Site icon Vistara News

Namma Metro : ಮೆಟ್ರೋ ಪ್ರಯಾಣಿಕರ ಗಮನಕ್ಕೆ, ಭಾನುವಾರ ಈ ಮಾರ್ಗದಲ್ಲಿ ಸಂಚಾರ ಬಂದ್‌

Namma Metro MG Road Metro Station

ಬೆಂಗಳೂರು: ನೀವು ನಮ್ಮ ಮೆಟ್ರೋ (Namma Metro) ಪ್ರಯಾಣಿಕರಾಗಿದ್ದಾರೆ, ಈ ಭಾನುವಾರ (ಫೆಬ್ರವರಿ 11ರಂದು) ಮೆಟ್ರೋ ರೈಲಿನಲ್ಲಿ ಓಡಾಡಲು ಪ್ಲ್ಯಾನ್‌ ಮಾಡಿಕೊಂಡಿದ್ದರೆ ದಯವಿಟ್ಟು ಈ ಮಾಹಿತಿಯನ್ನು ಓದಿ. ಅಂದು ಮೆಟ್ರೋ ಮಾರ್ಗದಲ್ಲಿ ಕೆಲವೊಂದು ಸಂಚಾರ ಬದಲಾವಣೆಗಳನ್ನು ಮಾಡಲಾಗಿದೆ. ಕೆಲವು ನಿಲ್ದಾಣಗಳ ನಡುವೆ ಸಂಚಾರ ಇರುವುದಿಲ್ಲ, ತಾತ್ಕಾಲಿಕವಾಗಿ ಸ್ಥಗಿತವಾಗಲಿದೆ (No trains will be operated)

ಹೌದು, ನಗರದ ಟ್ರಿನಿಟಿ ಮತ್ತು ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣಗಳ (Trinity And MG Road Metro station) ನಡುವೆ ಭಾನುವಾರ ಎರಡು ಗಂಟೆ ಹೊತ್ತು ರೈಲು ಸಂಚಾರ ಸ್ಥಗಿತವಾಗಲಿದೆ. ನೇರಳೆ ಮಾರ್ಗದಲ್ಲಿ (Purple Line) ನಿರ್ವಹಣೆ ಕಾಮಗಾರಿಯನ್ನು ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಎಂ.ಜಿ. ರಸ್ತೆ ಮತ್ತು ಟ್ರಿನಿಟಿ ಮೆಟ್ರೋ ನಿಲ್ದಾಣಗಳ ನಡುವೆ ಸಂಚಾರ ಸ್ಥಗಿತಗೊಳಿಸಲಾಗುತ್ತದೆ ಎಂದು ಬಿಎಂಆರ್​ಸಿಎಲ್ (BMRCL)​ ತಿಳಿಸಿದೆ.

ಭಾನುವಾರ ಬೆಳಗ್ಗೆ 7 ಗಂಟೆಯಿಂದ 9 ಗಂಟೆಯವರೆಗೆ (ಎರಡು ಗಂಟೆಗಳ ಅವಧಿಗೆ) ಮೆಟ್ರೋ ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತದೆ ಎಂದು ಅದು ಹೇಳಿದೆ.

ಭಾನುವಾರದ ದಿನ ಬೆಳಗ್ಗೆ ಏಳರಿಂದ 9 ಗಂಟೆಯವರೆಗೆ ನೇರಳೆ ಮಾರ್ಗದಲ್ಲಿ ರೈಲುಗಳು ಎಂ.ಜಿ ರಸ್ತೆ ಮತ್ತು ಚಲ್ಲಘಟ್ಟ ಹಾಗೂ ಇಂದಿರಾ ನಗರ ಮತ್ತು ವೈಟ್‌ಫೀಲ್ಡ್ (ಕಾಡುಗೋಡಿ) ನಡುವೆ ಮಾತ್ರ ಓಡಾಡಲಿದೆ.

ಬೆಳಗ್ಗೆ 9 ಗಂಟೆಯ ನಂತರ ವೈಟ್‌ ಫೀಲ್ಡ್ (ಕಾಡುಗೋಡಿ) ಮತ್ತು ಚಲ್ಲಘಟ್ಟ ಮೆಟ್ರೋ ನಿಲ್ದಾಣಗಳ ನಡುವಿನ ಸಂಪೂರ್ಣ ನೇರಳೆ ಮಾರ್ಗದಲ್ಲಿ ವೇಳಾಪಟ್ಟಿಯಂತೆ ಮೆಟ್ರೋ ರೈಲು ಸೇವೆಗಳು ಇರುತ್ತವೆ ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ.

