ಬೆಂಗಳೂರು: ಈ ಕಾಲದಲ್ಲಿ ಯಾರನ್ನೂ ನಂಬೋಕೆ ಆಗಲ್ಲ. ಪರಿಚಿತರೇ ದುಷ್ಮನ್‌ಗಳಾಗಿ ವ್ಯಕ್ತಿಯೊಬ್ಬನ ಪ್ರಾಣವನ್ನೇ (Murder Case) ಕಸಿದುಕೊಂಡಿದ್ದಾರೆ. ತಮ್ಮ ಮೋಜು ಮಸ್ತಿಗಾಗಿ ಒಂದು ಕುಟುಂಬವೇ ಕಣ್ಣೀರಲ್ಲಿ ಕೈತೊಳೆಯುವಂತೆ ಮಾಡಿದ್ದಾರೆ. ಗೋವಾದಲ್ಲಿ ನ್ಯೂ ಇಯರ್ ಪಾರ್ಟಿ ಮಾಡಬೇಕೆಂಬ ಉದ್ದೇಶಕ್ಕೆ ವ್ಯಕ್ತಿಯನ್ನು ಅಪಹರಿಸಿ ಬಳಿಕ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಗುರುಸಿದ್ದಪ್ಪ ಮೃತ ದುರ್ದೈವಿ. ಗುರುಸಿದ್ದಪ್ಪರನ್ನು ಅವರ ಪರಿಚಿತರೇ ಅಪಹರಿಸಿ ನಂತರ ಕೊಲೆ ಮಾಡಿದ್ದರು. ಇದೀಗ ಘಟನೆ ಸಂಬಂಧ ಸಂಜಯ್ ಹಾಗೂ ಆನಂದ್ ಎಂಬ ಇಬ್ಬರು ಆರೋಪಿಗಳನ್ನು ಜ್ಞಾನಭಾರತಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಡಿಸೆಂಬರ್ 30ರಂದು ಕಿಡ್ನ್ಯಾಪ್ ಮಾಡಿ ಗುರುಸಿದ್ದಪ್ಪನ ಪತ್ನಿಯಿಂದ 5 ಲಕ್ಷ ರೂ. ಪಡೆದಿದ್ದರು. ಇವನ್ನಾ ಬಿಟ್ಟರೆ ಪೊಲೀಸರಿಗೆ ಮಾಹಿತಿ ನೀಡಬಹುದು ಎಂದು ಗುರು ಸಿದ್ದಪ್ಪನಿಗೆ ಮಾರಣಾಂತಿಕವಾಗಿ ಹೊಡೆದು ಕೊಲೆ ಮಾಡಿದ್ದರು. ತಮ್ಮಗಿದ್ದ ಅಡ್ಡಿ ಆತಂಕ ದೂರಾಯಿತೆಂದು ಗೋವಾಗೆ ತೆರಳಿ ನ್ಯೂ ಇಯರ್ ಪಾರ್ಟಿ ಮಾಡಿದ್ದರು.
ಮತ್ತಿಬ್ಬರಿಗಾಗಿ ಹುಡುಕಾಟ
ಪ್ರಕರಣದ ಪ್ರಮುಖ ಆರೋಪಿಗಳಾದ ತಿಮ್ಮ ಹಾಗೂ ಹನುಮಂತ ಕಳೆದ ಡಿಸೆಂಬರ್ 24ರಂದು ಹಣಕ್ಕಾಗಿ ಕಿಡ್ನ್ಯಾಪ್ ಮಾಡಬೇಕೆಂದು ಪ್ಲ್ಯಾನ್ ಮಾಡಿದ್ದರು. ಆದರಂತೆ ಮೊದಲಿಗೆ ಕಾರ್ಪೆಂಟರ್ ಮತ್ತು ಪೇಯಿಂಟ್ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ಸಂಜಯ್ ಪಂಡಿತ್‌ನನ್ನೇ ಅಪಹರಿಸಲು ಪ್ಲ್ಯಾನ್ ಮಾಡಲಾಗಿತ್ತು. ಆ ದಿನವೇ ಮಾತನಾಡುವ ನೆಪದಲ್ಲಿ ಸಂಜಯ್‌ನನ್ನು ಕರೆಸಿಕೊಂಡರು. ಆದರೆ ಕಿಡ್ನ್ಯಾಪ್ ಮಾಡಲು ಸಾಧ್ಯವಾಗಲಿಲ್ಲ. ಬಳಿಕ ಡಿಸೆಂಬರ್ 25ರಂದು ಮತ್ತೆ ಕರೆಸಲು ಮುಂದಾದರು. ಆಗ ತಾನು ಊರಲ್ಲಿ ಇಲ್ಲ, ನಮ್ಮ ಹುಡುಗ ಬರುತ್ತಾನೆ ಎಂದು ಸಂಜಯ್, ಕಿಶನ್ ಎಂಬಾತನನ್ನು ಕಳಿಸಿದ್ದ.
