ದುಬೈ (ಯುಎಇ) : ದುಬೈನ ಶೇಕ್ ರಷೀದ್ ಸಭಾಂಗಣದಲ್ಲಿ ಯುಎಇ ಒಕ್ಕಲಿಗರ ಸಂಘದಿಂದ ಭಾನುವಾರ ಅದ್ಧೂರಿಯಾಗಿ ನಾಡಪ್ರಭು ಕೆಂಪೇಗೌಡರ ಉತ್ಸವ (Kempegowda Utsava) ಆಯೋಜಿಸಲಾಗಿತ್ತು. ಶ್ರೀ ಆದಿಚುಂಚನಗಿರಿ ಮಹಸಂಸ್ಥಾನದ ಪೀಠಾಧ್ಯಕ್ಷ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮಿ ಅವರ ಸಾನ್ನಿಧ್ಯದಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು.
ಈ ವೇಳೆ ಮಾತನಾಡಿದ ಮಾಜಿ ಸಿಎಂ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು, ಉತ್ತಮ ಬದುಕು ರೂಪಿಸಿಕೊಳ್ಳಲು ಹೊರನಾಡಿಗೆ ಬಂದಿರುವ ಕನ್ನಡಿಗರು ನಮ್ಮ ಸಂಸ್ಕೃತಿ, ಭಾಷೆ, ನೆಲ ಜಲದ ಮೇಲೆ ಇರಿಸಿರುವ ಪ್ರೀತಿ, ಬದ್ಧತೆ ಕಂಡು ನನ್ನ ಹೃದಯ ಉಕ್ಕಿ ಬಂದಿದೆ ಎಂದು ಮಾಜಿ ಮುಖ್ಯಮಂತ್ರಿಗಳು ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಹೊರನಾಡಿನಲ್ಲಿ ನೆಲೆಸಿದ್ದರೂ ತಾಯ್ನಾಡಿನ ಪ್ರೇಮ ಉಳಿಸಿಕೊಂಡು, ಕನ್ನಡ ಸೊಗಡನ್ನು ಬದುಕಿನಲ್ಲಿ ಹಾಸುಹೊಕ್ಕಾಗಿಸಿಕೊಂಡು ಬಾಳ್ವೆ ನಡೆಸುತ್ತಿರುವ ಕನ್ನಡಿಗರಿಗೆ ಎಷ್ಟು ಮೆಚ್ಚುಗೆ ವ್ಯಕ್ತಪಡಿಸಿದರೂ ಸಾಲದು. ಈ ದಿನ ನಡೆದ ಕೆಂಪೇಗೌಡರ ಉತ್ಸವದಲ್ಲಿ ಕನ್ನಡ ಸಂಸ್ಕೃತಿಯ ಸೊಗಡು ಸಾಕ್ಷಾತ್ಕಾರವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಭಾರತದ ಜಿಡಿಪಿ ಏರಿಕೆಯಲ್ಲಿ ಕೆಂಪೇಗೌಡರು ಕಟ್ಟಿದ ಬೆಂಗಳೂರಿನ ಕೊಡುಗೆ ದೊಡ್ಡದು
