Site icon Vistara News

Namma Metro : ಬಸ್‌ ನಿಲ್ದಾಣಕ್ಕಿಂತಲೂ ಕಡೆಯಾಗುತ್ತಿದೆ ಮೆಟ್ರೋ ಸ್ಟೇಷನ್!; ಅವ್ಯವಸ್ಥೆ ನಿವಾರಣೆಗೆ ಬಂದಿದೆ SPECIAL TEAM

Namma metro chaoes

ಬೆಂಗಳೂರು: ಬೆಂಗಳೂರಿನ ಲೈಫ್‌ಲೈನ್‌ ಆಗಿ ಪರಿವರ್ತನೆಗೊಳ್ಳುತ್ತಿರುವ ನಮ್ಮ ಮೆಟ್ರೋದಲ್ಲಿ (Namma Metro) ಪ್ರಯಾಣಿಕರ ಸಂಚಾರ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹೀಗಾಗಿ ಮೆಟ್ರೋ ಸ್ಟೇಷನ್‌ಗಳಲ್ಲಿ (Metro Starion) ರೈಲು ಹತ್ತುವಾಗ ಮತ್ತು ಇಳಿಯುವಾಗ (Boarding and deboarding) ನೂಕಾಟ, ತಳ್ಳಾಟಗಳು ಹೆಚ್ಚುತ್ತಿವೆ. ಹಿಂದೆ ಭಾರಿ ವ್ಯವಸ್ಥಿತವಾಗಿದ್ದ ಈ ವ್ಯವಸ್ಥೆ ಕೆಲವೊಮ್ಮೆ ಬಸ್‌ ನಿಲ್ದಾಣದಂತೆ ಕಂಡುಬರುತ್ತಿದೆ. ಇದರಿಂದ ಕೆಲವೊಂದು ಅವಘಡಗಳೂ ಸಂಭವಿಸಿವೆ, ದೂರುಗಳೂ ದಾಖಲಾಗಿವೆ. ಇವುಗಳನ್ನು ತಡೆಯುವುದಕ್ಕಾಗಿ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್‌ ಲಿಮಿಟೆಡ್‌ (BMRCL) ಇದೀಗ ವಿಶೇಷ ತಂಡವನ್ನು ರಚಿಸಿ ಕಾರ್ಯಾಚರಣೆಗೆ (Special operations) ಇಳಿಸಿದೆ. ಇದು ರೈಲು ಹತ್ತುವಾಗ ಮತ್ತು ಇಳಿಯುವಾಗ ಉಂಟಾಗುವ ಗದ್ದಲ ಮತ್ತು ಅವ್ಯವಸ್ಥೆಗಳನ್ನು ನಿಯಂತ್ರಿಸುವ ಕೆಲಸವನ್ನು ಮಾಡುತ್ತಿದೆ.

ಪೀಕ್‌ ಅವರ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿರುವುದರಿಂದ ಎಲ್ಲರೂ ರೈಲು ಹತ್ತುವ ಮತ್ತು ಇಳಿಯುವ ಧಾವಂತವನ್ನು ತೋರುತ್ತಾರೆ. ಹೀಗಾಗಿ ಭಾರಿ ಗದ್ದಲವೇ ಸೃಷ್ಟಿಯಾಗುತ್ತದೆ. ರೈಲು ಇಳಿಯುವವರಿಗೂ ಅವಕಾಶ ನೀಡದಂತೆ ಕೆಲವರು ಬೋಗಿಯೊಳಗೆ ನುಗ್ಗುತ್ತಿದ್ದಾರೆ. ನಿಜವೆಂದರೆ ಮೆಟ್ರೋ ರೈಲು ಹತ್ತುವಾಗ ಹಲವಾರು ಶಿಷ್ಟಾಚಾರಗಳು ಇರುತ್ತವೆ. ರೈಲು ಹತ್ತುವಾಗ ಎಲ್ಲಿ ನಿಲ್ಲಬೇಕು, ಹೇಗೆ ಹತ್ತಬೇಕು, ಒಳಗಿನಿಂದ ಹೊರಗೆ ಬರುವವರೆಗೆ ಎಲ್ಲಿ ದಾರಿ ಬಿಡಬೇಕು ಎನ್ನುವುದಕ್ಕೆ ಸಾಕಷ್ಟು ನಿಯಮಗಳಿವೆ. ಪೀಕ್‌ ಅವರ್‌ನಲ್ಲಿ ಈ ಎಲ್ಲ ನಿಯಮಗಳನ್ನು ದಾಳಿಗೆ ತೂರಲಾಗುತ್ತಿದೆ.

