Site icon Vistara News

MB Patil: ಮೆಟ್ರೋದಲ್ಲಿ ಸಾಮಾನ್ಯರಂತೆ ಪ್ರಯಾಣಿಸಿ ಖುಷಿಪಟ್ಟ ಸಚಿವ ಎಂ.ಬಿ. ಪಾಟೀಲ್

Minister MB Patil

ಬೆಂಗಳೂರು: ನಮ್ಮ ಮೆಟ್ರೋದಲ್ಲಿ ಸಾಮಾನ್ಯರಂತೆ ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್‌ (MB Patil) ಅವರು ಬುಧವಾರ ಪ್ರಯಾಣಿಸಿ ಗಮನ ಸೆಳೆದರು. ಕೆಂಗೇರಿ ಸಮೀಪದ ಮೈಲಸಂದ್ರ- ಶ್ರೀನಿವಾಸಪುರದಲ್ಲಿ ಬುಧವಾರ ಆಯೋಜಿಸಿದ್ದ ಜೆಎಸ್ಎಸ್ ಶಿಕ್ಷಣ ಸಂಸ್ಥೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ವಿಧಾನಸೌಧದಿಂದ ಕೆಂಗೇರಿ ಬಸ್ ಟರ್ಮಿನಲ್‌ವರೆಗೆ `ನಮ್ಮ ಮೆಟ್ರೋ’ದಲ್ಲಿ ಪ್ರಯಾಣ ಮಾಡಿ, ಖುಷಿ ಅನುಭವಿಸಿದರು.

ಈ ಬಗ್ಗೆ ಮಾತನಾಡಿದ ಸಚಿವರು, `ದೇಶದ ಬೇರೆ ಬೇರೆ ಭಾಗಗಳಲ್ಲಿ ನಾನು ಮೆಟ್ರೋದಲ್ಲಿ ಸಂಚರಿಸಿ, ಅನುಭವ ಪಡೆದಿದ್ದೇನೆ. ಆದರೆ, ಬೆಂಗಳೂರಿನಲ್ಲಿ ನಮ್ಮ ಮನೆಗೆ ಹತ್ತಿರದಲ್ಲಿ ಇನ್ನೂ ಮೆಟ್ರೋ ಬಂದಿಲ್ಲ. ಹೀಗಾಗಿ, ನಮ್ಮ ರಾಜಧಾನಿಯಲ್ಲಿ ಈವರೆಗೆ ಮೆಟ್ರೋದಲ್ಲಿ ಸಂಚರಿಸುವ ಅವಕಾಶ ಸಿಕ್ಕಿರಲಿಲ್ಲ. ಇವತ್ತು ವಾರದ ದಿನವಾದ್ದರಿಂದ ಸಂಚಾರ ದಟ್ಟಣೆ ಇರುತ್ತದೆ ಎನ್ನುವುದು ಗೊತ್ತಿತ್ತು. ಹೀಗಾಗಿ, ಮೊದಲೇ ನಮ್ಮ ಮೆಟ್ರೋದಲ್ಲಿ ಸಂಚರಿಸಲು ನಿರ್ಧರಿಸಿದ್ದೆ. ಇದರಂತೆ ವಿಧಾನಸೌಧದಿಂದ ಮೈಲಸಂದ್ರಕ್ಕೆ ಕೇವಲ 30 ನಿಮಿಷಗಳಲ್ಲಿ ತಲುಪಿದೆ. ಮುಂದಿನ ದಿನಗಳಲ್ಲಿ ನಮ್ಮ ಮೆಟ್ರೋ ನಗರದ ಜೀವನಾಡಿಯಾಗಲಿದೆ’ ಎಂದು ಹರ್ಷ ವ್ಯಕ್ತಪಡಿಸಿದರು.

ಪ್ರಯಾಣದುದ್ದಕ್ಕೂ ಸಹ ಪ್ರಯಾಣಿಕರ ಜತೆ ಮಾತನಾಡಿಕೊಂಡು, ನಮ್ಮ ಮೆಟ್ರೋದ ಬಗ್ಗೆ ಕೇಳಿಕೊಂಡು ಬಂದೆ. ಪ್ರತಿಯೊಬ್ಬರೂ ಇದರಿಂದ ಸುಗಮ ಸಂಚಾರ ಸಾಧ್ಯವಾಗಿದೆ ಎಂದು ಹೇಳಿದರು. ಸಂಚಾರ ದಟ್ಟಣೆಯ ಸಮಸ್ಯೆ ಆಧುನಿಕ ನಗರಗಳ ಭಾಗವಾಗಿ ಬಿಟ್ಟಿದೆ. ಮೆಟ್ರೋ ಸೌಲಭ್ಯವು ನಗರದ ಸಂಚಾರ ವ್ಯವಸ್ಥೆಯ ರೂಪುರೇಷೆಗಳನ್ನೇ ಆಮೂಲಾಗ್ರವಾಗಿ ಬದಲಿಸುತ್ತಿದೆ. ಇದರಿಂದ ಬೆಂಗಳೂರಿನ ಉತ್ಪಾದಕತೆ ಗಣನೀಯವಾಗಿ ಹೆಚ್ಚಲಿದೆ. ಜತೆಗೆ ಇದು ಶಬ್ದ, ಧೂಳು ಮತ್ತು ವಾಯು ಮಾಲಿನ್ಯ ನಿಯಂತ್ರಣಕ್ಕೆ ಪರಿಹಾರವಾಗಿದೆ. ಅಲ್ಲದೆ, ಆರೋಗ್ಯದ ಸಮಸ್ಯೆಗಳಿಂದಲೂ ತಕ್ಕ ಮಟ್ಟಿಗೆ ಪಾರಾಗಬಹುದು ಎಂದು ಎಂ.ಬಿ. ಪಾಟೀಲ್‌ ವಿವರಿಸಿದರು.