ನಾಡಪ್ರಭು ಕೆಂಪೇಗೌಡ ಅವರ ಆಡಳಿತ, ದೂರದೃಷ್ಟಿ ಎಲ್ಲೆ, ಸೀಮೆಗಳು ಇಲ್ಲ. ಅವರ ಆದರ್ಶ ಆಡಳಿತ ಎಲ್ಲರೂ ಅನುಕರಣೀಯ ಮಾಡಬೇಕು. ಸರ್ವರನ್ನು ಸಮನಾಗಿ ಕಂಡು ಆಳ್ವಿಕೆ ನಡೆಸಿದವರು. ಅಂತಹವರನ್ನು ಇಂದು ದುಬೈನಲ್ಲಿ ಸ್ಮರಿಸಿಕೊಳ್ಳುಟ್ಟಿರುವುದು ಅರ್ಥಪೂರ್ಣವಾಗಿದೆ. ಅದಾವ ಶುಭ ಮುಹೂರ್ತದಲ್ಲಿ ನಾಡಪ್ರಭುಗಳು ಬೆಂಗಳೂರು ಮಹಾನಗರಕ್ಕೆ ಅಡಿಪಾಯ ಹಾಕಿದ್ದರು. ಇಂದು ಜಾಗತಿಕ ನಗರವಾಗಿ ಬೆಳೆದಿದ್ದು, ಕರ್ನಾಟಕ ಹಾಗೂ ಭಾರತದ ಅಭಿವೃದ್ಧಿಗೆ ಅನನ್ಯ ಕೊಡುಗೆ ನೀಡುತ್ತಿದೆ. ಜಾಗತಿಕ ಪೈಪೋಟಿ ನೀಡುತ್ತಾ ಜಗತ್ತಿನ ಅತ್ಯುತ್ತಮ ನಗರಗಳಲ್ಲಿ ಒಂದಾಗಿ ಬೆಳೆದಿದೆ ಎಂದು ಮಾಜಿ ಮುಖ್ಯಮಂತ್ರಿ ನುಡಿದರು.
ಇದನ್ನೂ ಓದಿ | Karnataka Rajyotsava: ಕನ್ನಡ ರಾಜ್ಯೋತ್ಸವಕ್ಕೆ ಸಿದ್ಧತೆ ಕೈಗೊಳ್ಳಿ: ಡಿಸಿಗಳಿಗೆ ಸಚಿವ ಶಿವರಾಜ ತಂಗಡಗಿ ಸೂಚನೆ
ಕೆಂಪೇಗೌಡರ ಅದರ್ಶದೊಂದಿಗೆ ಶ್ರಮಿಸಿದ ನಮ್ಮ ಪೂರ್ವಿಕ ರೈತ ಬಂಧುಗಳು ಬೆಂಗಳೂರು ಮಹಾನಗರದ ಅಭಿವೃದ್ಧಿಗೆ ದೊಡ್ಡ ಮಟ್ಟದ ಕೊಡುಗೆ ನೀಡಿದ್ದಾರೆ. ಅದರ ಪರಿಣಾಮವಾಗಿಯೇ ಬೆಂಗಳೂರಿನಲ್ಲಿ ಇವತ್ತಿನ ದಿನ ಆಗುತ್ತಿರುವ ಆರ್ಥಿಕ ಉತ್ಪಾದನೆ ನಾಡಿಗೆ, ದೇಶಕ್ಕೆ ಬೆನ್ನುಲುಬಾಗಿ ನಿಂತಿದೆ. ಇವತ್ತು ದೇಶದ ಜಿಡಿಪಿ ಸದಾ ಏರುಮುಖವಾಗಿ ಚಲಿಸುತ್ತಿದೆ ಎಂದರೆ ಕೆಂಪೇಗೌಡರು ಕಟ್ಟಿದ್ದ ಬೆಂಗಳೂರು ನಗರದ ಕಾಣಿಕೆ ಹಿರಿದು ಎಂದರು.
ಕೆಂಪೇಗೌಡರು ಕಟ್ಟಿದ ಕೆರೆಗಳು ಏನಾದವು?
