Site icon Vistara News

Namma Metro : ಮೆಟ್ರೋದಲ್ಲಿ ಮಿಸ್‌ ಆದ ಚಿನ್ನದುಂಗುರ ಮರಳಿಸಿದ ಗೋಲ್ಡನ್‌ ಗರ್ಲ್ಸ್‌ !‌

Namma Metro Gold ring

ಬೆಂಗಳೂರು: ಏನೆಲ್ಲ ಅಪಸವ್ಯಗಳು ನಡೆದರೂ ಜಗತ್ತಿನಲ್ಲಿ ಪ್ರಾಮಾಣಿಕತೆ ಸೇರಿದಂತೆ ಸದ್ಗುಣಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡಿವೆ ಮತ್ತು ಅವು ಆಗಾಗ ಗರ್ವದಿಂದ ತಲೆ ಎತ್ತಿ ನಿಲ್ಲುತ್ತವೆ. ಇದೇ ಕಾರಣಕ್ಕಾಗಿ ಜನರು ಬದುಕಿನ ಬಗ್ಗೆ, ಜಗತ್ತಿನ ಬಗ್ಗೆ ಇನ್ನೂ ನಂಬಿಕೆ ಇಟ್ಟುಕೊಂಡಿರುವುದು. ಈ ಮಾತು ಯಾಕೆಂದರೆ, ಬೆಂಗಳೂರಿನ ಹೆಮ್ಮೆಯಾದ ನಮ್ಮ ಮೆಟ್ರೋದಲ್ಲಿ (Namma Metro) ಕಳೆದುಹೋದ ಚಿನ್ನದ ಉಂಗುರವನ್ನು (Golden Ring) ಅಲ್ಲಿನ ಹೋಮ್‌ ಗಾರ್ಡ್‌ (Home Guards) ಸಿಬ್ಬಂದಿಗಳಿಬ್ಬರು ಅತ್ಯಂತ ಪ್ರಾಮಾಣಿಕತೆಯಿಂದ ಎತ್ತಿಟ್ಟು ಅದರ ಯಜಮಾನಿಗೆ ಮರಳಿಸಿದ್ದಾರೆ. ಗೋಲ್ಡ್‌ ರಿಂಗ್‌ ಕಳೆದುಕೊಂಡ ಮಹಿಳೆಗೆ ಚಿನ್ನ ವಾಪಾಸ್‌ ಮಾಡಿ ಆಕೆ ಗೋಲ್ಡನ್‌ ಗರ್ಲ್ಸ್ (Golden Girls) ಅನಿಸಿಕೊಂಡಿದ್ದಾರೆ.

ಏನಿದು ಕಳೆದುಹೋದ ಉಂಗುರ ಮತ್ತು ಗೋಲ್ಡನ್‌ ಗರ್ಲ್‌ ಕಥೆ?

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಹೊಸಕೋಟೆ ಶಾಖೆಯಲ್ಲಿ ಉದ್ಯೋಗಿಯಾಗಿರುವ ದಿವ್ಯಾ ಅವರು ಸೋಮವಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೆಟ್ರೋ ನಿಲ್ದಾಣದಿಂದ ಬೆನ್ನಿಗಾನಹಳ್ಳಿ ನಿಲ್ದಾಣಕ್ಕೆ ಮೆಟ್ರೋದಲ್ಲಿ ಪ್ರಯಾಣ ಮಾಡುತ್ತಿದ್ದರು. ಬೆನ್ನಿಗಾನಹಳ್ಳಿಯಿಂದ ಅವರು ಬಸ್‌ನಲ್ಲಿ ತಮ್ಮ ಕಚೇರಿಗೆ ಹೋಗಿದ್ದರು.

