Site icon Vistara News

Dinesh Gundu Rao : ರಕ್ತದಾನ ಮಾಡಿ ಜನ್ಮದಿನ ಆಚರಿಸಿಕೊಂಡ ಸಚಿವ ದಿನೇಶ್ ಗುಂಡೂರಾವ್

Dinesh gundu rao blood donation

ಬೆಂಗಳೂರು: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಅವರು ತಮ್ಮ 54ನೇ ಹುಟ್ಟುಹಬ್ಬವನ್ನು (Birthday celebration) ಅರ್ಥಪೂರ್ಣವಾಗಿ ಆಚರಿಸಿಕೊಂಡಿದ್ದಾರೆ. ಯಾವುದೇ ಅದ್ಧೂರಿ ಪಾರ್ಟಿಗಳಿಗೆ ಅವಕಾಶ ಕೊಡದೆ ತಮ್ಮ ಸಹಸ್ರಾರು ಅಭಿಮಾನಿಗಳ ಜತೆ ರಕ್ತದಾನ (Blood donation) ಮಾಡಿ ಜೀವದಾನ ಮಾಡಿ ಎಂಬ ಸಂದೇಶವನ್ನು ರವಾನೆ ಮಾಡಿದ್ದಾರೆ.

ತಮ್ಮ ಹುಟ್ಟುಹಬ್ಬವನ್ನು ಯಾರೂ ಸಹ ಅದ್ಧೂರಿಯಾಗಿ ಆಚರಿಸದಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದ ಸಚಿವರು, ಹಾರ ತುರಾಯಿ, ಗಿಫ್ಟ್‌ಗಳ ಬದಲು, ಅಂಗಾಂಗ ದಾನ ಹಾಗೂ ರಕ್ತ ದಾನ ಮಾಡುವಂತೆ ಸಲಹೆ ನೀಡಿದ್ದರು. ಅದೇ ನೀವು ನನಗೆ ಹುಟ್ಟುಹಬ್ಬಕ್ಕೆ ನೀಡುವ ನಿಜವಾದ ಗಿಫ್ಟ್ ಎಂಬ ಸಂದೇಶವನ್ನು ಅಭಿಮಾನಿಗಳಿಗೆ ನೀಡಿದ್ದರು.

ಇದನ್ನೂ ಓದಿ: Killer DJ sound: ಡಿಜೆ ಸೌಂಡ್‌ಗೆ ಇನ್ನೊಂದು ಬಲಿ! ಗಂಗಾವತಿ ಗಣೇಶ ವಿಸರ್ಜನೆ ವೇಳೆ ಯುವಕ ಸಾವು

ಕಾರ್ಯಕರ್ತರು ಹಾಗೂ ಅಭಿಮಾನಿಗಳ ಹಾರೈಕೆ ಸ್ವೀಕರಿಸಿದ ಸಚಿವರು, ನೇರವಾಗಿ ಆರೋಗ್ಯ ಸೌಧಕ್ಕೆ ಭೇಟಿ ನೀಡಿ ರಾಜ್ಯ ಮಟ್ಟದ ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆಯಲ್ಲಿ ಪಾಲ್ಗೊಂಡರು.

ಕಾರ್ಯಕ್ರಮದಲ್ಲಿ ರಕ್ತದಾನ ಮಾಡುವುದರೊಂದಿಗೆ ಸಚಿವ ದಿನೇಶ್ ಗುಂಡೂರಾವ್, ತಮ್ಮ 54ನೇ ಹುಟ್ಟುಹಬ್ಬವನ್ನು ಸರಳ ರೀತಿಯಲ್ಲಿ ಅರ್ಥಪೂರ್ಣವಾಗಿ ಆಚರಿಸಿಕೊಂಡರು. ಸ್ವತಃ ಸಚಿವರು ರಕ್ತದಾನಕ್ಕೆ ಮುಂದಾದ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ರಕ್ತದಾನ ಮಾಡಿದರು.