ಇವತ್ತು ನಾವು ಕೆಂಪೇಗೌಡರನ್ನು ಸ್ಮರಣೆ ಮಾಡುತ್ತಿದ್ದೇವೆ. ಆದರೆ, ಅವರು ಬೆಂಗಳೂರಿನಲ್ಲಿ ನಿರ್ಮಿಸಿದ ಕೆರೆಗಳು ಏನಾದವು? ನಮ್ಮ ಸ್ವಾರ್ಥ, ಸಂಕುಚಿತ ಮನಸ್ಥಿತಿಯ ಕಾರಣಕ್ಕೆ ಬೆಂಗಳೂರು ಅಭಿವೃದ್ಧಿ ಹೆಸರಿನಲ್ಲಿ ಅನೇಕ ಕೆರೆಗಳನ್ನು ನಾಶ ಮಾಡಲಾಗಿದೆ. ಒಂದು ಕಾಲದಲ್ಲಿ ಬೆಂಗಳೂರನ್ನು ಗಾರ್ಡನ್ ಸಿಟಿ ಎಂದು ನಾವೆಲ್ಲರೂ ಹೆಮ್ಮೆಯಿಂದ ಕರೆಯುತ್ತಿದ್ದೆವು. ಈಗ ಗಾರ್ಬೇಜ್ ಸಿಟಿ ಎಂದು ಕರೆಯಲಾಗುತ್ತಿದೆ. ಇದಕ್ಕೆ ಹೊಣೆ ಯಾರು? ಎಂದು ಮಾಜಿ ಮುಖ್ಯಮಂತ್ರಿಗಳು ಕಳವಳ ವ್ಯಕ್ತಪಡಿಸಿದರು.
ಇವತ್ತು ತಾಂತ್ರಿಕವಾಗಿ ನಾವು ಬಹಳಷ್ಟು ಸಾಧಿಸಿದ್ದೇವೆ. ಚಂದ್ರಯಾನ, ಸೂರ್ಯಯಾನ ಎಂದು ಸಾಧನೆ ಮಾಡುತ್ತಿದ್ದೇವೆ. ಆದರೆ, ಬೆಂಗಳೂರಿನಂಥ ಐತಿಹಾಸಿಕ ನಗರಕ್ಕೆ ಮೂಲಭೂತ ಸೌಕರ್ಯ ಕಲ್ಪಿಸಲು ಸೋತಿದ್ದೇವೆ. ಇದು ವಿಷಾದನೀಯ. ರಾಜಕಾರಣಿಗಳಾಗಿ ನಮ್ಮ ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸುವಲ್ಲಿ ನಾವೆಲ್ಲೊ ಸೋತಿದ್ದೇವೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಮಾಜಿ ಸಚಿವರಾದ ಸಿ.ಪಿ.ಯೋಗೇಶ್ವರ್, ಶಾಸಕರಾದ ಸಮೃದ್ಧಿ ಮಂಜುನಾಥ್, ಸ್ವರೂಪ್ ಪ್ರಕಾಶ್ ಸೇರಿ ರಾಜ್ಯದ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಯುಎಇ ಒಕ್ಕಲಿಗರ ಸಂಘದ ಅಧ್ಯಕ್ಷೆ ರಶ್ಮಿ ನಂದಕಿಶೋರ್, ಉಪಾಧ್ಯಕ್ಷ ಹರೀಶ್ ಕೋಡಿ ಸೇರಿ ಸಂಘದ ಪದಾಧಿಕಾರಿಗಳು, ನೂರಾರು ಕನ್ನಡಿಗರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಇದನ್ನೂ ಓದಿ | Basaveshwara District: ಬಸವೇಶ್ವರ ಜಿಲ್ಲೆ ಪರವೂ ಇಲ್ಲ, ವಿರುದ್ಧವೂ ಇಲ್ಲ: ಡಾ. ಎಸ್.ಬಿ. ಜಾಮದಾರ
ಕೆಂಪೇಗೌಡ ಉತ್ಸವದ ಭಾಗವಾಗಿ ಭರತನಾಟ್ಯ, ಜಾನಪದ ನೃತ್ಯ, ಯಕ್ಷಗಾನ, ಶಾಸ್ತ್ರೀಯ ಸಂಗೀತ, ಹಾಸ್ಯ ಕಾರ್ಯಕ್ರಮ ಸೇರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ನೂರಾರು ಜನರು ಉತ್ಸವದಲ್ಲಿ ಭಾಗಿಯಾಗಿದ್ದರು.