Site icon Vistara News

Bhaskardas Ekkaru | ರಾಷ್ಟ್ರಮಟ್ಟದಲ್ಲಿ ಅಲೆಮಾರಿಗಳಿಗೆ ಭಾಸ್ಕರದಾಸ್ ಎಕ್ಕಾರು ಧ್ವನಿಯಾಗಿದ್ದರು: ನಳಿನ್‌ ಕುಮಾರ್ ಕಟೀಲ್

Bhaskardas Ekkaru

ಬೆಂಗಳೂರು: ರಾಷ್ಟ್ರಮಟ್ಟದಲ್ಲಿ ಅಲೆಮಾರಿಗಳಿಗೆ ಧ್ವನಿ ಕೊಟ್ಟಿದ್ದ ಭಾಸ್ಕರದಾಸ್ ಎಕ್ಕಾರು ಅವರು ಶ್ರಮಜೀವಿ, ಸ್ವಾಭಿಮಾನಿಯಾಗಿದ್ದರು. ಧರ್ಮನಿಷ್ಠರಾಗಿದ್ದ ಅವರು ವಿಚಾರವಾದಿ. ಜಾತ್ಯತೀತರಾಗಿ ವಿಶಿಷ್ಟ ವ್ಯಕ್ತಿತ್ವ ಹೊಂದಿದ್ದರು. ಅಲೆಮಾರಿ ಸಮುದಾಯದ ಕಣ್ಣೀರು ಒರೆಸುವ ಕೆಲಸವನ್ನು ಮಾಡುವ ಜತೆಗೆ ಪಕ್ಷದ ಬಲ ವರ್ಧಿಸಿದ್ದ ಅವರು ನನ್ನ ವ್ಯಕ್ತಿತ್ವ ರೂಪುಗೊಳ್ಳುವಲ್ಲಿ ಪ್ರಮುಖರು ಎಂದು ರಾಜ್ಯ ಬಿಜೆಪಿ‌ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಭಾವುಕರಾಗಿ ಮಾತನಾಡಿದರು.

ಕರ್ನಾಟಕ ರಾಜ್ಯ ಅಲೆಮಾರಿ, ಅರೆ ಅಲೆಮಾರಿ ಮತ್ತು ವಿಮುಕ್ತ ಬುಡಕಟ್ಟುಗಳ ಒಕ್ಕೂಟ ಹಾಗೂ ಕರ್ನಾಟಕ ರಾಜ್ಯ ಚೆನ್ನದಾಸರ ಕ್ಷೇಮಾಭಿವೃದ್ಧಿ ಸಂಘದಿಂದ ನಗರದ ಮಿಥಿಕ್ ಸೊಸೈಟಿಯ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಅಲೆಮಾರಿ ಸಮುದಾಯದ ನಡುವಿನ ಅಪರೂಪದ ಹೋರಾಟಗಾರ ‘ಭಾಸ್ಕರದಾಸ್ ಎಕ್ಕಾರು ನೆನಪಿನ ಯಾತ್ರೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇದನ್ನೂ ಓದಿ | Voter Data | ಅಲ್ಪಸಂಖ್ಯಾತ ಮತದಾರರನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟಿಲ್ಲ: ಸಿಎಂ ಬೊಮ್ಮಾಯಿ

ಕ್ಷೇತ್ರದಲ್ಲಿ ಬಿಜೆಪಿಯನ್ನು ಎಕ್ಕಾರು ತಳಮಟ್ಟದಿಂದ ಕಟ್ಟಿದ್ದರು. ಗ್ರಾಮ ಪಂಚಾಯಿತಿ ಮಟ್ಟದಿಂದ 12 ಸದಸ್ಯರನ್ನು ಗೆಲ್ಲಿಸುವುದರಿಂದ ಆರಂಭವಾಗಿ ಕೊನೆಯವರೆಗೂ ಬಿಜೆಪಿ ತತ್ವಗಳಿಗೆ ಬದ್ಧರಾಗಿದ್ದರು. ಅಲೆಮಾರಿ ಜನಾಂಗದವರು ಮತಾಂತರ ಆಗುವ ಆತಂಕ ಅವರಲ್ಲಿ ಇತ್ತು. ಅಲೆಮಾರಿಗಳ ಅಭಿವೃದ್ಧಿ ಜತೆಗೆ ಧರ್ಮರಕ್ಷಣೆ ಕಾರ್ಯವನ್ನು ಮಾಡಿದ್ದರು ಎಂದರು.

ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಅಲೆಮಾರಿ ಜನಾಂಗದ ಅಭಿವೃದ್ಧಿಗಾಗಿ ಶೀಘ್ರವೇ ಆಯೋಗ ರಚಿಸಲಾಗುವುದು ಎಂದು ಭರವಸೆ ನೀಡಿದರು.

