Site icon Vistara News

Namma Metro : ನಮ್ಮ ಮೆಟ್ರೊ ವಿಸ್ತೃತ ನೇರಳೆ ಮಾರ್ಗ ಲೋಕಾರ್ಪಣೆ ಮಾಡಿದ ಮೋದಿ; ಏನಿದರ ವಿಶೇಷತೆ?

Namma metro PM Narendra Modi

ಬೆಂಗಳೂರು: ಬೆಂಗಳೂರಿನ ಹೊಸ ಜೀವನಾಡಿಯಾಗಿರುವ ನಮ್ಮ ಮೆಟ್ರೋದ (Namma Metro) ನೇರಳೆ ಮಾರ್ಗದ (Purple Line) ಎರಡು ವಿಸ್ತೃತ ರೂಟ್‌ಗಳನ್ನು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಶುಕ್ರವಾರ ವರ್ಚ್ಯುವಲ್‌ ಆಗಿ ಲೋಕಾರ್ಪಣೆ ಮಾಡಿದರು. ಕೆಆರ್ ಪುರದಿಂದ ಬೈಯಪ್ಪನಹಳ್ಳಿ ಹಾಗೂ ಕೆಂಗೇರಿಯಿಂದ ಚಲ್ಲಘಟ್ಟದವರೆಗೆ ಮೆಟ್ರೋ ರೈಲು ವಿಸ್ತೃತ ಮಾರ್ಗ ಇದಾಗಿದ್ದು, ಈಗ ಚಲ್ಲಘಟ್ಟದಿಂದ ವೈಟ್‌ಫೀಲ್ಡ್‌ವರೆಗಿನ ನೇರಳೆ ಮಾರ್ಗ ಕ್ರಮಿಸುವ ಒಟ್ಟು ದೂರ 43.5 ಕಿ.ಮೀ.ಗೆ ವಿಸ್ತರಣೆಯಾಗಿದೆ.

ನರೇಂದ್ರ ಮೋದಿ ಅವರು ಉತ್ತರ ಪ್ರದೇಶದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು ಸಿಎಂ ಅವರ ಗೃಹಕಚೇರಿ ಕೃಷ್ಣಾದಲ್ಲಿ ವರ್ಚುಯಲ್ ಸಭೆ ಮೂಲಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾದರು. ರಾಜ್ಯ ಯೋಜನೆ ಆಯೋಗದ ಉಪಾಧ್ಯಕ್ಷ ಪ್ರೊ ರಾಜೀವ್ ಗೌಡ, ಮಾಜಿ ಸಚಿವ, ಶಾಸಕ ಎಸ್ ಟಿ ಸೋಮಶೇಖರ್, ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಮತ್ತಿತರರು ಉಪಸ್ಥಿತರಿದ್ದರು.

ಪ್ರಧಾನಿ ಮೋದಿ ಅವರು ಭಾಗವಹಿಸಿದ ವರ್ಚ್ಯುವಲ್‌ ಉದ್ಘಾಟನಾ ಸಮಾರಂಭದ ದೃಶ್ಯ.

ಅಕ್ಟೋಬರ್‌ 9ರಂದೇ ಸಂಚಾರ ಆರಂಭ

ಬೆಂಗಳೂರಿನ ದಕ್ಷಿಣೋತ್ತರ ಭಾಗಗಳನ್ನು ಕನೆಕ್ಟ್‌ ಮಾಡುವ ನೇರಳೆ ಮಾರ್ಗದಲ್ಲಿ ಇದುವರೆಗೆ ಕೆಂಗೇರಿಯಿಂದ ಬೈಯಪ್ಪನ ಹಳ್ಳಿ ಮತ್ತು ಕೆ.ಆರ್‌. ಪುರಂನಿಂದ ವೈಟ್‌ ಫೀಲ್ಡ್‌ ನಡುವೆ ರೈಲು ಸಂಚಾರವಿತ್ತು. ಕೆಂಗೇರಿಯಿಂದ ಚಲ್ಲಘಟ್ಟ ನಡುವಿನ 2.10 ಕಿ.ಮೀ. ಉದ್ದದ ಮಾರ್ಗ ಮತ್ತು ಬೈಯಪ್ಪನಹಳ್ಳಿ-ಕೆ.ಆರ್‌ ಪುರ ನಡುವಿನ 2.10 ಕಿ.ಮೀ. ಉದ್ದದ ರೈಲು ಮಾರ್ಗ ಇತ್ತೀಚೆಗೆ ಸಿದ್ಧವಾಗಿತ್ತು.

