ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (Modi in Bengaluru) ಅವರು ತಮ್ಮ ಬೆಂಗಳೂರು ಭೇಟಿ ವೇಳೆ ಕನಕ ದಾಸರು, ವಾಲ್ಮೀಕಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಕಾರ್ಯಕ್ರಮ ಆಯೋಜಿಸಿರುವುದು ರಾಜಕೀಯ ಗಿಮಿಕ್ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ʻʻವಾಲ್ಮೀಕಿ ಪ್ರತಿಮೆ ನಮ್ಮ ಸರ್ಕಾರ ಮಾಡಿದ್ದು. ಅವರು ಹೂವಿನ ಹಾರ ಹಾಕಲು ಬರುತ್ತಿದ್ದಾರೆ ಅಷ್ಟೆ. ವಾಲ್ಮೀಕಿ, ಕನಕದಾಸರ ಪ್ರತಿಮೆಯನ್ನು ವಿಧಾನಸೌಧದ ಎದುರು ಸ್ಥಾಪನೆ ಮಾಡಿದವರು ನಾವು. ಈಗ ಅವರು ಬಂದು ಹೂವಿನ ಹಾರ ಹಾಕಿದಾಕ್ಷಣ ಕನಕದಾಸ ಪರ ಇದ್ದಾರೆ ಅಂತ ಆಗುತ್ತದಾ? ಇವೆಲ್ಲವೂ ಪೊಲಿಟಿಕಲ್ ಗಿಮಿಕ್ʼʼ ಎಂದರು ಸಿದ್ದರಾಮಯ್ಯ.
ʻʻಕೆಂಪೇಗೌಡರ ಜಯಂತಿ ಮಾಡಿದವರು ಯಾರು? ಕೆಂಪೇಗೌಡರ ಪ್ರಾಧಿಕಾರ ಮಾಡಿದವರು ಯಾರು? ವಿಮಾನ ನಿಲ್ದಾಣಕ್ಕೆ ಕೆಂಪೇಗೌಡ ಏರ್‌ಪೋರ್ಟ್ ಅಂತ ಹೆಸರು ಇಟ್ಟವರು ಯಾರು? ಇದೆಲ್ಲವನ್ನೂ ಮಾಡಿದ್ದು ನಮ್ಮ ಸರ್ಕಾರ. ಪ್ರತಿಮೆ ಮಾಡಬೇಕು ಎಂದು ನಾವು ಆಗಲೇ ತೀರ್ಮಾನ ಮಾಡಿದ್ದೆವು. ಏರ್ ಪೋರ್ಟ್ ಗೆ ಹೆಸರು ಇಟ್ಟ ಮೇಲೆ ಪ್ರತಿಮೆ ಮಾಡಬೇಕು ಎಂದು ತೀರ್ಮಾನ ಮಾಡಿದ್ದೆವುʼʼ ಎಂದು ಹೇಳಿದರು ಸಿದ್ದರಾಮಯ್ಯ.
ʻʻನರೇಂದ್ರ ಮೋದಿ ಅವರು 40% ಕಮಿಷನ್ ಬಗ್ಗೆ ಉತ್ತರ ಕೊಡಲಿ. ಅದರ ಬಗ್ಗೆ ಪತ್ರ ಸಹ ಬರೆದಿದ್ದೇನೆ. ಕೆಂಪಣ್ಣ ಹಾಗೂ ನಾನು ಪತ್ರ ಬರೆದಿದ್ದೇವೆʼʼ ಎಂದು ಹೇಳಿದರು.
ಸತೀಶ್ ಜಾರಕಿಹೊಳಿ ಅವರು ಹಿಂದು ಪದದ ಬಗ್ಗೆ ಆಡಿದ ಮಾತನ್ನು ಹಿಂದಕ್ಕೆ ಪಡೆದಿದ್ದೇನೆ ಎಂದಿದ್ದಾರೆ. ಈಗಾಗಲೇ ವಿಷಾದ ವ್ಯಕ್ತಪಡಿಸಿ ಪತ್ರ ಬರೆದಿದ್ದಾರೆ. ನಾನು ಅಶ್ಲೀಲ ಎಂಬ ಪದ ವಾಪಸ್ ತೆಗೆದುಕೊಂಡಿದ್ದೇನೆ ಎಂದು ಹೇಳಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ. ಮುಕುಡಪ್ಪ ಅವರ ಗುಸುಗುಸು ಮಾತಿಗೆ ಪ್ರತಿಕ್ರಿಯೆ ನೀಡಲು ಅವರು ನಿರಾಕರಿಸಿದರು.