Site icon Vistara News

Modi Caste Politics : ಮೋದಿ ಜಾತಿ ಬಗ್ಗೆ ರಾಹುಲ್‌ ಹಸಿ ಸುಳ್ಳು; ದಾಖಲೆ ನೀಡಿದ ಪ್ರಲ್ಹಾದ್‌ ಜೋಶಿ

Narendra Modi Caste

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಇತರ ಹಿಂದುಳಿದ ವರ್ಗದಲ್ಲಿ (Other Backward Class) ಹುಟ್ಟಿದವರಲ್ಲ. ಅವರು ಮೇಲ್ಜಾತಿಯಲ್ಲಿ ಹುಟ್ಟಿದವರು. ಹೀಗಾಗಿಯೇ ಅವರು ಜಾತಿಗಣತಿಯನ್ನು (Caste Census) ವಿರೋಧಿಸುತ್ತಿದ್ದಾರೆ. ಅವರು ಮುಖ್ಯಮಂತ್ರಿಯಾದ ಬಳಿಕ ತಮ್ಮ ಜಾತಿಯನ್ನು ಹಿಂದುಳಿದ ವರ್ಗಕ್ಕೆ ಸೇರಿಸಿದರು ಎಂಬ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರ ವಿವಾದಾತ್ಮಕ ಹೇಳಿಕೆಯನ್ನು (Modi Caste Politics) ಬಿಜೆಪಿ ತೀವ್ರವಾಗಿ ಆಕ್ಷೇಪಿಸಿದೆ. ರಾಹುಲ್‌ ಗಾಂಧಿ‌ ಹೇಳಿದ್ದು ಹಸಿ ಹಸಿ ಸುಳ್ಳು ಎಂದು ಬಿಜೆಪಿ ದಾಖಲೆ ಸಹಿತ ಮಾಹಿತಿ ನೀಡಿದೆ. ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಅವರು ಇದೀಗ ಇದಕ್ಕೆ ಸಂಬಂಧಪಟ್ಟಂತೆ ಟ್ವೀಟ್‌ ಮಾಡಿದ್ದಾರೆ.

ಮೋದಿ ಅವರು ಗುಜರಾತ್‌ನಲ್ಲಿರುವ ತೇಲಿ ಎಂಬ ಜಾತಿಯಲ್ಲಿ ಹುಟ್ಟಿದವರು. ಆ ಜಾತಿಗೆ ಒಬಿಸಿ ಸ್ಥಾನ ಮಾನ ನೀಡಿದ್ದು 2000ರಲ್ಲಿ. ಬಿಜೆಪಿ ಈ ಸ್ಥಾನಮಾನವನ್ನು ನೀಡಿದೆ. ಅವರು ಮೇಲ್ವರ್ಗದವರಲ್ಲಿ ಹುಟ್ಟಿದವರಾಗಿರುವುದರಿಂದ ಅವರು ಜಾತಿ ಗಣತಿಗೆ ಒಪ್ಪುತ್ತಿಲ್ಲ ಎನ್ನುವುದು ರಾಹುಲ್‌ ಗಾಂಧಿ ಅವರ ಆರೋಪವಾಗಿತ್ತು. ಆದರೆ, ಈ ವಾದವನ್ನು ಬಿಜೆಪಿ ವಿರೋಧಿಸಿದೆ. ಇದು ಸುಳ್ಳು ಎಂದಿದೆ.

