ಬೆಂಗಳೂರು: ಕಳೆದ ಡಿ.6 ರಾತ್ರಿಯಂದು ಬ್ಯಾಟರಾಯನಪುರದಲ್ಲಿ ಆಟೋ ಚಾಲಕನಾಗಿ (auto Driver) ಕೆಲಸ ಮಾಡುತ್ತಿದ್ದ ಅರುಣ್ ಎಂಬಾತನ ಬರ್ಬರ (Murder case) ಕೊಲೆಯಾಗಿತ್ತು. ಇದೀಗ 11 ಮಂದಿ ಕೊಲೆಗಾರರನ್ನು ಪೊಲೀಸರು ಬಂಧಿಸಿದ್ದಾರೆ. ಹರೀಶ್ ಹಾಗೂ ಈತನ ಸಹೋದರ ಮಧು, ಪ್ರಶಾಂತ್ ಅಲಿಯಾಸ್ ಅಪ್ಪು ಸೇರಿ ಒಟ್ಟು ಹನ್ನೊಂದು ಮಂದಿ ಆರೋಪಿಗಳ ಬಂಧನವಾಗಿದ್ದು, ಇವರೆಲ್ಲರೂ ಗೋರಿ ಪಾಳ್ಯ, ಜೆ.ಜೆ.ನಗರದ ನಿವಾಸಿಗಳಾಗಿದ್ದಾರೆ.
ಟಿಂಬರ್ ಲೇಔಟ್‌ನಲ್ಲಿ ಅರುಣ್‌ನನ್ನು ಬರ್ಬರವಾಗಿ ಕೊಲೆ ಮಾಡಿ ಪರಾರಿ ಆಗಿದ್ದ ಆರೋಪಿಗಳು ತಲೆಮರೆಸಿ ಕೊಂಡಿದ್ದರು. ಈ ಕೊಲೆಯಾದ ಅರುಣ್ ಅಮಾಯಕನಂತೂ ಅಲ್ಲ. ಬದಲಿಗೆ ಆಗಾಗ ಗೋರಿಪಾಳ್ಯ ಕಡೆ ಹೋಗಿ ಯುವಕರಿಗೆ ಬೆದರಿಸಿ ಬರುತ್ತಿದ್ದ. ಹೀಗಾಗಿ ಈತನ ಮೇಲೆ 11 ಮಂದಿ ದ್ವೇಷವನ್ನು ಬೆಳೆಸಿಕೊಂಡಿದ್ದರು.
ಅರುಣ್‌ನ ನಡೆಯಿಂದ ರೋಸಿ ಹೋಗಿದ್ದ ಯುವಕರು ಸ್ಮಶಾನದಲ್ಲಿ ಕೂತು ಸ್ಕೇಚ್ ಹಾಕಿದ್ದರು. ಟಿಂಬರ್ ಲೇಔಟ್‌ನಿಂದ ಗೋರಿಪಾಳ್ಯಕ್ಕೆ ಬಂದು ನಮಗೆ ಬೆದರಿಸಿ ಹೋಗುತ್ತಾನೆ ಎಂದು ರೊಚ್ಚಿಗೆದ್ದಿದ್ದರು. ರೌಡಿ ಪ್ರವೃತ್ತಿ ಹೊಂದಿದ್ದ ಅರುಣ್‌ನನ್ನು ಮುಗಿಸಿಬಿಡೋಣಾ ಎಂದುಕೊಂಡು ಕಳೆದ ಡಿ.6ರಂದು ಬರ್ಬರವಾಗಿ ಹತ್ಯೆ ಮಾಡಿದ್ದರು.
ಇದನ್ನೂ ಓದಿ: Murder Case: ಸೂಲಿಬೆಲೆಯಲ್ಲಿ ರಾಡ್‌ನಿಂದ ಹೊಡೆದು ವೃದ್ಧ ದಂಪತಿಯ ಕೊಲೆ
ಬಾರ್‌ನಲ್ಲಿ ನಡೆದಿತ್ತು ಗಲಾಟೆ!
ಕೆಲ ದಿನಗಳ ಹಿಂದೆ ಚಾಮರಾಜಪೇಟೆ ಬಾರ್ ಬಳಿ ಹರೀಶ್ ಎಂಬಾತ ಕಾಟನ್ ಪೇಟೆ, ಬಕ್ಷಿ ಗಾರ್ಡನ್ ಹುಡುಗರ ಜತೆಗೆ ಗಲಾಟೆ ಮಾಡಿಕೊಂಡಿದ್ದ. ಈ ವೇಳೆ ಬಕ್ಷಿ ಗಾರ್ಡನ್ ಹುಡುಗರು ಅರುಣ್‌ನನ್ನು ಸಂಪರ್ಕ ಮಾಡಿ ಗಲಾಟೆ ವಿಷಯವನ್ನು ಹೇಳಿದ್ದರು. ಆಗ ಹರೀಶ್ ನನಗೆ ಗೊತ್ತಿರುವ ಹುಡುಗನೇ ನಾನು ವಿಚಾರಿಸಿಕೊಳ್ಳುವೆ ಬಿಡಿ ಎಂದಿದ್ದ. ಇದಾದ ಬಳಿಕ ಹರೀಶ್ ಮನೆ ಬಳಿ ಹೋಗುವುದು, ಆತನ ಪತ್ನಿಗೆ ಹರೀಶ್ ಇದ್ದನಾ ಎಂದು ಅರುಣ್ ವಿಚಾರಿಸುತ್ತಿದ್ದ. ಈ ವಿಷಯ ತಿಳಿದು ಹರೀಶ್ ಮತ್ತು ಆತನ ಸಹೋಧರ ಮಧು ಕೋಪಗೊಂಡಿದ್ದರು.
