Site icon Vistara News

Nadageethe Row : ಮಿಷನರಿಗಳಿಗೆ ಮಣಿದ ಸರ್ಕಾರ, ಡೋಂಗಿ ಕನ್ನಡ ಪ್ರೇಮಿ ಸಿದ್ದರಾಮಯ್ಯ; ಬಿಜೆಪಿ ಆಕ್ರೋಶ

Nadageethe row Siddaramaiah BJP

ಬೆಂಗಳೂರು: ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ (Private Schools) ಕುವೆಂಪು ವಿರಚಿತ ನಾಡಗೀತೆ (Kuvempu Nadageethe) ಹಾಡುವುದು ಕಡ್ಡಾಯವಲ್ಲ ಎಂಬ ಸುತ್ತೋಲೆ ಹೊರಡಿಸಿ ಎಡವಟ್ಟು (Nadageethe row) ಮಾಡಿಕೊಂಡಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ (Congress Government) ಮೇಲೆ ಬಿಜೆಪಿ (BJP Karnataka) ಮುಗಿಬಿದ್ದಿದೆ. ಕಾಂಗ್ರೆಸ್‌ ಸರ್ಕಾರ ಮಿಷನರಿಗಳ ಒತ್ತಡಕ್ಕೆ ಮಣಿದಿದೆ, ಸಿದ್ದರಾಮಯ್ಯ ಒಬ್ಬ ಡೋಂಗಿ ಕನ್ನಡ ಪ್ರೇಮಿ ಎಂದು ಅದು ಆರೋಪಿಸಿದೆ.

ಎಡವಟ್ಟುಗಳ ಮೇಲೆ ಎಡವಟ್ಟು ಮಾಡಿಕೊಂಡು ಬಿಜೆಪಿ ಮತ್ತು ಜೆಡಿಎಸ್‌ ಬಾಯಿಗೆ ಆಹಾರವಾಗುತ್ತಿರುವ ಕಾಂಗ್ರೆಸ್‌ ಸರ್ಕಾರ, ಸುತ್ತೋಲೆಯಲ್ಲಿ ಪ್ರಿಂಟ್‌ ಮಿಸ್ಟೇಕ್‌ ಆಗಿದೆ. ನಾಡಗೀತೆ ಹಾಡುವುದು ಸರ್ಕಾರಿ ಮತ್ತು ಖಾಸಗಿ ಎಂಬ ಭೇದವಿಲ್ಲದೆ ಎಲ್ಲರಿಗೂ ಕಡ್ಡಾಯ ಎಂದು ತಿಪ್ಪೆ ಸಾರಿಸಿದೆ. ಆದರೆ, ಸರ್ಕಾರ ಸುತ್ತೋಲೆಯನ್ನು ಕೈಯಲ್ಲಿ ಹಿಡಿದುಕೊಂಡಿರುವ ಬಿಜೆಪಿಯು ಕಾಂಗ್ರೆಸ್‌, ಸಿದ್ದರಾಮಯ್ಯ ಮತ್ತು ಅವರ ನಡವಳಿಕೆಗಳನ್ನು ಖಂಡಿಸಿದೆ.

Nadageethe row

ಇದನ್ನೂ ಓದಿ : Nadageethe row : ಇನ್ನೊಂದು ಎಡವಟ್ಟು; ಖಾಸಗಿ ಶಾಲೆಯಲ್ಲಿ ನಾಡಗೀತೆ ಹಾಡಬೇಕಿಲ್ಲ ಎಂದ ಸರ್ಕಾರ!

ನಾಡಗೀತೆ ವಿವಾದದ ಬಗ್ಗೆ ಬಿಜೆಪಿ ಹೇಳಿದ್ದೇನು?