ಮೋದಿ ಅವರು ಹುಟ್ಟಿರುವ ತೇಲಿ ಜಾತಿಗೆ ಒಬಿಸಿ ಸ್ಥಾನ ಮಾನ ನೀಡಿರುವ ವಿಚಾರದಲ್ಲಿ ಕಾಂಗ್ರೆಸ್‌ ಮತ್ತು ರಾಹುಲ್‌ ಸುಳ್ಳು ಹೇಳುತ್ತಿದ್ದಾರೆ. ಕಾಂಗ್ರೆಸ್ಸಿನ ಸುಳ್ಳಿನ ಬುತ್ತಿಯನ್ನು ಎಳೆ ಎಳೆಯಾಗಿ ಬಿಚ್ಚಿಡುವ ಸಮಯ ಬಂದಿದೆ. ವಾಸ್ತವ ಬೇರೆಯೇ ಇರುವಾಗ ಕಾಂಗ್ರೆಸ್ ಬರೀ ಸುಳ್ಳುಗಳನ್ನೇ ಹೆಣೆದು ಜನರ ಕಿವಿಗೆ ಹೂವಿನ ಗೊಂಚಲೇ ಇಡುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ನಾಚಿಕೆಯೇ ಆಗುವುದಿಲ್ಲವೇ? ಬರೀ ಸುಳ್ಳು ಸುಳ್ಳು ಸುದ್ದಿಗಳನ್ನು ಹರಿ ಬಿಡುತ್ತಿದ್ದಾರೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೋದಿ ಅವರ ಜಾರಿಗೆ ಒಬಿಸಿ ಸ್ಥಾನಮಾನ ಸಿಕ್ಕಿದ್ದು ಕಾಂಗ್ರೆಸ್‌ ಕಾಲದಲ್ಲೇ!

ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗುವ ಎರಡು ವರ್ಷಗಳ ಮೊದಲು 1999ರ ಅಕ್ಟೋಬರ್ 27ರಂದು ಅವರ OBC ಸ್ಥಾನಮಾನವನ್ನು ಗುರುತಿಸಲಾಗಿದೆ ಎಂದು ಜೋಶಿ ಸ್ಪಷ್ಟಪಡಿಸಿದ್ದಾರೆ. ಪ್ರಧಾನಿ ಮೋದಿ ಅವರನ್ನು ಒಬಿಸಿ ಅಲ್ಲ ಎನ್ನುವ ಮೂಲಕ ಕಾಂಗ್ರೆಸ್ ಮತ್ತೊಮ್ಮೆ ಇಡೀ ಒಬಿಸಿ ಸಮುದಾಯವನ್ನೇ ಅವಮಾನಿಸುತ್ತದೆ ಎಂದು ಸಚಿವ ಜೋಶಿ ಕಿಡಿ ಕಾರಿದ್ದಾರೆ. ಒಬಿಸಿ ವರ್ಗದವರೆಲ್ಲ ಲೋಕಸಭೆ ಚುನಾವಣೆಯಲ್ಲಿ ಪ್ರತಿಧ್ವನಿಸುವ ಮೂಲಕ ರಾಹುಲ್ ಗಾಂಧಿ ಆರೋಪಕ್ಕೆ ತಕ್ಕ ಪಾಠವನ್ನು ಕಲಿಸಲಿದ್ದಾರೆ ಎಂದು ಪ್ರಹ್ಲಾದ ಜೋಶಿ ಎಚ್ಚರಿಸಿದ್ದಾರೆ.

1999ರ ಅಕ್ಟೋಬರ್ 27ರಂದು ತೇಲಿ ಜಾತಿಯನ್ನು ಒಬಿಸಿ ಎಂದು ಗುರುತಿಸಿದಾಗ ಗುಜರಾತ್‌ನಲ್ಲಿ ಬಿಜೆಪಿ ಸರ್ಕಾರವಿತ್ತು. ಆದರೆ, ಸಿಎಂ ಆಗಿ ನರೇಂದ್ರ ಮೋದಿ ಅವರು ಇರಲಿಲ್ಲ. ಅವರು ಸಿಎಂ ಆಗಿದ್ದು 2001ರಲ್ಲಿ ಎನ್ನುವುದನ್ನು ಬಿಜೆಪಿ ಉಲ್ಲೇಖಿಸಿದೆ.

ಇದನ್ನೂ ಓದಿ : Rahul Gandhi: ʻ…ರಾಜೀನಾಮೆ ನೀಡಿದೆʼ ಎಂದ ಹಿಮಂತ ಶರ್ಮಾ; ನಾಯಿ ಬಿಸ್ಕೆಟ್‌ ನೀಡಿದ ರಾಹುಲ್‌ ಗಾಂಧಿ ವೈರಲ್‌ ವಿಡಿಯೋಗೆ ಕಾಮೆಂಟ್

Exit mobile version