ಹರೀಶ್ ಮತ್ತು ಮಧು ಈ ವಿಷಯವನ್ನು ಪ್ರಶಾಂತ್ ಅಲಿಯಾಸ್ ಅಪ್ಪು ಜತೆಗೆ ಚರ್ಚೆ ಮಾಡಿದ್ದರು. ಈ ವೇಳೆ ಅರುಣ್ ಮೇಲಿದ್ದ ತನ್ನ ಹಳೇ ದ್ವೇಷದ ವಿಷಯವನ್ನು ಪ್ರಶಾಂತ್ ಹೊರಹಾಕಿದ್ದ. ಈ ಹಿಂದೆ ಮಣಿಕಂಠ ಎಂಬಾತನ ಕೊಲೆ ಕೇಸ್‌ನಲ್ಲಿ ಅರುಣ್ ಅರೆಸ್ಟ್ ಆಗಿದ್ದ. ಈ ವೇಳೆ ಪ್ರಶಾಂತ್ ಪಾತ್ರ ಇಲ್ಲದಿದ್ದರೂ, ಪೊಲೀಸ್ ಮುಂದೆ ಪ್ರಶಾಂತ್ ಸಹ ಕೊಲೆಯಲ್ಲಿ ಭಾಗಿಯಾಗಿದ್ದ ಎಂದು ಅರುಣ್ ಹೇಳಿದ್ದ. ತಪ್ಪು ಮಾಡದೇ ಇದ್ದರೂ ಪೊಲಿಸರು ಪ್ರಶಾಂತ್‌ನನ್ನು ಬಂಧಿಸಿದ್ದರು.
ಸ್ಮಶಾನದಲ್ಲಿ ಕೂತು ಕೊಲೆಗೆ ಸ್ಕೆಚ್
ಅರುಣ್ ಮೇಲಿನ ದ್ವೇಷಕ್ಕೆ ಸೇಡು ತೀರಿಸಿಕೊಳ್ಳಲು ಪ್ರಶಾಂತ್ ಕಾಯುತ್ತಿದ್ದ. ಅರುಣ್ ಏನಾದರೂ ಏರಿಯಾಗೆ ಬಂದರೆ ಮಾಹಿತಿ ನೀಡುವಂತೆ ಪ್ರಶಾಂತ್ ಹುಡುಗರನ್ನು ಸೆಟ್ ಮಾಡಿದ್ದ. ಕೊಲೆ ನಡೆಯುವ ದಿನ ಪ್ರಶಾಂತ್ ಮತ್ತು ಆತನ ಗ್ಯಾಂಗ್ ಸ್ಮಶಾನದಲ್ಲಿ ಕುಳಿತು ಮದ್ಯ ಸೇವಿಸುತ್ತಿದ್ದರು. ಅದೇ ಸಮಯದಲ್ಲಿ ಏರಿಯಾಗೆ ಅರುಣ್ ಬಂದಿರುವ ವಿಚಾರ ತಿಳಿದಿತ್ತು. ಸ್ಮಶಾನದಿಂದ ಹುಡುಗರೊಂದಿಗೆ ದೇವಸ್ಥಾನ ಒಂದರಲ್ಲಿ ಇಟ್ಟಿದ್ದ ಮಚ್ಚು ಲಾಂಗು ಹಿಡಿದು ಬಂದಿದ್ದರು. ಟಿಂಬರ್ ಯಾರ್ಡ್ ರಸ್ತೆಯಲ್ಲಿ ಬರುತ್ತಿದ್ದ ಅರುಣ್‌ನನ್ನು ಅಡ್ಡಗಟ್ಟಿದ 11 ಮಂದಿ ಮನಬಂದಂತೆ ಕೊಚ್ಚಿ ಕೊಲೆ ಮಾಡಿದ್ದರು.
ಪ್ರಕರಣದ ಗಂಭೀರತೆ ಅರಿತು ಎಸಿಪಿಗೆ ತನಿಖೆ ನಡೆಸಲು ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದರು. ಬ್ಯಾಟರಾಯನಪುರ ಎಸಿಪಿ ಭರತ್ ರೆಡ್ಡಿ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡು ಹನ್ನೊಂದು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