ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ ಬಾನೆತ್ತರಕ್ಕೆ ತಲೆ ಎತ್ತಿ ನಿಂತಿರುವ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಬೃಹತ್ ಕಂಚಿನ ಪ್ರತಿಮೆ ಲೋಕಾರ್ಪಣೆಗೆ ದಿನಗಣನೆ ಶುರುವಾಗಿದೆ. ನ.11ರಂದು ಪ್ರತಿಮೆ ಲೋಕಾರ್ಪಣೆಗೆ ಪ್ರಧಾನಿ ಮೋದಿ ಅವರು ಆಗಮಿಸಲಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮ ಹಾಗೂ ಬಹಿರಂಗ ಸಮಾವೇಶ ನಡೆಯುವ ಸ್ಥಳವನ್ನು ಸಚಿವರಾದ ಡಾ. ಸಿ ಎನ್.ಅಶ್ವತ್ಥ ನಾರಾಯಣ, ಆರ್. ಅಶೋಕ್ ಹಾಗೂ ಡಾ. ಕೆ. ಸುಧಾಕರ್ ಶನಿವಾರ ಪರಿಶೀಲನೆ ನಡೆಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಲಹೆಯಂತೆ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿದ ಇವರು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಪ್ರತಿಷ್ಠಾಪಿಸುತ್ತಿರುವ ಜಾಗ ಹಾಗೂ ಪ್ರಧಾನಿ ಮೋದಿ ಅವರ ಸಭೆ ನಡೆಯುವ ಸ್ಥಳವನ್ನು ಕೂಲಂಕಷವಾಗಿ ವೀಕ್ಷಿಸಿದರು.
ಇದನ್ನೂ ಓದಿ | Rojgar mela | ಒಂದೇ ಒಂದು ರೂಪಾಯಿ ಕೊಡದೆ ಸರ್ಕಾರಿ ಉದ್ಯೋಗ ಸಿಗುವ ಸ್ಥಿತಿ ಸೃಷ್ಟಿಯಾಗಿದೆ ಎಂದ ಪ್ರಲ್ಹಾದ್ ಜೋಶಿ
ಮೋದಿ ಅವರ ಸಾರ್ವಜನಿಕ ಸಭೆಯನ್ನು ಎಲ್ಲಿ ನಡೆಸಿದರೆ ಸೂಕ್ತವೆನ್ನುವ ಉದ್ದೇಶದಿಂದ ಪ್ರತಿಮೆಯ ಹತ್ತಿರದಲ್ಲೇ ಇರುವ 40 ಎಕರೆ ವಿಸ್ತೀರ್ಣದ ‘ಅರೇನಾ’ ಪರಿಸರ ಮತ್ತು ಏರ್ ಪೋರ್ಟ್ ರೈಲು ನಿಲ್ದಾಣದ ಬಳಿ ಇರುವ ಸ್ಥಳಗಳೆರಡನ್ನೂ ಸಚಿವರು ಪರಿಶೀಲಿಸಿದರು.
ಸಚಿವ ಡಾ. ಸಿ.ಎನ್.ಅಶ್ವತ್ಥನಾರಾಯಣ ಮಾತನಾಡಿ “”ರೈಲು ನಿಲ್ದಾಣ ಇರುವ ಪ್ರದೇಶವು ಪ್ರತಿಮೆಗೆ ತುಂಬಾ ದೂರದಲ್ಲಿದೆ. ಅಲ್ಲಿ ಪ್ರತಿಮೆ ಕೂಡ ಕಾಣುವುದಿಲ್ಲ. ಆದರೆ, ಅರೇನಾ ಜಾಗಕ್ಕೆ ಪ್ರತಿಮೆ ಕಾಣಿಸುತ್ತದೆ. ಹೀಗಾಗಿ ಈ ಸ್ಥಳವನ್ನು ಅಂತಿಮ ಮಾಡಲು ಸಿಎಂ ಅವರ ಜತೆ ಚರ್ಚಿಸಲಾಗುತ್ತದೆʼʼ ಎಂದು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ. ಕೆ. ಸುಧಾಕರ್ ಮಾತನಾಡಿ “ಪ್ರಗತಿಯ ಪ್ರತಿಮೆʼ ಅನಾವರಣ ಕಾರ್ಯಕ್ರಮಕ್ಕೆ ಆಗಮಿಸಲಿರುವ ಪ್ರಧಾನಿ ಮೋದಿ ಅವರು ಏರ್‌ಪೋರ್ಟ್‌ನಲ್ಲಿ ನಿರ್ಮಾಣ ಮಾಡಲಾಗಿರುವ ಅತ್ಯಾಧುನಿಕ ತಂತ್ರಜ್ಞಾನದ ಹಚ್ಚ ಹಸಿರಿನ ಹೊಸ 2ನೇ ಟರ್ಮಿನಲ್ ಅನ್ನು ಸಹ ಲೋಕಾರ್ಪಣೆಗೊಳಿಸಲಿದ್ದಾರೆ. 2 ಲಕ್ಷ ಜನರನ್ನು ಸೇರಿಸಿ ಬೃಹತ್ ಕಾರ್ಯಕ್ರಮ ನಡೆಸಲಾಗುವುದು. ಪ್ರಯಾಣಿಕರು ಮತ್ತು ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಾರ್ಯಕ್ರಮ ನಡೆಸಲಾಗುವುದು ಎಂದು ಹೇಳಿದರು.
