Site icon Vistara News

Namma Metro : ಮೆಟ್ರೋ ಪ್ರಯಾಣಿಕರಿಗೆ ‌Good News; ಈಗ 3 ನಿಮಿಷಕ್ಕೊಂದು ರೈಲು!

Namma Metro purple line

ಬೆಂಗಳೂರು: ಬೆಂಗಳೂರಿನ ಮೆಟ್ರೋ ಪ್ರಯಾಣಿಕರ (Namma Metro) ಕನಸು ನನಸಾಗಿದೆ. ಸಂಚಾರ ದಟ್ಟಣೆ (Heavy traffic) ಅವಧಿಯಲ್ಲಿ ರೈಲುಗಳ ಸಂಖ್ಯೆಯನ್ನು ಹೆಚ್ಚಿಸಬೇಕು ಎಂಬ ಬೇಡಿಕೆ ಈಡೇರಿದೆ. ಸೋಮವಾರದಿಂದ ನೇರಳೆ ಮಾರ್ಗದಲ್ಲಿ ಪೀಕ್‌ ಅವರ್‌ನಲ್ಲಿ (Peak Hour) ಪ್ರತಿ ಮೂರು ನಿಮಿಷಕ್ಕೊಂದು ರೈಲು ಓಡಾಟ (train in three minutes) ಆರಂಭವಾಗಿದೆ.

ಚಲ್ಲಘಟ್ಟದಿಂದ ವೈಟ್‌ಫೀಲ್ಡ್‌ ಕಾಡುಗೋಡಿವರೆಗೆ ಓಡುವ ನೇರಳೆ ಮಾರ್ಗದಲ್ಲಿ (Purple line) ಬೆಳಗ್ಗೆ ಮತ್ತು ಸಂಜೆ ಪ್ರಯಾಣಿಕರ ದಟ್ಟಣೆ ವಿಪರೀತವಾಗಿದೆ. ಮೆಟ್ರೋ ರೈಲಿಗಾಗಿ ತುಂಬ ಹೊತ್ತು ಕಾಯುವ ಪರಿಸ್ಥಿತಿ ಇದೆ. ರೈಲು ಹತ್ತಲು ದೊಡ್ಡ ಸಾಲುಗಳು ಕಂಡುಬರುತ್ತಿದ್ದು, ಒಂದೆರಡು ರೈಲು ಬಿಟ್ಟು ಮೂರನೇ ರೈಲು ಹಿಡಿಯಬೇಕಾದ ಸ್ಥಿತಿ ಇದೆ.‌ ಅದರಲ್ಲೂ ಮೆಜೆಸ್ಟಿಕ್‌ ರೈಲು ನಿಲ್ದಾಣದಲ್ಲಂತೂ ಮೆಜೆಸ್ಟಿಕ್‌ ಬಸ್‌ ನಿಲ್ದಾಣದಂಥ ವಾತಾವರಣ ಕಂಡುಬರುತ್ತಿದೆ. ಇಂಥ ‌ ಪರಿಸ್ಥಿತಿಯಿಂದ ಮುಕ್ತಿ ನೀಡಲು ನಮ್ಮ ಮೆಟ್ರೋ ಸೋಮವಾರದಿಂದ (ಫೆಬ್ರವರಿ 26) ಬೆಳಗ್ಗಿನ ಹೊತ್ತು ಪ್ರತಿ ಮೂರು ನಿಮಿಷಕ್ಕೊಂದು ರೈಲು ಓಡಾಟ ಆರಂಭ ಮಾಡಿದೆ. ಇನ್ನು ಸಂಜೆಯ ಹೊತ್ತು ಕೂಡಾ ಮೂರು ನಿಮಿಷಕ್ಕೊಂದು ರೈಲು ಓಡಾಡಲಿದೆ. ಇದುವರೆಗೆ ಬೆಳಗ್ಗೆ 8ರಿಂದ 11ರವರೆಗೆ ಐದು ನಿಮಿಷಕ್ಕೊಂದು ರೈಲು ಓಡುತ್ತಿತ್ತು.

ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ಪೀಕ್ ಹವರ್‌ನಲ್ಲಿ ಬೆಳಗ್ಗೆ ಮತ್ತು ಸಂಜೆ ಹೊತ್ತು ಹೆಚ್ಚುವರಿ ರೈಲು ಓಡಿಸುವ ಮೂಲಕ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಶುಕ್ರವಾರವಷ್ಟೇ ತಿಳಿಸಿತ್ತು.