ಎಲ್ಲೆಲ್ಲಿ ಈ ಸಮಸ್ಯೆ? ಯಾವಾಗದಿಂದ ಸಮಸ್ಯೆ?

ಪ್ರಮುಖವಾಗಿ ನೇರಳೆ ಮತ್ತು ಹಸಿರು ಲೈನಿನ ರೈಲುಗಳ ಇಂಟರ್‌ಚೇಂಜ್‌ ನಡೆಯುವ ಮೆಜೆಸ್ಟಿಕ್‌ ರೈಲು ನಿಲ್ದಾಣ, ರಾಜಾಜಿನಗರ, ಆರ್‌.ಆರ್‌. ನಗರ, ಕೆಆರ್‌ ಮಾರ್ಕೆಟ್‌, ಇಂದಿರಾನಗರ, ಬಯ್ಯಪ್ಪನಹಳ್ಳಿ ಮತ್ತಿತರ ಸ್ಟೇಷನ್‌ಗಳಲ್ಲಿ ಅತಿ ಹೆಚ್ಚು ಸಮಸ್ಯೆಗಳು ಕಾಡುತ್ತಿವೆ ಎಂದು ಪ್ರಯಾಣಿಕರು ದೂರಿದ್ದಾರೆ.

ಈ ಹಿಂದೆ ಮೆಟ್ರೋ ಪ್ರಯಾಣ ಅತ್ಯಂತ ಹಿತಕರ ಮತ್ತು ವ್ಯವಸ್ಥಿತ ಎಂಬಂತೆ ಇತ್ತು. ಯಾವುದೇ ನೂಕುನುಗ್ಗಲು ಇಲ್ಲದೆ, ಆರಾಮದಾಯಕವಾಗಿ ಸಾಗಬಹುದಿತ್ತು. ರೈಲು ಹತ್ತಲು ದೊಡ್ಡ ಕ್ಯೂಗಳು ಇರಲಿಲ್ಲ. ಇದ್ದರೂ ಜನರು ಅವುಗಳನ್ನು ಮುರಿದು ಮುನ್ನುಗ್ಗುತ್ತಿರಲಿಲ್ಲ. ರೈಲಿನ ಒಳಗೂ ಒತ್ತಡವಿಲ್ಲದೆ ಆರಾಮವಾಗಿ ಸಾಗಬಹುದಿತ್ತು. ವಯಸ್ಸಾದವರು, ಹಿರಿಯ ನಾಗರಿಕರು ಕೂಡಾ ಆರಾಮವಾಗಿ ಪ್ರಯಾಣ ಮಾಡಬಹುದಿತ್ತು.

ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ವಯಸ್ಸಾದವರು ಮತ್ತು ಮಕ್ಕಳಿಗೆ ಇದು ಭಾರಿ ಸಮಸ್ಯೆಯಾಗಿದೆ. ದೊಡ್ಡ ದೊಡ್ಡ ಕ್ಯೂಗಳು, ರೈಲು ಬಂದ ಕೂಡಲೇ ಒಮ್ಮೆಗೇ ನುಗ್ಗುವವರ ಸಂಖ್ಯೆ ಹೆಚ್ಚಾಗಿದೆ. ಒಳಗಿನಿಂದ ಹೊರಗೆ ಬರುವುದೇ ಒಂದು ದೊಡ್ಡ ಸಾಹಸವಾಗುತ್ತಿದೆ. ಅದರಲ್ಲೂ ಹಿರಿಯ ನಾಗರಿಕರೆಂದು ನೋಡದೆ ತಳ್ಳಿಕೊಂಡು ಹೋಗುವುದೇ ಹೆಚ್ಚು.