ಕಂದಾಯ ಸಚಿವ ಆರ್. ಅಶೋಕ್ ಮಾತನಾಡಿ “”ವಿದೇಶಿ ಪ್ರವಾಸಿಗರಿಗೆ ಕೆಂಪೇಗೌಡರ ಬಗ್ಗೆ ತಿಳಿಸಲು ಕೇಂದ್ರ ಸರ್ಕಾರದ ಅನುಮತಿಯೊಂದಿಗೆ ಕೆಂಪೇಗೌಡ ಪ್ರತಿಮೆ ನಿರ್ಮಾಣ ಮಾಡಲಾಗಿದೆ. ಕೆಂಪೇಗೌಡರು ಕೇವಲ ಒಂದು ಜಾತಿಗೆ ಸೀಮಿತರಲ್ಲ. ಈ ಐತಿಹಾಸಿಕ ಕಾರ್ಯಕ್ರಮಕ್ಕೆ 2 ಲಕ್ಷ ಜನ ಆಗಮಿಸುವ ನಿರೀಕ್ಷೆ ಇದೆ, ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆ ನಡೆಯುತ್ತಿದೆʼʼ ಎಂದರು.
23 ಎಕರೆಯಲ್ಲಿ ಬೃಹತ್ ಪಾರ್ಕ್
2008ರಲ್ಲಿ ದೇವನಹಳ್ಳಿ ಬಳಿ ಬೆಂಗಳೂರು ಅಂತಾರಾಷ್ಟ್ರಿಯ ವಿಮಾನ ನಿಲ್ದಾಣವಾದ ನಂತರ ಏರ್‌ಪೋರ್ಟ್‌ಗೆ ನಾಡಪ್ರಭು ಕೆಂಪೇಗೌಡರ ಹೆಸರು ಇಡಲಾಗಿತ್ತು. ಆದರೆ ದೇಶ ವಿದೇಶಗಳಿಂದ ಆಗಮಿಸುವ ಪ್ರಯಾಣಿಕರಿಗೆ ಕೆಂಪೇಗೌಡರ ಬಗ್ಗೆ ಪರಿಚಯಿಸಲು ಸರ್ಕಾರ ಬೃಹತ್ ಕಂಚಿನ ಕೆಂಪೇಗೌಡರ ಪ್ರತಿಮೆಯನ್ನು ನಿರ್ಮಾಣ ಮಾಡಿದೆ. 65 ಕೋಟಿ ರೂ. ವೆಚ್ಚದಲ್ಲಿ 108 ಅಡಿ ಎತ್ತರದ ಪ್ರತಿಮೆ ನಿರ್ಮಾಣ ಮಾಡಲಾಗಿದೆ.
ಕಂಚಿನಿಂದ ನಿರ್ಮಾಣವಾಗಿರುವ ಕೆಂಪೇಗೌಡರ ಪ್ರತಿಮೆ ಮುಂಭಾಗ 23 ಎಕರೆಯಲ್ಲಿ ಬೃಹತ್ ಪಾರ್ಕ್ ಸೇರಿದಂತೆ ಕೆಂಪೇಗೌಡರ ಜೀವನಗಾಥೆ ತಿಳಿಸುವ ಥೀಮ್ ಪಾರ್ಕ್ ನಿರ್ಮಾಣಕ್ಕೂ ಮೂರು ತಿಂಗಳ ಹಿಂದೆ ಚಾಲನೆ ನೀಡಲಾಗಿತ್ತು. ಪ್ರತಿಮೆ ಮುಂಭಾಗದ ಪಾರ್ಕ್‌ಗೆ ರಾಜ್ಯ ವಿವಿಧ ಮೂಲೆಗಳಿಂದ ಮಣ್ಣು ಮತ್ತು ನೀರನ್ನು ತರಿಸಿ ಹಾಕಲಾಗುತ್ತಿದೆ. ಥೀಮ್ ಪಾರ್ಕ್ ನಿರ್ಮಾಣ ವಿಳಂಬವಾದ ಕಾರಣ ಇದೀಗ ಪ್ರತಿಮೆಯನ್ನು ನ.11ಕ್ಕೆ ನರೇಂದ್ರ ಮೋದಿ ಅವರು ಲೋಕಾರ್ಪಣೆಗೊಳಿಸಲಿದ್ದಾರೆ.
ಇದನ್ನೂ ಓದಿ | GIM 2022 | ನ.2ರಿಂದ ನಡೆಯುವ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಭರದ ಸಿದ್ಧತೆ; ಪ್ರಧಾನಿ ಮೋದಿ ಉದ್ಘಾಟನೆ