ಬೆಂಗಳೂರು: ಕಲೆಯನ್ನು ಬೆಳೆಸಬೇಕು, ಸಂಭ್ರಮಿಸಬೇಕು, ಅನುಭವಿಸಬೇಕು ಎಂಬ ಏಕೈಕ ಉದ್ದೇಶದಿಂದ ಅಂತಾರಾಷ್ಟ್ರೀಯ ಕಲಾ ಮಹೋತ್ಸವ ಆಯೋಜಿಸಲಾಗಿದೆ. ಅಂತಾರಾಷ್ಟ್ರೀಯ ಮಟ್ಟದ ಸಂಗೀತ ತಜ್ಞರನ್ನು ಕರೆಸಿ ವಿಶೇಷ ಕಾರ್ಯಕ್ರಮ ಆಯೋಜಿಸಿರುವುದು ಮೆಚ್ಚುಗೆಯ ವಿಷಯ. ಕಲೆಯನ್ನು ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಪ್ರೋತ್ಸಾಹಿಸುವ ಅಗತ್ಯವಿದೆ ಎಂದು ಸಚಿವ ಅಶ್ವತ್ಥನಾರಾಯಣ ತಿಳಿಸಿದರು.
ನಗರದ ಮಲ್ಲೇಶ್ವರದ ಚೌಡಯ್ಯ ಸ್ಮಾರಕ ಭವನದಲ್ಲಿ ಶುಕ್ರವಾರ ಮೂರು ದಿನಗಳ 15ನೇ ಆವೃತ್ತಿಯ ಅಂತಾರಾಷ್ಟ್ರೀಯ ಕಲಾ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ಕಲಾ ಮಹೋತ್ಸವದ ನಿರ್ದೇಶಕಿ, ಡಾಕ್ಟರ್ ವೀಣಾ ಮೂರ್ತಿ ವಿಜಯ್ ಮಾತನಾಡಿ, ಕರ್ನಾಟಕದ ಇಬ್ಬರು ಶ್ರೇಷ್ಠ ದಂತಕಥೆಗಳಾದ ಹಿಂದುಸ್ತಾನಿ ಸಂಗೀತ ಕ್ಷೇತ್ರದ ದಿಗ್ಗಜ ಪಂಡಿತ್ ಭೀಮಸೇನ ಜೋಶಿ ಹಾಗೂ ಮೈಸೂರು ರಾಜ ಮನೆತನದ ರಾಣಿ ವಿಜಯಾ ದೇವಿಯವರ ಜನ್ಮ ಶತಮಾನೋತ್ಸವಗಳನ್ನು ಬಹಳ ಸಂಭ್ರಮದಿಂದ ಸೆ.17 ಮತ್ತು 18ರಂದು ಆಚರಿಸುತ್ತೇವೆ. ಶನಿವಾರ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಬರಲಿದ್ದಾರೆ ಎಂದು ಹೇಳಿದರು.
ಪಂಡಿತ ರೋಣು ಮಜುಂಮ್ದಾರ್, ಡಾ. ಸ್ವೀಕಾರ್ ಕಟ್ಟಿ, ಹೃಷಿಕೇಶ್ ಮಜುಮ್ದಾರ್ ಹಾಗೂ ಪಂಡಿತ ರಾಜೇಂದ್ರ ನಾಕೋಡ, ಪಂಡಿತ್ ಪರಮೇಶ್ವರ್ ಹೆಗ್ಡೆ, ಗುರುಮೂರ್ತಿ ವೈದ್ಯ ಹಾಗೂ ಶ್ರೀ ಮಧುಸೂದನ ಭಟ್‌ರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ನೂರಾರು ಸಂಗೀತ ತಜ್ಞರು, ಸಾರ್ವಜನಿಕರು ಭಾಗಿಯಾಗಿದ್ದರು.
ಇದನ್ನೂ ಓದಿ | ಸೆ.17ರಂದು ಮಲ್ಲೇಶ್ವರದಲ್ಲಿ ಸಿಯುಪಿಎಚ್‌ಸಿ ಉದ್ಘಾಟನೆ: ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