ರೈಲಿನ ಒಳಗೆ ಮತ್ತು ಹೊರಗೆ ಮಾತ್ರವಲ್ಲ, ಪ್ರಯಾಣಿಕರು ಹತ್ತುವ ಎಸ್ಕಲೇಟರ್‌ಗಳಲ್ಲೂ ವಿಪರೀತ ಒತ್ತಡವಿದೆ. ಎಸ್ಕಲೇಟರ್‌ ಬೇಡ, ಮೆಟ್ಟಿಲುಗಳನ್ನು ಹತ್ತಿಕೊಂಡು ಹೋಗೋಣವೆಂದರೆ ಅಲ್ಲಿಯೂ ವಿಪರೀತ ಜನಜಂಗುಳಿ, ಸ್ಟೆಪ್ಸ್‌ ಹತ್ತುವ ಬದಲು ಜಿಗಿಯುವವರ ಕಾಟವೇ ಜಾಸ್ತಿಯಾಗಿದೆ ಎನ್ನುತ್ತಾರೆ ನಿತ್ಯ ಪ್ರಯಾಣಿಕರು.

ಮುಂದೆ ಸಮಸ್ಯೆ ಇನ್ನಷ್ಟು ಹೆಚ್ಚಾಗಲಿದೆ

ಈಗಾಗಲೇ ದೊಡ್ಡ ಮಟ್ಟದಲ್ಲಿ ಸಮಸ್ಯೆಯಾಗಿರುವ ಈ ಒತ್ತಡ ಮುಂದೆ ಬೈಯಪ್ಪನಹಳ್ಳಿ,-ಕೆ.ಆರ್‌ ಪುರ ಮಾರ್ಗ ತೆರೆದುಕೊಂಡ ನಂತರ ಇನ್ನಷ್ಟು ಹೆಚ್ಚಲಿದೆ ಎಂದು ಅಂದಾಜಿಸಲಾಗಿದೆ. ಈ ತಿಂಗಳ ಅಂತ್ಯದಲ್ಲಿ ಚಲ್ಲಘಟ್ಟ-ಕೆಂಗೇರಿ ಮಾರ್ಗ ತೆರೆದುಕೊಳ್ಳಲಿದ್ದು, ಅದೇ ಹೊತ್ತಿಗೆ ಬೈಯಪ್ಪನ ಹಳ್ಳಿಯಿಂದ ಕೆ.ಆರ್‌ ಪುರವನ್ನು ಸಂಪರ್ಕಿಸುವ ಮಾರ್ಗದಲ್ಲೂ ಸಂಚಾರ ಆರಂಭವಾಗಲಿದೆ. ಇದರಿಂದ ಬೆಂಗಳೂರಿನ ಎರಡು ದಿಕ್ಕುಗಳನ್ನು ಈ ರೈಲು ಜೋಡಿಸಲಿದೆ. ವೈಟ್‌ ಫೀಲ್ಡ್‌ ಮೊದಲಾದ ಅತ್ಯಧಿಕ ಐಟಿ ಕಂಪನಿಗಳಿರುವ ಪ್ರದೇಶಗಳು ಕನೆಕ್ಟ್‌ ಆಗಲಿವೆ. ಆಗ ಮೆಟ್ರೋದಲ್ಲಿ ಸಂಚಾರ ಮಾಡುವವರ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ. ಆಗ ಸಂದರ್ಭದಲ್ಲಿ ಪೀಕ್‌ ಅವರ್‌ಗಳಲ್ಲಿ ಮೆಟ್ರೋ ಪ್ರಯಾಣವೇ ದುಸ್ತರವಾಗಲಿದೆ ಎಂದು ಹೇಳಲಾಗುತ್ತಿದೆ.

ಬಿಎಂಆರ್‌ಸಿಎಲ್‌ ಈಗ ತೆಗೆದುಕೊಂಡ ಕ್ರಮಗಳೇನು?

