ಬೆಂಗಳೂರು: ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಲೋಕಸಭಾ ಚುನಾವಣೆಯ (Parliament Elections) ಪ್ರಚಾರ ಸಮಾವೇಶಗಳು (Modi in Karnataka) ಮಾರ್ಚ್ 16ರಿಂದ ಆರಂಭವಾಗಲಿವೆ. ಅವರು ಮಾರ್ಚ್ 16ರಂದು ಕಲಬುರಗಿಯಲ್ಲಿ (kalaburagi Samavesha) ಮತ್ತು ಮಾರ್ಚ್ 18ರಂದು ಶಿವಮೊಗ್ಗದಲ್ಲಿ ಸಾರ್ವಜನಿಕ ಸಭೆಗಳನ್ನು (Shivamogga Samavesha) ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಶಾಸಕ ಸುನೀಲ್ ಕುಮಾರ್ (V Sunil Kumar) ಅವರು ತಿಳಿಸಿದ್ದಾರೆ.
ಈ ಹಿಂದಿನ ತಾತ್ಕಾಲಿಕ ವೇಳಾಪಟ್ಟಿಯ ಪ್ರಕಾರ, ದಕ್ಷಿಣ ಭಾರತದಲ್ಲಿ ಅಬ್ಬರದ ಪ್ರಚಾರ ಮಾಡಲಿರುವ ಮೋದಿ ಅವರು, ಮಾ.15ರಂದು ಕೋಲಾರ, ಮಾ. 17ರಂದು ಶಿವಮೊಗ್ಗ, ಮಾ.18ರಂದು ಕಲಬುರಗಿ ಮತ್ತು ಮಾ. 19ರಂದು ಧಾರವಾಡದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ ಎಂದು ಹೇಳಲಾಗಿತ್ತು. ಆದರೆ, ಈಗ ಅದು ಬದಲಾಗಿದೆ.
ಇದನ್ನೂ ಓದಿ : CM Siddaramaiah: ಹೊಸ ಹುದ್ದೆ ಸೃಷ್ಟಿಸಿದ ಸಿಎಂ ಸಿದ್ದರಾಮಯ್ಯ; ರಾಜ್ಯ ಸರ್ಕಾರಕ್ಕೆ ಐವರು ವಕ್ತಾರರ ನೇಮಕ!
ಸುನಿಲ್ ಕುಮಾರ್ ಅವರು ಹೇಳಿದ್ದೇನು?
ಪ್ರಧಾನಿ ನರೇಂದ್ರ ಮೋದಿ ಅವರು ಮಾ. 16ರಂದು ಮಧ್ಯಾಹ್ನ 2 ಗಂಟೆಗೆ ಕಲಬುರಗಿಗೆ ಭೇಟಿ ಕೊಡಲಿದ್ದಾರೆ. ಅಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. 18ರಂದು ಮಧ್ಯಾಹ್ನ 2 ಗಂಟೆಗೆ ಶಿವಮೊಗ್ಗದಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಾರೆ ಎಂದು ಸುನಿಲ್ ಕುಮಾರ್ ತಿಳಿಸಿದರು.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಮೋದಿ ಅವರ ಎರಡು ದಿನಗಳ ಪ್ರವಾಸಕ್ಕೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. 16ರಂದು ಕಲಬುರ್ಗಿ ಎನ್‍ವಿ ಆಟದ ಮೈದಾನದಲ್ಲಿ ಸಭೆ ನಡೆಯಲಿದೆ. 18ರಂದು ಶಿವಮೊಗ್ಗದ ಅಲ್ಲಮಪ್ರಭು ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಗೌರವಾನ್ವಿತ ಅಮಿತ್ ಶಾ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿ ಗಣ್ಯರನೇಕರು ಬೇರೆ ಬೇರೆ ಲೋಕಸಭಾ ಕ್ಷೇತ್ರಗಳಿಗೆ ಭೇಟಿ ಕೊಡಲಿದ್ದಾರೆ ಎಂದು ಹೇಳಿದರು.
