ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ (Upendra Movie) ನಟನೆಯ “ಉಪೇಂದ್ರʼ ಸಿನಿಮಾದ ʻಕರಿಮಣಿ ಮಾಲೀಕ ನೀನಲ್ಲʼ (Karimani Malika Ninalla) ಸಾಂಗ್‌ನ ಕ್ರೇಜ್ ವಾರಗಳೇ ಕಳೆದರೂ ಹವಾ ಇನ್ನೂ ಕಡಿಮೆ ಆಗಿಲ್ಲ. ಉಪೇಂದ್ರ ಸಿನಿಮಾದ ಓ ನಲ್ಲ.. ಹಾಡು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೆಂಡಿಂಗ್‌ನಲ್ಲಿದೆ. ಸದ್ಯ ನಮ್ಮ ಮೆಟ್ರೋ ರೈಲಿನಲ್ಲೂ ಕರಿಮಣಿ ಮಾಲೀಕ ಎಂಟ್ರಿ ಆಗಿದ್ದಾನೆ.
ನಮ್ಮ ಮೆಟ್ರೋ ರೈಲಿನಲ್ಲಿ ನಿನ್ನೆ ಸೋಮವಾರ ಪೀಕ್ ಟೈಂನಲ್ಲಿ ಪ್ರಯಾಣಿಕರಿಂದ ತುಂಬಿ ಹೋಗಿತ್ತು. ಈ ವೇಳೆ ಬೋಗಿಯಲ್ಲಿದ್ದ ಯುವಕರ ಗುಂಪೊಂದು ಓ ನಲ್ಲ ನೀನಲ್ಲ ಕರಿಮಣಿ ಮಾಲೀಕ ನೀನಲ್ಲ ಎಂದು ಜೋರಾಗಿ ಹಾಡನ್ನು ಹಾಡಿದ್ದಾರೆ. ಯುವಕರ ನಡೆಯಿಂದ ಸಹ ಪ್ರಯಾಣಿಕರಿಗೆ ಕೊಂಚ ಕಿರಿಕಿರಿಯಾಗಿತ್ತು.
ಕರಿಮಣಿ ಮಾಲೀಕ ಹಾಡಿಗೆ ರೀಲ್ಸ್ ಮಾಡಿ ಜೋರಾಗಿ ಕಿರುಚಾಡಿದ್ದಾರೆ. ಯುವಕರು ಏಕಾಏಕಿ ಕಿರುಚಾಡಿದ್ದರಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಇತರೆ ಪ್ರಯಾಣಿಕರು ಏನು ಆಯಿತು ಎಂದು ಗಾಬರಿಗೊಂಡಿದ್ದರು. ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವಾಗ ಫೋನ್‌ನಲ್ಲಿ ಜೋರಾಗಿ ಮಾತಾಡುವುದು, ಮೊಬೈಲ್‌ನಲ್ಲಿ ಸಾಂಗ್ ಹಾಕುವುದು ಮಾಡುವಂತಿಲ್ಲ ಎಂಬ ನಿಯಮವಿದೆ.
ನಮ್ಮ ಮೆಟ್ರೋ ರೈಲಿನಲ್ಲಿ ರೀಲ್ಸ್ ಮಾಡುವುದು, ಮೊಬೈಲ್‌ನಲ್ಲಿ ಜೋರಾಗಿ ಸಾಂಗ್ ಹಾಕುವುದು ಸೇರಿದಂತೆ ತಿಂಡಿ ತಿನ್ನುವುದನ್ನೂ ನಿಷೇಧಿಸಿದೆ. ಹಿಂದೊಮ್ಮೆ ಯುವಕನೊಬ್ಬ ಬೋಗಿಯೊಳಗೆ ರೀಲ್ಸ್ ಮಾಡಿದ್ದಕ್ಕೆ ದಂಡವನ್ನು ವಿಧಿಸಿತ್ತು. ಇದೀಗ ನಿಯಮವನ್ನೆಲ್ಲ ಗಾಳಿಗೆ ತೂರಿ ಜೋರಾಗಿ ಕಿರುಚಾಡುತ್ತಾ ಹಾಡನ್ನು ಹಾಡಿದ್ದಾರೆ. ಯುವಕರ ರೀಲ್ಸ್ ಹುಚ್ಚಾಟಕ್ಕೆ ಸಹ ಪ್ರಯಾಣಿಕರಿಂದ ಆಕ್ರೋಶ ಕೇಳಿ ಬಂದಿದೆ.
