Site icon Vistara News

Namma Metro : ಚೀನಾದಿಂದ ಬಂತು ಚಾಲಕ ರಹಿತ ಮೆಟ್ರೋ ರೈಲು, ಹಳದಿ ಮಾರ್ಗದಲ್ಲಿ ಫಿಕ್ಸ್‌

Namma Metro Yellow Lane

ಬೆಂಗಳೂರು: ರಾಜಧಾನಿಯಲ್ಲಿ ಚಾಲಕರಹಿತ ಮೆಟ್ರೋ ರೈಲು (Driverless Metro train) ಸಂಚಾರಕ್ಕೆ ಸರ್ವ ಸಿದ್ಧತೆಗಳು ನಡೆಯುತ್ತಿವೆ. ನಮ್ಮ ಮೆಟ್ರೋ (Namma Metro) ಹಳದಿ ಮಾರ್ಗವಾದ (Yellow lane) ರಾಷ್ಟ್ರೀಯ ವಿದ್ಯಾಲಯ ರೋಡ್‌ (ಆರ್‌.ವಿ ರಸ್ತೆ) – ಬೊಮ್ಮಸಂದ್ರ ಮಾರ್ಗ (RV Road-Bommasandra Road) ಸದ್ಯವೇ ಕಾರ್ಯಾರಂಭ ಮಾಡಲಿದ್ದು ಅದರಲ್ಲಿ ಚಾಲಕ ರಹಿತ ರೈಲು ಓಡಾಡಲಿದೆ. ಇದಕ್ಕೆ ಪೂರಕವಾಗಿ ಮೊದಲ ಚಾಲಕ ರಹಿತ ರೈಲು ಚೀನಾದಿಂದ ಸಮುದ್ರ ಮಾರ್ಗವಾಗಿ ಚೆನ್ನೈ ಬಂದರಿಗೆ ಆಗಮಿಸಿದೆ. ಫೆಬ್ರವರಿ 18ರ ಹೊತ್ತಿಗೆ ಅದು ರಸ್ತೆ ಮಾರ್ಗವಾಗಿ ಬೆಂಗಳೂರಿಗೆ ಬರಲಿದೆ.

ಆರು ಬೋಗಿಗಳ ಚಾಲಕ ರಹಿತ ಮೆಟ್ರೋ ರೈಲು ಜನವರಿ 24ರಂದು ಶಾಂಘೈ ಬಂದರಿನಿಂದ ಹೊರಟಿತ್ತು. ಫೆಬ್ರವರಿ 6ರಂದು ಚೆನ್ನೈ ಬಂದರು ತಲುಪಿದೆ. ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಅಧಿಕಾರಿಗಳು ಇದೀಗ ಚೆನ್ನೈ ಬಂದರಿಗೆ ಹೋಗಿದ್ದು, ಅಲ್ಲಿ ಹಡಗಿನಿಂದ ರೈಲನ್ನು ಇಳಿಸಿ ಬಳಿಕ ಕಸ್ಟಮ್ಸ್‌ ಪ್ರಕ್ರಿಯೆಗಳನ್ನು ಮುಗಿಸಿ ಬೆಂಗಳೂರಿಗೆ ಸಾಗಿಸುವ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ.

ಫೆಬ್ರವರಿ 13ರಂದು ಸಂಚಾರ ಆರಂಭ, ಫೆ. 18ಕ್ಕೆ ಬೆಂಗಳೂರಿಗೆ

ಫೆಬ್ರವರಿ 6ರಂದು ಚೆನ್ನೈ ಬಂದರು ತಲುಪಿರುವ ಹಡಗಿನಿಂದ ಚಾಲಕ ರಹಿತ ರೈಲನ್ನು ಇಳಿಸಿ ಕಸ್ಟಮ್ಸ್‌ ಪ್ರಕ್ರಿಯೆಗಳನ್ನು ಮುಗಿಸುವ ಹೊತ್ತಿಗೆ ಫೆಬ್ರವರಿ 13 ಆಗಲಿದೆ ಎಂದು ಹೇಳಲಾಗಿದೆ. ಅಲ್ಲಿಂದ ಅದನ್ನು ರಸ್ತೆ ಮಾರ್ಗವಾಗಿ ಬೆಂಗಳೂರಿಗೆ ತರಲಾಗುತ್ತದೆ.

ಈ ರೈಲಿನ ಮಾರ್ಗ ಸಂಚಾರ ರಾತ್ರಿ ಮಾತ್ರ ಇರಲಿದೆ. ಹೀಗಾಗಿ ಫೆ. 13ರಂದು ಹೊರಟರೂ ಅದು ನಿಧಾನವಾಗಿ ಕ್ರಮಿಸಿ ಫೆ. 18ರ ಹೊತ್ತಿಗೆ ಎಲೆಕ್ಟ್ರಾನಿಕ್ಸ್ ಸಿಟಿಯ ಹೆಬ್ಬಗೋಡಿ ಡಿಪೋ ತಲುಪಲಿದೆ ಎನ್ನಲಾಗಿದೆ.