ಇದರ ಉದ್ಘಾಟನೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗಾಗಿ ಕಾಯಲಾಗುತ್ತಿತ್ತು. ಆದರೆ, ಪ್ರಧಾನಿಯವರಿಗೆ ಕಾಯುತ್ತಾ ಜನರಿಗೆ ಸೇವೆ ವಿಳಂಬ ಮಾಡುವುದೇಕೆ ಎಂಬ ಆಕ್ಷೇಪ ಸಾರ್ವಜನಿಕ ವಲಯದಿಂದ ಕೇಳಿಬಂದ ಹಿನ್ನೆಲೆಯಲ್ಲಿ ಕಳೆದ ಅಕ್ಟೋಬರ್‌ 9ರಿಂದ ಯಾವುದೇ ಅಧಿಕೃತ ಕಾರ್ಯಕ್ರಮಗಳಿಲ್ಲದೆ ರೈಲು ಸಂಚಾರ ಆರಂಭಗೊಂಡಿತ್ತು. ಇದೀಗ ಪ್ರಧಾನಿಯವರು ಅಕ್ಟೋಬರ್‌ 20ರಂದು ಪ್ರಧಾನಿ ಮೋದಿ ಅವರು ಅಧಿಕೃತ ಚಾಲನೆ ನೀಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು ಭಾಗವಹಿಸಿದ್ದರು.

ಉತ್ತರ-ದಕ್ಷಿಣ ಜೋಡಿಸುವ ಮಹತ್ವದ ಮಾರ್ಗ, ಹತ್ತಾರು ಅನುಕೂಲ

  1. ವಿಸ್ತರಣೆಯಿಂದ ಈಗ ನೇರಳೆ ರೈಲು ಮಾರ್ಗದ ಒಟ್ಟು ಅಂತದ 43.5 ಕಿ.ಮೀ. ಆಗಿದೆ. ಈ ಅಂತರವನ್ನು ರೈಲು 100 ನಿಮಿಷ (1 ಗಂಟೆ 40 ನಿಮಿಷ)ದಲ್ಲಿ ತಲುಪಲಿದೆ.
  2. ಈ ಮಾರ್ಗದಲ್ಲಿ ಒಟ್ಟು 37 ನಿಲ್ದಾಣಗಳಿದ್ದು, ಚಲ್ಲಘಟ್ಟದಿಂದ ವೈಟ್‌ ಫೀಲ್ಡ್‌ಗೆ ಕೇವಲ 60 ರೂ.ಗಳಲ್ಲಿ ಪ್ರಯಾಣಿಸಬಹುದಾಗಿದೆ.
  3. ಕೆಂಗೇರಿ ಭಾಗ ಕಾಲೇಜು, ಆಸ್ಪತ್ರೆಗಳಿಗೆ ಪ್ರಸಿದ್ಧವಾಗಿದ್ದರೆ ಉತ್ತರದ ಕೆ.ಆರ್‌.ಪುರ ವೈಟ್‌ ಫೀಲ್ಡ್‌ ಪ್ರದೇದ ಐಟಿ ಕಂಪನಿಗಳಿಗೆ ಹೆಸರುವಾಸಿ. ಕೆಂಗೇರಿ ಭಾಗದಿಂದ ಉದ್ಯೋಗಕ್ಕಾಗಿ ವೈಟ್‌ ಫೀಲ್ಡ್‌ ಕಡೆಗೆ ಹೋಗುವವರಿಗೆ ಮತ್ತು ಆ ಭಾಗದಿಂದ ವೈದ್ಯಕೀಯ ಸೇವೆ ಮತ್ತು ಶಿಕ್ಷಣಕ್ಕಾಗಿ ದಕ್ಷಿಣಕ್ಕೆ ಬರುವವರಿಗೆ ಈ ಸೇವೆ ಭಾರಿ ಅನುಕೂಲವಾಗಿದೆ.
  4. ಹಸಿರು ಮಾರ್ಗದಿಂದ ಬಂದು ಮೆಜೆಸ್ಟಿಕ್‌ನಲ್ಲಿ ನೇರಳೆ ಮಾರ್ಗಕ್ಕೆ ಬದಲಿಸಿ ತಮ್ಮ ಗುರಿಗಳನ್ನು ತಲುಪುವುದು ಈಗ ಸುಲಭವಾಗಿದೆ.
  5. ಅಕ್ಟೋಬರ್‌ 9ರಿಂದ ಚಲ್ಲಘಟ್ಟ-ವೈಟ್‌ ಫೀಲ್ಡ್‌ ನೇರ ರೈಲು ಆರಂಭಗೊಂಡ ಬಳಿಕ ಪ್ರಯಾಣಿಕರ ಸಂಖ್ಯೆ ದೊಡ್ಡ ಮಟ್ಟದಲ್ಲಿ ಹೆಚ್ಚಿದೆ. ಹೀಗಾಗಿ ಹೆಚ್ಚುವರಿ ರೈಲುಗಳನ್ನು ಬಿಡಬೇಕಾದ ಪ್ರಸಂಗ ಎದುರಾಗಿದೆ.