ಇದನ್ನು ಓದಿ | Asian Games 2023 : ಕ್ರೀಡಾಪಟುಗಳಿಗೆ ಎಲ್ಲ ಇಲಾಖೆಗಳ ಉದ್ಯೋಗದಲ್ಲಿ ಮೀಸಲು; ಸಿಎಂ ಭರವಸೆ

ನಮ್ಮ ಮೆಟ್ರೋ ರೈಲಿನಿಂದ ಕೆಂಗೇರಿಯಲ್ಲಿ ಇಳಿದ ಅವರು, ಅಲ್ಲಿಂದ ಮುಂದಕ್ಕೆ ಜೆಎಸ್ಎಸ್ ತಾಂತ್ರಿಕ ಶಿಕ್ಷಣ ಅಕಾಡೆಮಿಯ ಕಾರ್ಯಕ್ರಮಕ್ಕೆ ತೆರಳಿದರು.

ಇವಿ ಮೊಬಿಲಿಟಿ ಸೆಂಟರ್ ಆಫ್ ಎಕ್ಸಲೆನ್ಸ್ ಆ್ಯಂಡ್‌ ಇನ್ನೋವೇಷನ್ ಉದ್ಘಾಟನೆ

ಕೆಂಗೇರಿಯ ಜೆಎಸ್‌ಎಸ್‌ ತಾಂತ್ರಿಕ ಶಿಕ್ಷಣ ಅಕಾಡೆಮಿಯ ಬೆಳ್ಳಿ ಮಹೋತ್ಸವದಲ್ಲಿ ಸಚಿವ ಎಂ.ಬಿ.ಪಾಟೀಲ್‌ ಭಾಗವಹಿಸಿದ್ದರು. ಈ ವೇಳೆ ಡಸಾಲ್ಟ್ ಸಹಯೋಗದಲ್ಲಿ ನಿರ್ಮಿಸಿರುವ ವಿದ್ಯುತ್ ವಾಹನ ‘ಮೊಬಿಲಿಟಿ ಸೆಂಟರ್ ಆಫ್ ಎಕ್ಸಲೆನ್ಸ್ ಆ್ಯಂಡ್‌ ಇನ್ನೋವೇಷನ್’ ಕೇಂದ್ರವನ್ನು ಸುತ್ತೂರು ಕ್ಷೇತ್ರದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಉದ್ಘಾಟಿಸಿದರು.

ಎಲೆಕ್ಟ್ರಿಕ್ ವಾಹನ(EV) ಉತ್ಪಾದನಾ ವಲಯದಲ್ಲಿ ಉದ್ಯೋಗ ಸೃಷ್ಟಿ ಮತ್ತು ಕೈಗಾರಿಕಾ ಬೆಳವಣಿಗೆಗೆ ಅತಿ ಹೆಚ್ಚಿನ ಅವಕಾಶಗಳು ಲಭ್ಯವಿದೆ. ಉದ್ದಿಮೆದಾರರ ಸಹಯೋಗದಿಂದ, ನಮ್ಮಸರ್ಕಾರ ಲಭ್ಯವಿರುವ ಎಲ್ಲ ಅವಕಾಶಗಳನ್ನು ಬಳಸಿಕೊಂಡು, EV ಕ್ಷೇತ್ರವನ್ನು ಕ್ರಿಯಾಶೀಲವಾಗಿ ನಡೆಸಿ, ರಾಜ್ಯಕ್ಕೆ ಉತ್ತಮ ಭವಿಷ್ಯವನ್ನು ರೂಪಿಸಲಿದೆ ಎಂದು ಸಚಿವ ಎಂ.ಬಿ. ಪಾಟೀಲ್‌ ತಿಳಿಸಿದ್ದಾರೆ.

ಇದನ್ನೂ ಓದಿ | HD Deve Gowda: ಎಚ್‌.ಡಿ. ದೇವೇಗೌಡರಿಗೆ ಬೆಂಗಳೂರು ವಿವಿಯಿಂದ ಗೌರವ ಡಾಕ್ಟರೇಟ್‌ ಪ್ರದಾನ

ಡಸಾಲ್ಟ್ ಸಿಸ್ಟಂ ಸಂಸ್ಥೆಯ ಎಂ.ಡಿ. ಎನ್.ಜಿ. ದೀಪಕ್, ಜೆಎಸ್‌ಎಸ್‌ ಹಾಗೂ ಡಸಾಲ್ಟ್ ಸಂಸ್ಥೆಯ ಹಲವರು ಪಾಲ್ಗೊಂಡಿದ್ದರು.

Exit mobile version