60ಕ್ಕೂ ಹೆಚ್ಚು ಬ್ಲಡ್ ಯೂನಿಟ್‌

ಇನ್ನು ಸಚಿವರ ಜತೆ ಕೈಜೋಡಿಸಿದ ಆರೋಗ್ಯ ಇಲಾಖೆ ಆಯುಕ್ತ ರಂದೀಪ್, ಎನ್.ಎಚ್.ಎಮ್ ಎಂ.ಡಿ ನವೀನ್ ಭಟ್ ಅವರು ಸಹ ರಕ್ತದಾನ ಮಾಡುವ ಮೂಲಕ ಗಮನ ಸೆಳೆದರು. ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆಯಲ್ಲಿ ಸುಮಾರು 60ಕ್ಕೂ ಹೆಚ್ಚು ಬ್ಲಡ್ ಯೂನಿಟ್‌ಗಳನ್ನು ಸಂಗ್ರಹಿಸಲಾಯಿತು.

ಇದನ್ನೂ ಓದಿ: HD Kumaraswamy : ಕತ್ತಲೆ ಭಾಗ್ಯ 6ನೇ ಗ್ಯಾರಂಟಿ; ನವರಾತ್ರಿಗೆ ಮೊದಲೇ ಕರಾಳ ರಾತ್ರಿ ಎಂದ HDK

ಅರ್ಥಪೂರ್ಣ ಕಾರ್ಯ ನಮ್ಮದಾಗಲಿ

ಈ ವೇಳೆ ಮಾತನಾಡಿದ ದಿನೇಶ್‌ ಗುಂಡೂರಾವ್‌, ನಾವು ಇಡುವ ಹೆಜ್ಜೆ ಪ್ರತಿಯೊಬ್ಬರಿಗೂ ಮಾದರಿಯಾಗಬೇಕು. ನಾವು ಮಾಡುವುದನ್ನು ನಮ್ಮ ಮುಂದಿನವರು ಮಾಡುತ್ತಾರೆ. ಒಬ್ಬರನ್ನು ನೋಡಿ ಒಬ್ಬರು ಅನುಕರಿಸುವುದು ಈ ಸಮಾಜದಲ್ಲಿ ನಡೆದುಕೊಂಡು ಬಂದ ಪರಿಪಾಠ. ಸಮಾಜವನ್ನು ಬದಲಾಯಿಸುವ ಮೊದಲು ನಾವು ಪರಿವರ್ತನೆಯ ಹೆಜ್ಜೆಯನ್ನಿಡಬೇಕು. ಈ ನಿಟ್ಟಿನಲ್ಲಿ ಅರ್ಥಪೂರ್ಣವಾದ ಕಾರ್ಯದಲ್ಲಿ ನಾವು ತೊಡಗಬೇಕು. ಅಲ್ಲದೆ, ನನ್ನ ಜನ್ಮದಿನ ಸಂಬಂಧ ಯಾವುದೇ ಅದ್ಧೂರಿ ಆಚರಣೆ ಬೇಡ ಎಂದು ನಾನೇ ಹೇಳಿದ್ದೆ. ಅದರ ಬದಲಿಗೆ ರಕ್ತದಾನ, ಅಂಗಾಂಗ ದಾನಗಳಗಳಂತಹ ಮಹತ್ಕಾರ್ಯಕ್ಕೆ ಕೈಜೋಡಿಸಿ ಎಂದು ಕೇಳಿಕೊಂಡಿದ್ದೆ. ನನ್ನ ಮನವಿಗೆ ಓಗೊಟ್ಟು ನನ್ನ ಹಿತೈಷಿಗಳು, ಕಾರ್ಯಕರ್ತರು ಇಂದು ರಕ್ತದಾನ ಮಾಡಿದ್ದಾರೆ. ಎಲ್ಲರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು ಎಂದು ತಿಳಿಸಿದ್ದಾರೆ.

Exit mobile version