ಬೆಂಗಳೂರು: ರಾಜಧಾನಿ ಬೆಂಗಳೂರಿಗರ ಫಾಸ್ಟ್ ಲೈಫ್ ಸ್ಟೈಲಿಗೆ ಲೇಟಾದರೂ ಲೇಟೆಸ್ಟ್ ಆಗಿ ನಮ್ಮ ಮೆಟ್ರೋ ಎಂಟ್ರಿ ಕೊಟ್ಟು, ನಗರದ ಜೀವನಾಡಿಯಾಗಿ ಬದಲಾಯಿತು. ಎಲ್ಲ ಭಾಗಗಳಿಗೂ ಮೆಟ್ರೋ ತಲುಪಿಸುವ ನಿಟ್ಟಿನಲ್ಲಿ ಬಿಎಂಆರ್‌ಸಿಎಲ್ ಕಾಮಗಾರಿ ನಡೆಸುತ್ತಿದೆ. ಈ ನಡುವೆ ಕಾಮಗಾರಿಯ ನಡುವೆ ಅವಘಡಗಳು (Namma Metro) ಸಂಭವಿಸಿ ಹಲವರ ಪ್ರಾಣಕ್ಕೆ ಕುತ್ತು ತಂದಿರುವುದು ಹಿಂದೆಯೂ ನಡೆದಿದೆ.
ನಾಗವಾರದ ರಿಂಗ್ ರೋಡ್‌ನ ಎಚ್‌ಬಿಆರ್ ಲೇಔಟ್ ಬಳಿ ಮಂಗಳವಾರ ಮುಂಜಾನೆ (ಜ.10) ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್‌ನ ರಾಡ್‌ಗಳು ತೇಜಸ್ವಿನಿ ಮತ್ತು ವಿಹಾನ್ ಎಂಬ ತಾಯಿ ಮತ್ತು ಪುಟ್ಟ ಮಗುವಿನ ಜೀವ ತೆಗೆದಿದೆ. ಟನ್‌ಗಟ್ಟಲೆ ತೂಕದ ಮೆಟ್ರೋ ಪಿಲ್ಲರ್ ದಿಢೀರ್ ಮರದ ಮೇಲೆ ಉರುಳಿದ್ದು, ಮರ ಬೈಕ್‌ನಲ್ಲಿ ತೆರಳುತ್ತಿದ್ದ ದಂಪತಿ ಮತ್ತು ಮಕ್ಕಳ ಮೇಲೆ ಬಿದ್ದಿದೆ. ಗಂಭೀರ ಗಾಯಗೊಂಡ ತಾಯಿ-ಮಗು ಸ್ಥಳದಲ್ಲಿಯೇ ದುರ್ಮರಣ ಹೊಂದಿದ್ದಾರೆ.
ಈ ಘಟನೆಯಿಂದಾಗಿ ಇದೀಗ ಕಾಮಗಾರಿ ವೇಳೆ ನಮ್ಮ ಮೆಟ್ರೋ ಸಿಬ್ಬಂದಿ ಸುರಕ್ಷತಾ ಕ್ರಮಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ ಎಂಬ ಆರೋಪಗಳು ಬಂದಿವೆ. ಈ ಹಿಂದೆಯೂ ನಿರ್ಮಾಣ ಕಾಮಗಾರಿ ವೇಳೆ ಸಾವುಗಳು ಸಂಭವಿಸಿವೆ. ಅದರ ಕೆಲವು ನಿದರ್ಶನಗಳು ಇಲ್ಲಿವೆ.
ಘಟನೆ-1: 2019ರ ಮೇ 22ರಂದು ರೀಚ್-5 ವ್ಯಾಪ್ತಿಯ ಸಿಲ್ಕ್ ಬೋರ್ಡ್ ಹಾಗೂ ಆರ್‌ವಿ ರೋಡ್ ಪ್ರದೇಶದಲ್ಲಿ ಫಲಕಗಳ ಡೀ ಶಟರಿಂಗ್ ಕಾಮಗಾರಿ ನಡೆಯುತ್ತಿತ್ತು. ಈ ವೇಳೆ ಪ್ಯಾನಲ್‌ಗಳನ್ನು ಹೊತ್ತಿದ್ದ ಕ್ರೇನ್ ಜರ್ಕ್ ಆಗಿ ಪ್ಯಾನಲ್‌ಗಳು ಬ್ಯಾರಿಕೇಡ್‌ಗೆ ತಗುಲಿತ್ತು. ಪರಿಣಾಮ ಚಲಿಸುತ್ತಿದ್ದ ಆಟೋ ಅಪಘಾತಕ್ಕೀಡಾಗಿ, ಆಟೋದಲ್ಲಿ ಪ್ರಯಾಣಿಸುತ್ತಿದ್ದ 81 ವರ್ಷದ ವೃದ್ಧನ ತಲೆಗೆ ತೀವ್ರವಾದ ಗಾಯವಾಗಿತ್ತು.