ನಾಲ್ಕು ತಿಂಗಳ ಕಾಲ ಪರೀಕ್ಷೆ ನಡೆದು ಬಳಿಕ ಕಾರ್ಯಾರಂಭ

ನಿಜವೆಂದರೆ ಆರ್‌.ವಿ ರಸ್ತೆ- ಬೊಮ್ಮಸಂದ್ರ ನಡುವಿನ ರೈಲು ಮಾರ್ಗ ಆಗಲೇ ಸಿದ್ಧವಾಗಿದೆ. ಚೀನಾದಿಂದ ರೈಲ್ವೇ ಬೋಗಿಗಳ ಆಗಮನ ವಿಳಂಬವಾಗಿದ್ದರಿಂದಲೇ ಸಂಚಾರಕ್ಕೆ ಅವಕಾಶ ಸಿಕ್ಕಿಲ್ಲ. ಹಾಗಂತ ರೈಲು ಬೋಗಿಗಳು ಬಂದ ಕೂಡಲೇ ಸಂಚಾರವೇನೂ ಆರಂಭವಾಗುವುದಿಲ್ಲ. ಯಾಕೆಂದರೆ, ಈಗ ಬಂದಿರುವ ರೈಲು ಬೋಗಿಗಳನ್ನು ಜೋಡಿಸಿ ಅವುಗಳನ್ನು ಪರೀಕ್ಷೆ ಮಾಡಲು ನಾಲ್ಕು ತಿಂಗಳಿಗಿಂತಲೂ ಹೆಚ್ಚು ಸಮಯ ಬೇಕು.

ಈಗ ಚೀನಾದಿಂದ ಚೆನ್ನೈಗೆ ಬಂದು ಅಲ್ಲಿಂದ ಹೆಬ್ಬಗೋಡಿ ತಲುಪಲಿರುವ ಬೋಗಿಗಳನ್ನು ಪರೀಕ್ಷಾ ಟ್ರ್ಯಾಕ್‌ಗೆ ಇಳಿಸುವ ಮೊದಲು ಜೋಡಿಸಬೇಕಾಗಿದೆ. ನಂತರ, ಸುಮಾರು 15 ಪರೀಕ್ಷೆಗಳಿಗಾಗಿ ಅದನ್ನು ಮುಖ್ಯ ಮಾರ್ಗಕ್ಕೆ ಸರಿಸಲಾಗುತ್ತದೆ.

ಸಂಶೋಧನಾ ವಿನ್ಯಾಸಗಳು ಮತ್ತು ಗುಣಮಟ್ಟ ಸಂಸ್ಥೆ (RDSO) ಪ್ರಯೋಗಗಳು , ರೈಲ್ವೇ ಸುರಕ್ಷತೆಯ ಮುಖ್ಯ ಆಯುಕ್ತರು (CCRS), ಮೆಟ್ರೋ ರೈಲ್ವೆ ಸುರಕ್ಷತೆ (CMRS) ಆಯುಕ್ತರು (CMRS) ಮತ್ತು ರೈಲ್ವೆ ಮಂಡಳಿಯಿಂದ ಅನುಮೋದನೆಗಳ ಅಗತ್ಯವಿದೆ.

ಇದನ್ನೂ ಓದಿ : Namma Metro : ಮೆಟ್ರೋ ಸ್ಟೇಷನ್‌ನಲ್ಲಿ‌ ಪ್ರಯಾಣಿಕರ ಅವಾಂತರ ತಡೆಯಲು ಪ್ಲ್ಯಾಟ್‌ಫಾರಂಗೆ ಬ್ಯಾರಿಕೇಡ್

ಹಾಗಿದ್ದರೆ ಹಳದಿ ಲೇನ್‌ನಲ್ಲಿ ಸಂಚಾರ ಆರಂಭ ಯಾವಾಗ?

ಸುಮಾರು ನಾಲ್ಕು ತಿಂಗಳ ಕಾಲ 37 ಪರೀಕ್ಷೆಗಳು ನಡೆಯಲಿದ್ದು, ನಂತರ 45 ದಿನಗಳವರೆಗೆ ಸಿಗ್ನಲಿಂಗ್ ಪರೀಕ್ಷೆಗಳು ನಡೆಯಲಿವೆ. ಹಳದಿ ಮಾರ್ಗದಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಎಂಟು ರೈಲುಗಳು ಬೇಕಾಗಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಆರಂಭದಲ್ಲಿ, ಹಳದಿ ಮಾರ್ಗದಲ್ಲಿ ರೈಲು ಸಂಚಾರ ಕಡಿಮೆ ಇರುತ್ತದೆ ಮತ್ತು ಹೆಚ್ಚಿನ ರೈಲುಗಳನ್ನು ಸೇರಿಸಿದ ನಂತರ, ಅದು ಹೆಚ್ಚಾಗುತ್ತದೆ.

ಈ ಹಿಂದಿನ ಯೋಜನೆಯಂತೆ ಚೀನಾದಿಂದ 2023ರ ಸೆಪ್ಟೆಂಬರ್‌ನಲ್ಲೇ ಬೋಗಿಗಳು ಬರಬೇಕಾಗಿತ್ತು. ಹಾಗೆ ಬಂದಿದ್ದರೆ 2024ರ ಫೆಬ್ರವರಿ ಹೊತ್ತಿಗೆ ಅವು ಸಂಚಾರಕ್ಕೆ ಅಣಿಯಾಗುತ್ತಿದ್ದವು. ಇನ್ಫೋಸಿಸ್‌, ಬಯೋಕಾನ್‌ ಮತ್ತಿತರ ಪ್ರಮುಖ ಐಟಿ ಕಂಪನಿಗಳಿರುವ ಎಲೆಕ್ಟ್ರಾನಿಕ್‌ ಸಿಟಿಗೆ ಮೆಟ್ರೋ ಸಂಪರ್ಕ ದೊರೆಯಬಹುದಾಗಿತ್ತು. ಆದರೆ, ಈಗ ಬೋಗಿಗಳ ಆಗಮನವೇ ವಿಳಂಬವಾಗಿರುವುದರಿಂದ ಸಂಚಾರ ಬಹುತೇಕ ಜುಲೈ ವೇಳೆಗೆ ಆರಂಭವಾಗಲಿದೆ ಎನ್ನಲಾಗಿದೆ.

Exit mobile version