ಬೆಂಗಳೂರು: ಗಣಿ ಮತ್ತು ಭೂ ವಿಜ್ಞಾನ (Mines and Geology) ಇಲಾಖೆಯ ಹಿರಿಯ ಭೂ ವಿಜ್ಞಾನಿ (Senior Scientist) ಪ್ರತಿಮಾರ (45) ಕೊಲೆ ಪ್ರಕರಣದ ಆರೋಪಿಯ ಬಂಧನವಾಗಿದೆ. ಅವರದೇ ಕಾರಿನ ಚಾಲಕ ಕಿರಣ್ (30) ಪ್ರತಿಮಾರ ಕುತ್ತಿಗೆಗೆ ಹಗ್ಗಬಿಗಿದು ಕತ್ತು ಕೊಯ್ದು ಕೊಲೆ (Murder Case) ಮಾಡಿದ್ದ. ಇದೀಗ ಪ್ರತಿಮಾರನ್ನು ಕೊಲೆ ಮಾಡಿದ್ದು ಯಾಕಾಗಿ ಎಂಬುದನ್ನು ಪೊಲೀಸರ ತನಿಖೆ ವೇಳೆ ಬಾಯ್ಬಿಟ್ಟಿದ್ದಾನೆ.
ಸರ್ಕಾರಿ ಕೆಲಸದಲ್ಲಿ ಇದ್ದೀನಿ ಎಂದೇಳಿ ಚಾಲಕ ಕಿರಣ್ ಮದುವೆ ಆಗಿದ್ದ. ತನ್ನ ಮನೆಯವರಿಗೆ, ಸಂಬಂಧಿಗಳ ಬಳಿಯೂ ಹೇಳಿಕೊಂಡಿದ್ದ. ಆದರೆ ಪ್ರತಿಮಾ ಕಳೆದ 15 ದಿನಗಳ ಹಿಂದೆ ಕಿರಣ್ನನ್ನು ಕೆಲಸದಿಂದ ತೆಗೆದಿದ್ದರು. ಪತಿ ಕೆಲಸ ಕಳೆದುಕೊಂಡ ವಿಚಾರ ತಿಳಿಯುತ್ತಿದ್ದಂತೆ ಕಿರಣ್ ಪತ್ನಿ ಜಗಳ ಮಾಡಿಕೊಂಡು ತವರು ಮನೆ ಸೇರಿಕೊಂಡಿದ್ದಳು. ಇದರಿಂದ ಕಿರಣ್ ಮನಸ್ಸು ಹಾಳಾಗಿತ್ತು.
ಹೀಗಾಗಿ ಕಳೆದ ಶನಿವಾರ ಒಂದು ನಿರ್ಧಾರಕ್ಕೆ ಬಂದಿದ್ದ ಕಿರಣ್, ಏನಾದರೂ ಮಾಡಿ ಕೆಲಸ ವಾಪಸ್ ತಗೆದುಕೊಳ್ಳಬೇಕು, ಇಲ್ಲ ಪ್ರತಿಮಾಳನ್ನು ಮುಗಿಸಬೇಕು ಎಂದು ನಿರ್ಧರಿಸಿದ್ದ. ಅದರಂತೆ ನ. 4ರ ಶನಿವಾರ ರಾತ್ರಿ ಕಚೇರಿಯಿಂದ ಪ್ರತಿಮಾರನ್ನು ಮನೆಗೆ ಕಾರಿನ ಮೂಲಕ ಡ್ರಾಪ್ ಮಾಡಿದ್ದ. ಕಾರಿನಿಂದ ಇಳಿದು ಮೆಟ್ಟಿಲೇರಿ ಬಂದಿದ್ದ ಪ್ರತಿಮಾ, ಮಳೆ ಜೋರಾಗಿ ಬರುತ್ತಿದೆ? ಹೇಗೆ ಹೋಗುತ್ತೀರಿ ಎಂದು ಕಿರಣ್ನನ್ನು ಕೇಳಿದ್ದಾರೆ. ಈ ವೇಳೆ ಕಿರಣ್ ಕಾರನ್ನು ಅಲ್ಲೆ ನಿಲ್ಲಿಸಿ ಬೈಕ್ ಮೂಲಕ ಮನೆಗೆ ತೆರಳುವುದಾಗಿ ಹೇಳಿದ್ದ.