ಉಳಿದಂತೆ, ಹಸಿರು ಮಾರ್ಗದಲ್ಲಿ ರೈಲುಗಳ ಸೇವೆ ಆಯಾ ಟರ್ಮಿನಲ್ ನಿಲ್ದಾಣಗಳಿಂದ ವೇಳಾಪಟ್ಟಿಯ ಪ್ರಕಾರ ಬೆಳಿಗ್ಗೆ 7 ಗಂಟೆಗೆ ಪ್ರಾರಂಭವಾಗಿ ಎಂದಿನಂತೆ ಚಲಿಸುತ್ತವೆ ಎಂದು ಬಿಎಂಆರ್​ಸಿಎಲ್​ ಮಾಧ್ಯಮ ಪ್ರಕಟಣೆ ಹೊರಡಿಸಿದೆ. ನಿಮಗೇ ಗೊತ್ತಿರುವಂತೆ ಭಾನುವಾರ ರೈಲುಗಳ ಸಂಚಾರ ಬೆಳಗ್ಗೆ 7ರಿಂದ ಆರಂಭವಾಗುತ್ತವೆ.

ವರ್ಷಾಂತ್ಯದೊಳಗೆ ಇನ್ನೆರಡು ರೈಲು ಮಾರ್ಗಗಳಲ್ಲಿ ಓಡಲಿದೆ ಮೆಟ್ರೋ

ಬೆಂಗಳೂರಿನ ನಮ್ಮ ಮೆಟ್ರೋ ವಿಸ್ತರಣೆಗೆ ಸಂಬಂಧಿಸಿ ಬಿಎಂಆರ್‌ಸಿಎಲ್‌ ಗುಡ್‌ ನ್ಯೂಸ್‌ ನೀಡಿದೆ. ಹಲವು ವರ್ಷಗಳಿಂದ ಆಮೆ ಗತಿಯಲ್ಲಿ ಸಾಗುತ್ತಿದ್ದ ಮಾದಾವರ-ನಾಗಸಂದ್ರ ಹಾಗೂ ಆರ್‌​​​ವಿ ರಸ್ತೆ-ಬೊಮ್ಮಸಂದ್ರ ನಡುವಿನ ರೈಲು ಮಾರ್ಗಗಳಲ್ಲಿ ರೈಲು ಸಂಚಾರವನ್ನು ಇದೇ ಸೆಪ್ಟೆಂಬರ್ ಅಥವಾ ಅಕ್ಟೋಬರ್‌ ವೇಳೆಗೆ ಆರಂಭಿಸಲು ಸಿದ್ಧತೆ ಮಾಡಿದೆ.

ಈ ಎರಡು ಲೇನ್‌​​ಗಳು ಎರಡು ವರ್ಷದ ಹಿಂದೆಯೇ ಆರಂಭ ಆಗಬೇಕಿತ್ತು, ತಾಂತ್ರಿಕ ಸಮಸ್ಯೆಯಿಂದಾಗಿ ಇದು ವಿಳಂಬವಾಗಿತ್ತು. ತುಮಕೂರು ರಸ್ತೆಯ ನಾಗಸಂದ್ರ ಹಾಗೂ ಮಾದಾವರವರೆಗಿನ ಮೆಟ್ರೋ ಸೆಪ್ಟೆಂಬರ್ ವೇಳೆ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆಯಿದೆ. ಈಗಾಗಲೇ 3 ಕಿ‌ಲೋ ಮೀಟರ್ ಮಾರ್ಗದಲ್ಲಿ 95ರಷ್ಟು ಕಾಮಗಾರಿ ಮುಕ್ತಾಯವಾಗಿದೆ. ನಾಗಸಂದ್ರ-ಮಾದಾವರ ಮಾರ್ಗದಲ್ಲಿ ವಾಣಿಜ್ಯ ಸಂಚಾರ ಆರಂಭವಾದರೆ, ನೆಲಮಂಗಲ ಹಾಗೂ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದತ್ತ ಸಾಗುವರರಿಗೆ ಅನುಕೂಲ ಆಗಲಿದೆ. ಜೊತೆಗೆ ತುಮಕೂರು ರಸ್ತೆಯಲ್ಲಿ ಕೊಂಚಮಟ್ಟಿಗೆ ಸಂಚಾರ ದಟ್ಟಣೆ ಸಹ ಕಡಿಮೆಯಾಗಲಿದೆ.

