Site icon Vistara News

Namma Metro : ಮೆಟ್ರೋ ಪ್ರಯಾಣಿಕರಿಗೆ ಗುಡ್‌ ನ್ಯೂಸ್‌; ಪೀಕ್‌ ಅವರ್‌ನಲ್ಲಿ ಮೆಜೆಸ್ಟಿಕ್‌ನಿಂದ Extra ರೈಲು ಹೊರಡುತ್ತೆ!

Namma metro train

ಬೆಂಗಳೂರು: ಇದು ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ (Good News for Metro Commuters) ! ನೀವು ಮೆಜೆಸ್ಟಿಕ್‌ಗೆ ಹೋಗಿ ಅಲ್ಲಿಂದ ಎಂ.ಜಿ. ರೋಡ್‌ (Majestic to MG Road Extra service) ಕಡೆಗೆ ಹೋಗುವವರಾಗಿದ್ದರೆ ಖಂಡಿತವಾಗಿಯೂ ಖುಷಿಪಡುವ ಸುದ್ದಿಯನ್ನು ನೀಡಿದೆ ಬಿಎಂಆರ್‌ಸಿಎಲ್‌ (BMRCL).

ನಿಮಗೇ ತಿಳಿದಿರುವ ಹಾಗೆ, ಮೆಜೆಸ್ಟಿಕ್‌ ಮೆಟ್ರೋ ನಿಲ್ದಾಣ (Majestic Metro Station) ಬೆಳಗ್ಗಿನ ಅವಧಿಯಲ್ಲಿ ವಸ್ತುಶಃ ಬಿಎಂಟಿಸಿ ಬಸ್‌ ಸ್ಟಾಂಡ್‌ ತರ ಆಗಿಬಿಡುತ್ತದೆ, ಜನ ಜಾತ್ರೆಯೇ ನೆರೆಯುತ್ತದೆ. ಪ್ರತಿ ಐದು ನಿಮಿಷಕ್ಕೊಮ್ಮೆ ಒಂದು ರೈಲು ಓಡಾಡಿದರೂ ಸಾಲದಷ್ಟು ಪ್ರಯಾಣಿಕರು ನೆರೆದಿರುತ್ತಾರೆ. ಪೀಕ್‌ ಅವರ್‌ನ ಈ ಸಮಸ್ಯೆಯನ್ನು ನಿವಾರಿಸಲು ನಮ್ಮ ಮೆಟ್ರೊ ಒಂದು ಹೊಸ ಪ್ಲ್ಯಾನ್‌ ಮಾಡಿದೆ. ಅದುವೇ ವಾರದ ದಿನಗಳಲ್ಲಿ ಪೀಕ್‌ ಅವರ್‌ನಲ್ಲಿ ಹೆಚ್ಚುವರಿ ರೈಲು ಓಡಾಟ.

ಹೌದು, ಸೆಪ್ಟೆಂಬರ್ 1ರಿಂದ ಪೀಕ್‌ ಅವರ್‌ನಲ್ಲಿ ಹೆಚ್ಚುವರಿ ಮೆಟ್ರೋ ಸೇವೆ ನೀಡಲು ಬಿಎಂಆರ್‌ಸಿಎಲ್‌ ನಿರ್ಧಾರ ಮಾಡಿದೆ. ಇದು ಸದ್ಯಕ್ಕೆ ಜಾರಿಯಾಗುತ್ತಿರುವುದು ನೇರಳೆ ಮಾರ್ಗದಲ್ಲಿ.

ಹಾಗಂತ ಇದು ಇಡೀ ಮಾರ್ಗದುದ್ದಕ್ಕೂ ಇರುವುದಿಲ್ಲ. ಮೆಜೆಸ್ಟಿಕ್‌ ನಿಲ್ದಾಣದಿಂದ ಎಂ.ಜಿ. ರೋಡ್‌ವರೆಗೆ ಹೆಚ್ಚುವರಿ ಕಾರ್ಯಾಚರಣೆ ರೈಲುಗಳನ್ನು ಸೇವೆಗೆ ಇಳಿಸಲು ನಿರ್ಧರಿಸಲಾಗಿದೆ.