ನೇರಳೆ ಮಾರ್ಗದ ನಿಲ್ದಾಣಗಳ ನಡುವೆ ತೆಗೆದುಕೊಳ್ಳುವ ಪ್ರಯಾಣದ ಸಮಯ

1) ವೈಟ್‌ಫೀಲ್ಡ್‌ನಿಂದ ಪಟಂದೂರು ಅಗ್ರಹಾರದ ನಡುವೆ 10 ನಿಮಿಷಗಳು.

2) ಮೈಸೂರು ರಸ್ತೆಯಿಂದ ಚಲ್ಲಘಟ್ಟಕ್ಕೆ 10 ನಿಮಿಷಗಳು.

3) ಪಟಂದೂರು ಅಗ್ರಹಾರದಿಂದ ಮೈಸೂರು ರಸ್ತೆಗೆ 5 ನಿಮಿಷ.

4) ನಾಡಪ್ರಭು ಕೆಂಪೇಗೌಡ ನಿಲ್ದಾಣ- ಮೆಜೆಸ್ಟಿಕ್‌ನಿಂದ ಎಂ.ಜಿ ರಸ್ತೆ- ಬೆಳಗಿನ ಪೀಕ್ ಸಮಯದಲ್ಲಿ 3 ನಿಮಿಷಕ್ಕೆ ಒಂದು ರೈಲು.

5) ಕೊನೆಯ ರೈಲು ವೈಟ್‌ಫೀಲ್ಡ್‌ನಿಂದ (ಕಾಡುಗೋಡಿ) ರಾತ್ರಿ 10.45ಕ್ಕೆ ಹೊರಡುತ್ತದೆ.

6) ಉಳಿದ ಟರ್ಮಿನಲ್ ನಿಲ್ದಾಣಗಳಿಂದ ರಾತ್ರಿ 11.05ಕ್ಕೆ ಹೊರಡುತ್ತದೆ.

7) ಎಲ್ಲ ಟರ್ಮಿನಲ್ ನಿಲ್ದಾಣಗಳಿಂದ ರೈಲು ಸೇವೆಗಳು ಎಂದಿನಂತೆ ಬೆಳಗ್ಗೆ 5 ಗಂಟೆಗೆ ಪ್ರಾರಂಭ

Exit mobile version