ಬೆಂಗಳೂರು: ಒಕ್ಕಲಿಗ ಸಮುದಾಯವು(Udyami Vokkaliga) ಕೃಷಿಯ ಜತೆಗೆ ಬದಲಾದ ಕಾಲಕ್ಕೆ ತಕ್ಕಂತೆ ಉದ್ಯಮ ರಂಗದಲ್ಲೂ ತೊಡಗಿಸಿಕೊಂಡು ಛಾಪು ಮೂಡಿಸಬೇಕು ಎಂದು ಐಟಿ ಮತ್ತು ಬಿಟಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.
ನಗರದ ಅರಮನೆ ಮೈದಾನದಲ್ಲಿ ಇದೇ ಮೊದಲ ಬಾರಿಗೆ ‘ಫಸ್ಟ್ ಸರ್ಕಲ್’ ಸಂಘಟನೆ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ರಾಜ್ಯಮಟ್ಟದ ಒಕ್ಕಲಿಗರ ಉದ್ಯಮಿಗಳ ‘ಉದ್ಯಮಿ ಒಕ್ಕಲಿಗ’ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಇದನ್ನೂ ಓದಿ | Karnataka Election 2023 | ಎರಡು ಕ್ಷೇತ್ರದಲ್ಲಿ ಸ್ಪರ್ಧಿಸುವ ಸಿದ್ದರಾಮಯ್ಯ ಆಸೆಗೆ ಡಿಕೆಶಿ ತಣ್ಣೀರು
ಸಮುದಾಯವು ಕೃಷಿಯ ಜತೆಗಿನ ಸಂಬಂಧವನ್ನು ಬಿಡಬಾರದು. ಆದರೆ ಸಮಕಾಲೀನ ಜಗತ್ತು ಬೇಡುವ ಔದ್ಯಮಿಕ ಕೌಶಲಗಳನ್ನು ಬಳಸಿಕೊಂಡು ಉದ್ಯಮಿಗಳಾಗಲು ಒಕ್ಕಲಿಗ ಸಮುದಾಯದ ಪ್ರತಿಭಾವಂತರು ಪ್ರಯತ್ನಿಸಬೇಕು. ಇದಕ್ಕೆ ಮೊದಲಿನಿಂದಲೇ ಉದ್ಯಮಶೀಲತೆಯನ್ನು ಪೋಷಿಸಬೇಕು ಎಂದು ಅವರು ಹೇಳಿದರು.
ರಾಜ್ಯದಲ್ಲಿ ಸಮುದಾಯದವರ ಸಂಖ್ಯೆ ಹೆಚ್ಚಾಗಿದೆ. ಉದ್ಯಮಶೀಲ ಮನಸ್ಸಿದ್ದರೆ ಕೃಷಿಯನ್ನು ಆಧರಿಸಿ ಹಲವು ಉದ್ದಿಮೆಗಳನ್ನು ಆರಂಭಿಸಬಹುದು. ರಾಜ್ಯದಲ್ಲಿ ಉದ್ಯಮಿಯಾಗಲು ತಕ್ಕ ಕಾರ್ಯ ಪರಿಸರವಿದೆ. ಇಲ್ಲಿ ಕೂಡ ಒಳ್ಳೆಯ ಶಿಕ್ಷಣ, ಸಂಸ್ಕಾರ, ಮೌಲ್ಯಗಳು ಪ್ರಮುಖ ಪಾತ್ರ ವಹಿಸುತ್ತವೆ. ಇದನ್ನು ಮರೆತರೆ ಸಮುದಾಯಕ್ಕೆ ಒಳ್ಳೆಯದಾಗುವುದಿಲ್ಲ ಎಂದು ಅವರು ಸಲಹೆ ನೀಡಿದರು.
ಒಕ್ಕಲಿಗ ಜನಾಂಗದ ಉತ್ಸಾಹಿಗಳು ಉದ್ಯಮಿಗಳಾಗಲು ಮುಂದೆ ಬಂದರೆ ಸರ್ಕಾರವು ಅಗತ್ಯ ಪ್ರೋತ್ಸಾಹ ನೀಡಲಿದೆ. ಇಲ್ಲಿ ವೈಯಕ್ತಿಕ ಉದ್ದೇಶಕ್ಕಿಂತ ಹೆಚ್ಚಾಗಿ ಸಾಮುದಾಯಿಕ ಹಿತದ ಬಗ್ಗೆ ಹೆಚ್ಚಿನ ಗಮನ ಇರಬೇಕು ಎಂದು ಹೇಳಿದರು.
ಬಿಬಿಎಂಪಿ ವಿಶೇಷ ಆಯುಕ್ತ ಜೈರಾಮ್ ರಾಯ್ಪುರ ಮಾತನಾಡಿ, “ಬೆಂಗಳೂರಿನಲ್ಲಿ ಪ್ರಾರಂಭಗೊಂಡ ಈ ಫರ್ಸ್ಟ್ ಸರ್ಕಲ್ ಇನ್ನೂ 25 ಜಿಲ್ಲೆಗಳಿಗೆ ವಿಸ್ತರಿಸಲಿದೆ. ಕ್ರಮೇಣ ದೇಶದ ವಿವಿಧ ರಾಜ್ಯಗಳಿಗೆ ವಿಸ್ತರಿಸಲಿದೆ. ಇನ್ನೂ 250ಕ್ಕೂ ಹೆಚ್ಚು ಉದ್ಯಮಿಗಳು ಇದರ ವ್ಯಾಪ್ತಿಗೆ ಸೇರಿಕೊಳ್ಳಲಿದ್ದಾರೆ. ಇದು ಆಂತರಿಕ ಅರ್ಥ್ಯವ್ಯವಸ್ಥೆ ಸುಧಾರಣೆಗೆ ನೆರವಾಗಲಿದೆ” ಎಂದರು.
ಕಾರ್ಯಕ್ರಮದಲ್ಲಿ ಸಚಿವ ಕೆ.ಗೋಪಾಲಯ್ಯ, ಸಂಸದ ಬಿ ಎನ್ ಬಚ್ಚೇಗೌಡ, ಮುಖ್ಯಮಂತ್ರಿಗಳ ಕಾರ್ಯದರ್ಶಿ ಜಯರಾಂ ರಾಯಪುರ ಮುಂತಾದವರು ಉಪಸ್ಥಿತರಿದ್ದರು.
ಇದನ್ನೂ ಓದಿ | Voter data | 3 ಕ್ಷೇತ್ರಗಳಲ್ಲಿ ಡಿಲೀಟ್ ಆದ ಎಲ್ಲ ಹೆಸರುಗಳ ಮರುಪರಿಶೀಲನೆಗೆ ಚು.ಆಯೋಗ ಆದೇಶ, ಇಬ್ಬರು ಅಧಿಕಾರಿಗಳ ಸಸ್ಪೆಂಡ್