ಸೋಮವಾರದಿಂದ ಶುಕ್ರವಾರದವರೆಗೆ ಪೀಕ್‌ ಅವರ್‌ನಲ್ಲಿ ಈ ಹೆಚ್ಚುವರಿ ಟ್ರಿಪ್ ಇರಲಿದೆ ಎಂದು ಬಿಎಂಆರ್‌ಸಿಎಲ್‌ ಪ್ರಕಟಣೆ ತಿಳಿಸಿದೆ.

ಹೆಚ್ಚುವರಿ ರೈಲಿನಿಂದ ಯಾರಿಗೆ ಅನುಕೂಲ?

ಮೆಜೆಸ್ಟಿಕ್‌ನಿಂದ ಎಂ.ಜಿ. ರೋಡ್‌ವರೆಗೆ ಹೆಚ್ಚುವರಿ ರೈಲು ಬಿಡುವುದರಿಂದ ಹಲವರಿಗೆ ಅನುಕೂಲವಾಗಲಿದೆ.

  1. ಹಸಿರು ಮಾರ್ಗದಲ್ಲಿ ರೇಷ್ಮೆ ಸಂಸ್ಥೆ ಇಲ್ಲವೇ ನಾಗಸಂದ್ರ ಕಡೆಯಿಂದ ಬಂದು ಮೆಜೆಸ್ಟಿಕ್‌ ನಿಲ್ದಾಣದಲ್ಲಿ ನೇರಳೆ ಮಾರ್ಗಕ್ಕೆ ಬದಲಾವಣೆ ಮಾಡುವವರಿಗೆ ಇದು ತುಂಬ ಅನುಕೂಲವಾಗಲಿದೆ.
  2. ಸಾಮಾನ್ಯವಾಗಿ ನೇರಳೆ ಮಾರ್ಗದಲ್ಲಿ ಕೆಂಗೇರಿಯಿಂದ ಹೊರಟು ಬೈಯಪ್ಪನ ಹಳ್ಳಿಗೆ ಹೋಗುವ ರೈಲು ಮೆಜೆಸ್ಟಿಕ್‌ಗೆ ಬರುವಾಗ ತುಂಬಿರುತ್ತದೆ. ಕೆಲವು ಮಂದಿ ರೈಲಿನಿಂದ ಇಳಿದರೂ ಹತ್ತುವವರ ಸಂಖ್ಯೆಗೆ ಹೋಲಿಸಿದರೆ ಇದು ತುಂಬ ಕಡಿಮೆ. ಹೀಗಾಗಿ ಹೆಚ್ಚಿನ ಸಲ ಇನ್ನೊಂದು ರೈಲಿಗೆ ಕಾಯಬೇಕಾಗುತ್ತದೆ.
  3. ಈಗ ಮೆಜೆಸ್ಟಿಕ್‌ನಿಂದ ಪೀಕ್‌ ಅವರ್‌ನಲ್ಲಿ ಹೆಚ್ಚುವರಿ ರೈಲು ಸೇವೆ ಆರಂಭಿಸುವುದರಿಂದ ಮೆಜೆಸ್ಟಿಕ್‌ನಿಂದ ಸೆಂಟ್ರಲ್‌, ಕಾಲೇಜು, ವಿಧಾನಸೌಧ, ಕಬ್ಬನ್‌ ಪಾರ್ಕ್‌ ಮತ್ತು ಎಂ.ಜಿ. ರೋಡ್‌ವರೆಗೆ ಹೋಗುವವರಿಗೆ ಭಾರಿ ಅನುಕೂಲ ಆಗಲಿದೆ.
  4. ಒಂದು ವೇಳೆ ಬೈಯಪ್ಪನಹಳ್ಳಿ ಕಡೆಗೆ ಹೋಗುವವರು ಇದ್ದರೂ ಅವರು ಮೆಜೆಸ್ಟಿಕ್‌ನಿಂದ ಖಾಲಿಯಾಗಿ ಹೊರಡುವ ರೈಲಿನಲ್ಲಿ ಎಂ.ಜಿ. ರೋಡ್‌ ನಿಲ್ದಾಣದವರೆಗೆ ಹೋಗಿ ಅಲ್ಲಿ ಇಳಿದು ಮತ್ತೊಂದು ರೈಲು ಹತ್ತಿ ಮುಂದಕ್ಕೆ ತೆರಳಬಹುದು.