ಮೆಟ್ರೋ ಸಂಚಾರವೆಂದರೆ ಬಸ್‌ ಸಂಚಾರಕ್ಕಿಂತಲೂ ಕಡೆಯಾಗಿದೆ ಎಂಬ ಆರೋಪಗಳು ಇತ್ತೀಚೆಗೆ ಜೋರಾಗಿ ಕೇಳಿಬರುತ್ತಿವೆ. ಬಸ್‌ ಬಂದಾಗ ಜನರು ಒಮ್ಮೆಗೇ ನುಗ್ಗಿ ಸೀಟ್‌ ಬುಕ್‌ ಮಾಡಿಕೊಳ್ಳುವ ಹಾಗೆ ಜನರು ನುಗ್ಗಿ ಹೋಗುತ್ತಾರೆ ಎಂಬ ದೂರಿದೆ. ಈ ವಿಚಾರಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದ ಹಿನ್ನೆಲೆಯಲ್ಲಿ ಬಿಎಂಆರ್‌ಸಿಎಲ್‌ ಎಚ್ಚೆತ್ತುಕೊಂಡಿದೆ.

ಬಹುತೇಕ ಜನರು ರೈಲು ಹತ್ತುವಾಗ ಮತ್ತು ಇಳಿಯುವಾಗ ಕ್ಯೂ ಸಿಸ್ಟಮ್‌ ಪಾಲಿಸುತ್ತಾರೆ. ಆದರೆ, ಕೆಲವರು ಇದನ್ನು ಉಲ್ಲಂಘನೆ ಮಾಡುವುದರಿಂದ ಸಮಸ್ಯೆಯಾಗುತ್ತಿದೆ ಎಂದು ಅರ್ಥ ಮಾಡಿಕೊಂಡಿರುವ ಬಿಎಂಆರ್‌ಸಿಎಲ್‌, ಯಾವ ಹೊತ್ತಿನಲ್ಲಿ ಯಾವ ನಿಲ್ದಾಣದಲ್ಲಿ ಹೆಚ್ಚು ಸಮಸ್ಯೆಯಾಗುತ್ತಿದೆ ಎನ್ನುವುದನ್ನು ಗಮನಿಸಿ ಅಲ್ಲಿಗೆ ವಿಶೇಷ ಸಿಬ್ಬಂದಿಗಳನ್ನು ನೇಮಕ ಮಾಡಿದೆ.

ಸರಿಯಾಗಿ ಹತ್ತುವ ಮತ್ತು ಇಳಿಯುವ ಶಿಷ್ಟಾಚಾರ ನಿಯಮಗಳನ್ನು ಪಾಲಿಸುವಂತೆ ಜಾಗೃತಿ ಮೂಡಿಸಲು ನಮ್ಮ ಮೆಟ್ರೋ ಪ್ರಮುಖ ನಿಲ್ದಾಣಗಳಲ್ಲಿ ಖಾಕಿ ದಿರಸಿನ ಸಿಬ್ಬಂದಿಗಳನ್ನು ನೇಮಿಸಿದೆ. ಪ್ರಯಾಣಿಕರು ರೈಲ್ವೇ ಹಳಿಯ ಪಕ್ಕದ ಬರದಂತೆ, ಸರಿಯಾಗಿ ಕ್ಯೂ ಪಾಲನೆ ಮಾಡುವಂತೆ ಅವರು ನೋಡಿಕೊಳ್ಳಲಿದ್ದಾರೆ. ಪ್ರತಿಯೊಂದು ಬಾಗಿಲಿಗೂ ಒಬ್ಬ ಸಿಬ್ಬಂದಿಯನ್ನು ನೇಮಿಸಲಾಗಿದ್ದು, ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು ನಿಯಂತ್ರಿಸುವುದಕ್ಕಿಂತಲೂ ಪ್ರಯಾಣಿಕರು ಸರಿಯಾಗಿ ವರ್ತಿಸಬೇಕು ಎನ್ನುವುದು ನಮ್ಮ ಮೆಟ್ರೋ ಮನವಿ ಎನ್ನುತ್ತಾರೆ ಹಿರಿಯ ಅಧಿಕಾರಿಯೊಬ್ಬರು.

Exit mobile version