ಬೆಂಗಳೂರು: ನಮ್ಮ ಮೆಟ್ರೋ ರೈಲಿನಲ್ಲಿ ಮಹಿಳಾ ಪ್ರಯಾಣಿಕರ (Namma Metro) ಜತೆ ಅಸಭ್ಯ ವರ್ತನೆ (Indecent behaviour) ತೋರಿದರೆ ಇನ್ಮುಂದೆ 10 ಸಾವಿರ ರೂ. ದಂಡವನ್ನು (Penalty) ವಸೂಲಿ ಮಾಡಲಾಗುತ್ತದೆ. ಬಿಎಂಆರ್‌ಸಿಎಲ್ ತನ್ನ ಮಹಿಳಾ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಈ ತೀರ್ಮಾನವನ್ನು ಮಾಡಿದೆ. ಇತ್ತೀಚೆಗೆ ನಮ್ಮ ಮೆಟ್ರೋದಲ್ಲಿ ಮಹಿಳಾ ಪ್ರಯಾಣಿಕರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ.
ಮೆಟ್ರೋ ರೈಲಿನಲ್ಲಿ ಮಹಿಳೆಯರನ್ನು ಸ್ಪರ್ಶಿಸುವುದು, ಕಿರಿಕಿರಿಯುನ್ನುಂಟು ಮಾಡಿ ಅಸಭ್ಯವಾಗಿ ವರ್ತಿಸುತ್ತಿದ್ದರು. ಇದಕ್ಕೆ ಬ್ರೇಕ್ ಹಾಕುವಾಗ ಸಲುವಾಗಿ ಬಿಎಂಆರ್‌ಸಿಎಲ್ ದಂಡ ವಸೂಲಿ ಮೊತ್ತವನ್ನು ದುಪ್ಪಟ್ಟು ಮಾಡಿದೆ. ಮಹಿಳಾ ಪ್ರಯಾಣಿಕರ ಜತೆ ಅಸಭ್ಯವಾಗಿ ವರ್ತಿಸಿದರೆ ಮೊದಲು 500 ರೂಪಾಯಿ ದಂಡ ಇತ್ತು. ಇದೀಗ ಬಿಎಂಆರ್‌ಸಿಎಲ್ ದಂಡದ ಮೊತ್ತವನ್ನು 20 ಪಟ್ಟು ಏರಿಕೆ ಮಾಡಿದೆ.
ಇದನ್ನೂ ಓದಿ:Namma Metro : ಲೈಂಗಿಕ ಕಿರುಕುಳ ಹೆಚ್ಚಳ; ನಮ್ಮ ಮೆಟ್ರೋ ರೈಲಿನಲ್ಲಿ ಮಹಿಳೆಯರಿಗಾಗಿ ಮತ್ತೊಂದು ಬೋಗಿ ಮೀಸಲು!
ನಮ್ಮ ಮೆಟ್ರೋದಲ್ಲಿ ಲೈಂಗಿಕ ಕಿರುಕುಳ ಹೆಚ್ಚಳ
ಘಟನೆ-1 ಹಿಂದಿನ ಭಾಗ ಮುಟ್ಟಿ ಕಾಲೇಜು ವಿದ್ಯಾರ್ಥಿನಿಗೆ ಕಿರುಕುಳ
ಮೆಜೆಸ್ಟಿಕ್‌ನಲ್ಲಿರುವ ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣದಲ್ಲಿ. ಯುವತಿಯೊಬ್ಬಳಿಗೆ 2023ರ ನವೆಂಬರ್ 22ರ ಬೆಳಗ್ಗೆ 8.30ರ ಸುಮಾರಿಗೆ ಮೆಟ್ರೋದಲ್ಲಿ ಪ್ರಯಾಣಿಸಲೆಂದು ಮೆಜೆಸ್ಟಿಕ್ ರೈಲು ನಿಲ್ದಾಣಕ್ಕೆ ಬಂದಿದ್ದಳು. ಅಷ್ಟು ಹೊತ್ತಿಗೆ ಅಲ್ಲಿ ಭಾರಿ ಜನದಟ್ಟಣೆ ಇತ್ತು. ರೈಲು ಏರುವಾಗಲೂ ಹಿಂದಿನಿಂದ ತಳ್ಳಾಟ ಜೋರಾಗಿತ್ತು. ಹಾಗೆ ಕಷ್ಟು ಕಟ್ಟು ಏರಿ ಹೇಗೋ ಒಳಗೆ ನಿಂತ ಮೇಲೆ ಕೆಂಪು ಅಂಗಿ ಧರಿಸಿದ್ದ ವ್ಯಕ್ತಿಯೊಬ್ಬ ಆಕೆಗೆ ಕಿರುಕುಳ ನೀಡಲು ಆರಂಭಿಸಿದ್ದಾನೆ. ಆಕೆಯ ಹಿಂದಿನ ಭಾಗವನ್ನು ಸ್ಪರ್ಶಿಸಿ ಕಿರುಕುಳ ನೀಡಲು ಆರಂಭ ಮಾಡಿದ್ದಾನೆ. ಆರಂಭದಲ್ಲಿ ಆಕೆಗೆ ಇದು ಜನರ ಒತ್ತಡದ ನಡುವೆ ಏನೋ ತಪ್ಪಾಗಿ ನಡೆಯುತ್ತಿರಬಹುದು ಎಂದು ಭಾವಿಸಿದ್ದಾಳೆ. ಆದರೆ, ಕೆಲವೇ ಸೆಕೆಂಡುಗಳಲ್ಲಿ ಆಕೆಗೆ ಆತನ ದುಷ್ಟ ವರ್ತನೆ ಅರ್ಥವಾಗಿತ್ತು. ಆಕೆ ಆತನಿಂದ ತಪ್ಪಿಸಿಕೊಂಡು ಸ್ವಲ್ಪ ಮುಂದೆ ಹೋಗಿ ಬೇರೆಯವರ ಸಹಾಯ ಕೋರಿದರೂ ಎಲ್ಲರೂ ತಮ್ಮ ಲೋಕದಲ್ಲೇ ಮುಳುಗಿದ್ದರು ಬಿಟ್ಟರೆ ಯಾರೂ ಸಹಾಯಕ್ಕೆ ಬರಲಿಲ್ಲ ಎಂದು ಆಕೆಯ ಗೆಳತಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಳು.
ಘಟನೆ-2 ಟೆಕ್ಕಿ ಯುವತಿ ಮೈ ಸವರಿದ್ದ ಕಾಮುಕ
ಬೆಂಗಳೂರಿನ ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ (Majestic Metro Railway station) 2023 ಡಿಸೆಂಬರ್ 7ರ ಬೆಳಗ್ಗೆ 9.40ರ ಸುಮಾರಿಗೆ ಈ ಘಟನೆ ನಡೆದಿತ್ತು. ಕಿರುಕುಳಕ್ಕೆ ಒಳಗಾದ ಯುವತಿ ಕೂಗಿಕೊಂಡಾಗ ಅಲ್ಲಿದ್ದ ಮೆಟ್ರೋ ಸಿಬ್ಬಂದಿ ಕೂಡಲೇ ಅ ಕೀಚಕನನ್ನು ಹಿಡಿದಿದ್ದರು. ಕೆಲವು ದಿನಗಳ ಹಿಂದಷ್ಟೇ ಒಬ್ಬ ಯುವತಿಗೆ ಮೆಟ್ರೋದಲ್ಲಿ ಕಿರುಕುಳ (Physical abuse in Metro) ನೀಡಲಾಗಿತ್ತು. 22 ವರ್ಷದ ಯುವತಿ ರೈಲಿನಲ್ಲಿದ್ದಾಗ ರೈಲಿನ ಜನ ಸಂದಣಿ ಮತ್ತು ಒತ್ತಡದ ಪರಿಸ್ಥಿತಿಯ ಲಾಭವನ್ನು ಎತ್ತಿದ ಲೋಕೇಶ್ ಅಲಿಯಾಸ್ ಲೋಕಿ ಎಂಬಾತ ಆಕೆಯ ಮೈಕೈ ಮುಟ್ಟಿ ಕಿರುಕುಳ ನೀಡಿದ್ದ. ಅನುಚಿತವಾಗಿ ವರ್ತಿಸಿದ ಆತ ರೈಲು ನಿಲ್ಲುತ್ತಿದ್ದಂತೆಯೇ ರೈಲಿನಿಂದ ಇಳಿದು ಎಸ್ಕಲೇಟರ್ ಮೂಲಕ ಎಸ್ಕೇಪ್ ಆಗಲು ಯತ್ನಿಸಿದ್ದ. ಆಗ ಯುವತಿ ಜೋರಾಗಿ ಕೂಗಿಗೊಂಡಾಗ ಭದ್ರತಾ ಸಿಬ್ಬಂದಿ ಆತನನ್ನು ಅಲ್ಲೇ ಹಿಡಿದುಹಾಕಿದ್ದರು. ಈ ಬಗ್ಗೆ ಉಪ್ಪಾರಪೇಟೆ ಪೊಲೀಸ್ ಠಾಣೆಗೆ ದೂರು ದಾಖಲಾಗಿ, ಬಳಿಕ ಆತ ಅರೆಸ್ಟ್ ಆಗಿದ್ದ.
