Site icon Vistara News

ಸಂಭ್ರಮದ ʼಮುಕುಲ ನೃತ್ಯೋತ್ಸವʼ: ಯುರೈಸ್ ವೇದಿಕ್ ಸಂಗೀತ ಅಕಾಡೆಮಿಗೆ ಮುಕುಲ ಬಾಲ ಪ್ರಶಸ್ತಿ

Mukula nrityotsava

ಬೆಂಗಳೂರು: ನೃತ್ಯ ಕ್ಷೇತ್ರದಲ್ಲಿ ಹೂವಾಗಿ ಅರಳಬೇಕಾದ ಮೊಗ್ಗಿನಂತಿರುವ ಮಕ್ಕಳಿಗಾಗಿ, ಮಕ್ಕಳಿಗೋಸ್ಕರ ನಡೆಯುವ ಮುಕುಲ ನೃತ್ಯೋತ್ಸವ ಶನಿವಾರ ಸಾಯಂಕಾಲ ಬಸವೇಶ್ವರ ನಗರದ ಸಾಧನ ಸಂಗಮ ನೃತ್ಯ ಕೇಂದ್ರದ ರಂಗೋಪನಿಷತ್ ಸಭಾಂಗಣದಲ್ಲಿ ಅತ್ಯಂತ ಸಂಭ್ರಮದಿಂದ ನಡೆಯಿತು.

ಯುರೈಸ್ ವೇದಿಕ್ ಸಂಗೀತ ಅಕಾಡೆಮಿಯ ನೃತ್ಯ ತಂಡ ರಸಪ್ರಶ್ನೆ ಸ್ಪರ್ಧೆಯಲ್ಲಿ ಅತ್ಯಂತ ಹೆಚ್ಚು ಅಂಕಗಳನ್ನು ಗಳಿಸುವ ಮೂಲಕ ಪ್ರತಿಷ್ಠಿತ “ಮುಕುಲ ಬಾಲ ತಂಡ” ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಖ್ಯಾತ ಭರತನಾಟ್ಯ ಕಲಾವಿದೆ ಡಾ. ದ್ವರಿತಾ ವಿಶ್ವನಾಥ್, ಈ ವೇದಿಕೆ ಮಕ್ಕಳಿಗೆ ಅತ್ಯಂತ ಅಗತ್ಯವಾದುದು. ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ಸಾಕಷ್ಟು ಸಹಕಾರಿ ಎಂದು ಹೇಳಿದರು.

ಮುಕುಲ ನೃತ್ಯೋತ್ಸವದಲ್ಲಿ ಪಾಲ್ಗೊಂಡ ಮಕ್ಕಳೊಂದಿಗೆ ಡಾ. ದ್ವರಿತಾ ವಿಶ್ವನಾಥ್,
ಗುರು ಜ್ಯೋತಿ ಪಟ್ಟಾಭಿರಾಮ್ ಹಾಗೂ ಇನ್ನಿತರ ಗಣ್ಯರು.

ಸಾಧನ ಸಂಗಮದ ಸಂಸ್ಥಾಪಕಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಗುರು ಜ್ಯೋತಿ ಪಟ್ಟಾಭಿರಾಮ್ ಮಾತನಾಡಿ, ಮುಕುಲ ನೃತ್ಯೋತ್ಸವ ಮಕ್ಕಳನ್ನು ಪ್ರೋತ್ಸಾಹಿಸಲೆಂದೇ ಕಳೆದ 20 ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದೆ. ನೃತ್ಯದ ಮೂಲಕ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಲು ಸಾಧ್ಯ ಎಂದು ಹೇಳಿದರು.