ಇದನ್ನೂ ಓದಿ: Namma Metro : ಚೀನಾದಿಂದ ಬಂತು ಚಾಲಕ ರಹಿತ ಮೆಟ್ರೋ ರೈಲು, ಹಳದಿ ಮಾರ್ಗದಲ್ಲಿ ಫಿಕ್ಸ್‌

ಆರ್.ವಿ ರಸ್ತೆ-ಬೊಮ್ಮಸಂದ್ರ ಮಾರ್ಗದಲ್ಲಿ ಚಾಲಕ ರಹಿತ ರೈಲು ಸಂಚಾರ

ಆರ್‌ವಿ ರಸ್ತೆ-ಬೊಮ್ಮಸಂದ್ರವರಿಗೆ ಮೆಟ್ರೋ 19 ಕಿಲೋ ಮೀಟರ್‌ ಮಾರ್ಗದಲ್ಲಿ ಶೇಕಡಾ 90ರಷ್ಟು ಕಾಮಗಾರಿ ಪೂರ್ಣವಾಗಿದೆ. ಈ ಮಾರ್ಗದಲ್ಲಿ ಆರ್‌ವಿ ರಸ್ತೆ, ರಾಗಿಗುಡ್ಡ, ಜಯದೇವ ಆಸ್ಪತ್ರೆ, ಬಿಟಿಎಂ ಲೇಔಟ್, ಸೆಂಟ್ರಲ್ ಸಿಲ್ಕ್ ಬೋರ್ಡ್, ಬೊಮ್ಮನಹಳ್ಳಿ ಹುಸೂರು ರಸ್ತೆ, ಸೇರಿ ಬೊಮ್ಮಸಂದ್ರ ನಿಲ್ದಾಣಗಳು ಬರಲಿವೆ.

ಈ ಮಾರ್ಗದಲ್ಲಿ ಮೊದಲ ಬಾರಿಗೆ ಚಾಲಕ ರಹಿತ ರೈಲು ಸಂಚರಿಸಲಿದೆ. ಇದಕ್ಲೆ ಇದೀಗ ವಿಶೇಷ ಟ್ರ್ಯಾಕ್‌​​ಗಳ ಜೋಡಣೆ ಕೂಡ ಆಗುತ್ತಿದೆ. ಅಲ್ಲದೆ ಚೀನಾದಿಂದ ಆಗಮಿಸಿರುವ ಚಾಲಕ ರಹಿತ ರೈಲು ಬೋಗಿಗಳು ಕೂಡ ಇದೇ ಫೆಬ್ರವರಿ 18ಕ್ಕೆ ಬೆಂಗಳೂರಿಗೆ ಬಂದಿಳಿಯಲಿವೆ. ಹೆಬ್ಬಗೋಡಿ‌ ನಿಲ್ದಾಣಕ್ಕೆ ಆಗಮಿಸಲಿರುವ ಈ ಬೋಗಿಗಳು‌, ರಾಜ್ಯಕ್ಕೆ ಬಂದ ಬಳಿಕ ಹೆಬ್ಬಗೋಡಿ‌ ನಿಲ್ದಾಣದಲ್ಲೇ 32 ರೀತಿಯ ತಾಂತ್ರಿಕ ಟೆಸ್ಟ್‌ಗಳಿಗೆ ಒಳಪಡಿಸಲಾಗುತ್ತದೆ. ಈ ತಾಂತ್ರಿಕ ಪರೀಕ್ಷೆಗಳನ್ನು ಮುಗಿಸಲು 5 ತಿಂಗಳ ಕಾಲಾವಕಾಶ ಬೇಕಾಗಲಿದೆ. ಅಂದರೆ ಜುಲೈ ಹೊತ್ತಿಗೆ ಅದು ಸಿದ್ಧವಾಗಲಿದೆ.

Exit mobile version