ಎರಡು ಹಾಲಿ ಮಾರ್ಗಗಳ ಪೈಕಿ ನೇರಳೆ (Namma Metro Purple Line) ಮಾರ್ಗದಲ್ಲಿ ಪೀಕ್‌ ಅವರ್‌ನಲ್ಲಿ ಪ್ರತಿ ಮೂರು ನಿಮಿಷಕ್ಕೆ ಒಂದರಂತೆ ರೈಲುಗಳು ಆವರ್ತನೆ ಆಗಲಿವೆ ಎಂದು BMRCL ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : Namma Metro : ಗುಡ್‌ ನ್ಯೂಸ್‌- ಫೆ.26 ರಿಂದ ಪ್ರತಿ ಮೂರು ನಿಮಿಷಕ್ಕೆ ಮೆಟ್ರೋ ರೈಲು ಓಡಾಟ

ಯಾವ ಸಮಯದಲ್ಲಿ ಮೂರು ನಿಮಿಷಕ್ಕೊಂದು ರೈಲು?

ನೇರಳೆ ಮಾರ್ಗದ ಮೆಜೆಸ್ಟಿಕ್ ಮೆಟ್ರೋ ರೈಲು ನಿಲ್ದಾಣದಿಂದ ಗರುಡಾಚಾರ್‌ ಪಾಳ್ಯ ನಿಲ್ದಾಣದವರೆಗೆ ಬೆಳಗ್ಗೆ 8.45 ಗಂಟೆಯಿಂದ 10.20 (95 ನಿಮಿಷ) ಪ್ರತಿ ಮೂರು ನಿಮಿಷಕ್ಕೆ ಒಂದು ರೈಲುಗಳು ಕಾರ್ಯಾಚರಣೆ ಆರಂಭಗೊಂಡಿದೆ. ನೇರಳೆ ಮಾರ್ಗದ ನಿಲ್ದಾಣಗಳಾದ ಟ್ರಿನಿಟಿ, ಎಂಜಿ ರಸ್ತೆ, ಇಂದಿರಾ ನಗರ, ಬೆನ್ನಿಗಾನಹಳ್ಳಿ, ಕೃಷ್ಣರಾಜ ಪುರ (ಕೆಆರ್‌ ಪುರ) ಹಾಗೂ ಗರುಡಾಚಾರ್‌ ಪಾಳ್ಯ ನಿಲ್ದಾಣದ ಕಡೆಗೆ ಹೋಗುವ ಮೆಟ್ರೋ ಪ್ರಯಾಣಿಕರ ಅಗತ್ಯತೆ ನೋಡಿಕೊಂಡು ಹೆಚ್ಚುವರಿ ಮೆಟ್ರೋ ರೈಲು ಓಡಿಸಲು ನಿರ್ಧರಿಸಲಾಗಿದೆ ಎಂದು ನಮ್ಮ ಮೆಟ್ರೋ ತಿಳಿಸಿದೆ.

ಬೆಳಗ್ಗೆ ಐದರಿಂದಲೇ ಮೆಟ್ರೋ ಸಂಚಾರ ಆರಂಭ

ನಮ್ಮ ಮೆಟ್ರೋ ರೈಲುಗಳ ಸಂಚಾರ ಭಾನುವಾರ ಹೊರತುಪಡಿಸಿದ ಎಲ್ಲ ದಿನಗಳಲ್ಲಿ ಬೆಳಗ್ಗೆ ಐದು ಗಂಟೆಗೇ ಸಂಚಾರ ಆರಂಭವಾಗಲಿದೆ. ಭಾನುವಾರ ಬೆಳಗ್ಗೆ 7 ಗಂಟೆಗೆ ಸಂಚಾರ ಆರಂಭವಾಗಲಿದೆ. ಎಂದಿನಂತೆ ರಾತ್ರಿ 11 ಗಂಟೆಗೆ ಎಲ್ಲಾ ಕೊನೆಯ ನಿಲ್ದಾಣಗಳಿಂದ ರೈಲುಗಳ ಸಂಚಾರ ಆರಂಭವಾಗಲಿದೆ.

Exit mobile version