ಈ ವೇಳೆ ಹಿರಿಯರಾದ ಸಿ.ಎಸ್.ಕೃಷ್ಣಮೂರ್ತಿ, ನೃತ್ಯ ಗುರುಗಳಾದ ವಿದುಷಿ ಅಕ್ಷರಾ ಭಾರದ್ವಾಜ್, ವಿದುಷಿ ನವ್ಯಶ್ರೀ ಕೆ.ಎನ್., ವಿದುಷಿ ಅಂಜನಾ ರಮೇಶ್ ಮತ್ತು ಸಾಧನ ಸಂಗಮದ ನೃತ್ಯ ಶಿಕ್ಷಕರು, ಹಿರಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ | Motivational story | ಅಲ್ಲಾ ಮಾರಾಯ್ತಿ ಆನೆ ರಾಣಿ.. ನಿನ್ನ ಮರಿ ಮರ ಯಾಕೆ ಹತ್ತಬೇಕು? ಟಾಪರ್‌ ಯಾಕಾಗ್ಬೇಕು?

ಗಮನ ಸೆಳೆದ ನೃತ್ಯೋತ್ಸವ
ಕಾರ್ಯಕ್ರಮದ ಆರಂಭದಲ್ಲಿ ಸಾಧನ ಸಂಗಮದ ವಿದ್ಯಾರ್ಥಿಗಳ ತಂಡ ಗಣೇಶ ಸ್ತುತಿಗೆ ಹೆಜ್ಜೆ ಹಾಕಿ ಶುಭಾರಂಭ ಮಾಡಿದರು. ಬಳಿಕ ಸ್ಟ್ರಕ್ಚರಲ್‌ ಸ್ಕೂಲ್ ಆಫ್ ಆರ್ಟ್ಸ್‌ ವಿದ್ಯಾರ್ಥಿಗಳ ತಂಡ, ಭರತದ್ಯುತಿ ಆರ್ಟ್ಸ್ ಸೆಂಟರ್ ವಿದ್ಯಾರ್ಥಿಗಳ ತಂಡ, ಯುರೈಸ್ ವೇದಿಕ್ ಸಂಗೀತ ಅಕಾಡೆಮಿ ವಿದ್ಯಾರ್ಥಿಗಳ ತಂಡ ನೃತ್ಯ ಪ್ರದರ್ಶನ ನೀಡಿ ಮನರಂಜಿಸಿದವು.

“ಮುಕುಲ ಬಾಲ ತಂಡ” ಪ್ರಶಸ್ತಿ
ನೃತ್ಯೋತ್ಸವದ ಪ್ರಮುಖ ಭಾಗವಾದ ರಸಪ್ರಶ್ನೆ ಕಾರ್ಯಕ್ರಮ ಗಮನ ಸೆಳೆಯಿತು. ಸಿಂಪ್ಲಿ ಸಾಮಾನ್ಯ, ಪಸ್ಲಿಂಗ್ ಪ್ರಹೇಲಿಕಾ, ಜಾಯೆಸ್ ಜಾನಪದ, ವೈಸ್ ವೇಗಿನಿ ಹೀಗೆ ವಿವಿಧ ಸುತ್ತುಗಳಲ್ಲಿ ಮಕ್ಕಳ ತಂಡಗಳಿಗೆ ನೃತ್ಯಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆಯುವುದರ ಮೂಲಕ ಸಭಿಕರಲ್ಲೂ ನೃತ್ಯ ಕುರಿತ ಅರಿವು ಮೂಡಿಸುವ ಪ್ರಯತ್ನ ವಿಶೇಷವಾಗಿತ್ತು. ಅತಿ ಹೆಚ್ಚು ಅಂಕ ಪಡೆದ ಯುರೈಸ್ ವೇದಿಕ್ ಸಂಗೀತ ಅಕಾಡೆಮಿ ವಿದ್ಯಾರ್ಥಿಗಳು ಮುಕುಲ ಬಾಲ ತಂಡ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಮುಖ್ಯ ಅತಿಥಿಗಳಾದ ಡಾ.ದ್ವರಿತಾ ವಿಶ್ವನಾಥ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.

ಇದನ್ನೂ ಓದಿ | Western Dance Forms | ಇಲ್ಲಿವೆ 10 ವೆಸ್ಟರ್ನ್‌ ನೃತ್ಯ ಪ್ರಕಾರಗಳು

Exit mobile version