ಅಲೆಮಾರಿಗಳ ಅಭಿವೃದ್ಧಿಗಾಗಿ ಆಯೋಗ ರಚನೆ ಭಾಸ್ಕರದಾಸ್ ಎಕ್ಕಾರು ಅವರ ಕನಸು. ಅಲೆಮಾರಿ ಜನಾಂಗದ ಅಭಿವೃದ್ಧಿಗೆ ಕೇಂದ್ರದಿಂದ ಸಾವಿರಾರು ಕೋಟಿ ರೂಪಾಯಿ ಅನುದಾನ ಲಭ್ಯವಾಗುತ್ತದೆ. ಇದರಿಂದ ಅಲೆಮಾರಿ ಜಾತಿಗಳ ವರ್ಗೀಕರಣ, ಅಭಿವೃದ್ಧಿಗೆ ಅನುದಾನ ಸಿಗಲಿದೆ. ಹೀಗಾಗಿ ಮುಖ್ಯಮಂತ್ರಿಗಳ ಜತೆಗೆ ಚರ್ಚಿಸಿ ಶೀಘ್ರವೇ ಆಯೋಗ ರಚನೆ ಬಗ್ಗೆ ತೀರ್ಮಾನಿಸಲಾಗುವುದು. ಇನ್ನು, ಅಲೆಮಾರಿಗಳಿಗೆ ವಸತಿ ಯೋಜನೆಯಡಿ ಮುಂದಿನ ಹದಿನೈದು ದಿನಗಳಲ್ಲಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ 10 ಸಾವಿರ ಮನೆಗಳನ್ನು ವಿತರಣೆ ಮಾಡಲಿದ್ದೇವೆ ಎಂದರು.

ಅಲೆಮಾರಿ ಸಮುದಾಯಗಳ ರಾಷ್ಟ್ರೀಯ ಆಯೋಗದ ಅಧ್ಯಕ್ಷ ಭೀಕೂ ರಾಮಜಿ ಇದಾತೆ ಮಾತನಾಡಿ, ತೀರಾ ಸರಳವಾಗಿ ಬದುಕಿ ಬಾಳಿದ ಎಕ್ಕಾರು ಅವರದು ಸಂವೇದನಾಶೀಲ ವ್ಯಕ್ತಿತ್ವ. ಅವರ ಜೀವನ ಮುಂದಿನ ಪೀಳಿಗೆಗೆ ಮಾರ್ಗದರ್ಶಿ ಆಗಬೇಕು. ಅವರ ಹೆಸರಿನಲ್ಲಿ ಪುರಸ್ಕಾರ ನೀಡುವ ಕಾರ್ಯವನ್ನು ಸರ್ಕಾರ ಮಾಡಬೇಕು ಎಂದು ಒತ್ತಾಯಿಸಿದರು.

ಒಕ್ಕೂಟದ ಅಧ್ಯಕ್ಷ ಶೇಷಪ್ಪ ಅಂದೊಳ್ಳು ಮಾತನಾಡಿ, ಭಾಸ್ಕರದಾಸ್ ಅವರು ಕೊನೆಯವರೆಗೂ ಅಲೆಮಾರಿ ಸಮುದಾಯದ ಪರವಾಗಿ ಶ್ರಮಿಸಿದರು. ಸಮಾಜದ ವಿಕಾಸದ ಹಾದಿಯಲ್ಲಿ ನಂಬಿಕೆ ಇಟ್ಟಿದ್ದರು. ಅವರ ಕಾರ್ಯವನ್ನು ಮುಂದುವರಿಸಿಕೊಂಡು ಹೋಗುವ ಮೂಲಕ ಅವರಿಗೆ ನಿಜವಾದ ಗೌರವವನ್ನು ಸಲ್ಲಿಸಬೇಕು. ಅವರ ಹೆಸರಿನಲ್ಲಿ ಪುರಸ್ಕಾರ ನೀಡುವಂತಾಗಬೇಕು. ಸರ್ಕಾರ ಆದಷ್ಟು ಬೇಗ ಅಲೆಮಾರಿ ಸಮುದಾಯದ ಅಭಿವೃದ್ಧಿಗೆ ನಿಗಮ ರಚಿಸಲಿ ಎಂದು ಒತ್ತಾಯಿಸಿದರು.

ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಅನೀಲ ಪಾಡ್, ಹಿರಿಯ ಮುಖಂಡ ಕುಪ್ಪೆ ನಾಗರಾಜ್, ಚಾವಡೆ ಕೆ. ಲೋಕೇಶ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ | ಡಿ.ಕೆ.ಶಿವಕುಮಾರ್ ಯಾರ ಶಿಷ್ಯ, ಎಲ್ಲಿಂದ ಬಂದದ್ದು ಗೊತ್ತಿದೆ: ನಳಿನ್‍ಕುಮಾರ್ ಕಟೀಲ್ ವಾಗ್ದಾಳಿ

Exit mobile version