ಬೆಂಗಳೂರು: ಪ್ರಯಾಣಿಕರ ಅನುಕೂಲಕ್ಕಾಗಿ ನಮ್ಮ ಮೆಟ್ರೋ ರೈಲು (Namma Metro) ಓಡಾಟದ ಸಮಯವನ್ನು ಬಿಎಂಆರ್‌ಸಿಎಲ್ ವಿಸ್ತರಣೆ ಮಾಡಿದೆ. ಮಾ.24ರ ಭಾನುವಾರದಂದು ಬೆಂಗಳೂರಿನ ಬಿಡದಿ ಇಂಡಸ್ಟ್ರಿಯಲ್ ಏರಿಯಾದಲ್ಲಿ ಬಿಡದಿ ಹಾಫ್ ಮ್ಯಾರಥಾನ್ ಆಯೋಜಿಸಲಾಗಿದೆ. ಮ್ಯಾರಥಾನ್‌ಗೆ ನೂರಾರು ಮಂದಿ ಭಾಗವಹಿಸುವ ಕಾರಣಕ್ಕೆ ಬಿಎಂಆರ್‌ಸಿಎಲ್ ತನ್ನ ಎಲ್ಲಾ ನಾಲ್ಕು ಟರ್ಮಿನಲ್‌ಗಳಿಂದ ಮತ್ತು ಇಂಟರ್‌ಚೇಂಜ್ ಸ್ಟೇಷನ್ ನಾಡಪ್ರಭು ಕೆಂಪೇಗೌಡ ಮೆಟ್ರೋ ಸ್ಟೇಷನ್ ಮೆಜೆಸ್ಟಿಕ್‌ನಿಂದ ಭಾನುವಾರ ಬೆಳಗ್ಗೆ 07:00 ಗಂಟೆ ಬದಲಾಗಿ ಬೆಳಗ್ಗೆ 04:30 ರಿಂದಲೇ ಮೆಟ್ರೋ ರೈಲು ಸೇವೆಗಳನ್ನು ಪ್ರಾರಂಭಿಸಲಾಗುತ್ತಿದೆ.
ಐಪಿಎಲ್ ಪಂದ್ಯದಂದು ಕೊನೆ ರೈಲು 11.30ಕ್ಕೆ ವಿಸ್ತರಣೆ
ಇನ್ನೂ ಬೆಂಗಳೂರಿನಲ್ಲಿ ಟಾಟಾ ಐಪಿಎಲ್ ಟಿ-20 (TATA IPL T-20) ಕ್ರಿಕೆಟ್ ಪಂದ್ಯಗಳು ನಡೆಯಲಿದೆ. ಬೆಂಗಳೂರಲ್ಲಿ ಮೊದಲ ಪಂದ್ಯ ಮಾ. 25, 29 ಹಾಗೂ ಏ.2ರಂದು ಪಂದ್ಯಾವಳಿ ನಡೆಯಲಿದೆ. ಆ ದಿನದಂದು ಪಂದ್ಯ ವೀಕ್ಷಣೆಗಾಗಿ ಬರುವ ಪ್ರಯಾಣಿಕರ ಅನುಕೂಲಕ್ಕಾಗಿ ಎಲ್ಲಾ ನಾಲ್ಕು ಟರ್ಮಿನಲ್ ಮೆಟ್ರೋ ನಿಲ್ದಾಣಗಳಿಂದ ಕೊನೆಯ ರೈಲು ಸೇವೆಗಳನ್ನು ರಾತ್ರಿ 11.30ಕ್ಕೆ ವಿಸ್ತರಿಸಲಾಗಿದೆ.
ಇದನ್ನೂ ಓದಿ: Tumkur Tragedy : ಕುಚ್ಚಂಗಿ ಕೆರೆಯಲ್ಲಿ ಭಸ್ಮವಾದ ಕಾರು ಪತ್ತೆ, ಒಳಗೆ 3 ಶವಗಳು!
ಪೇಪರ್ ಟಿಕೆಟ್ ಮಾರಾಟ
ಇನ್ನೂ ಪಂದ್ಯದ ದಿನಗಳಂದು ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಮಧ್ಯಾಹ್ನ 2 ಗಂಟೆಯಿಂದ ರಿಟರ್ನ್ ಜರ್ನಿ ಪೇಪರ್ ಟಿಕೆಟ್‌ಗಳನ್ನು 50 ರೂ. ಮಾರಾಟ ಮಾಡಲಾಗುತ್ತಿದೆ. ಇದು ಕಬ್ಬನ್ ಪಾರ್ಕ್ ಮತ್ತು ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣಗಳಿಂದ ಯಾವುದೇ ಇತರ ಮೆಟ್ರೋ ನಿಲ್ದಾಣಕ್ಕೆ ಒಂದೇ ಪ್ರಯಾಣಕ್ಕೆ ವಿತರಣೆಯ ದಿನದಂದು ರಾತ್ರಿ 8.00 ರಿಂದ ದಿನದ ಸೇವೆಗಳು ಕೊನೆಗೊಳ್ಳುವವರೆಗೆ ಮಾನ್ಯವಾಗಿರುತ್ತದೆ. ಈ ನಿಲ್ದಾಣಗಳಲ್ಲಿ ಟೋಕನ್ ಲಭ್ಯವಿರುವುದಿಲ್ಲ.
ಎಂದಿನಂತೆ, ಕ್ಯೂಆರ್ ( QR) ಕೋಡ್ ಟಿಕೆಟ್‌ಗಳು, ಸ್ಮಾರ್ಟ್ ಕಾರ್ಡ್‌ಗಳು ಮತ್ತು ಎನ್‌ಸಿಎಂಸಿ (NCMC) ಕಾರ್ಡ್‌ಗಳನ್ನು ಸಹ ಬಳಸಬಹುದು. ವಾಟ್ಸ್ ಆಪ್/ನಮ್ಮ ಮೆಟ್ರೋ ಆ್ಯಪ್/ಪೇ ಟಿಎಂ ಮೂಲಕ ಕ್ರಿಕೆಟ್ ಪಂದ್ಯದ ಆರಂಭಕ್ಕೆ ಮುಂಚಿತವಾಗಿ QR ಟಿಕೆಟ್‌ಗಳನ್ನು ಖರೀದಿಸಲು ಸಾರ್ವಜನಿಕರಿಗೆ ಸೂಚಿಸಲಾಗಿದೆ. ಕಬ್ಬನ್ ಪಾರ್ಕ್ ಮತ್ತು ಎಂಜಿ ರೋಡ್ ಮೆಟ್ರೋ ನಿಲ್ದಾಣಗಳಲ್ಲಿ ಟಿಕೆಟ್ ಖರೀದಿಸಲು ಟಿಕೆಟ್ ಕೌಂಟರ್‌ಗಳಲ್ಲಿ ಜನಸಂದಣಿಯನ್ನು ತಪ್ಪಿಸಲು ಈ ವ್ಯವಸ್ಥೆ ಮಾಡಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