ಇದನ್ನೂ ಓದಿ: Murder Case: ಅಧಿಕಾರಿ ಪ್ರತಿಮಾ ಕೊಲೆ ಪ್ರಕರಣದ ರಹಸ್ಯ ಬಯಲು, ರೊಚ್ಚಿಗೆದ್ದ ಚಾಲಕ ಕೊಲೆಗಡುಕನಾದ
ಆದರೆ ವಾಪಸ್ ಪ್ರತಿಮಾ ಹಿಂದೆ ಹೋದ ಕಿರಣ್ ಕೆಲಸಕ್ಕೆ ಸೇರಿಸಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದ. ಈ ನಡುವೆ ಇಬ್ಬರ ನಡುವೆ ಮಾತುಕತೆ ನಡೆದಿದೆ. ಯಾವಾಗ ಪ್ರತಿಮಾ ಕೆಲಸಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಕಡ್ಡಿ ತುಂಡಾಗುವಂತೆ ಮಾತಾನಾಡಿದರೊ ಆಗ ಕಿರಣ್ಗೆ ಸಿಟ್ಟು ಬಂದಿದೆ. ಪ್ರತಿಮಾ ಧರಿಸಿದ್ದ ವೇಲ್ನಿಂದಲೇ ಕತ್ತು ಹಿಸುಗಿದ್ದಾನೆ. ಬಳಿಕ ಮನೆಯಲ್ಲಿದ್ದ ಚಾಕುವಿನಿಂದ ಕುತ್ತಿಗೆ ಕೊಯ್ದಿದ್ದ.
ಎರಡು ಮೊಬೈಲ್ ಬಳಸುತ್ತಿದ್ದ ಕಿರಣ್ ಒಂದು ಮೊಬೈಲ್ ಸ್ವಿಚ್ ಆಫ್ ಮಾಡಿ ಮನೆಯಲ್ಲಿಟ್ಟಿದ್ದರೆ, ಮತ್ತೊಂದು ಮೊಬೈಲ್ ಕೊಲೆಗೆ ಮುನ್ನ ಸ್ವಿಚ್ ಆಫ್ ಮಾಡಿಕೊಂಡಿದ್ದ. ಕೊಲೆ ಮಾಡಿ ಬಳಿಕ ಪ್ರತಿಮಾ ಪರ್ಸ್ನಲ್ಲಿದ್ದ 15 ಸಾವಿರ ರೂ. ಹಣ ತೆಗೆದುಕೊಂಡಿದ್ದ. ಅದೇ ಹಣದೊಂದಿಗೆ ತನ್ನಿಬ್ಬರು ಸ್ನೇಹಿತರ ಜತೆಗೆ ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗಿದ್ದ. ಕೊಲೆ ಮಾಡಿರುವ ಬಗ್ಗೆ ಸ್ನೇಹಿತರಿಗೆ ಯಾವುದೇ ಮಾಹಿತಿ ನೀಡಿರಲಿಲ್ಲ.
ಇತ್ತ ಪೊಲೀಸರು ಪ್ರತಿಮಾ ಜತೆ ಸಂಪರ್ಕದಲ್ಲಿದ್ದವರ ಸಿಡಿಆರ್ ಕಲೆ ಹಾಕಿದರು. ಮೊದಲಿಗೆ ಪ್ರತಿಮಾರ ಪತಿ, ಕುಟುಂಬಸ್ಥರು, ಸ್ನೇಹಿತರು, ಡ್ರೈವರ್ಗಳ ಮೊಬೈಲ್ ಸಿಡಿಆರ್ ತೆಗೆದಿದ್ದರು. ಈ ವೇಳೆ ಎಲ್ಲರ ಮೊಬೈಲ್ ಫೋನ್ಗಳು ಆನ್ ಆಗಿದ್ದವು. ಆದರೆ ಚಾಲಕ ಕಿರಣ್ ಫೋನ್ ಮಾತ್ರ ಸ್ವಿಚ್ ಆಫ್ ಆಗಿತ್ತು. ಇದರಿಂದ ಈತನೇ ಕೊಲೆಗಾರ ಎಂದು ಶಂಕಿಸಿದ ಪೊಲೀಸರು ಫೋನ್ ಟ್ರೆಸ್ ಮಾಡಿ ಆರೋಪಿ ಕಿರಣ್ನನ್ನು ಬಂಧಿಸಿದ್ದಾರೆ. ಸದ್ಯ ಆರೋಪಿಯನ್ನು ವೈದ್ಯಕೀಯ ಪರೀಕ್ಷೆಗೆ ಅಂಜನಾಪುರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದು, ನಂತರ ಕೋರ್ಟ್ಗೆ ಹಾಜರು ಪಡಿಸಲಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ.ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