Site icon Vistara News

Namma Metro : ಮೆಟ್ರೋ ಸ್ಟೇಷನ್‌ನಲ್ಲಿ‌ ಪ್ರಯಾಣಿಕರ ಅವಾಂತರ ತಡೆಯಲು ಪ್ಲ್ಯಾಟ್‌ಫಾರಂಗೆ ಬ್ಯಾರಿಕೇಡ್

Namma Metro Barricade

ಬೆಂಗಳೂರು: ಬೆಂಗಳೂರಿನ ಮೆಜೆಸ್ಟಿಕ್‌ ಮೆಟ್ರೋ ನಿಲ್ದಾಣದಲ್ಲಿ (Bangalore Majestic Metro Railway Station) ಯಾವ ಮಟ್ಟಿಗಿನ ಜನದಟ್ಟಣೆ ಇದೆ ಎಂದರೆ ಕೆಲಮೊಮ್ಮೆ ನೂಕಾಟ, ತಳ್ಳಾಟಗಳು ನಡೆಯುತ್ತವೆ. ಇದರಿಂದ ಪ್ರಯಾಣಿಕರು ಹಳಿಗಳ ಮೇಲೆ ಬೀಳುವ ಅಪಾಯವಿದೆ. ಅದರ ಜತೆಗೆ ಕೆಲವು ಮಂದಿ ಹಲವು ಕಾರಣಗಳನ್ನು ಮುಂದಿಟ್ಟು ಮೆಟ್ರೋ (Namma Metro) ಹಳಿಗಳ ಮೇಲೆ ಹಾರುತ್ತಿದ್ದಾರೆ. ಇದೆಲ್ಲ ಅವಾಂತರಗಳನ್ನು ತಡೆಯುವ ಉದ್ದೇಶದಿಂದ ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್‌ -ಬಿಎಂಆರ್‌ಸಿಎಲ್‌ (Bangalore Metro Railway Corporation-BMRCL) ಮೆಜೆಸ್ಟಿಕ್‌ ನಿಲ್ದಾಣದಲ್ಲಿ ಪ್ಲ್ಯಾಟ್‌ಫಾರ್ಮ್‌ಗೆ ಬ್ಯಾರಿಕೇಡ್‌ (Barricade to platform) ಅಳವಡಿಸಿದೆ.

ಈ ವರ್ಷದ ಆರಂಭದಲ್ಲಿ ಎರಡು ಬಾರಿ ಮೆಟ್ರೋ ನಿಲ್ದಾಣಗಳಲ್ಲಿ ಅವಾಂತರ ನಡೆದಿತ್ತು. ಜಾಲಹಳ್ಳಿ ನಿಲ್ದಾಣದಲ್ಲಿ ಯುವಕನೊಬ್ಬ ರೈಲಿನ ಮುಂದೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ. ಇಂದಿರಾ ನಗರ ನಿಲ್ದಾಣದಲ್ಲಿ ಮಹಿಳೆಯೊಬ್ಬರು ಮೊಬೈಲ್‌ ಫೋನ್‌ ಕೆಳಗೆ ಬಿತ್ತೆಂಬ ಕಾರಣಕ್ಕಾಗಿ ಅದನ್ನು ತೆಗೆಯಲು ಹಳಿ ಮೇಲೆ ಇಳಿದಿದ್ದರು. ಎರಡೂ ಪ್ರಕರಣಗಳಲ್ಲಿ ಸಿಬ್ಬಂದಿ ತುರ್ತಾಗಿ ಕ್ರಮ ವಹಿಸಿ ಹಳಿಗಳಲ್ಲಿ ಪ್ರವಹಿಸುವ ವಿದ್ಯುತ್‌ ಸ್ವಿಚ್‌ ಆಫ್‌ ಮಾಡಿದ್ದರು. ಹೀಗಾಗಿ ಅನಾಹುತವೇನೂ ತಪ್ಪಿತ್ತು. ಆದರೆ, ಒಮ್ಮೆ ಈ ರೀತಿ ಆದರೆ ತುಂಬಾ ಹೊತ್ತು ಸಂಚಾರಕ್ಕೆ ಅಡಚಣೆಯಾಗುತ್ತದೆ ಮತ್ತು ಮೆಟ್ರೋದ ವಿಶ್ವಾಸಾರ್ಹತೆಯೂ ತಗ್ಗುತ್ತದೆ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಅತಿ ಹೆಚ್ಚು ಪ್ರಯಾಣಿಕರು ಬಂದು ಹೋಗುವ ಮೆಜೆಸ್ಟಿಕ್‌ ನಿಲ್ದಾಣದಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ.

ಮೆಜೆಸ್ಟಿಕ್‌ ನಿಲ್ದಾಣದಲ್ಲಿ ಇದರ ಅವಶ್ಯಕತೆ ಎಷ್ಟು?

