ಬೆಂಗಳೂರು: ಬೆಂಗಳೂರಿನಲ್ಲಿ ಮಳೆಯಿಂದ ಅನಾಹುತಕ್ಕೀಡಾಗಿರುವ ಪ್ರದೇಶವಾದ ವರ್ತೂರು ಕೆರೆ ಕೋಡಿಯನ್ನು ಶಾಸಕ ಅರವಿಂದ್ ಹಾಗೂ ಇತರರು ವೀಕ್ಷಣೆ ಮಾಡುತ್ತಿದ್ದ ಸಂದರ್ಭದಲ್ಲಿ ಮಹಿಳೆಯೊಬ್ಬರಿಗೆ ಶಾಸಕರು ಆವಾಜ್ ಹಾಕಿದ ಘಟನೆ ನಡೆದಿದೆ.
ಓರ್ವ ಮಹಿಳೆ ಶಾಸಕ ಅರವಿಂದ್ ಲಿಂಬಾವಳಿ ಅವರಿಗೆ ಮನವಿ ನೀಡಲು ಗುರುವಾರ ಮದ್ಯಾಹ್ನ ಬಂದರು. ಆಗ ಶಾಸಕರು ಆ ಮಹಿಳೆಗೆ ಆವಾಜ್ ಹಾಕಿದ ದೃಶ್ಯ ಕಂಡುಬಂದಿದೆ. ಮಹಿಳೆ ನೀಡಲು ಬಂದ ಮನವಿ ಪತ್ರವನ್ನು ಕಸಿದುಕೊಂಡು ಕೂಗಾಡಿದ್ದಾರೆ. ʼನಿಂಗೆ ಮಾನ ಮರ್ಯಾದೆ ಇದೀಯಾ? ನಾಚಿಕೆ ಅಗಲ್ವಾ ನಿಂಗೆ?ʼ ಎಂದು ಆವಾಜ್ ಹಾಕಿ ನಂತರ ಮಹಿಳೆಯನ್ನು ಸ್ಟೇಷನ್ ಗೆ ಕರೆದುಕೊಂಡು ಹೋಗಲು ಪೊಲೀಸರಿಗೆ ಹೇಳಿದ್ದಾರೆ.
ಶಾಸಕರ ಈ ವರ್ತನೆ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಹವಾಲು ಸಲ್ಲಿಸಲು ಬಂದಿದ್ದ ನಾಗರಿಕರ ಮೇಲೆ ಜನಪ್ರತಿನಿಧಿಯೊಬ್ಬರು ಈ ರೀತಿ ಕೂಗಾಡುವುದು, ಬೆದರಿಕೆ ಹಾಕುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ಜನಪ್ರತಿನಿಧಿಗಳಾದವರು ಸಾರ್ವಜನಿಕ ಜೀವನದಲ್ಲಿ ವ್ಯವಹರಿಸುವಾಗ ತಾಳ್ಮೆ, ಸಂಯಮದಿಂದ ವರ್ತಿಸಬೇಕು. ಅದು ಬಿಟ್ಟು ಈ ರೀತಿ ಆವಾಜ್ ಹಾಕುವುದು ಸಮಂಜಸವಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.