  1. ಕರ್ನಾಟಕ ಮತ್ತು ಕನ್ನಡದ ಆಸ್ಮಿತೆಯನ್ನೇ ಅಳಿಸಿ ಹಾಕಲು ಅವಿವೇಕಿ ಕಾಂಗ್ರೆಸ್‌ ಸರ್ಕಾರ ಜಿದ್ದಿಗೆ ಬಿದ್ದಿದೆ.
  2. ಮೊನ್ನೆಯಷ್ಟೇ ರಾಷ್ಟ್ರಕವಿ ಕುವೆಂಪು ಅವರ ಘೋಷ ವಾಕ್ಯವನ್ನೇ ಬದಲಾಯಿಸಿ ಸಮಸ್ತ ಕನ್ನಡಿಗರಿಗೆ ಅವಮಾನ ಮಾಡಿತ್ತು. ಇದೀಗ ರಾಜ್ಯದಲ್ಲಿ ಶೇಕಡಾ 90 ಖಾಸಗಿ ಶಾಲೆಗಳನ್ನು ನಡೆಸುತ್ತಿರುವ ಮಿಷನರಿಗಳಿಗೆ ಮಣಿದು ನಾಡ ಗೀತೆಯನ್ನೇ ಐಚ್ಛಿಕಗೊಳಿಸಿ ಆದೇಶಿಸಿದೆ.
  3. ಡೋಂಗಿ ಕನ್ನಡ ಪ್ರೇಮಿ ಸಿದ್ದರಾಮಯ್ಯ ಸರ್ಕಾರ ವಿಶ್ವ ಮಾತೃಭಾಷಾ ದಿನದಂದೇ ಕನ್ನಡವನ್ನು ಕೊಲೆ ಮಾಡಲು ಇಂತಹದೊಂದು ಫತ್ವಾ ಹೊರಡಿಸಿದೆ.
  4. ನಾಚಿಕೆ ಮಾನ ಮಾರ್ಯದೆ ಎನ್ನುವುದು ಏನಾದರೂ ಇದ್ದರೆ, ನಾಡಿನ ಅನ್ನ ತಿನ್ನುತ್ತಿರುವ ನಿಯತ್ತಿದ್ದರೆ ಕೂಡಲೇ ಈ ಆದೇಶವನ್ನು ಹಿಂಪಡೆದು ಎಲ್ಲಾ ಶಾಲೆಗಳಲ್ಲೂ ನಾಡಗೀತೆ ಜತೆಗೆ ರಾಷ್ಟ್ರಗೀತೆಯನ್ನು ಕಡ್ಡಾಯವೆಂದು ಆದೇಶಿಸಬೇಕು.
  5. ಇಲ್ಲದೆ ಹೋದರೆ, ಕನ್ನಡ ವಿರೋಧಿ, ಕುವೆಂಪು ವಿರೋಧಿ, ನಾಡ ವಿರೋಧಿ ಮಜಾವಾದಿ ಸರ್ಕಾರದ ವಿರುದ್ಧ ಜನರು ಬೀದಿಗಿಳಿದು ಚಳಿ ಬಿಡಿಸುವುದು ನಿಶ್ಚಿತ!

ಏನಿದು ನಾಡಗೀತೆ ಎಡವಟ್ಟು?

ರಾಜ್ಯ ಸರ್ಕಾರ ಈ ಹಿಂದೆ ನಾಡಗೀತೆಯನ್ನು ಕಡ್ಡಾಯಗೊಳಿಸಿ ಹೊರಡಿಸಿದ ಆದೇಶದಲ್ಲಿ ಸಣ್ಣ ಬದಲಾವಣೆ ಮಾಡುವ ಮೂಲಕ ಎಡವಟ್ಟು ಮಾಡಿದೆ.

ಸುತ್ತೋಲೆಯಲ್ಲಿ ಏನು ಹೇಳಲಾಗಿದೆ?

ಕುವೆಂಪು ಅವರ ‘ಜಯ ಭಾರತ ಜನನಿಯ ತನುಜಾತೆ’ (Jaya Bharatha Jananiya Thanujathe) ಕವನವನ್ನು ‘ನಾಡಗೀತೆ’ಯಾಗಿ ಘೋಷಿಸಿ ಈ ಹಿಂದೆ ಸರಕಾರ ಹೊರಡಿಸಿದ್ದ ಆದೇಶದಲ್ಲಿ ಒಂದು ತಿದ್ದುಪಡಿಯನ್ನು ಪ್ರಕಟಿಸಿ ಫೆ. 16ರಂದು ಹೊಸ ಆದೇಶವನ್ನು ಹೊರಟಿಸಲಾಗಿದೆ. ‘ಎಲ್ಲಾ ಶಾಲೆಗಳಲ್ಲಿ ನಾಡಗೀತೆಯನ್ನು ದೈನಂದಿನ ಚಟುವಟಿಕೆಗಳು ಆರಂಭವಾಗುವ ಮುನ್ನ ಹಾಗೂ ಸರ್ಕಾರದ ಇಲಾಖೆಗಳು ಹಾಗೂ ನಿಗಮ, ಮಂಡಳಿ, ಪ್ರಾಧಿಕಾರ ಮುಂತಾದ ಅರೆ ಸರ್ಕಾರಿ ಸಂಸ್ಥೆಗಳ ಅಧಿಕೃತ ಕಾರ್ಯಕ್ರಮಗಳನ್ನು ಏರ್ಪಡಿಸುವ ಪ್ರಾರಂಭದಲ್ಲಿ ಹಾಡುವುದು’ ಎಂಬುದು ಮೂಲ ಆದೇಶ. ಅದನ್ನು ‘ಸರ್ಕಾರಿ ಶಾಲೆಗಳು, ಅನುದಾನಿತ ಶಾಲೆಗಳಲ್ಲಿ ನಾಡಗೀತೆಯನ್ನು ದೈನಂದಿನ ಚಟುವಟಿಕೆಗಳು ಆರಂಭವಾಗುವ ಮುನ್ನ ಹಾಗೂ ಸರ್ಕಾರದ ಇಲಾಖೆಗಳು ಹಾಗೂ ನಿಗಮ, ಮಂಡಳಿ, ಪ್ರಾಧಿಕಾರ ಮುಂತಾದ ಅರೆ ಸರ್ಕಾರಿ ಸಂಸ್ಥೆಗಳ ಅಧಿಕೃತ ಕಾರ್ಯಕ್ರಮಗಳನ್ನು ಏರ್ಪಡಿಸುವ ಪ್ರಾರಂಭದಲ್ಲಿ ಹಾಡುವುದು’ ಎಂದು ತಿದ್ದಿ ಓದಿಕೊಳ್ಳತಕ್ಕದ್ದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

Exit mobile version