ಘಟನೆ-2: 2019ರ ನವೆಂಬರ್ 7ರಂದು ಎರಡನೇ ಹಂತದ ಕಾಮಗಾರಿ ವೇಳೆ ಚೈನ್ ಫುಲ್ ಸಹಾಯದಿಂದ ಕ್ರಷ್ ಇಳಿಸುತ್ತಿದ್ದಾಗ ಚೈನ್ ತುಂಡಾಗಿ ಸ್ಥಳದಲ್ಲಿದ್ದ ಕಾರ್ಮಿಕ ಸಮೀರ್ ಎಂಬಾತ ಅವಘಡದಲ್ಲಿ ಮರುದಿನ ಮೃತಪಟ್ಟಿದ್ದರು. ಈ ದುರ್ಘಟನೆಗೆ ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್) ಕಾರಣವೆಂದು ಕಾರ್ಮಿಕರು ಆರೋಪಿಸಿದ್ದರು. ಅಗತ್ಯ ಸುರಕ್ಷತಾ ಕ್ರಮ ವಹಿಸದ ಕಾರಣ ದುರಂತ ಸಂಭವಿಸಿತ್ತು.
ಘಟನೆ-3
2020ರ ಫೆಬ್ರವರಿ 28ರಂದು ಮೆಟ್ರೋ ಕಾಮಗಾರಿ ವೇಳೆ ಪ್ಲಾಟ್‌ಫಾರ್ಮ್‌ನಿಂದ ಕೆಳಗೆ ಬಿದ್ದು ಕಾರ್ಮಿಕರೊಬ್ಬರು ಮೃತಪಟ್ಟಿದರು. ಕೆಂಗೇರಿಯಲ್ಲಿ ಮೆಟ್ರೋ ನಿರ್ಮಾಣ ಹಂತದ ನಿಲ್ದಾಣದಲ್ಲಿ ಎಸ್ಕಲೇಟರ್ ಅಳವಡಿಸುವ ಕೆಲಸ ಮಾಡುತ್ತಿದ್ದಾಗ 56 ವರ್ಷದ ಕಾರ್ಮಿಕರೊಬ್ಬರು ನಿಲ್ದಾಣದಿಂದ ಕೆಳಕ್ಕೆ ಬಿದ್ದಿದ್ದರು. ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಿಸಲಿಲ್ಲ.
ಘಟನೆ-4
ಕೆ.ಆರ್.ಪುರ ಮೆಟ್ರೋ ಕಾಮಗಾರಿ ವೇಳೆ ಡ್ರಿಲ್ಲಿಂಗ್ ಮಾಡುವಾಗ ಗ್ಯಾಸ್ ಪೈಲ್ ಲೈನ್ ಒಡೆದು ಹೋಗಿತ್ತು. ಇದರಿಂದಾಗಿ ಅನಿಲ ಸೋರಿಯಾಗಿ ಆತಂಕದ ವಾತಾವರಣ ನಿರ್ಮಾಣಗೊಂಡಿತ್ತು. ಸುತ್ತಮುತ್ತ ಮೊಬೈಲ್ ಫೋನ್‌ಗಳ ಬಳಕೆಯನ್ನು ನಿಷೇಧಿಸಲಾಗಿತ್ತು.
ಇದನ್ನೂ ಓದಿ | Namma Metro pillar | ಮೃತರ ಕುಟುಂಬಕ್ಕೆ BMRCL ಜತೆ ರಾಜ್ಯ ಸರಕಾರದಿಂದಲೂ ತಲಾ 10 ಲಕ್ಷ ರೂ. ಪರಿಹಾರ