ಬೆಂಗಳೂರು: ನಗರದಲ್ಲಿ ಕಾಣೆಯಾಗುತ್ತಿರವ ಮಕ್ಕಳ ಸಂಖ್ಯೆ ಹೆಚ್ಚುತ್ತಲೇ ಇದೆ. ಮನೆ ಮುಂದೆ ಆಟವಾಡುತ್ತಿದ್ದ ಮಕ್ಕಳು ಕ್ಷಣ ಮಾತ್ರದಲ್ಲಿ ಕಣ್ಮರೆಯಾಗುತ್ತಿದ್ದಾರೆ. ಇದೇ ರೀತಿ ರಾಮಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 10 ವರ್ಷದ ಬಾಲಕನೊರ್ವ ನಾಪತ್ತೆಯಾಗಿದ್ದು, (Missing case) ಪೋಷಕರು ಕಣ್ಣೀರು ಹಾಕುತ್ತಿದ್ದಾರೆ.
ಸಿದ್ದರಾಮಪ್ಪ ಎಂಬ ಬಾಲಕ ತನ್ನ ಸ್ನೇಹಿತರೊಟ್ಟಿಗೆ ಮನೆಯ ಮುಂದೆ ಆಟವಾಡುತ್ತಿದ್ದ. ಆದರೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾನೆ. ರಾತ್ರಿ ಕಳೆದರೂ ಮನೆಗೆ ಬಾರದೇ ಇದ್ದಾಗ ಪೋಷಕರು ಹುಡುಕಾಡಿದ್ದಾರೆ. ಆದರೆ ಹುಡುಕಿ ಸುಸ್ತಾದರೆ ವಿನಃ, ಮಗನ ಸುಳಿವು ಮಾತ್ರ ಸಿಕ್ಕಿಲ್ಲ. ನಮ್ಮ ಮಗನನ್ನು ಹುಡುಕಿ ಕೊಡಿ ಎಂದು ಪರಿ ಪರಿಯಾಗಿ ಬೇಡಿಕೊಳ್ಳುತ್ತಿರುವ ಪೋಷಕರು ಕಣ್ಣೀರು ಹಾಕುತ್ತಿದ್ದಾರೆ.
ಇದನ್ನೂ ಓದಿ: ಹನುಮ ಧ್ವಜ: ಬೈಕ್ ರ‍್ಯಾಲಿಗೆ ಸೀಮಿತವಾದ ಮಂಡ್ಯ ಬಂದ್; ದೂರ ಉಳಿದ ಬಿಜೆಪಿ, ಜೆಡಿಎಸ್
ತಾರಮ್ಮ ಹಾಗೂ ಭೀಮ್ಸಪ್ಪ ದಂಪತಿಯ ಪುತ್ರ ಸಿದ್ದರಾಮಪ್ಪ (10). ಯಾದಗಿರಿ ಮೂಲದ ಈ ದಂಪತಿ ಬೆಂಗಳೂರಲ್ಲಿ ಬಂದು ಗಾರೆ ಕೆಲಸ ಮಾಡಿ ಜೀವನದ ಬಂಡಿ ಸಾಗಿಸುತ್ತಿದ್ದರು. ಊರಲ್ಲಿ ಓದುತ್ತಿದ್ದ ಸಿದ್ದರಾಮಪ್ಪನನ್ನು ಕರೆತಂದು ಜತೆಗೆ ಇಟ್ಟುಕೊಂಡಿದ್ದರು. ಊರಿನ ಶಾಲೆಯಲ್ಲಿ ಟಿಸಿ ಕೊಡಲಿಲ್ಲ ಎಂದು ಬೆಂಗಳೂರಿನಲ್ಲಿ ಶಾಲೆಗೆ ಸೇರಿಸದೇ ಮನೆಯಲ್ಲಿಯೇ ಇರಿಸಿದ್ದರು.
ಕಳೆದ ಜನವರಿ 24ರ ಸಂಜೆ 6.30ಕ್ಕೆ ಮಕ್ಕಳ ಜತೆಗೆ ಆಟವಾಡುತ್ತಿದ್ದ ಸಿದ್ದರಾಮಪ್ಪ ಏಕಾಏಕಿ ಕಾಣೆಯಾಗಿದ್ದಾನೆ. ಎಲ್ಲಿ ಹೋಗಿದ್ದನೋ ಎಂದು ತಿಳಿಯದೇ ಪೋಷಕರು ಕಂಗಲಾಗಿದ್ದಾರೆ. ಘಟನೆಗೆ ಸಂಬಂಧ ಪಟ್ಟಂತೆ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ಬಗ್ಗೆ ದೂರು ಕೂಡ ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಿಸಿಟಿವಿ ದೃಶ್ಯ ಪರಿಶೀಲಿಸಿದ್ದು, ನಿರಂತರ ಹುಡುಕಾಟ ನಡೆಸುತ್ತಿದ್ದಾರೆ. ಮತ್ತೊಂದು ಕಡೆ ಕುಟುಂಬಸ್ಥರು ಸಾಥ್ ನೀಡಿದ್ದಾರೆ. ಮನೆ ಬಳಿ ಆಟವಾಡುತ್ತಿದ್ದ ಎಂಬುದು ಬಿಟ್ಟರೆ ಮತ್ತೆ ಯಾವುದೇ ಸಣ್ಣ ಸುಳಿವು ಕೂಡ ಸಿಕ್ಕಿಲ್ಲ. ಇದರಿಂದ ಪೋಷಕರು ಹೆದರಿದ್ದು, ಮಗ ಎಲ್ಲಿದ್ದಾನೊ.. ಏನು ಮಾಡುತ್ತಿದ್ದನೋ ಎಂಬ ಆತಂಕದಲ್ಲಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣ ಹಾಗೂ ಪಾಂಪ್ಲೆಂಟ್‌ಗಳನ್ನು ಮಾಡಿ ಹಂಚುತ್ತಿರುವ ಕುಟುಂಬಸ್ಥರು, ಮಗನನ್ನು ಹುಡುಕಿಕೊಡಿ ಎಂದು ಬೇಡಿಕೊಂಡಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