ಇದನ್ನೂ ಓದಿ: Mysuru News : ಪತ್ನಿ ಜತೆಗೆ ವಿಡಿಯೊ ಕಾಲ್; ಮಾತಲ್ಲಿ ಮೈಮರೆತಾಗ ಬಡಿಯಿತು ರೈಲು
ಮೆಟ್ರೋ ಸಂಚಾರ ಶೀಘ್ರವೇ ನಾಗಸಂದ್ರದಿಂದ ಮಾದಾವರಕ್ಕೆ ವಿಸ್ತರಣೆ
ಸದ್ಯ ಹಸಿರು ಮಾರ್ಗದಲ್ಲಿ (Namma Metro Green Line) ರೇಷ್ಮೆ ಸಂಸ್ಥೆಯಿಂದ ನಾಗಸಂದ್ರದಿಂದ ಓಡುತ್ತಿರುವ ನಮ್ಮ ಮೆಟ್ರೋ (Namma Metro) ರೈಲು ಅತಿ ಶೀಘ್ರದಲ್ಲೇ ಮಾದಾವರ ವರೆಗೆ ವಿಸ್ತರಣೆಯಾಗಲಿದೆ. ಕಳೆದ ಆರು ವರ್ಷಗಳಿಂದ ನಡೆಯುತ್ತಿರುವ ಮೆಟ್ರೋ ಕಾಮಗಾರಿ ಇದೀಗ ಅಂತಿಮ ಹಂತಕ್ಕೆ ತಲುಪಿದ್ದು ಕೆಲವೇ ತಿಂಗಳ ಒಳಗೆ ಓಡಾಟ ಶುರುವಾಗಲಿದೆ (Metro Operation) ಎಂಬ ನಿರೀಕ್ಷೆ ಇದೆ.
ನಾಗಸಂದ್ರದಿಂದ ಮಾದಾವರ ನಿಲ್ದಾಣಗಳ ನಡುವೆ 3.31 ಕಿಲೋ ಮೀಟರ್ ಅಂತರವಿದ್ದು, ಮೂರು ನಿಲ್ದಾಣಗಳಿವೆ. ಈ ಮಾರ್ಗದಲ್ಲಿ ಈಗ ಹಳಿ ಜೋಡಣೆ ಮಾಡುವ ಕಾರ್ಯ ನಡೆಯುತ್ತಿದೆ. ತುಮಕೂರು ರಸ್ತೆಯಲ್ಲಿ ಸಾಗುತ್ತಿರುವ ಕಾಮಗಾರಿಯನ್ನು Texmaco Rail and Engineering ಸಂಸ್ಥೆ ನಡೆಸುತ್ತಿದೆ.
ನಮ್ಮ ಮೆಟ್ರೋ 2ನೇ ಹಂತದ 73.92 ಕಿ.ಮೀ. ಮಾರ್ಗವನ್ನು ವಿಸ್ತರಣೆ ಮಾಡುವ ಪ್ರಮುಖ ಕಾಮಗಾರಿ ಇದಾಗಿದೆ ಎಂದು ಹೇಳಲಾಗಿದೆ.. ಹಳಿ ಜೋಡಣೆ ಕಾರ್ಯ ಪೂರ್ಣಗೊಂಡಿದ್ದು, ಕೆಲವು ಚಿಕ್ಕಪುಟ್ಟ ಕಾಮಗಾರಿಗಳು ಪೂರ್ಣಗೊಂಡ ಬಳಿಕ ನಮ್ಮ ಮೆಟ್ರೋ ಪ್ರಾಯೋಗಿಕ ರೈಲು ಸಂಚಾರ ಆರಂಭವಾಗಲಿದೆ. ಬಳಿಕ ರೈಲು ಓಡಾಟ ಶುರುವಾಗಲಿದೆ.