ರೈಲು ಹತ್ತುವ ಮತ್ತು ಇಳಿಯುವ ಬಾಗಿಲಿನ ಭಾಗಗಳನ್ನು ಹೊರತುಪಡಿಸಿ ಉದ್ದಕ್ಕೂ ಈ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ಇದರಿಂದ ನೂಕುನುಗ್ಗಲು ಸಂದರ್ಭದಲ್ಲಿ ಯಾರಾದರೂ ರೈಲು ಹಳಿಗೆ ಬೀಳುವುದು ತಪ್ಪಲಿದೆ.

ಈ ಹಿಂದೆಯೂ ಇಲ್ಲಿ ಹಳದಿ ಗೆರೆಗಳನ್ನು ಹಾಕಿ ಇದಕ್ಕಿಂತ ಮುಂದೆ ಹಾಕಬಾರದು ಎಂಬ ಸೂಚನೆಯನ್ನು ನೀಡಿದ್ದರೂ ಜನರು ಅದನ್ನು ಲೆಕ್ಕಿಸುತ್ತಿರಲಿಲ್ಲ. ಕೆಲವು ಮಕ್ಕಳು ಪಾಲಕರ ಕಣ್ಣು ತಪ್ಪಿಸಿ ಮುಂದೆ ಹೋಗುತ್ತಿದ್ದರು, ಇನ್ನು ಕೆಲವರು ಭದ್ರತಾ ಸಿಬ್ಬಂದಿ ಮಾತು ಮೀರಿ ಎದುರೇ ಹೋಗಿ ನಿಲ್ಲುತ್ತಿದ್ದರು. ಕೆಲವರು ಸೆಲ್ಫಿ ಮತ್ತು ರೀಲ್ಸ್‌ ಹುಚ್ಚಿನಿಂದ ಹುಚ್ಚಾಟ ಆಡುತ್ತಿದ್ದರು.

ಹೀಗಾಗಿ ಇಲ್ಲಿ ಪ್ರಯಾಣಿಕರ ನಿಯಂತ್ರಣಕ್ಕೆ ಒಂದು ಕ್ರಮ ಅನಿವಾರ್ಯವಾಗಿತ್ತು. ಇದೀಗ ರೈಲ್ವೇ ಬ್ಯಾರಿಕೇಡ್‌ಗಳು ಸ್ವಲ್ಪ ಮಟ್ಟಿಗಾದರೂ ಜನರನ್ನು ನಿಯಂತ್ರಿಸುತ್ತವೆ.

ಈಗ ಅತಿ ಹೆಚ್ಚು ಜನದಟ್ಟಣೆ ಇರುವ ಮೆಜೆಸ್ಟಿಕ್‌ ನಿಲ್ದಾಣದಲ್ಲಿ ಕಂಬಿಗಳನ್ನು ಹಾಕಲಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಪುಯಾಣಿಕರಿಂದ ದಟ್ಟಣೆ ಉಂಟಾಗುವ ಮತ್ತಷ್ಟು ನಿಲ್ದಾಣಗಳಲ್ಲಿ ಬ್ಯಾರಿಕೇಡ್ ಅಳವಡಿಸಲು ಚಿಂತನೆ ನಡೆಸಲಾಗಿದೆ.

ಇದನ್ನೂ ಓದಿ : Namma Metro : ಮೆಟ್ರೋ ರೈಲಿನಲ್ಲಿ ಮಹಿಳೆಯರ ಜತೆಗೆ ಅಸಭ್ಯವಾಗಿ ವರ್ತಿಸಿದ್ರೆ 10 ಸಾವಿರ ರೂ. ದಂಡ!

ಮುಂದೆ ಬರಲಿದೆ ಪ್ಲ್ಯಾಟ್‌ಫಾರಂ ಸ್ಕ್ರೀನ್‌ ಡೋರ್‌ (ಪಿಎಸ್‌ಡಿ)

ಮೆಜೆಸ್ಟಿಕ್‌ ಮೆಟ್ರೋ ಸ್ಟೇಷನ್‌ನಲ್ಲಿ ಬ್ಯಾರಿಕೇಡ್‌ ಹಾಕಿರುವುದು ಒಂದು ತಾತ್ಕಾಲಿಕ ಕ್ರಮ ಎಂದು ಹೇಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ದಿಲ್ಲಿ ವಿಮಾನ ನಿಲ್ದಾಣದಲ್ಲಿ ಇರುವಂತೆ ಪ್ಲ್ಯಾಟ್‌ಫಾರಂ ಸ್ಕ್ರೀನ್‌ ಡೋರ್‌ (ಪಿಎಸ್‌ಡಿ) ಅಳವಡಿಸಲಾಗುತ್ತದೆ ಎನ್ನಲಾಗಿದೆ. ಇನ್ನಷ್ಟೇ ಉದ್ಘಾಟನೆಯಾಗಬೇಕಿರುವ ಹೊಸ ಮಾರ್ಗಗಳ ನಿಲ್ದಾಣಗಳಲ್ಲಿ ಪ್ಲಾಟ್‌ಫಾರ್ಮ್ ಸ್ಕ್ರೀನ್‌ ಡೋರ್ (ಪಿಎಸ್‌ಡಿ) ಅಳವಡಿಸಲಾಗುತ್ತದೆ ಎಂದು ತಿಳಿದುಬಂದಿದೆ.

Exit mobile version