ಘಟನೆ-3 ಯುವತಿಯ ಹಿಂದೆ ನಿಂತು ಲೈಂಗಿಕ ಕಿರುಕುಳ
2023 ಡಿಸೆಂಬರ್ 23ರಂದು ಕುಡಿದ ಮತ್ತಿನಲ್ಲಿ ಯುವತಿಯ ಜತೆ ವ್ಯಕ್ತಿಯೊಬ್ಬ ಅಸಭ್ಯವಾಗಿ ವರ್ತಿಸಿದ್ದ. ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ಯುವತಿಯು ವೈಟ್‌ಫೀಲ್ಡ್‌ಗೆ ಹೋಗಲು ನ್ಯಾಷನಲ್ ಕಾಲೇಜು ಬಳಿ ಮೆಟ್ರೋ ಹತ್ತಿದ್ದಳು. ಸಂತ್ರಸ್ತೆ ಪ್ರಯಾಣಿಸುತ್ತಿದ್ದ ಬೋಗಿಯಲ್ಲಿ ಕುಳಿತಿದ್ದ ವ್ಯಕ್ತಿಯು ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಯುವತಿ ಇಳಿಯುತ್ತಿದ್ದಂತೆ ಅಸಭ್ಯವಾಗಿ ವರ್ತನೆ ಮಾಡಿದ್ದ. ಹಿಂದಿನಿಂದ ಯುವತಿಯ ಮೈಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದ. ನಂತರ ಆಕೆಯನ್ನೇ ನೋಡುತ್ತ ನಿಂತು, ಬಳಿಕ ಅಲ್ಲಿಂದ ಹೊರಟಿದ್ದ. ಇದರಿಂದ ಭಯಗೊಂಡಿದ್ದ ಯುವತಿಯು ಕೂಡಲೇ ಮೆಟ್ರೋದಿಂದ ಇಳಿದು ಸೆಕ್ಯೂರಿಟಿ ಸಿಬ್ಬಂದಿಗೆ ವಿಚಾರವನ್ನು ತಿಳಿಸಿದ್ದಾಳೆ. ಕೂಡಲೇ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿತ್ತು.
ಘಟನೆ- 4 ಯುವತಿ ಖಾಸಗಿ ಅಂಗವನ್ನು ಸ್ವರ್ಶಿಸಿದ
2024ರ ಜನವರಿ 1ರಂದು ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಯುವತಿಯ ಖಾಸಗಿ ಅಂಗವನ್ನು ಸ್ವರ್ಶಿಸಿ ವ್ಯಕ್ತಿಯೊಬ್ಬ ಕಿರುಕುಳ ನೀಡಿದ್ದ. ವ್ಯಕ್ತಿಯ ಕಿರುಕುಳವನ್ನು ನಮ್ಮ ಮೆಟ್ರೋದ ಭದ್ರತಾ ವಿಭಾಗದ ಸಿಬ್ಬಂದಿಗೆ ತಿಳಿಸಿದ ಯುವತಿ ಎಲ್ಲರ ಸಮ್ಮುಖದಲ್ಲೇ ಛೀಮಾರಿ ಹಾಕಿದ್ದಳು. ಕೂಡಲೇ ಕಿರುಕುಳ ನೀಡಿದ ವ್ಯಕ್ತಿಯನ್ನು ವಿಚಾರಣೆ ನಡೆಸಿದ ಸಿಬ್ಬಂದಿ ಪೊಲೀಸರಿಗೆ ಒಪ್ಪಿಸಿದ್ದರು. ಬಳಿಕ ಕಾಮುಕ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡು, ಇನ್ನೊಮ್ಮೆ ಹೀಗೆ ಮಾಡುವುದಿಲ್ಲ ಎಂದು ಕ್ಷಮೆಯಾಚಿಸಿದ್ದ.
