ಬೆಂಗಳೂರು: ರಾಜ್ಯ ಮತ್ತು ಕೇಂದ್ರದಲ್ಲಿರುವುದು ಲಂಚ-ಮಂಚದ ಸರ್ಕಾರ ಎಂಬ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆ ಬಗ್ಗೆ ಆಕ್ರೋಶ ಜೋರಾಗಿದೆ. ʻಈ ಹೇಳಿಕೆಯನ್ನು ನಾನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದೇನೆ, ಸಮಾಜ ಪರಿಗಣಿಸಿದೆ, ಅವರ ಹೇಳಿಕೆ ಅತ್ಯಂತ ಖಂಡನೀಯʼ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಧಾರವಾಡದಲ್ಲಿ ಹೇಳಿದ್ದಾರೆ.
ʻʻದೇಶದಲ್ಲಿ ಸಂಸ್ಕೃತಿ ಇದೆ. ಅಕ್ಕ ತಂಗಿ, ತಾಯಂದಿರ ಬಗ್ಗೆ ಶ್ರದ್ಧೆ ಇರುವ ದೇಶ ನಮ್ಮದು. ಈ ಹೇಳಿಕೆ ಅತ್ಯಂತ ಖಂಡನೀಯ. ಇಡೀ ದೇಶದಲ್ಲಿ ಭ್ರಷ್ಟಾಚಾರದ ಮೊಟ್ಟೆ ಇಟ್ಟು ಕಾವು ಕೊಟ್ಟು ಮರಿ ಮಾಡಿದವರೇ ಇವರು. ಇವರ ಅಧಿಕಾರಾವಧಿಯ 10 ವರ್ಷದಲ್ಲಿ ಏನಾಗಿತ್ತು? ಕೇಂದ್ರ ಸರ್ಕಾರದಲ್ಲಿ 2ಜಿ, ಕಾಮನ್ವೆಲ್ತ್ ಹಗರಣ, ಕಲ್ಲಿದ್ದಲು ಹಗರಣ.. ಒಂದೇ ಎರಡೇ. ಭಾರತ ದೇಶಕ್ಕೆ ಬರುವ ಜನರ ವೀಸಾಕ್ಕೂ ಹಣ ಪಡೆದಿದ್ದಾರೆ. ಇಂತಹದ್ದೊಂದು ಅಯೋಗ್ಯ ಪಾರ್ಟಿ ಕಾಂಗ್ರೆಸ್. ಭ್ರಷ್ಟಾಚಾರದ ಬಗ್ಗೆ ಈಗ ಮಾತನಾಡುತ್ತಾರೆ ಅಂದರೆ ನಗು ಬರುತ್ತದೆ. ಅವರು ಕೂಡಲೇ ಕ್ಷಮೆ ಕೇಳಬೇಕುʼʼ ಎಂದು ಜೋಶಿ ಹೇಳಿದರು.
ಇದನ್ನೂ ಓದಿ | ಲಂಚ-ಮಂಚದ ಖರ್ಗೆ ಹೇಳಿಕೆ ವಿಚಾರ: ನಾಲಿಗೆ ಮೇಲೆ ಹಿಡಿತ ಇಟ್ಟುಕೊಳ್ಳಿ ಎಂದ ಕೆ.ಜಿ ಬೋಪಯ್ಯ
ಪರೇಶ್ ಮೇಸ್ತಾ ಹತ್ಯೆ ಪ್ರಕರಣದ ಆರೋಪಿಗೆ ವಕ್ಫ್ ಮಂಡಳಿ ಉಪಾಧ್ಯಕ್ಷತೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ʻʻಈ ಹೆಸರು ಹೇಗೆ ಬಂತು ಎನ್ನುವುದರ ಬಗ್ಗೆ ಪರಿಶೀಲಿಸಿ ಸಂಬಂಧಿಸಿದವರು ಯಾರು ಸೂಕ್ತ ಕ್ರಮ ಕೈಗೊಳ್ಳಲು ನಾನು ಹೇಳಿದ್ದೇನೆ. ಶಶಿಕಲಾ ಜೊಲ್ಲೆ ಅವರಿಗೂ ಈ ಕುರಿತು ಕರೆ ಮಾಡಿ ಹೇಳಿದ್ದೇನೆ. ಎಲ್ಲಿ ತಪ್ಪಾಗಿದೆ, ಎಲ್ಲಿ ಲೋಪ ಆಗಿದೆ ಸಹಿ ಯಾರು ಪಡೆದವರು, ಯಾರಿಂದ ಆಗಿದೆ ಅದರ ಬಗ್ಗೆ ಪರಿಶೀಲಿಸಿ ಮಾಹಿತಿ ನೀಡಿ ಎಂತಲೂ ಹೇಳಿದ್ದೇನೆʼʼ ಎಂದರು.
ಇದನ್ನೂ ಓದಿ | ಇದು ಲಂಚ, ಮಂಚದ ಸರಕಾರ ಎಂದ ಪ್ರಿಯಾಂಕ ಖರ್ಗೆ, ಏನಿದು ಗಂಭೀರ ಆರೋಪ