ಇದನ್ನೂ ಓದಿ : Namma Metro : ಬಟ್ಟೆ ಗಲೀಜು ಎಂದು ರೈತನಿಗೆ ಅಪಮಾನ; ಸರ್ಕಾರ, ಬಿಎಂಆರ್‌ಸಿಎಲ್‌ಗೆ ಚಾಟಿ ಬೀಸಿದ ಎನ್‌ಎಚ್‌ಆರ್‌ಸಿ
ಕೆಲವೇ ತಿಂಗಳಲ್ಲಿ ಸಂಚಾರ ಆರಂಭ ಸಾಧ್ಯತೆ
ನಾಗಸಂದ್ರ-ಮಾದವರ ನಡುವಿನ ಮಾರ್ಗದ ಕಾಮಗಾರಿಯನ್ನು 2024ರ ಡಿಸೆಂಬರ್ ಒಳಗೆ ಪೂರ್ಣಗೊಳಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಈಗ ಹಳಿ ಜೋಡಣೆ ಕಾರ್ಯ ಪೂರ್ಣಗೊಂಡಿದೆ. ಇನ್ನು ಕೆಲವೇ ಸಮಯದಲ್ಲಿ ರೈಲುಗಳ ಪ್ರಾಯೋಗಿಕ ಸಂಚಾರ ನಡೆಯಲಿದೆ.
ಮುಂದೆ ಸಿಗ್ನಲ್ ಅಳವಡಿಕೆ, ಸಿಗ್ನಲ್ ಪರೀಕ್ಷೆ, ಹಳಿಗಳ ಸಾಮರ್ಥ್ಯ ಪರೀಕ್ಷೆ, ಓಪನ್ ವೆಬ್ ಗರ್ಡರ್ ಪರೀಕ್ಷೆ ಸಹಿತ ವಿವಿಧ ತಾಂತ್ರಿಕ ಪರೀಕ್ಷೆಗಳು ಪೂರ್ಣಗೊಂಡ ಬಳಿಕ ರೈಲ್ವೆ ಸುರಕ್ಷತಾ ಆಯುಕ್ತರು ಹಸಿರು ನಿಶಾನೆ ತೋರಲಿದ್ದಾರೆ.
ರೈಲು ಮಾರ್ಗ ವಿಸ್ತರಣೆಯಿಂದ ಯಾರಿಗೆಲ್ಲ ಅನುಕೂಲ?
ನಾಗಸಂದ್ರ-ಮಾದಾವರ ನಡುವಿನ ಅಂತರ 3.1 ಕಿ.ಮೀ. ಈ ಮಾರ್ಗದಲ್ಲಿ ಮಂಜುನಾಥನಗರ, ಚಿಕ್ಕಬಿದರಕಲ್ಲು (ಜಿಂದಾಲ್), ಮಾದವರ ನಿಲ್ದಾಣಗಳಿವೆ. ಬೆಂಗಳೂರು-ತುಮಕೂರು ರಸ್ತೆಯಲ್ಲಿ ಭಾರಿ ವಾಹನ ದಟ್ಟಣೆ ಇದೆ.
ನೆಲಮಂಗಲ ಕಡೆಯಿಂದ ಪೀಣ್ಯ ಕೈಗಾರಿಕಾ ವಲಯ ಸೇರಿ ನಗರಕ್ಕೆ ಬರುವ ಜನರು, ಉದ್ಯೋಗಿಗಳು ಈಗ ನಾಗಸಂದ್ರ ತನಕ ಬಂದು ಅಲ್ಲಿಂದ ಮೆಟ್ರೋ ಮೂಲಕ ನಗರಕ್ಕೆ ಆಗಮಿಸುತ್ತಾರೆ. ಹಸಿರು ಮಾರ್ಗದಲ್ಲಿ ಈಗಾಗಲೇ ನಾಗಸಂದ್ರ ತನಕ ನಮ್ಮ ಮೆಟ್ರೋ ರೈಲು ಸಂಚಾರ ನಡೆಸುತ್ತಿದೆ. ಈಗ ರೈಲು ಮಾರ್ಗ ವಿಸ್ತರಣೆಯಿಂದ ಈ ಭಾಗದ ಜನರಿಗೆ ಭಾರಿ ಅನುಕೂಲವಾಗಲಿದೆ. ಈ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭವಾದರೆ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ (ಬಿಐಇಸಿ)ಗೆ ಸಂಚಾರ ನಡೆಸುವ ಜನರಿಗೆ ಅನುಕೂಲವಾಗಲಿದೆ ಎಂದು ವಿಶ್ಲೇಷಿಸಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