋ ಮೀಟರ್‌ನಷ್ಟು ಕಾಮಗಾರಿ ಪ್ರಗತಿಯಲ್ಲಿದೆ. ಹೀಗಾಗಿ 195 ಬಸ್‌ಗಳನ್ನು ಈ ಮಾರ್ಗದಲ್ಲಿ ಬಿಎಂಟಿಸಿ ಒದಗಿಸಿದೆ.