ಶೀಘ್ರವೇ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಲೋಕಸಭಾ ಚುನಾವಣೆ ಗೆಲುವಿಗೆ ಎಲ್ಲ ಪೂರ್ವಸಿದ್ಧತೆಗಳನ್ನು ಕರ್ನಾಟಕ ಬಿಜೆಪಿ ಮಾಡುತ್ತಿದೆ ಎಂದ ಸುನೀಲ್ ಕುಮಾರ್ ಅವರು, ಇವತ್ತು ರಾತ್ರಿ ಅಥವಾ ನಾಳೆ ಕರ್ನಾಟಕದ ಮೊದಲ ಹಂತದ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಗಲಿದೆ ಎಂದು ತಿಳಿಸಿದರು.
28 ಲೋಕಸಭಾ ಕ್ಷೇತ್ರಗಳು ಎಂಟು ಕ್ಲಸ್ಟರ್ ಗಳಾಗಿ ವಿಂಗಡಣೆ
ಲೋಕಸಭಾ ಚುನಾವಣೆ ದೃಷ್ಟಿಯಿಂದ 28 ಲೋಕಸಭಾ ಕ್ಷೇತ್ರಗಳನ್ನು 8 ಕ್ಲಸ್ಟರ್‌ಗಳಾಗಿ ನಾವು ವಿಂಗಡಿಸಿದ್ದೇವೆ. ಸ್ಥಳೀಯ ರಾಜಕೀಯ ಮತ್ತು ಭೌಗೋಳಿಕ ಹಿನ್ನೆಲೆಯನ್ನು ಕಣ್ಮುಂದೆ ಇಟ್ಟುಕೊಂಡು ಆ 8 ಕ್ಲಸ್ಟರ್‌ಗಳಲ್ಲಿ ಬೇರೆ ಬೇರೆ ರೀತಿಯ ಕಾರ್ಯಕ್ರಮ ಮತ್ತು ತಂತ್ರಗಾರಿಕೆಗಳನ್ನು ಮಾಡಲಾಗುತ್ತಿದೆ ಎಂದು ಸುನಿಲ್ ಕುಮಾರ್ ತಿಳಿಸಿದರು.
ಆ 8 ಕ್ಲಸ್ಟರ್‌ಗಳಿಗೆ ರಾಷ್ಟ್ರೀಯ ನಾಯಕರ ಪ್ರವಾಸಗಳು ಮುಕ್ತಾಯವಾಗಿವೆ. ಮೈಸೂರಿಗೆ ಅಮಿತ್ ಶಾ, ಕಲಬುರ್ಗಿಗೆ ಶಿವರಾಜ್ ಸಿಂಗ್ ಚೌಹಾಣ್, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಬೆಳಗಾವಿಗೆ, ದೇವೇಂದ್ರ ಫಡ್ನವೀಸ್ ಅವರು ಮಂಗಳೂರಿಗೆ ಬಂದಿದ್ದರು. 8 ಕ್ಲಸ್ಟರ್‌ಗಳಲ್ಲೂ ಪ್ರವಾಸ ಮುಗಿದಿದೆ ಎಂದು ವಿವರ ನೀಡಿದರು.
ಕಾರ್ಯಕರ್ತರ ಸಮಾವೇಶ, ಹಿತೈಷಿಗಳ ಸಂಪರ್ಕವನ್ನು ಮಾಡಿದ್ದು, 8 ಕ್ಲಸ್ಟರ್ ಗಳಲ್ಲಿ ಚುನಾವಣಾ ಸಿದ್ಧತೆಗಳನ್ನು ಮಾಡಿದ್ದಾರೆ. ಎರಡನೇ ಹಂತದಲ್ಲಿ ದೊಡ್ಡ ದೊಡ್ಡ ಸಾರ್ವಜನಿಕ ಸಭೆಗಳನ್ನು ನಡೆಸಲಾಗುವುದು ಎಂದು ತಿಳಿಸಿದರು. ಮೊದಲ ಹಂತದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕರ್ನಾಟಕದಲ್ಲಿ 2 ದಿನಗಳ ಪ್ರವಾಸ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.