ಈ ಪ್ರಯಾಣದ ಅವಧಿಯಲ್ಲಿ ಅವರು ತಮ್ಮ 30,000 ರೂ. ಬೆಲೆ ಬಾಳುವ ಉಂಗುರ ಕಳೆದುಹೋಗಿತ್ತು. ಉಂಗುರ ಮೆಟ್ರೋ ಪ್ರಯಾಣದ ವೇಳೆ ಮಿಸ್‌ ಆಗಿರಬಹುದು ಎನ್ನುವುದು ದಿವ್ಯಾ ಅವರ ಊಹೆಯಾಗಿತ್ತು. ಹಾಗಾಗಿ ಅವರು ಕೂಡಲೇ ಕೂಡಲೇ ಕಂಟ್ರೋಲ್ ರೂಂಗೆ ಮಾಹಿತಿ ಕೊಟ್ಟಿದ್ದರು.

ಹಾಗಂತ ಎಲ್ಲಿ ಮಿಸ್‌ ಆಗಿದೆ. ಯಾವ ಟ್ರೇನ್‌ ಅಥವಾ ನಿಲ್ದಾಣದಲ್ಲಿ ಮಿಸ್‌ ಆಯಿತಾ ಎನ್ನುವ ಬಗ್ಗೆ ಅವರಿಗೂ ಸ್ಪಷ್ಟತೆ ಇರಲಿಲ್ಲ. ಮೆಟ್ರೋ ಆಡಳಿತ ಮಂಡಳಿ ತಕ್ಷಣವೇ ಎಲ್ಲಾ ಸಿಬ್ಬಂದಿಗಳಿಗೆ ಸೂಚನೆ ನೀಡಿ ಎಲ್ಲಾದರೂ ಸಿಗುತ್ತದೆಯೇ ಎಂದು ಗಮನಿಸಲು ಸೂಚನೆ ನೀಡಿತ್ತು.

ಈ ನಡುವೆ, ಸೋಮವಾರ ಸಂಜೆ 6.45ರ ಸುಮಾರಿಗೆ ಬೆನ್ನಿಗಾನಹಳ್ಳಿ ಮೆಟ್ರೊ ನಿಲ್ದಾಣದ 2ನೇ ಪ್ಲಾಟ್‌ಫಾರ್ಮ್‌ನಲ್ಲಿ ಉಂಗುರ ಪತ್ತೆಯಾಗಿದೆ. ರೈಲಿನ ಲೇಡಿಸ್ ಕೋಚ್ ನ ಹೊರಗಡೆ ಉಂಗುರ ಬಿದ್ದಿತ್ತು. ಇದನ್ನು ಗಮನಿಸಿದ ಹೋಂ ಗಾರ್ಡ್‌ಗಳಾದ ಶಿಲ್ಪಾ ಜಿ ಆರ್ ಮತ್ತು ಈಶ್ವರಮ್ಮ ಅವರು ಕೂಡಲೇ ಬಿಎಂಆರ್‌ಸಿಎಲ್ ಸಹಾಯಕ ಸುರಕ್ಷತಾ ಅಧಿಕಾರಿ ಕೆಎನ್ ರಾಜಣ್ಣ ಅವರಿಗೆ ಹಸ್ತಾಂತರಿಸಿದರು.‌ ಈ ಇಬ್ಬರು ಹೆಣ್ಮಕ್ಕಳ ಪ್ರಾಮಾಣಿಕತೆ ಮೆಚ್ಚುಗೆಗೆ ಪಾತ್ರವಾಗಿದೆ.

ಮೆಟ್ರೋ ನಿಲ್ದಾಣಗಳು ಮತ್ತು ರೈಲು ಪ್ರಯಾಣ ಅತ್ಯಂತ ಸುರಕ್ಷಿತ ಎಂಬ ಖ್ಯಾತಿಗೆ ಒಳಗಾಗಿವೆ. ಇಲ್ಲಿ ಎಲ್ಲಾ ಕಡೆ ಸಿಸಿ ಟಿವಿಗಳು ಮತ್ತು ಇತರ ರಕ್ಷಣಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಸೆಕ್ಯೂರಿಟಿ ಗಾರ್ಡ್‌ಗಳು ಪ್ರಯಾಣಿಕರ ನಡವಳಿಕೆಗಳನ್ನು ಗಮನಿಸುತ್ತಾ ಎಚ್ಚರಿಕೆ ನೀಡುತ್ತಲೇ ಇರುತ್ತಾರೆ.

Exit mobile version