ಇದನ್ನೂ ಓದಿ : Bengaluru Metro : ಕೆಂಗೇರಿ-ಚಲ್ಲಘಟ್ಟ, ಬೈಯಪ್ಪನಹಳ್ಳಿ- ಕೆಆರ್‌ಪುರಂ ಮೆಟ್ರೋ ಶೀಘ್ರ ಲೋಕಾರ್ಪಣೆ

ಯಾಕೆ ಈ ಮಾರ್ಗದಲ್ಲಿ ಇಷ್ಟೊಂದು ಒತ್ತಡ?

ಕಳೆದ ಕೆಲವು ವಾರಗಳಲ್ಲಿ ಮೆಟ್ರೋ ರೈಲಿನಲ್ಲಿ ಜನದಟ್ಟಣೆ ಜಾಸ್ತಿಯಾಗಿದೆ. ಅದರಲ್ಲೂ ಕೆಂಗೇರಿಯಿಂದ ಬೈಯಪ್ಪನ ಹಳ್ಳಿ ಕಡೆಗೆ ಹೋಗುವ ಮೆಟ್ರೋ ರೈಲಿನಲ್ಲಿ ಜನದಟ್ಟಣೆ ವಿಪರೀತವಾಗಿದೆ. ಇದಕ್ಕೆ ಕಾರಣ ಬೈಯಪ್ಪನ ಹಳ್ಳಿ ಭಾಗದಲ್ಲಿ ಕಾರ್ಯಾಚರಿಸುತ್ತಿರುವ ಐಟಿ ಕಂಪನಿಗಳು ವರ್ಕ್‌ ಫ್ರಂ ಹೋಮ್‌ ಕೊನೆಗೊಳಿಸಿ ಕಚೇರಿಗೆ ಬರುವಂತೆ ಸೂಚಿಸಿದ್ದು ಒಂದು ಕಾರಣ ಎನ್ನಲಾಗುತ್ತಿದೆ.

ಈ ನಡುವೆ ಕೆ.ಆರ್‌ ಪುರಂನಿಂದ ವೈಟ್‌ ಫೀಲ್ಡ್‌ವರೆಗೆ ಮೆಟ್ರೋ ರೈಲು ಓಡಾಡುವುದರಿಂದ ಕೆಲವರು ಈ ರೈಲಿನಲ್ಲಿ ಸಾಗುವ ಉದ್ದೇಶದಿಂದ ಬೈಯಪ್ಪನಹಳ್ಳಿವರೆಗೆ ಸಾಗುತ್ತಾರೆ. ಬಳಿಕ ಅಲ್ಲಿಂದ ಕೆ.ಆರ್‌. ಪುರಂವರೆಗೆ ಹೋಗಿ ಮತ್ತೆ ಮೆಟ್ರೋ ಹತ್ತುತ್ತಾರೆ.

ಸೆಪ್ಟೆಂಬರ್‌ ಮೊದಲ ವಾರದಿಂದ ಒಂದೊಮ್ಮೆ ಚಲ್ಲಘಟ್ಟ-ಕೆಂಗೇರಿ ಮತ್ತು ಬೈಯಪ್ಪನಹಳ್ಳಿ- ಕೆ.ಆರ್‌. ಪುರಂ ರೈಲು ಮಾರ್ಗ ಸಂಚಾರಕ್ಕೆ ತೆರೆದುಕೊಂಡರೆ ಆಗ ಜನ ದಟ್ಟಣೆ ಇನ್ನಷ್ಟು ಹೆಚ್ಚಾಗಲಿದೆ. ಆ ಸಂದರ್ಭದಲ್ಲಿ ಪೀಕ್‌ ಅವರ್‌ನಲ್ಲಿ ಮೆಜೆಸ್ಟಿಕ್‌ನಿಂದ ವೈಟ್‌ ಫೀಲ್ಡ್‌ವರೆಗೂ ಹೆಚ್ಚುವರಿ ರೈಲು ಓಡಾಟ ಆರಂಭಿಸಬೇಕಾದ ಅನಿವಾರ್ಯತೆ ಬರಬಹುದು.

Exit mobile version