ಇತ್ತ ಕಿಶನ್ ಬರುತ್ತಿದ್ದಂತೆ 10 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ವೇಳೆ ಕಿಶನ್ ನಾನೊಬ್ಬ ಕೂಲಿ ಕೆಲಸ ಮಾಡುವವನು, ನನ್ನ ಬಳಿ ಹಣ ಎಲ್ಲಿದೆ ಎಂದಿದ್ದ. ಸುಮ್ಮನಿರದೇ ಸಂಜಯ್ ಪಂಡಿತ್ ಬಳಿ ಹಣ ಇದೆ ಎಂದು ಹೇಳಿದ್ದ. ಸಂಜಯ್ ಎಲ್ಲಿದ್ದಾನೆ ಎಂದಾಗ, ಕುಂದಾಪುರ ಹೋಗಿರುವುದಾಗಿ ತಿಳಿಸಿದ್ದ. ನಂತರ ಈ ಮೂವರು ಕುಂದಾಪುರಕ್ಕೆ ಹೋಗಿ ಸಂಜಯ್‌ಗೆ ಫೋನ್ ಮಾಡಿದ್ದಾರೆ. ಆದರೆ ಸಂಜಯ್ ಪಂಡಿತ್ ತಾನು ಬೆಂಗಳೂರು ಬಂದಿದ್ದಾಗಿ ಹೇಳಿದ್ದಾನೆ.
ಟೀಗೆ ನಿಲ್ಲಿಸಿದ್ದಾಗ ಎಸ್ಕೇಪ್ ಆಗಿದ್ದ ಕಿಶನ್
ಪ್ಲ್ಯಾನ್ ಎಲ್ಲವೂ ಹಾಳಾಯಿತಲ್ಲ ಎಂದೇ ಬೇಸರದಿಂದ ಬೆಂಗಳೂರಿಗೆ ವಾಪಸ್ ಆಗುತ್ತಿದ್ದರು. ಈ ವೇಳೆ ಟೀ ಕುಡಿಯಲು ದಾರಿ ಮಧ್ಯೆ ಕಾರು ನಿಲ್ಲಿಸಿದ್ದಾರೆ. ಆಗ ಇವರಿಬ್ಬರಿಂದ ಕಿಶನ್ ಎಸ್ಕೇಪ್ ಆಗಲು ಮುಂದಾಗಿದ್ದಾನೆ. ಈ ವೇಳೆ ಆರೋಪಿಗಳು ಕಿಶನ್‌ಗೆ ಚಾಕು ಬೀಸಿದ್ದಾರೆ, ಆದರೆ ಅವರಿಂದ ಹೇಗೋ ತಪ್ಪಿಸಿಕೊಂಡಿದ್ದ.
ನ್ಯೂ ಇಯರ್ ಪಾರ್ಟಿ ಹೇಗಾದರೂ ಮಾಡಲೇಬೇಕೆಂದು ಡಿಸೆಂಬರ್ 30ರಂದು ಮತ್ತೆ ಯಾರನ್ನಾದರೂ ಕಿಡ್ನ್ಯಾಪ್ ಮಾಡಬೇಕು ಎಂದು ನಿರ್ಧರಿಸುತ್ತಾರೆ. ಆಗಲೇ ಆರೋಪಿ ಸಂಜಯ್ ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಿದ್ದ ಗುರುಸಿದ್ದಪ್ಪರನ್ನು ಟಾರ್ಗೆಟ್ ಮಾಡಿದ್ದರು. ಆಟೋಮೊಬೈಲ್ ಸ್ಪೇರ್ ಪಾರ್ಟ್ಸ್ ಸಪ್ಲೆ ಮಾಡುವ ಗುರುಸಿದ್ದಪ್ಪನ ಪರಿಚಯ ಇತ್ತು. ಹೀಗಾಗಿ ಆರೋಪಿಗಳು ಫೋನ್ ಮಾಡಿ ಉಲ್ಲಾಳ ಕರೆ ರಸ್ತೆಗೆ ಕರೆಸಿಕೊಂಡಿದ್ದರು.
