ಬೆಂಗಳೂರು: ಬೆಂಗಳೂರಿಗರ ಫೇವರೇಟ್ ಟ್ರಾನ್ಸ್‌ಪೋರ್ಟ್ ನಮ್ಮ ಮೆಟ್ರೋ ರೈಲು (Namma Metro) ತನ್ನ ಜಾಲ ವಿಸ್ತರಿಸುತ್ತಿದೆ. ನಗರದ ಅಷ್ಟ ದಿಕ್ಕುಗಳಲ್ಲೂ ಮೆಟ್ರೋ ಕಾಮಗಾರಿ (Namma Metro Blue Line) ನಡೆಯುತ್ತಿದೆ. ಇನ್ನು ಏರ್‌ಪೋರ್ಟ್‌ಗೂ ಸಹ ಮೆಟ್ರೋ ರೈಲು ಹತ್ತಿರವಾಗಿದೆ. ಆದರೆ ಈ ಏರ್‌ಪೋರ್ಟ್ ಮಾರ್ಗದಲ್ಲಿ ಈ ಮೊದಲು ನಿಗದಿಯಾಗಿದ್ದ ಎರಡು ನಿಲ್ದಾಣಗಳನ್ನು ಕೈಬಿಡಲು ಬಿಎಂಆರ್‌ಸಿಎಲ್ (BMRCL)ನಿರ್ಧಾರ ಮಾಡಿದೆ.
ಬಹುನಿರೀಕ್ಷಿತ ನಮ್ಮ ಮೆಟ್ರೋ ನೀಲಿ ಮಾರ್ಗ ಅಥವಾ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗದ ಪ್ರಯಾಣಿಕರಿಗೆ ಕೊಂಚ ನಿರಾಸೆ ಎದುರಾಗಿದೆ. ಪೂರ್ವ ನಿಗದಿಯಂತೆ ನಿರ್ಮಾಣವಾಗಬೇಕಿದ್ದ ಚಿಕ್ಕಜಾಲ ಮತ್ತು ಬೆಟ್ಟಹಲಸೂರು ನಿಲ್ದಾಣಗಳನ್ನು ಕೈಬಿಡಲು ಬಿಎಂಆರ್‌ಸಿಎಲ್ ನಿರ್ಧರಿಸಿದೆ. ಚಿಕ್ಕಜಾಲ ನಿಲ್ದಾಣಕ್ಕೆ 130 ಕೋಟಿ ರೂ. ವೆಚ್ಚವಾದರೆ, ಬೆಟ್ಟಹಲಸೂರಿಗೆ 140 ಕೋಟಿ ರೂ. ವೆಚ್ಚವಾಗಬಹುದೆಂದು ಬಿಎಂಆರ್‌ಸಿಎಲ್ ನಮೂದಿಸಿತ್ತು. ಸದ್ಯ ಹಣಕಾಸಿನ ಸಮಸ್ಯೆಯಿಂದ ಈ ಎರಡು ನಿಲ್ದಾಣಗಳನ್ನು ಕೈ ಬಿಡಲು ಬಿಎಂಆರ್‌ಸಿಎಲ್ ಮುಂದಾಗಿದೆ.
ಬೆಟ್ಟಹಲಸೂರು ನಿಲ್ದಾಣಕ್ಕೆ ಬಿಎಂಆರ್‌ಸಿಎಲ್ ಖಾಸಗಿ ಸಂಸ್ಥೆಗಳಿಂದ ನೆರವು ಪಡೆದು ನಿರ್ಮಾಣ ಮಾಡುವ ಯೋಜನೆ ಹಾಕಿಕೊಂಡಿತ್ತು. ಆದರೆ ಇದೀಗ ನಿರಾಸಕ್ತಿ ತೋರಿದೆ. ಅಷ್ಟಕ್ಕೂ ಬೆಟ್ಟ ಹಲಸೂರು ಹಾಗೂ ಚಿಕ್ಕಜಾಲ ನಿಲ್ದಾಣಗಳು ಡಿಪಿಆರ್ (DPR)ನಲ್ಲಿ ನಮೂದು ಆಗಿರಲಿಲ್ಲ. ಹೀಗಾಗಿ ಇವುಗಳ ನಿರ್ಮಾಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನುದಾನ ನೀಡುವುದಿಲ್ಲ. ಸ್ಥಳೀಯ ನಿವಾಸಿಗಳು ನಿಲ್ದಾಣದ ಬೇಡಿಕೆ ಮುಂದಿಟ್ಟಿದ್ದರಿಂದ ಚಿಕ್ಕಜಾಲ ನಿಲ್ದಾಣಕ್ಕೆ ರಾಜ್ಯದ ಉನ್ನತಾಧಿಕಾರ ಸಮಿತಿ ಒಪ್ಪಿಗೆ ನೀಡಿತ್ತು.
ಒಟ್ಟಾರೆ ಮೆಟ್ರೋ ಮೂಲಕ ಏರ್‌ಪೋರ್ಟ್‌ಗೆ ಹೋಗುವ ಕಾಲ ಸನ್ನಿಹಿತ ಆಗುತ್ತಿದೆ. ಈ ನಿಟ್ಟಿನಲ್ಲಿ ಬಿಎಂಆರ್‌ಸಿಎಲ್ ಸಹ ಭರದಿಂದ ಕಾಮಗಾರಿ ನಡೆಸುತ್ತಿದೆ. ಆದರೆ ಈ ಮಾರ್ಗದಲ್ಲಿ ಎರಡು ನಿಲ್ದಾಣಗಳ ನಿರ್ಮಾಣದಿಂದ ಬಿಎಂಆರ್‌ಸಿಎಲ್ ಹಿಂದೆ ಸರಿದಿದ್ದರಿಂದ ಅಲ್ಲಿನ ನಿವಾಸಿಗಳು ಹಾಗೂ ಪ್ರಯಾಣಿಕರು ನಿರಾಸೆಗೆ ಒಳಗಾಗಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