ಹೆಚ್ಚುತ್ತಿರುವ ಒತ್ತಡದ ಪರಿಣಾಮ
ಮೆಟ್ರೋ ರೈಲಿನಲ್ಲಿ ಈಗ ಪೀಕ್ ಅವರ್ ಸಂಚಾರ ಎನ್ನುವುದು ನಿಜಕ್ಕೂ ದುಸ್ವಪ್ನವೇ ಆಗಿದೆ. ಚಲ್ಲಘಟ್ಟದಿಂದ ನೇರವಾಗಿ ವೈಟ್ ಫೀಲ್ಡ್ ಕನೆಕ್ಷನ್ ಸಿಗುವುದರಿಂದ ಜನರು ಹೆಚ್ಚು ಹೆಚ್ಚು ಮೆಟ್ರೋ ರೈಲನ್ನು ಅವಲಂಬಿಸಿದ್ದಾರೆ. ಇದರಿಂದಾಗಿ ಜನರ ಒತ್ತಡ ಹೆಚ್ಚಿದೆ. ಈಗ ಎಲ್ಲ ರೀತಿಯ ಜನರೂ ಮೆಟ್ರೋ ಹತ್ತುವುದರಿಂದು ಕೆಲವರು ತಮ್ಮ ಕೆಟ್ಟ ಚಾಳಿಗಳನ್ನು ಇಲ್ಲಿಗೂ ತಂದಿದ್ದಾರೆ.
ಜನದಟ್ಟಣೆಯ ಸಂದರ್ಭದಲ್ಲಿ ರೈಲನ್ನು ಏರುವುದೇ ಕಷ್ಟವಾಗುತ್ತದೆ. ಒಳಗೆ ಹೋದರೆ ಉಸಿರಾಡಲಾಗದ ಒತ್ತೊತ್ತಾಗಿ ನಿಲ್ಲಬೇಕಾದ ಪರಿಸ್ಥಿತಿ. ಜತೆಗೆ ಬ್ಯಾಗ್‌ಗಳ ಒತ್ತಡ. ಇಂಥ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಂಡು ಕೆಲವರು ಕಿರುಕುಳ ನೀಡಲು ಶುರು ಮಾಡುತ್ತಾರೆ. ಕೆಲವೊಮ್ಮೆ ಕಿರುಕುಳ ನೀಡುತ್ತಿದ್ದಾರೆ ಎಂಬುದು ಗೊತ್ತಾದರೂ ವಿರೋಧಿಸಲಾಗದ ಪರಿಸ್ಥಿತಿ ಇರುತ್ತದೆ. ನಾವು ಬೇಕೂಂತ ಮಾಡಿಲ್ಲ. ಇಷ್ಟೊಂದು ಜನ ಇದ್ದಾಗ ಒಬ್ಬರಿಗೊಬ್ಬರು ತಾಕುವುದನ್ನೇ ದೊಡ್ಡ ವಿಷಯ ಯಾಕೆ ಮಾಡುತ್ತೀರಿ ಎಂದು ತಿರುಗಿ ಪ್ರಶ್ನೆ ಕೇಳುತ್ತಾರೆ. ಇವರು ಮಾಡುವ ಕುಚೇಷ್ಟೆಗಳನ್ನು ಯಾವ ಸಿಸಿ ಕ್ಯಾಮೆರಾವೂ ಪತ್ತೆ ಹಚ್ಚುವುದು ಕಷ್ಟ. ಇನ್ನು ಮೆಟ್ರೋಗಳಲ್ಲಿ ಈಗ ಜನರ ಬೈದಾಟ, ತಳ್ಳಾಟವೂ ಜಾಸ್ತಿಯಾಗಿದೆ. ಬಸ್ ಸ್ಟಾಂಡ್‌ಗಳ ವಾತಾವರಣವೇ ಇಲ್ಲೂ ಕಂಡುಬರುತ್ತಿದೆ. ಇದಕ್ಕೆ ಪರಿಹಾರವಾಗಿ, ಪೀಕ್ ಅವರ್‌ಗಳಲ್ಲಿ ಹೆಚ್ಚುವರಿ ರೈಲುಗಳನ್ನು ಬಿಡುವುದು ಒಂದೇ ಮಾರ್ಗ ಎಂದು ಪ್ರಯಾಣಿಕರು ಅಭಿಪ್ರಾಯಪಟ್ಟಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