ಪರಿಚಿತರ ಸಂಚು ತಿಳಿಯದೇ ಬಂದ ಗುರುಸಿದ್ದಪ್ಪನ ಬಳಿ ಐದು ಲಕ್ಷ ಹಣ ಕೊಡು ಇಲ್ಲವಾದರೆ ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಈ ವೇಳೆ ಹೆದರಿ ಪತ್ನಿಗೆ ಕರೆ ಮಾಡಿ ವ್ಯವಹಾರಕ್ಕೆ ಐದು ಲಕ್ಷ ಹಣ ಬೇಕು ತಂದು ಕೊಡು ಎಂದು ಹೇಳಿದ್ದ. ಹೀಗೆ ಆಕೆಯಿಂದ ಹಣ ಪಡೆದು ಗುರುಸಿದ್ದಪ್ಪನ ಸಹಿತ ಮಂಚನಬೆಲೆ ಡ್ಯಾಂ ಕಡೆಗೆ ಹೋಗಿದ್ದರು. ಹಣ ಸಿಕ್ಕ ಖುಷಿಗೆ ಮಂಚನಬೆಲೆ ಅರಣ್ಯ ಪ್ರದೇಶದಲ್ಲಿ ಪಾರ್ಟಿ ಮಾಡಿದ್ದರು. ಡಿಸೆಂಬರ್ 30 ರಾತ್ರಿ ಪಾರ್ಟಿ ಮಾಡಿ ಗುರು ಸಿದ್ದಪ್ಪನನ್ನು ಬಿಟ್ಟು ಕಳಿಸುವುದಾಗಿ ಹೇಳಿದ್ದರು. ಆದರೆ ಇವನನ್ನು ಬಿಟ್ಟರೆ ಪೊಲೀಸರಿಗೆ ಸಿಕ್ಕಿಬೀಳುತ್ತಿವಿ ಎಂದು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದರು. ನಂತರ ಆ ಹಣದೊಂದಿಗೆ ಗೋವಾದಲ್ಲಿ ಹೊಸ ವರ್ಷದ ಪಾರ್ಟಿ ಮಾಡಿದ್ದರು.
ಮಿಸ್ಸಿಂಗ್ ಕೇಸ್ ದಾಖಲಿಸಿಕೊಂಡ ಪೊಲೀಸರು
ಈ ನಡುವೆ ಗುರುಸಿದ್ದಪ್ಪ ಕಾಣೆ ಆದಾಗ ಪತ್ನಿಯಿಂದ ಮಿಸ್ಸಿಂಗ್ ದೂರು ಕೊಟ್ಟಿದ್ದಳು. ನನ್ನ ಪತಿ ಹಣ ತೆಗೆದುಕೊಂಡು ಹೋದವರು ಮನೆಗೆ ವಾಪಸ್ಸು ಬಂದಿಲ್ಲ ಎಂದು ದೂರು ನೀಡಿದ್ದರು. ಮಿಸ್ಸಿಂಗ್ ಕೇಸ್ ವಿಚಾರಣೆ ಮಾಡುವಾಗ ಕೊಲೆ ಆಗಿರುವುದು ತಿಳಿದಿತ್ತು. ಸದ್ಯ ಎರಡು ದಿನ ಹುಡುಕಾಟದ ಬಳಿಕ ಮಂಚನಬೆಲೆ ಬಳಿಯ ಅರಣ್ಯ ಪ್ರದೇಶದಲ್ಲಿ ಅರ್ಧಬರ್ಧ ಇರುವ ಮೃತ ದೇಹ ಪತ್ತೆ ಮಾಡಿದ್ದಾರೆ. ಕಾಡು ಪ್ರಾಣಿಗಳು ಗುರುಸಿದ್ದಪ್ಪನ ದೇಹವನ್ನು ಎಳೆದುಕೊಂಡು ಹೋಗಿ ತಿಂದುಹಾಕಿವೆ. ಸದ್ಯ ಅಳಿದುಳಿರುವ ಗುರುಸಿದ್ದಪ್ಪನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಹುಬ್ಬಳಿ ಮೂಲದ ಗುರುಸಿದ್ದಪ್ಪ ಪರಿಚಿತರಿಂದಲೇ ಹತ್ಯೆಯಾಗಿದ್ದು ದುರಂತ. ಸದ್ಯ ಜ್ಞಾನಭಾರತಿ ಪೊಲೀಸರು ಉಳಿದ ಅರೋಪಿಗಳಿಗಾಗಿ ಹುಡುಕಾಟವನ್ನು ನಡೆಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